ಕ್ಷೇತ್ರ ಮರುವಿಂಗಡಣೆಯೆಂಬ ವಿಭಜನಕಾರಿ ಕಾರ್ಯಾಚರಣೆ

Update: 2025-02-28 09:01 IST
ಕ್ಷೇತ್ರ ಮರುವಿಂಗಡಣೆಯೆಂಬ ವಿಭಜನಕಾರಿ ಕಾರ್ಯಾಚರಣೆ
  • whatsapp icon

ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಅಧಿಕಾರಗಳನ್ನು ಹಂತಹಂತವಾಗಿ ತನ್ನ ಕೈಗೆ ತೆಗೆದುಕೊಳ್ಳಲು ಕೇಂದ್ರ ಸರಕಾರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಇದಕ್ಕಾಗಿ ರಾಜ್ಯಗಳ ತೆರಿಗೆಯ ಮೇಲೆ ಅಧಿಕಾರ ಸ್ಥಾಪನೆ ಕೇಂದ್ರ ಸರಕಾರ ಇಟ್ಟ ಅತ್ಯಂತ ಮಹತ್ವದ ಹೆಜ್ಜೆಯಾಗಿತ್ತು. ಇದೇ ಸಂದರ್ಭದಲ್ಲಿ, ‘ಒಂದು ದೇಶ-ಒಂದು ಚುನಾವಣೆ’ ಜಾರಿಗೆ ತರುವ ಯತ್ನವೂ ಪರೋಕ್ಷವಾಗಿ ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಾಳಿಯೇ ಆಗಿದೆ. ಚುನಾವಣೆಗಳನ್ನು ಪ್ರಾದೇಶಿಕ ಸಮಸ್ಯೆಗಳಿಂದ ವಿಷಯಾಂತರಗೊಳಿಸುವ ಉದ್ದೇಶ ಇದರ ಹಿಂದಿದೆ. ಈ ದೇಶದ ರಾಜ್ಯಗಳು ತಮ್ಮದೇ ಆದ ಸಂಸ್ಕೃತಿ, ವೈವಿಧ್ಯಗಳನ್ನು ಹೊಂದಿವೆ. ಅವುಗಳನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆಗಳು ನಡೆಯುತ್ತಾ ಬರುತ್ತಿವೆೆ. ‘ಒಂದು ದೇಶ ಒಂದು ಚುನಾವಣೆ’ಯ ಮೂಲಕ ರಾಜ್ಯಗಳ ಹಿತಾಸಕ್ತಿಗಳು ಮುನ್ನೆಲೆಗೆ ಬರದಂತೆ ನೋಡಿಕೊಳ್ಳುವುದು ತಂತ್ರವಾಗಿದೆ. ಒಕ್ಕೂಟ ವ್ಯವಸ್ಥೆ ಹೀಗೆ ಹಂತಹಂತವಾಗಿ ದುರ್ಬಲಗೊಳ್ಳುತ್ತಾ ಬಂದ ಹಾಗೆಯೇ, ಇದರಿಂದ ಹೆಚ್ಚು ತೊಂದರೆಗೊಳಗಾಗುವುದು ದಕ್ಷಿಣದ ರಾಜ್ಯಗಳು. ಕೇಂದ್ರದಲ್ಲಿ ರಾಜಕೀಯವಾಗಿ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ಆಕ್ಷೇಪ ಇಂದು ನಿನ್ನೆಯದಲ್ಲ. ಕೇಂದ್ರ ಸರಕಾರದ ನೀತಿಗಳು ಉತ್ತರ ಭಾರತದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೊಳ್ಳುತ್ತಿವೆ. ದಕ್ಷಿಣದ ರಾಜಕೀಯ ನಾಯಕರನ್ನು ತಮ್ಮ ಗುಲಾಮರಂತೆ ನಡೆಸಿಕೊಳ್ಳುವ ಮನಸ್ಥಿತಿ ಉತ್ತರ ಭಾರತದ ರಾಜಕೀಯ ನಾಯಕರಲ್ಲಿ ಹೆಚ್ಚುತ್ತಿದೆ ಎನ್ನುವ ಆಕ್ರೋಶವನ್ನು ಹಲವು ಪ್ರಾದೇಶಿಕ ಪಕ್ಷಗಳು ವ್ಯಕ್ತಪಡಿಸುತ್ತಾ ಬಂದಿವೆ. ಪ್ರಧಾನಿ ಹುದ್ದೆಯಿಂದ ಹಿಡಿದು, ಕೇಂದ್ರ ಸರಕಾರದ ಅತ್ಯುನ್ನತ ಸ್ಥಾನಗಳಲ್ಲಿ ದಕ್ಷಿಣ ಭಾರತದ ರಾಜಕೀಯ ನಾಯಕರು ಕುಳಿತಿದ್ದು ಕಡಿಮೆ. ರಾಜಕೀಯ ಅಧಿಕಾರದ ಕೊರತೆಯಿಂದಾಗಿಯೇ ದಕ್ಷಿಣ ಭಾರತದ ಒಳದನಿಗಳನ್ನು ಕೇಂದ್ರ ಸರಕಾರ ಸುಲಭದಲ್ಲಿ ದಮನಿಸುತ್ತಾ ಬಂದಿದೆ. ಇದೀಗ ಹಿಂದಿ ಹೇರಿಕೆಯ ಮೂಲಕ, ಪ್ರಾದೇಶಿಕ ಭಾಷೆಗಳ ಮೇಲೆ ಇನ್ನಷ್ಟು ದಾಳಿಗಳು ನಡೆಯುತ್ತಿವೆೆ. ಬ್ಯಾಂಕುಗಳಲ್ಲಿ, ರೈಲ್ವೆ ಇಲಾಖೆಗಳಲ್ಲಿ, ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ಹಂತ ಹಂತವಾಗಿ ಉತ್ತರ ಭಾರತೀಯರನ್ನು ತುರುಕುತ್ತಾ, ಸ್ಥಳೀಯರೇ ಪರಕೀಯ ಭಾವನೆಯಿಂದ ನರಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರ ಮರುವಿಂಗಡಣೆೆ ಚರ್ಚೆಯಲ್ಲಿದೆ.

ಜನಗಣತಿಯ ಆಧಾರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸುವ ಕಾರ್ಯಾಚರಣೆಯೊಂದಕ್ಕೆ ಕೇಂದ್ರ ಸರಕಾರ ಮುಂದಾಗಿದೆ. 2026ರ ಜನಗಣತಿಯ ಆಧಾರದಲ್ಲಿ ಹೊಸದಾಗಿ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣದ ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕ್ಷೇತ್ರಗಳು ಇಳಿಕೆಯಾಗಲಿವೆ ಎನ್ನುವುದು ದಕ್ಷಿಣ ಭಾರತದ ರಾಜ್ಯಗಳ ಆತಂಕವಾಗಿದೆ. ಈಗಾಗಲೇ ಇದರ ವಿರುದ್ಧ ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗಳನ್ನು ನೀಡಿದ್ದಾರೆ ಮಾತ್ರವಲ್ಲ, ಇದರ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಪಕ್ಷಭೇದ ಮರೆತು ಒಂದಾಗಿ ಹೋರಾಟ ಮಾಡುವುದು ಅತ್ಯಗತ್ಯವಾಗಿದೆ ಎಂದು ಕರೆ ಕೊಟ್ಟಿದ್ದಾರೆ. ದಕ್ಷಿಣ ಭಾರತದ ಹಲವು ಬಿಜೆಪಿ ನಾಯಕರ ರಾಜಕೀಯ ಭವಿಷ್ಯಗಳಿಗೂ ಇದು ಧಕ್ಕೆ ತರುವ ಅಪಾಯವಿರುವುದರಿಂದ, ಅವರೂ ಒಳಗೊಳಗೆ ಇದರ ವಿರುದ್ಧ ತಮ್ಮ ಆಕ್ಷೇಪಗಳನ್ನು ಎತ್ತುತ್ತಿದ್ದಾರೆ. ಈ ಪುನರ್ ವಿಂಗಡಣೆೆಯನ್ನು ಸರಕಾರವೇನಾದರೂ, ರಾಜ್ಯಗಳ ಅಭಿಪ್ರಾಯಗಳನ್ನು ತಳ್ಳಿ ಹಾಕಿ ಜಾರಿಗೊಳಿಸಲು ಮುಂದಾದರೆ, ಉತ್ತರ ಮತ್ತು ದಕ್ಷಿಣದ ನಡುವಿನ ಅಂತರ ಇನ್ನಷ್ಟು ಹೆಚ್ಚುವ ಅಪಾಯವಿದೆ. ದಕ್ಷಿಣ ಭಾರತ ಈ ಪುನರ್ ವಿಂಗಡಣೆೆಯ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವುದು ಗೃಹ ಸಚಿವ ಅಮಿತ್ ಶಾರನ್ನು ಆತಂಕಕ್ಕೆ ತಳ್ಳಿದಂತಿದೆ. ಇದೀಗ ತಮಿಳುನಾಡಿನ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ‘‘ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಯಾವುದೇ ಅನ್ಯಾಯ ಆಗುವುದಿಲ್ಲ’’ ಎಂದು ಸ್ಪಷ್ಟನೆ ನೀಡಿದ್ದಾರೆ. ‘‘ಪ್ರಧಾನ ಮಂತ್ರಿ ಮೋದಿಯವರೇ ಈ ಬಗ್ಗೆ ಲೋಕಸಭೆಯಲ್ಲಿ ಭರವಸೆ ನೀಡಿದ್ದಾರೆ’’ ಎನ್ನುವುದನ್ನು ತನ್ನ ಹೇಳಿಕೆಗೆ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ. ಅಮಿತ್ ಶಾ ಅವರ ಈ ಹಿಂದಿನ ಸಿಎಎ ಕುರಿತ ‘ಕ್ರೋನೋಲೊಜಿ’ಯ ನೆನಪಿರುವವರಾರು ಕ್ಷೇತ್ರ ಪುನರ್ ವಿಂಗಡಣೆೆಯ ಕುರಿತ ಅವರ ಮಾತುಗಳನ್ನು ನಂಬಲಾರರು.

ಕರ್ನಾಟಕದ ವಿಷಯದಲ್ಲಿ, ಈಗ ಇರುವ ರಾಜ್ಯದ ಲೋಕಸಭಾ ಸದಸ್ಯರೇ ಕೇಂದ್ರ ಸರಕಾರದ ಮುಖ್ಯವಾಗಿ ಮೋದಿ ಮತ್ತು ಅಮಿತ್ ಶಾ ಅವರ ಜೀತದಾಳುಗಳಾಗಿ ಕೆಲಸ ಮಾಡುತ್ತಾ ಕರ್ನಾಟಕದ ಹಿತಾಸಕ್ತಿಯನ್ನು ಮರೆತಿರುವುದರ ಬಗ್ಗೆ ಜನರಲ್ಲಿ ತೀವ್ರ ಆಕ್ರೋಶವಿದೆ. ಈ ಹಿಂದೆ ರಾಜ್ಯದಲ್ಲಿ ‘ಡಬಲ್ ಇಂಜಿನ್’ ಸರಕಾರವಿದ್ದಾಗಲೂ, ತುರ್ತಾಗಿ ಬರಬೇಕಾಗಿದ್ದ ನೆರೆ ಪರಿಹಾರವನ್ನು ಕೇಳುವುದಕ್ಕೆ ರಾಜ್ಯದ ಬಿಜೆಪಿ ಸಂಸದರು ಹಿಂಜರಿದಿದ್ದರು. ದಕ್ಷಿಣದ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಂದ ಎಲ್ಲ ಕ್ಷೇತ್ರಗಳಲ್ಲೂ ಮಾದರಿ ಅಭಿವೃದ್ಧಿಯನ್ನು