ಹೋಳಿಗೆ ದ್ವೇಷದ ಬಣ್ಣ:ಮುಖ ಮುಚ್ಚಬೇಕಾದವರು ಯಾರು?

ದೀಪಾವಳಿ ಬೆಳಕಿನ ಹಬ್ಬವಾದರೆ, ಹೋಳಿ ಬಣ್ಣದ ಹಬ್ಬವಾಗಿ ಭಾರತೀಯರ ಬದುಕನ್ನು ಬೆಸೆದಿದೆ. ಈ ಎರಡೂ ಹಬ್ಬಗಳ ವಿಶೇಷವೆಂದರೆ, ಇವುಗಳನ್ನು ಜನತೆ ಅನೇಕ ಸಂದರ್ಭಗಳಲ್ಲಿ ಜಾತಿ ಧರ್ಮಗಳನ್ನು ಮೀರಿ ಆಚರಿಸುತ್ತಾ ಬಂದಿದ್ದಾರೆ. ದೀಪಾವಳಿಯು ನಮ್ಮೊಳಗಿನ ಕತ್ತಲನ್ನು ಕಳೆದು ಬೆಳಕನ್ನು ತುಂಬುತ್ತದೆ ಎನ್ನುವುದು ನಂಬಿಕೆಯಾದರೆ, ಹೋಳಿಯ ಮೂಲಕ ನಮ್ಮೊಳಗಿನ ಕೆಡುಕನ್ನು ಸುಟ್ಟು, ಕಪ್ಪು-ಬಿಳುಪು ಜೀವನಕ್ಕೆ ಖುಷಿ, ಸಂತೋಷದ ಬಣ್ಣ ತುಂಬುವ ಪ್ರಯತ್ನವನ್ನು ಮಾಡುತ್ತೇವೆ. ದೇಶದಲ್ಲಿ ದೀಪಾವಳಿಯಷ್ಟು ಜನಪ್ರಿಯತೆಯನ್ನು ಹೋಳಿ ಹೊಂದಿಲ್ಲದೇ ಇದ್ದರೂ, ಇದು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ರೂಪಗಳಲ್ಲಿ ಆಚರಿಸಲ್ಪಡುತ್ತದೆ. ಹೋಳಿಗೆ ಸಂಬಂಧಿಸಿ ಹಲವೆಡೆ ಹಲವು ಕತೆಗಳಿವೆ. ಹಾಗೆಯೇ ಆಚರಣೆಗಳಲ್ಲಿ ವೈವಿಧ್ಯಗಳೂ ಇವೆ. ಬೇಟೆ, ವೇಷಧಾರಣೆಗಳ ಮೂಲಕವೂ ಹೋಳಿಯನ್ನು ಆಚರಿಸುವುದಿದೆ. ಕೆಲವು ಪ್ರದೇಶಗಳಿಗೆ ಹೋಳಿ ಹಬ್ಬ ತೀರಾ ಅಪರಿಚಿತ. ಮುಂಬೈ ಮತ್ತು ಉತ್ತರ ಭಾರತದ ಸಾಂಸ್ಕೃತಿಕ ವಲಸೆಯ ಜೊತೆಗೆ ಹೋಳಿಯೂ ಬೇರೆ ಬೇರೆ ರೂಪಗಳಲ್ಲಿ ದಕ್ಷಿಣ ಭಾರತವನ್ನು ಪ್ರವೇಶಿಸಿತು. ಇನ್ನು ಭಾರತದ ಹಿಂದೂ ಸಮುದಾಯಕ್ಕೆ ಸೇರಿದ ಕೆಲವು ಬುಡಕಟ್ಟುಗಳಲ್ಲಿ ಹೋಳಿ ಹಬ್ಬ ಆಚರಣೆಗಳಿಗೆ ಆಸ್ಪದವಿಲ್ಲ. ಇವೆಲ್ಲದರ ನಡುವೆಯೂ ಬಣ್ಣವನ್ನು ಪರಸ್ಪರ ಎರಚಿ ಖುಷಿ ಪಡುವುದಕ್ಕೆ ಯಾವುದೇ ಅಡ್ಡಿಯೂ ಇಲ್ಲ.
