ಅಣಕು 'ಉಚ್ಚಾಟನೆ'

Update: 2025-03-27 08:57 IST
ಅಣಕು ಉಚ್ಚಾಟನೆ
  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ಬಿಜೆಪಿಯೊಳಗೆ ಯಡಿಯೂರಪ್ಪ ಬಣ ಮತ್ತೊಮ್ಮೆ ನಾಗಪುರದ ಸಂಚುಗಳನ್ನು ವಿಫಲಗೊಳಿಸಿ ತನ್ನ ಶಕ್ತಿಯನ್ನು ವರಿಷ್ಠರಿಗೆ ಪ್ರದರ್ಶಿಸಿದೆ. ಪರಿಣಾಮವಾಗಿ ಕೊನೆಗೂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ವರಿಷ್ಠರು ಒಲ್ಲದ ಮನಸ್ಸಿನಿಂದ ಉಚ್ಚಾಟಿಸಿದ್ದಾರೆ. ಈ ಮೂಲಕ ವಿಜಯೇಂದ್ರ ಅವರು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಹಾದಿ ಸುಗಮಗೊಂಡಂತಾಗಿದೆ. ಯತ್ನಾಳ್‌ರ ವಿರುದ್ಧ ಕ್ರಮ ಕೈಗೊಳ್ಳದೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸ್ಥಿತಿ ರಾಜ್ಯದಲ್ಲಿ ಇರಲಿಲ್ಲ. ಬಿಜೆಪಿಯೊಳಗಿರುವ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನದ ಕೊನೆಯ ಭಾಗವಾಗಿ, ಯಾರು ರಾಜ್ಯಾಧ್ಯಕ್ಷರಾಗಬೇಕು ಎನ್ನುವುದನ್ನು ಚುನಾವಣೆಯೇ ನಿರ್ಧರಿಸುತ್ತದೆ ಎಂದು ವರಿಷ್ಠರು ಘೋಷಿಸಿದ್ದರು. ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ಮಾತನಾಡಲು ಯತ್ನಾಳ್‌ಗೆ ಕುಮ್ಮಕ್ಕು ನೀಡಿದವ ಯಾರೂ ಬಹಿರಂಗವಾಗಿ ಯತ್ನಾಳ್ ಜೊತೆಗೆ ಗುರುತಿಸಲು ಸಿದ್ಧರಿಲ್ಲದೇ ಇರುವುದು ವರಿಷ್ಠರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತು. ಜಿಲ್ಲಾಮಟ್ಟದ ಅಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಅವರ ಕೈ ಮೇಲಾಗುತ್ತಿದ್ದಂತೆಯೇ, ಯತ್ನಾಳ್ ಅವರು ಚುನಾವಣೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸತೊಡಗಿದರು. ‘‘ಈ ಚುನಾವಣೆಯಲ್ಲಿ ವಿಜಯೇಂದ್ರ ಅವರು ಹಣಬಲವನ್ನು ಬಳಸುತ್ತಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದು ಘೋಷಿಸಿ ಬಿಟ್ಟರು. ಒಂದೋ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಅಥವಾ ವಿಜಯೇಂದ್ರ ಅವರು ಅವಿರೋಧವಾಗಿ ರಾಜ್ಯಾಧ್ಯಕ್ಷರಾಗುವುದಕ್ಕೆ ಅವಕಾಶ ನೀಡಬೇಕು. ಇವೆರಡಕ್ಕೂ ಯತ್ನಾಳ್ ಸಿದ್ಧರಿಲ್ಲ ಎಂದಾಗ ವರಿಷ್ಠರಿಗೆ ಅವರನ್ನು ಉಚ್ಚಾಟಿಸುವುದಲ್ಲದೆ ಬೇರಾವ ಮಾರ್ಗವು ಇರಲಿಲ್ಲ. ಬಿಜೆಪಿಯೊಳಗಿನ ಬಣ ರಾಜಕೀಯಕ್ಕೆ ತಕ್ಷಣದ ತಡೆ ಹಾಕುವುದಕ್ಕೆ ಈ ಅಣಕು ಉಚ್ಚಾಟನೆ ವರಿಷ್ಠರಿಗೆ ಅನಿವಾರ್ಯವಾಗಿದೆ.

ಯತ್ನಾಳ್ ಪಾಲಿಗೆ ಉಚ್ಚಾಟನೆ ಹೊಸದೇನೂ ಅಲ್ಲ. ಎರಡು ಬಾರಿ ಉಚ್ಚಾಟನೆಗೊಂಡರೂ ಮತ್ತೆ ಬಿಜೆಪಿ ಅವರನ್ನು ಹಾರ್ದಿಕವಾಗಿ ಸ್ವೀಕರಿಸಿತ್ತು. ‘ಉಚ್ಚಾಟನೆ’ಯೇ ಬಿಜೆಪಿಯೊಳಗೆ ಅವರಿಗಿರುವ ರಾಜಕೀಯ ಅರ್ಹತೆಯಾಗಿದೆ. ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್‌ಗೆ ಬಳಸಿಕೊಳ್ಳಲು ಯತ್ನಾಳ್‌ಗಿಂತ ಯೋಗ್ಯ ಲಿಂಗಾಯತ ನಾಯಕರೊಬ್ಬರು ಸಿಗುವುದು ಕಷ್ಟ. ಪಕ್ಷದ ವರಿಷ್ಠರಿಂದ ಒದೆಸಿಕೊಳ್ಳುವುದೆಂದರೆ ಯತ್ನಾಳ್ ಪಾಲಿಗೆ ಬೆನ್ನು ತಟ್ಟಿಸಿಕೊಂಡಂತೆ. ಇಷ್ಟಕ್ಕೂ ಯತ್ನಾಳ್ ಅವರನ್ನು ಉಚ್ಚಾಟಿಸುವುದಕ್ಕೆ ಇಷ್ಟೊಂದು ಸಮಯ ತೆಗೆದುಕೊಂಡದ್ದಕ್ಕೂ ವರಿಷ್ಠರ ಬಳಿ ಕಾರಣಗಳಿರಲಿಲ್ಲ. ಪಕ್ಷಾಧ್ಯಕ್ಷರು ಮತ್ತು ಯಡಿಯೂರಪ್ಪರ ವಿರುದ್ಧ ಮೂರನೇ ದರ್ಜೆಯ ಭಾಷೆಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಯತ್ನಾಳ್ ಓಡಾಡುತ್ತಿದ್ದರೆ ಅದನ್ನು ರಾಜ್ಯ ಮತ್ತು ಕೇಂದ್ರದಲ್ಲಿರುವ ಕೆಲವು ಬಿಜೆಪಿ ವರಿಷ್ಠರು ‘ಆನಂದಿ’ಸುತ್ತಿದ್ದರು. ತನ್ನ ವಿರುದ್ಧ ನಡೆಯುತ್ತಿರುವ ಸಂಚುಗಳಿಗೆ ವರಿಷ್ಠರು ಪರೋಕ್ಷ ಬೆಂಬಲ ನೀಡುತ್ತಿರುವುದನ್ನು ಅರಿತಿರುವುದರಿಂದಲೇ ಬಿಜೆಪಿಯನ್ನು ರಾಜ್ಯದಲ್ಲಿ ಬಲಾಢ್ಯಗೊಳಿಸಲು ಯಡಿಯೂರಪ್ಪ ಗುಂಪು ವಿಶೇಷ ಶ್ರಮ ತೆಗೆದುಕೊಳ್ಳಲಿಲ್ಲ. ಒಂದೆಡೆ ಯತ್ನಾಳ್ ಗುಂಪು ರಾಜ್ಯಾಧ್ಯಕ್ಷರಿಗೆ ಸವಾಲು ಹಾಕುವಂತೆ ರಾಜ್ಯಾದ್ಯಂತ ಪ್ರತ್ಯೇಕ ಸಮಾವೇಶ ಮಾಡುತ್ತಿರುವಾಗ, ಅದಕ್ಕೆ ನಿಯಂತ್ರಣ ಹೇರದೆ ಪಕ್ಷ ಕಟ್ಟುವ ವಿಷಯದಲ್ಲಿ ವಿಜಯೇಂದ್ರ ಅವರಿಂದ ವರಿಷ್ಠರು ನಿರೀಕ್ಷೆ ಮಾಡುವಂತೆಯೂ ಇಲ್ಲ. ಬಹುಶಃ ವರಿಷ್ಠರ ಈ ವರ್ತನೆಯೇ ರಾಜ್ಯ ಬಿಜೆಪಿಯ ಎಲ್ಲ ಗೊಂದಲಗಳಿಗೆ ಕಾರಣ. ಒಂದು ರೀತಿಯಲ್ಲಿ, ಯತ್ನಾಳ್ ಎನ್ನುವ ಸಮಸ್ಯೆಯನ್ನು ವರಿಷ್ಠರೇ ಹುಟ್ಟಿಸಿ ಹಾಕಿ, ಇದೀಗ ಉಚ್ಚಾಟನೆಯ ನಾಟಕವಾಡುತ್ತಿದ್ದಾರೆ. ಈ ನಾಟಕದ ಆಯಸ್ಸು ಎಷ್ಟು ದಿನ ಎನ್ನುವುದನ್ನು ಕಾಲವೇ ಹೇಳಬೇಕು.

