ಸರಕಾರಿ ವೈದ್ಯರು ಪ್ರಾಮಾಣಿಕತೆ ಮೆರೆಯಲಿ

Update: 2025-03-18 06:30 IST
ಸರಕಾರಿ ವೈದ್ಯರು ಪ್ರಾಮಾಣಿಕತೆ ಮೆರೆಯಲಿ

ಸಾಂದರ್ಭಿಕ ಚಿತ್ರ PC: ANI

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜನತೆಯ ಹಣದಿಂದ ನಡೆಯುವ ಸರಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ತಾಣಗಳಾಗಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರಿಗಾಗಿ ಅಸ್ತಿತ್ವಕ್ಕೆ ಬಂದಿರುವ ಈ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು, ಔಷಧಿ ಸಾಮಗ್ರಿಗಳ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಅನೇಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ತಿಂಗಳಿಗೆ ಒಂದು ಲಕ್ಷ ರೂ.ಗಿಂತ ಜಾಸ್ತಿ ಸಂಬಳ ನೀಡಿದರೂ ವೈದ್ಯಕೀಯ ಪದವೀಧರರು ಸಿಗುತ್ತಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿರುವ ಸರಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡಲು ವೈದ್ಯರು ಇಷ್ಟಪಡುತ್ತಿಲ್ಲ.

ಇವುಗಳ ಜೊತೆಗೆ ಇನ್ನೊಂದು ಸಮಸ್ಯೆಯಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ವೈದ್ಯರು ಕೂಡ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿಲ್ಲ. ಈ ಸರಕಾರಿ ವೈದ್ಯರು ತಮ್ಮ ಕೆಲಸದ ಅವಧಿಯಲ್ಲಿ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ಹೋಗಿ ಕೆಲಸ ಮಾಡುತ್ತಾರೆ ಎಂಬ ದೂರುಗಳು ಸಾಕಷ್ಟಿವೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರು ವಿಧಾನ ಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾವಿಸಿ ‘‘ಸರಕಾರಿ ಆಸ್ಪತ್ರೆಗಳಲ್ಲಿ ಸಂಬಳ ಪಡೆದು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಕೆಲಸ ಮಾಡುತ್ತಾರೆ’’ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ಸಲುವಾಗಿ ದಿನದಲ್ಲಿ ನಾಲ್ಕು ಸಲ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗುವುದೆಂದು ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ನಿಗದಿತ ಸಂಬಳ, ಭತ್ತೆಯನ್ನು ನೀಡಲಾಗುತ್ತಿದೆ. ಆದರೂ ಹೆಚ್ಚಿನ ಆದಾಯದ ಆಸೆಯಿಂದ ಈ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಇದನ್ನು ತಪ್ಪಿಸಲೆಂದೇ, ಸರಕಾರಿ ಆಸ್ಪತ್ರೆಗಳಲ್ಲಿ ಮುಂಜಾನೆ ಮತ್ತು ಸಂಜೆ ಬಯೋಮೆಟ್ರಿಕ್ ಹಾಜರಾತಿಗಳನ್ನು ಕಡ್ಡಾಯಗೊಳಿಸಲಾಗಿತ್ತು. ಆದರೂ ಸರಕಾರಿ ವೈದ್ಯರನ್ನು ನಿರ್ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದನ್ನು ತಡೆಯಲು ದಿನಕ್ಕೆ ನಾಲ್ಕು ಸಲ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸುವುದು ಅನಿವಾರ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸರಕಾರದಿಂದ ಸಂಬಳ ಪಡೆದು ಹೆಚ್ಚು ಹಣ ಗಳಿಸುವ ದುರಾಸೆಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯದ ಮೇಲಿರುವಾಗಲೇ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಕೆಲಸ ಮಾಡುವುದು ತಮ್ಮ ವೃತ್ತಿ ಧರ್ಮಕ್ಕೆ ಬಗೆಯುವ ಮಹಾದ್ರೋಹವಾಗಿದೆ. ಒಬ್ಬ ವಿದ್ಯಾರ್ಥಿ ವೈದ್ಯಕೀಯ ಪದವೀಧರನಾಗಲು ಸರಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಹೀಗೆ ಸರಕಾರದ ಅನುದಾನದಿಂದ ವೈದ್ಯಕೀಯ ಪರೀಕ್ಷೆ ಪಾಸಾಗಿ ಕೆಲವರು ವಿದೇಶಕ್ಕೆ ಹೋಗಿ ಅಲ್ಲೇ ನೆಲೆಸುತ್ತಾರೆ. ಇನ್ನುಳಿದವರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಾರೆ. ಇನ್ನು ಕೆಲವರು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಇದನ್ನು ಯಾರೂ ಕೂಡ ಸಮರ್ಥಿಸಲು ಸಾಧ್ಯವಿಲ್ಲ.

ಈಗಿನ ಪರಿಸ್ಥಿತಿಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಹಾಕದೆ ತಿಂಗಳ ಕೊನೆಯಲ್ಲಿ ಹಾಜರಾತಿಯನ್ನು ಅಪ್‌ಡೇಟ್ ಮಾಡುವ ಸಿಬ್ಬಂದಿಯೂ ಸಾಕಷ್ಟಿದ್ದಾರೆ. ಹಾಗಾಗಿ ಈಗ ಸಚಿವರು ಹೇಳಿರುವಂತೆ ದಿನಕ್ಕೆ ನಾಲ್ಕು ಬಾರಿ ಹಾಜರಾತಿಯನ್ನು ಕಡ್ಡಾಯಗೊಳಿಸಿದರೂ ಅದಕ್ಕೂ ದುರ್ಗತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಸರಕಾರದ ಈ ಹೊಸ ಹಾಜರಾತಿ ಪದ್ಧತಿ ಕೇವಲ ಕಿರಿಯ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರಬಾರದು. ಸಂಸ್ಥೆಯ ಎಲ್ಲ ಮುಖ್ಯಸ್ಥರಿಗೂ ಇದನ್ನು ಕಡ್ಡಾಯಗೊಳಿಸಬೇಕು. ಇದರ ಜೊತೆಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇದನ್ನು ಸ್ವಾಗತಿಸಬೇಕು. ರೋಗಿಗಳ ಸಲುವಾಗಿ ಸರಕಾರ ಕೈಗೊಂಡ ಅನಿವಾರ್ಯ ಕ್ರಮ ಎಂಬ ವಾಸ್ತವವನ್ನು ವೈದ್ಯರು ಒಪ್ಪುವುದು ಸೂಕ್ತ.

ಸರಕಾರಿ ಆಸ್ಪತ್ರೆಗಳಿಗೆ ಬರುವವರು ಕೋಟ್ಯಧೀಶರಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರು. ರೈತರು, ಕಾರ್ಮಿಕರು, ಕಡುಬಡವರು ಅಸ್ವಸ್ಥರಾದಾಗ ಸರಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಅವರಿಗೆ ಅನನುಕೂಲ ಆಗದಂತೆ ನೋಡಿಕೊಳ್ಳಬೇಕು.

ಸರಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಇನ್ನೊಂದು ಮಹತ್ವದ ಅಂಶವೆಂದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ಔಷಧಿಗಳ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯರನ್ನು ಮನವೊಲಿಸಬೇಕು. ಆರೋಗ್ಯ, ಶಿಕ್ಷಣ ಇವುಗಳು ಲಾಭಕ್ಕಾಗಿ ಮಾಡುವ ಸೇವೆಯಲ್ಲ. ಪ್ರಜೆಗಳ ಆರೋಗ್ಯ ರಕ್ಷಣೆ ವೈದ್ಯರ ಕರ್ತವ್ಯವಾಗಿರಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಆಸಕ್ತಿ ವಹಿಸಬೇಕು. ಪ್ರತೀ ಹತ್ತು ಸಾವಿರ ಜನರಿಗೆ ಕನಿಷ್ಠ ಒಂಭತ್ತು ಮಂದಿ ವೈದ್ಯರು ಲಭ್ಯವಿರಬೇಕು. ಆದರೆ ವಾಸ್ತವವೆಂದರೆ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಭಾಗದಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬರು ವೈದ್ಯರಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಸರಿಗೆ ಮಾತ್ರ ಇವೆ. ಇದನ್ನು ಸರಿಪಡಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

ಖಾಸಗಿ ಮೆಡಿಕಲ್ ಕಾಲೇಜು, ಕಾರ್ಪೊರೇಟ್ ಆಸ್ಪತ್ರೆಗಳು ಬಂದ ನಂತರ ಬಡವರನ್ನು ಕೇಳುವವರೇ ಇಲ್ಲ. ಬಹುತೇಕ ಮಂತ್ರಿ, ಶಾಸಕರಿಗೆ ಅವರದೇ ಆದ ಮೆಡಿಕಲ್ ಕಾಲೇಜುಗಳು, ಕಾರ್ಪೊರೇಟ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ಇರುವುದರಿಂದ ಸರಕಾರಿ ಆಸ್ಪತ್ರೆಗಳ ಸುಧಾರಣೆ ಬಗ್ಗೆ ಅವರಿಗೆ ಆಸಕ್ತಿಯಿಲ್ಲ.ಈ ಲೋಪವನ್ನು ಸರಿಪಡಿಸಬೇಕು.

ಬಹುತೇಕ ಸರಕಾರಿ ಆಸ್ಪತ್ರೆಗಳಿಗೆ ಸ್ವಂತ ಕಟ್ಟಡಗಳಿವೆ. ಅದರೆ ತಕ್ಕ ವೈದ್ಯಕೀಯ ಸಿಬ್ಬಂದಿ ಇಲ್ಲ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಸಾಧನ, ಸಲಕರಣೆಗಳು ಇಲ್ಲ.ರೋಗವನ್ನು ಪತ್ತೆ ಹಚ್ಚುವ ಪರೀಕ್ಷಾ ವ್ಯವಸ್ಥೆ ಇಲ್ಲ. ಅವಶ್ಯವಿರುವಷ್ಟು ಹಾಸಿಗೆಗಳು, ಶಸ್ತ್ರ ಚಿಕಿತ್ಸೆಗೆ ಅಗತ್ಯವಿರುವ ಕೊಠಡಿ, ತೀವ್ರ ನಿಗಾ ಘಟಕಗಳು, ಔಷಧಿ ಸಂಗ್ರಹಾಲಯ ಇದಾವುದೂ ಇಲ್ಲ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶೇ. 52ರಷ್ಟು ತಜ್ಞ ವೈದ್ಯರ ಕೊರತೆಯಿದೆ. ಇದನ್ನು ಸರಿಪಡಿಸಲು ಮೊದಲು ಆದ್ಯತೆ ನೀಡಬೇಕು. ರೋಗಿಗಳು ಬಂದರೆ ತಕ್ಷಣ ಚಿಕಿತ್ಸೆ ಆರಂಭಿಸಬೇಕು. ಬಡ ರೋಗಿಗಳು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಎಡತಾಕುವ ಪರಿಸ್ಥಿತಿ ಬರಬಾರದು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸುವುದು ತುರ್ತು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News