ಸಾಧಿಸುತ್ತಾ ಬಂದಿದ್ದರೂ, ‘ಗುಜರಾತ್ ಮಾದರಿ’ ಕರ್ನಾಟಕವನ್ನು ಕಟ್ಟಲು ಹೊರಟು ರಾಜ್ಯ ಬಿಜೆಪಿ ನಾಯಕರು ಮಾನಸಿಕವಾಗಿ ಉತ್ತರಭಾರತದ ಗುಲಾಮರೆನ್ನುವುದನ್ನು ಸಾಬೀತುಪಡಿಸಿದ್ದರು. ಆದರೆ ಕರ್ನಾಟಕದ ಬಿಜೆಪಿ ಸಂಸದರಂತೆಯೇ ತಮಿಳುನಾಡು, ಕೇರಳ, ಆಂಧ್ರದ ಸಂಸದರು ಜೀತಕ್ಕೆ ಸಿದ್ಧರಿಲ್ಲ. ತಮ್ಮ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ ಕೇಂದ್ರದ ನಾಯಕರ ವಿರುದ್ಧ ಪಕ್ಷ ಭೇದ ಮರೆತು ಅವರು ಒಂದಾಗಿದ್ದಾರೆ. ಕರ್ನಾಟಕದಲ್ಲೂ ಈ ಜೀತ ಮನಸ್ಥಿತಿ ಯಾವತ್ತೂ ಇರಬೇಕು ಎಂದಿಲ್ಲ. ಆದುದರಿಂದ, ದಕ್ಷಿಣ ಭಾರತದ ಕ್ಷೇತ್ರಗಳ ಸಂಖ್ಯೆಯನ್ನೇ ಇಳಿಸುವ ಸಂಚು ನಡೆಯುತ್ತಿದೆ ಎನ್ನುವ ಆರೋಪ ವಿರೋಧ ಪಕ್ಷಗಳದ್ದು. ಕೇಂದ್ರದಲ್ಲಿ ರಾಜಕೀಯ ಪ್ರಾತಿನಿಧ್ಯ ದುರ್ಬಲಗೊಂಡರೆ, ದಕ್ಷಿಣ ಭಾರತದ ಧ್ವನಿಯೂ ದುರ್ಬಲಗೊಳ್ಳುತ್ತದೆ. ಉತ್ತರಭಾರತದ ಮೂಗಿನ ನೇರಕ್ಕೆ ಜಾರಿಕೊಳ್ಳುವ ನೀತಿಗೆ ತಲೆಬಾಗುವುದು ದಕ್ಷಿಣ ರಾಜ್ಯಗಳಿಗೆ ಅನಿವಾರ್ಯವಾಗುತ್ತದೆ.

ಕೇಂದ್ರ ಸರಕಾರದ ಎಲ್ಲ ಮಲತಾಯಿ ಧೋರಣೆಗಳ ನಡುವೆಯೂ ದಕ್ಷಿಣದ ರಾಜ್ಯಗಳು ಶಿಕ್ಷಣ, ಆರೋಗ್ಯ, ಪೌಷ್ಟಿಕತೆಯಲ್ಲಿ ಉತ್ತರ ಭಾರತಕ್ಕಿಂತ ಮುಂದಿರುವುದು ಕೇಂದ್ರದ ಕಣ್ಣು ಕಿಸಿರಾಗುವಂತೆ ಮಾಡಿದೆ. ದಕ್ಷಿಣ ಭಾರತ ಹಿಂದಿಯನ್ನು ಯಾವತ್ತೂ ನೆಚ್ಚಿಕೊಂಡಿಲ್ಲ. ವಿಪರ್ಯಾಸವೆಂದರೆ ಹಿಂದಿಯನ್ನೇ ನೆಚ್ಚಿಕೊಂಡ ಉತ್ತರಭಾರತದ ಹೆಚ್ಚಿನ ರಾಜ್ಯಗಳು ಬಡತನ, ಅಪೌಷ್ಟಿಕತೆ, ಅನಾರೋಗ್ಯ, ಅನಕ್ಷರತೆಗಳಿಗಾಗಿ ಮುಂಚೂಣಿಯಲ್ಲಿವೆ. ಉತ್ತರಭಾರತಕ್ಕೆ ಹೋಲಿಸಿದರೆ ಕೋಮುಗಲಭೆಗಳು ದಕ್ಷಿಣದಲ್ಲಿ ಕಡಿಮೆ. ದಕ್ಷಿಣ ಭಾರತದ ರಾಜ್ಯಗಳು ತೆರಿಗೆಯ ಹಣವನ್ನು ಆಸ್ಪತ್ರೆ, ಕಾಲೇಜುಗಳು ಎಂದು ಹೂಡಿಕೆ ಮಾಡುತ್ತಿದ್ದರೆ ಉತ್ತರ ಪ್ರದೇಶದಂತಹ ರಾಜ್ಯಗಳು ಪ್ರತಿಮೆ, ಮಂದಿರ ಎಂದು ಹಣ ಉಡಾಯಿಸುತ್ತಿವೆ. ಕೇಂದ್ರ ಸರಕಾರದ ಕುಟುಂಬ ಯೋಜನೆಗೆ ಉತ್ತರ ಭಾರತಕ್ಕಿಂತ ತೀವ್ರವಾಗಿ ಸ್ಪಂದಿಸಿದ್ದು ದಕ್ಷಿಣ ಭಾರತ. ಇಲ್ಲಿ ಅತಿ ಹೆಚ್ಚು ಸಾಕ್ಷರರಿದ್ದುದರಿಂದ ಕುಟುಂಬ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿತು. ಈ ಕಾರಣದಿಂದ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವು ಜನಸಂಖ್ಯೆಯಲ್ಲಿ ಹಿಂದಿದೆ. ಇದೀಗ ಅದೇ ಕಾರಣವನ್ನು ಮುಂದೊಡ್ಡಿ ದಕ್ಷಿಣ ಭಾರತದ ಲೋಕಸಭಾ ಸ್ಥಾನಗಳನ್ನು ಕಡಿತಗೊಳಿಸುವುದು ಎಷ್ಟು ಸರಿ? ಎಂದು ಇಲ್ಲಿನ ನಾಯಕರು ಪ್ರಶ್ನಿಸುತ್ತಿದ್ದಾರೆ.ಈಗಾಗಲೇ ನಡೆದಿರುವ ಕೆಲವು ಅಧ್ಯಯನಗಳ ಪ್ರಕಾರ, ಈ ಮರುವಿಂಗಡಣೆೆೆ ನಡೆದದ್ದೇ ಆದರೆ ಕರ್ನಾಟಕ ಎರಡು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಆಂಧ್ರ ಐದಕ್ಕೂ ಅಧಿಕ ಕ್ಷೇತ್ರಗಳನ್ನು, ಕೇರಳ ಎರಡು ಕ್ಷೇತ್ರಗಳನ್ನು, ತಮಿಳು ನಾಡು ಐದಕ್ಕೂ ಅಧಿಕ ಕ್ಷೇತ್ರಗಳನ್ನು ಕಳೆದುಕೊಳ್ಳುತ್ತದೆ. ದಕ್ಷಿಣದ ರಾಜಕೀಯ ಪ್ರಾತಿನಿಧ್ಯ ಇಳಿಕೆಯಾಗುವುದು ಮಾತ್ರವಲ್ಲ, ಉತ್ತರ ಭಾರತದ ಕ್ಷೇತ್ರಗಳಲ್ಲಿ ಹೆಚ್ಚಳವಾಗಿ ಸರಕಾರ ರಚನೆಯಲ್ಲಿ ಅವರೇ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಗಳಿರುತ್ತವೆ. ನಿಜಕ್ಕೂ ಈ ಪುನರ್ ವಿಂಗಡಣೆೆ ವಿಭಜನಕಾರಿಯಾಗಿದ್ದು, ಅಂತಿಮವಾಗಿ ಇಂದು ಉತ್ತರ ಮತ್ತು ದಕ್ಷಿಣ ನಡುವಿನ ಕಂದರವನ್ನು ಹೆಚ್ಚಿಸಲಿದೆ. ಪುನರ್ ವಿಂಗಡಣೆೆಗೆ ಅನುಸರಿಸಿರುವ ಮಾನದಂಡ ಒಕ್ಕೂಟ ವ್ಯವಸ್ಥೆಯ ಶವಪೆಟ್ಟಿಗೆಯ ಮೇಲೆ ಹೊಡೆಯುವ ಇನ್ನೊಂದು ಮೊಳೆಯಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ದಕ್ಷಿಣ ಭಾರತದ ಆತಂಕವನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಇಲ್ಲವಾದರೆ ಕೇಂದ್ರ ಭಾರೀ ಬೆಲೆ ತೆರಬೇಕಾಗುವ ಸನ್ನಿವೇಶ ಸೃಷ್ಟಿಯಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News