ಹಾಗಾದರೆ ಇವರನ್ನೂ ಮರಕ್ಕೆ ಕಟ್ಟಿ ಹಾಕಿ ಥಳಿಸಬೇಕೆ?

Update: 2025-03-26 09:50 IST
ಹಾಗಾದರೆ ಇವರನ್ನೂ ಮರಕ್ಕೆ ಕಟ್ಟಿ ಹಾಕಿ ಥಳಿಸಬೇಕೆ?
  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕದ್ದ ಆರೋಪ ಹೊರಿಸಿ ದಲಿತ ಮಹಿಳಾ ಕಾರ್ಮಿಕಳನ್ನು ಗುಂಪೊಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಈ ಕೃತ್ಯ ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಜುಗರಕ್ಕೆ ತಳ್ಳಿತ್ತು. ಕೃತ್ಯ ಮಾಧ್ಯಮಗಳ ಮೂಲಕ ಹರಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಯನ್ನು ಖಂಡಿಸಿದ್ದಲ್ಲದೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದರು. ರಾಜ್ಯ ಮಟ್ಟದಲ್ಲಿ ಸುದ್ದಿಯಾದ ಕಾರಣಕ್ಕೆ ಪೊಲೀಸರು ತಡವಾಗಿಯಾದರೂ ಪ್ರವೇಶಿಸಲೇ ಬೇಕಾಯಿತು. ಕೊನೆಗೂ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿ, ಕೃತ್ಯದಲ್ಲಿ ಭಾಗಿಯಾದ ಕೆಲವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಕೃತ್ಯವನ್ನು ಎಸಗಲು ಕಾರಣ ಏನೇ ಇರಲಿ, ಒಂದು ನಾಗರಿಕ ಸಮಾಜದಲ್ಲಿ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಾಕಿ ಥಳಿಸುವುದನ್ನು ಮನುಷ್ಯರೆನಿಸಿಕೊಂಡವರೆಲ್ಲರೂ ಖಂಡಿಸಲೇಬೇಕು. ಅಂತಹದೊಂದು ಕೃತ್ಯ ನಡೆಸಿದವರ ವಿರುದ್ಧ ತಕ್ಷಣ ದೂರು ದಾಖಲಿಸಿ ಅವರು ಬಂಧನವಾಗುವಂತೆ ನೋಡಿಕೊಳ್ಳಬೇಕಾದುದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ರಾಜಕೀಯ ನಾಯಕರ ಕರ್ತವ್ಯವಾಗಿದೆ. ಆದರೆ ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣ ಎಷ್ಟು ಕೆಟ್ಟು ಹೋಗಿದೆಯೆಂದರೆ, ಮಲ್ಪೆಯಲ್ಲಿ ನಡೆದಿರುವ ಕೃತ್ಯ ಆಕಸ್ಮಿಕವಾದುದಲ್ಲ ಎನ್ನುವುದನ್ನು ಅಲ್ಲಿಯ ರಾಜಕೀಯ ನಾಯಕರೇ ತಮ್ಮ ವರ್ತನೆಗಳ ಮೂಲಕ ಸಾಬೀತು ಪಡಿಸಿದ್ದಾರೆ. ಹಲ್ಲೆ ಕೃತ್ಯವನ್ನು ಸಮರ್ಥಿಸಿ ಆರೋಪಿಗಳ ಪರವಾಗಿ ಬೀದಿಗಿಳಿದಿರುವ ರಾಜಕೀಯ ನಾಯಕರ ವರ್ತನೆ ಇಡೀ ಉಡುಪಿಯೇ ನಾಚಿ ತಲೆತಗ್ಗಿಸುವಂತಿದೆ.