ಹಬ್ಬಗಳಿಗೆ ಮನುಷ್ಯರನ್ನುಮಾನಸಿಕವಾಗಿ ಪರಸ್ಪರ ಬೆಸೆಯುವ ಉದ್ದೇಶವಿದೆ. ಆದರೆ ಇಂದು ರಾಜಕೀಯ ಶಕ್ತಿಗಳು ಹಬ್ಬಗಳನ್ನು ವಿರೂಪಗೊಳಿಸಿ ಮನುಷ್ಯರ ನಡುವೆ ಗೋಡೆ ಕಟ್ಟಲು ಬಳಕೆ ಮಾಡುತ್ತಿದೆ. ಬೆಳಕಿನ ಹಬ್ಬವೆಂದೇ ಗುರುತಿಸಲ್ಪಡುತ್ತಿದ್ದ ದೀಪಾವಳಿಯನ್ನು ಕೆಲವು ರಾಜಕೀಯ ವ್ಯಕ್ತಿಗಳು, ಪಟಾಕಿ ಹಬ್ಬವಾಗಿ ಪರಿವರ್ತಿಸಿರುವುದು ಇದೇ ಉದ್ದೇಶದಿಂದ. ಇಂದು ದೀಪಾವಳಿ ಬೆಳಕಿಗಾಗಿಯಲ್ಲ, ಸದ್ದಿಗಾಗಿ ಚರ್ಚೆಯಲ್ಲಿದೆ. ದೀಪಾವಳಿಯ ನೆಪದಲ್ಲಿ ಸುಡುವ ಪಟಾಕಿಗಳಿಂದಾಗಿ ಆಸ್ಪತ್ರೆಗಳಲ್ಲಿರುವ ರೋಗಿಗಳು, ಪ್ರಾಣಿ ಪಕ್ಷಿಗಳು ನಲುಗುವ ಸ್ಥಿತಿ ಸೃಷ್ಟಿಯಾಗುತ್ತದೆ. ದೀಪಾವಳಿ ಹತ್ತಿರ ಬರುತ್ತಿದ್ದಂತೆಯೇ ಕೆಲವು ರಾಜಕೀಯ ನಾಯಕರು ಚುನಾವಣೆ ಹತ್ತಿರ ಬಂದಂತೆ, ಹೇಳಿಕೆಗಳನ್ನು ನೀಡತೊಡಗುತ್ತಾರೆ. ಪಟಾಕಿಯನ್ನು ಮುಂದಿಟ್ಟುಕೊಂಡು ಹಿಂದೂ ಪರ-ವಿರೋಧಿ ಚರ್ಚೆಗಳನ್ನು ಹುಟ್ಟಿಸಿ ಹಾಕುತ್ತಾರೆ. ಸರಕಾರ ‘ಹಸಿರು ಪಟಾಕಿಗಳನ್ನು ಬಳಸಿ’ ಎಂದು ದಮ್ಮಯ್ಯ ಗುಡ್ಡೆ ಹಾಕಬೇಕಾಗುತ್ತದೆ. ಕಳವಳಕಾರಿ ಸಂಗತಿಯೆಂದರೆ, ದೇಶಾದ್ಯಂತ ಸಾವಿರಾರು ಮಂದಿ ಪಟಾಕಿ ಕಾರಣದಿಂದಾಗಿ ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಅನಾಹುತಗಳನ್ನು ಗುರುತಿಸಿ, ನ್ಯಾಯಾಲಯವೇ ಪಟಾಕಿಯ ವಿರುದ್ಧ್ದ ಆದೇಶಗಳನ್ನು ನೀಡಿದೆ. ಪಟಾಕಿಗಳನ್ನು ಬಳಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆಗಳನ್ನು ನೀಡಿದೆ.
ಇದೀಗ ಹೋಳಿ ಹತ್ತಿರ ಬರುತ್ತಿದ್ದಂತೆಯೇ, ರಾಜಕೀಯ ಶಕ್ತಿಗಳು ಈ ಆಚರಣೆಯನ್ನೂ ಕಲುಷಿತಗೊಳಿಸಲು ಯತ್ನಿಸುತ್ತಿವೆ. ಈಗಾಗಲೇ ಕುಂಭಮೇಳದಲ್ಲಾಗಿರುವ ವೈಫಲ್ಯಗಳನ್ನು ಹೋಳಿಯ ಬಣ್ಣಗಳಿಂದ ಮುಚ್ಚಿ ಹಾಕಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಯತ್ನಿಸುತ್ತಿದ್ದಾರೆ. ಸತ್ಯ ಮುಚ್ಚಿಟ್ಟು ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರನ್ನು ಕಲುಷಿತ ಗಂಗೆಯ ನೀರಿಗೆ ತಳ್ಳಿದ ಉತ್ತರ ಪ್ರದೇಶ ಸರಕಾರ, ಇದೀಗ ಹೋಳಿಯ ಹೆಸರಿನಲ್ಲಿ ಜನರಿಗೆ ದ್ವೇಷದ ಬ್ಯಾಕ್ಟೀರಿಯಗಳನ್ನು ತುಂಬಿದ ಬಣ್ಣದ ಪಿಚಕಾರಿಯನ್ನು ಹಂಚಲು ಮುಂದಾಗಿದೆ. ಸಾಧಾರಣವಾಗಿ ಹಬ್ಬಗಳು ಬಂದಾಗ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳೇ ‘ಹೋಳಿಯ ಹೆಸರಿನಲ್ಲಿ ನೀವು ಕಾನೂನನ್ನು ಉಲ್ಲಂಘಿಸಬಹುದು’ ಎನ್ನುವ ಪರೋಕ್ಷ ಸೂಚನೆಯನ್ನು ದುಷ್ಕರ್ಮಿಗಳಿಗೆ ನೀಡಿದ್ದಾರೆ. ಇತ್ತೀಚೆಗೆ, ಸಂಭಲ್‌ನ ಡಿಎಸ್‌ಪಿ ಅನುಜ್ ಕುಮಾರ್ ಜೌಧರಿ ಎಂಬಾತ, ‘‘ಮುಸ್ಲಿಮರಿಗೆ ಹೋಳಿ ಬಣ್ಣ ಇಷ್ಟವಾಗದಿದ್ದರೆ ಅವರು ತಮ್ಮ ತಮ್ಮ ಮನೆಗಳಲ್ಲೇ ಇರಿ. ಹೋಳಿ ಹಬ್ಬ ವರ್ಷಕ್ಕೊಮ್ಮೆ ಬರುತ್ತದೆ. ಆದುದರಿಂದ, ಅವರು ಅದನ್ನು ನಿಮ್ಮ ಮೇಲೆ ಎರಚಬಾರದು ಎಂದು ಹೇಳುವಂತಿಲ್ಲ’’ ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದು ‘‘ಮುಸ್ಲಿಮರು ಮನೆಯಿಂದ ಹೊರಗೆ ಬಂದರೆ ಅವರ ಮೇಲೆ ಬಣ್ಣಗಳನ್ನು ಎರಚಿ’’ ಎಂದು ಪರೋಕ್ಷವಾಗಿ ಪೊಲೀಸ್ ಅಧಿಕಾರಿಯೇ ಸೂಚನೆ ನೀಡಿದಂತಿದೆ. ವಿಪರ್ಯಾಸವೆಂದರೆ ಈ ಹೇಳಿಕೆನ್ನು ಮರುದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಪುನರುಚ್ಚರಿಸಿದರು. ‘‘ಹೋಳಿ ಹಬ್ಬ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಶುಕ್ರವಾರ ನಮಾಝ್‌ಗೆ ಹೋಗುವವರು ತಮ್ಮ ಮೇಲೆ ಬಣ್ಣ ಬೀಳಬಾರದು