ಸಂತ್ರಸ್ತೆಯ ಪರವಾಗಿ ಮಾತನಾಡಿ ಆಕೆಗೆ ನ್ಯಾಯ ನೀಡಬೇಕಾಗಿದ್ದ ಉಡುಪಿ ಜಿಲ್ಲೆಯ ಶಾಸಕರು, ಬಿಜೆಪಿ ಮುಖಂಡರು ಆಕೆಗೆ ಹಲ್ಲೆ ನಡೆಸಿರುವ ಆರೋಪಿಗಳ ಪರವಾಗಿ ಬೀದಿಗಿಳಿದಿರುವುದು ಮಾತ್ರವಲ್ಲ, ನಡೆದ ಹಲ್ಲೆಯನ್ನು ಉಡುಪಿ ಜಿಲ್ಲೆ ಯ ‘ಸಂಸ್ಕೃತಿ ಮತ್ತು ಸೌಹಾರ್ದ’ದ ಪ್ರತಿಬಿಂಬ ಎಂದು ನಿರೂಪಿಸುವುದಕ್ಕೆ ಹೊರಟಿದ್ದಾರೆ. ಮಾಜಿ ಸಚಿವ, ಮಾಜಿ ಶಾಸಕರೆಂದು ಗುರುತಿಸಿಕೊಂಡಿರುವ ಪ್ರಮೋದ್ ಮಧ್ವರಾಜ್ ಎಂಬವರು, ಈ ಕೃತ್ಯ ಎಸಗಿದ ಆರೋಪಿಗಳನ್ನು ಬೆಂಬಲಿಸಿ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿರುವುದಲ್ಲದೆ, ಅವರ ವಿರುದ್ಧ ದೂರು ದಾಖಲಿಸಿದ ಪೊಲೀಸ್ ಇಲಾಖೆಯನ್ನು ನಿಂದಿಸಿದ್ದಾರೆ. ರಾಜ್ಯ ಸರಕಾರದ ವಿರುದ್ಧವೂ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇವರ ಪ್ರಕಾರ, ಮರಕ್ಕೆ ಕಟ್ಟಿ ಹಾಕಿ ಬರೇ ಎರಡು ಏಟನ್ನು ‘ಸೌಹಾರ್ದ’ಯುತವಾಗಿ ನೀಡಿದ್ದಂತೆ. ಆ ಬಳಿಕ ಸೌಹಾರ್ದವಾಗಿ ಪ್ರಕರಣ ಇತ್ಯರ್ಥವಾಗಿತ್ತಂತೆ. ಆದುದರಿಂದ, ಕೃತ್ಯ ಎಸಗಿದ ಆರೋಪಿಗಳು ಯಾವ ಕಾರಣಕ್ಕೂ ಶಿಕ್ಷಾರ್ಹರಲ್ಲವಂತೆ. ಕೃತ್ಯವನ್ನು ಎಸಗಿದ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ಉಡುಪಿಯ ‘ಸೌಹಾರ್ದ’ವನ್ನು ಕೆಡಿಸಲು ಮುಂದಾಗಿದ್ದಾರಂತೆ. ಯಾವುದೇ ಮೋಸ, ಹಲ್ಲೆ, ಥಳಿತಗಳು ನಡೆದಾಗ ಕಾನೂನನ್ನು ಕೈಗೆತ್ತಿಕೊಳ್ಳದೇ ಪೊಲೀಸರಿಗೆ ದೂರು ನೀಡಿ ಎನ್ನುವ ಸಲಹೆಯನ್ನು ರಾಜಕೀಯ ನಾಯಕರು ಜನರಿಗೆ ನೀಡಬೇಕು. ಆದರೆ ಇಲ್ಲಿ ಅದಕ್ಕೆ ವಿರುದ್ಧವಾದ ಸಲಹೆಗಳನ್ನು ಮಾಜಿ ಸಚಿವರು ಜನರಿಗೆ ನೀಡಿದ್ದಾರೆ. ‘‘ನಿಮ್ಮ ಮೇಲೆ ಹಲ್ಲೆ ನಡೆದರೆ ಅದರ ವಿರುದ್ಧ ನೀವು ಪೊಲೀಸರಿಗೆ ದೂರು ನೀಡಬಾರದು. ನೀಡಿದರೆ ಸಮಾಜದ ಸೌಹಾರ್ದ ಕೆಡುತ್ತದೆ’’ ಎಂದು ತಮ್ಮ ಭಾಷಣದಲ್ಲಿ ಸಂತ್ರಸ್ತರಿಗೆ ಬೆದರಿಕೆ ಹಾಕಿದ್ದಾರೆ. ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಕೃತ್ಯಕ್ಕಿಂತಲೂ ಹೀನಾಯವಾಗಿದೆ ಈ ಮಾಜಿ ಸಚಿವರ ಮಾತುಗಳು. ಸಾರ್ವಜನಿಕ ಸಭೆಯಲ್ಲಿ ಅವರು ಈ ದೇಶದ ಸಂವಿಧಾನವನ್ನೇ ಮರಕ್ಕೆ ಕಟ್ಟಿ ಹಾಕಿ ಥಳಿಸುವುದಕ್ಕೆ ಪರೋಕ್ಷವಾಗಿ ಕರೆಕೊಟ್ಟಂತಾಗಿದೆ. ಕಾನೂನು ವ್ಯವಸ್ಥೆಗೆ ಸವಾಲು ಹಾಕುವಂತಹ ಮಾತುಗಳಿಗಾಗಿ ತಕ್ಷಣ ಈ ಮಾಜಿ ಸಚಿವರನ್ನು ಬಂಧಿಸಬೇಕಾಗಿದೆ.