ಎಂದು ಬಯಸಿದರೆ ಮನೆಯಲ್ಲೇ ಇರುವುದು ಒಳಿತು’’ ಎನ್ನುವ ಮೂಲಕ, ನಮಾಝ್‌ಗೆ ತೆರಳುವವರ ಮೇಲೆ ಬಣ್ಣ ಎರಚಿದರೆ ಅದಕ್ಕೆ ಸರಕಾರ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೋಳಿಯ ದಿನ ಮುಸ್ಲಿಮರ ಮೇಲೆ ಎಂದಲ್ಲ, ಯಾರ ಮೇಲೂ ಅವರ ಅನುಮತಿಯಿಲ್ಲದೆ ಬಣ್ಣವನ್ನಾಗಲಿ, ನೀರನ್ನಾಗಲಿ ಎರಚುವ ಅಧಿಕಾರ ಯಾರಿಗೂ ಇಲ್ಲ. ಬಣ್ಣವನ್ನು ಗೆಳೆಯರು, ಸಂಬಂಧಿಕರು, ಆತ್ಮೀಯರು ಪರಸ್ಪರ ಒಪ್ಪಿಗೆಯ ಜೊತೆಗೆ ಎರಚಿ ಸಂಭ್ರಮಿಸಬಹುದೇ ಹೊರತು, ಯಾವುದೇ ಧರ್ಮಕ್ಕೆ ಸೇರಿದ ಪ್ರಯಾಣಿಕರಿಗೆ, ದಾರಿ ಹೋಕರಿಗೆ ಬಣ್ಣ ಎರಚಿ ತೊಂದರೆ ಕೊಟ್ಟರೆ ಕಾನೂನು ಪ್ರಕಾರ ಅದು ಅಪರಾಧವಾಗುತ್ತದೆ. ಹೋಳಿಯ ಸಂದರ್ಭದಲ್ಲಿ ಬಳಕೆಯಾಗುವ ಬಣ್ಣದಲ್ಲಿರುವ ರಾಸಾಯನಿಕದ ಬಗ್ಗೆ ಈಗಾಗಲೇ ತಜ್ಞರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಚರ್ಮಗಳಿಗೆ ಹಾನಿ ಮಾಡುವ ಅಂಶಗಳು ಅದರಲ್ಲಿರುವುದನ್ನು ಈಗಾಗಲೇ ಗುರುತಿಸಿದ್ದಾರೆ. ಕುಂಭಮೇಳದಲ್ಲಿ ಕಲುಷಿತ ಗಂಗೆಯಲ್ಲಿ ನಂಬಿಕೆಯಿರುವವರಷ್ಟೇ ಮುಳುಗಿದರು. ಆದರೇ ಹೋಳಿಯ ರಾಸಾಯನಿಕ ಬಣ್ಣವನ್ನು ಎಲ್ಲರ ಮೇಲೆ ಅಲ್ಲಿನ ಸರಕಾರ ಹೇರಲು ಹೊರಟಿದೆ. ಹೋಳಿಯ ದಿನ ಅತಿ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ಎನ್ನುವುದು ಮುಚ್ಚುಮರೆಯ ಸಂಗತಿಯಾಗಿ ಉಳಿದಿಲ್ಲ. ಮುಂಬೈಯಂತಹ ನಗರಗಳಲ್ಲಿ ಹೋಳಿ ಆಚರಣೆ ಬಣ್ಣಕ್ಕಷ್ಟೇ ಗುರುತಿಸಲ್ಪಡುತ್ತಿಲ್ಲ. ಈ ಸಂದರ್ಭದಲ್ಲಿ ‘ಬಾಂಗ್’ನಂತಹ ಅಮಲು ಪಾನೀಯವನ್ನು ಕೂಡ ವ್ಯಾಪಕವಾಗಿ ಸೇವಿಸಿ ಮೈಮರೆಯುತ್ತಾರೆ. ಈ ಮಾದಕ ಪಾನೀಯ ಸೇವಿಸಿ ಹೋಳಿಯಾಡುವುದು ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರ ಮೇಲೆ ಕಿಡಿಗೇಡಿಗಳು ಬಣ್ಣ ಎರಚುವುದು ಮಾತ್ರವಲ್ಲ, ಅವರ ಮೈಮುಟ್ಟುವುದು, ದೈಹಿಕ ಕಿರುಕುಳವನ್ನು ನೀಡುವುದು ಹೋಳಿಯಾಚರಣೆಯ ಭಾಗವೆಂಬಂತೆ ನಡೆಯುತ್ತಾ ಬರುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ದೂರುಗಳೂ ದಾಖಲಾಗುತ್ತಿರುತ್ತವೆ. ಕಳೆದ ಹೋಳಿಯ ಸಂದರ್ಭದಲ್ಲಿ ವಿದೇಶಿ ಮಹಿಳೆಯೊಬ್ಬಳ ಮೇಲೆ ಹೋಳಿ ಆಚರಿಸುವ ನೆಪದಲ್ಲಿ ಗುಂಪೊಂದು ನೀಡಿದ ಲೈಂಗಿಕ ಕಿರುಕುಳ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹೋಳಿಯ ಸಂದರ್ಭದಲ್ಲಿ ಕಿಡಿಗೇಡಿಗಳಿಗೆ ಸರಕಾರ ಸ್ಪಷ್ಟ ಎಚ್ಚರಿಕೆಯನ್ನು ನೀಡಬೇಕಾಗಿತ್ತು. ಆದರೆ ಅದರ ಬದಲಿಗೆ, ಮುಸ್ಲಿಮರಿಗೆ ಎಚ್ಚರಿಕೆ ನೀಡಿದೆ. ಈ ಮೂಲಕ ಹೋಳಿಯ ಹೆಸರಿನಲ್ಲಿ ಕಿಡಿಗೇಡಿತನ ನಡೆಸುವ ಜನರಿಗೆ ಸರಕಾರವೇ ಪರವಾನಿಗೆ ನೀಡಿದಂತಾಗಿದೆ. ಮುಸ್ಲಿಮರ ವಿಷಯ ಪಕ್ಕಕ್ಕಿರಲಿ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಹಿಂದೂ ಮಹಿಳೆಯರು ಕೂಡ ಅನಿವಾರ್ಯವಾಗಿ ಮನೆಯಲ್ಲೇ ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೋಳಿಯ ಹೆಸರಿನಲ್ಲಿ ಕೆಲವು ಮಸೀದಿಗಳನ್ನು ಜಿಲ್ಲಾಡಳಿತವು ಟರ್ಪಾಲಿನಲ್ಲಿ ಮುಚ್ಚಿದೆ. ಇದು ಕಾನೂನು ಸುವ್ಯವಸ್ಥೆಯ ಪರಮಾವಧಿ ಅಣಕವಾಗಿದೆ. ತನ್ನ ಕ್ಷುದ್ರ ದ್ವೇಷ ರಾಜಕಾರಣಕ್ಕೆ ಹೋಳಿಯಂತಹ ಆಚರಣೆಯನ್ನು ಬಳಸಿಕೊಂಡ ಸರಕಾರ ಮತ್ತು ಆ ರಾಜ್ಯದ ಕಾನೂನು ಪಾಲಕರು ಟರ್ಪಾಲಿನಿಂದ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕಾಗಿದೆ. ವಿಷಾದನೀಯ ಸಂಗತಿಯೆಂದರೆ, ಜನರ ಬದುಕಿಗೆ ಬಣ್ಣ ತುಂಬಬೇಕಾಗಿದ್ದ ಹೋಳಿ ಹಬ್ಬಕ್ಕೆ ದ್ವೇಷದ ಬಣ್ಣ ತುಂಬಿದ ರಾಜಕೀಯ ನಾಯಕರ ದೆಸೆಯಿಂದಾಗಿ ಉತ್ತರ ಪ್ರದೇಶದ ಸಜ್ಜನ ಹಿಂದುಗಳೆಲ್ಲರೂ ಮುಖ ಮುಚ್ಚಿ ಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇವೆಲ್ಲದರ ನಡುವೆಯೂ ಸರಕಾರ ಮತ್ತು ಪೊಲೀಸ್ ಅಧಿಕಾರಿಗಳ ವರ್ತನೆಯ ವಿರುದ್ಧ ನಾಗರಿಕರು ಧ್ವನಿಯೆತ್ತುತ್ತಿರುವುದು ಸಮಾಧಾನ ತರುವ ವಿಷಯವಾಗಿದೆ.