ಹಾಲಿ ಶಾಸಕರು, ಮಾಜಿ ಸಚಿವರು ಆರೋಪಿಗಳ ಪರವಾಗಿ ಹೇಳಿಕೆಗಳನ್ನು ನೀಡಿರುವುದಷ್ಟೇ ಅಲ್ಲ, ಶಾಸಕರೊಬ್ಬರು ದೂರನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಒತ್ತಡ ಹಾಕಿದ್ದಾರೆ. ‘‘ಆರೋಪಿಗಳನ್ನು ಬಂಧಿಸಿ, ಮಲ್ಪೆ ಬಂದರಿನಲ್ಲಿ ನಿರಾತಂಕವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ನನಗೆ ನ್ಯಾಯ ಕೊಡಿ’’ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕಾಗಿದ್ದ ದಲಿತ ಮಹಿಳೆ ‘‘ನನಗೆ ಮುಂದೆಯೂ ಮಲ್ಪೆಯ ಬಂದರಿನಲ್ಲಿ ಕೆಲಸ ಮಾಡಬೇಕಾಗಿದೆ. ಆದುದರಿಂದ ನನ್ನ ದೂರನ್ನು ವಾಪಸ್ ಪಡೆಯುತ್ತೇನೆ’’ ಎಂದು ಮನವಿ ಸಲ್ಲಿಸಿದ್ದಾರೆ. ಈ ಮನವಿ ಕೊಡುವ ಸಂದರ್ಭದಲ್ಲಿ, ಶಾಸಕರೂ ಉಪಸ್ಥಿತರಿದ್ದರು ಎನ್ನುವುದು ಗಮನಾರ್ಹ. ಇಡೀ ಉಡುಪಿ ಯಾವ ದಿಕ್ಕಿಗೆ ಸಾಗುತ್ತಿದೆ ಎನ್ನುವುದನ್ನು ಇದು ಹೇಳುತ್ತಿದೆ.

ಮಹಿಳಾ ಕಾರ್ಮಿಕಳೊಬ್ಬರು ಮೀನು ಕದ್ದದ್ದು ಮರಕ್ಕೆ ಕಟ್ಟಿ ಥಳಿಸುವುದಕ್ಕೆ ಅರ್ಹವಾದ ಗಂಭೀರ ತಪ್ಪು ಮತ್ತು ದೂರು ದಾಖಲಿಸಿ ಆರೋಪಿಗಳನ್ನು ಪೊಲೀಸರು ಬಂಧಿಸುವುದರಿಂದ ಸಮಾಜದ ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ ಎಂದು ಮಾಜಿ ಸಚಿವ, ಹಾಲಿ ಶಾಸಕರು ಭಾವಿಸುತ್ತಾರಾದರೆ, ಈ ಅರಣ್ಯದ ಕಾನೂನು ಆ ದಲಿತ ಮಹಿಳೆಗಷ್ಟೇ ಸೀಮಿತವಾಗುತ್ತದೆಯೇ ಅಥವಾ ಉಳಿದವರಿಗೂ ಅನ್ವಯವಾಗುತ್ತದೆಯೇ ಎಂದು ಜನರು ಕೇಳುತ್ತಿದ್ದಾರೆ. ಆ ದಲಿತ ಕಾರ್ಮಿಕ ಮಹಿಳೆ ಬರೇ ಮೀನು ಕದ್ದಿರುವುದು. ಆದರೆ ಉಡುಪಿಯೂ ಸೇರಿದಂತೆ ರಾಜ್ಯಾದ್ಯಂತ ಹಲವು ರಾಜಕಾರಣಿಗಳು ಹಲವು ಅಕ್ರಮ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, ಅವರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗಾದರೆ, ಈ ಕಳ್ಳರನ್ನು ಏನು ಮಾಡಬೇಕು? ಇವರನ್ನೂ ಮಲ್ಪೆಯಲ್ಲಿ ಮಾಡಿದಂತೆ ಜನರು ಮರಕ್ಕೆ ಕಟ್ಟಿ ಥಳಿಸಿದರೆ ಅದನ್ನು ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಮಾಜಿ ಸಚಿವರು ಸಮರ್ಥಿಸಿಕೊಳ್ಳುತ್ತಾರೆಯೆ? ಪರಶುರಾಮ ಪ್ರತಿಮೆಯಲ್ಲೇ ಒಬ್ಬ ಪ್ರಮುಖ ರಾಜಕೀಯ ನಾಯಕ ದುಡ್ಡು ಕದ್ದಿದ್ದಾನೆ ಎಂದು ಜನರು ಆರೋಪಿಸುತ್ತಿದ್ದಾರೆ. ಹಾಗಾದರೆ ಉಡುಪಿಯ ಜನರೇ ಆ ನಾಯಕನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಶಿಕ್ಷಿಸಿ ಸಮಾಜದ ಸೌಹಾರ್ದ ಕಾಪಾಡಬೇಕು ಎಂದು ಉಡುಪಿಯ ಸೌಹಾರ್ದಪ್ರಿಯ ಮಾಜಿ ಸಚಿವರು ಬಯಸಿದ್ದಾರೆಯೆ? ಉಡುಪಿ ಜಿಲ್ಲೆಯ ಹಲವು ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳ ಮೇಲೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ ಆರೋಪಗಳಿವೆ. ಇವರನ್ನೆಲ್ಲ ಮರಕ್ಕೆ ಕಟ್ಟಿ ಹಾಕಿ ಜನರೇ ಶಿಕ್ಷೆ ನೀಡಲು ಹೊರಟರೆ ಅದರ ಪರಿಣಾಮ ಏನಾಗಬಹುದು? ಮಹಿಳೆಗೆ ಥಳಿಸಿದ ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಬೀದಿ ರಂಪ ಮಾಡುತ್ತಿರುವ ಹಾಲಿ ಮತ್ತು ಮಾಜಿಗಳು ಇದಕ್ಕೆ ಉತ್ತರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News