ಯತ್ನಾಳ್ ಅವರ ಉಚ್ಚಾಟನೆಯಿಂದ ಬಿಜೆಪಿಯೊಳಗಿರುವ ಭಿನ್ನಮತದ ಸಮಸ್ಯೆ ಮುಗಿಯುತ್ತದೆ ಎಂದು ನಿರೀಕ್ಷಿಸುವಂತೆ ಇಲ್ಲ. ಯಾಕೆಂದರೆ ವಿಜಯೇಂದ್ರ ಅವರ ನೇತೃತ್ವದ ಬಗ್ಗೆ ಅಸಮಾಧಾನ ಇರುವ ಇನ್ನಷ್ಟು ನಾಯಕರ ವಿರುದ್ಧ ಬಿಜೆಪಿ ವರಿಷ್ಠರು ಯಾವ ನಿರ್ಧಾರವನ್ನು ತಳೆಯಲಿದ್ದಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ರಮೇಶ್ ಜಾರಕಿ ಹೊಳಿ, ಕುಮಾರ ಬಂಗಾರಪ್ಪ ಸೇರಿದಂತೆ ಕೆಲವರು ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುವವರಿದ್ದರೆ, ಒಳಗಿಂದೊಳಗೆ ಯಡಿಯೂರಪ್ಪ ವಿರುದ್ಧ ಸಂಚು ನಡೆಸುವ ಹಿರಿಯ ನಾಯಕರ ಸಂಖ್ಯೆ ಬಹುದೊಡ್ಡದಿದೆ. ಯತ್ನಾಳ್‌ರ ಉಚ್ಚಾಟನೆ ಇವರೆಲ್ಲರಿಗೂ ಬಹುದೊಡ್ಡ ಹಿನ್ನಡೆಯಾಗಿದೆ. ಈ ಹಿನ್ನಡೆಯನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಆಧಾರದ ಮೇಲೆ ರಾಜ್ಯ ಬಿಜೆಪಿಯ ಭವಿಷ್ಯ ನಿಂತಿದೆ. ಈಶ್ವರಪ್ಪ, ಸಿ.ಟಿ. ರವಿ, ಶೆಟ್ಟರ್, ಜೋಶಿ ಸೇರಿದಂತೆ ಹಲವು ಹಿರಿಯರು ಮುಂದಿನ ದಿನಗಳಲ್ಲಿ ವಿಜಯೇಂದ್ರ ಎನ್ನುವ ‘ಯುವ ನಾಯಕ’ನನ್ನು ಅನುಸರಿಸಲು, ಅವರ ಮಾತುಗಳನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೆ? ಯತ್ನಾಳ್ ಉಚ್ಚಾಟನೆಯ ಜೊತೆ ಜೊತೆಗೆ ಸೋಮಶೇಖರ್, ಶಿವರಾಮ್ ಹೆಬ್ಬಾರ್, ರೇಣುಕಾಚಾರ್ಯ ಸೇರಿದಂತೆ ಐವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ. ಈ ನೋಟಿಸ್‌ಗಳಿಗೆ ನಿಜಕ್ಕೂ ಬಿಜೆಪಿಯೊಳಗಿರುವ ಭಿನ್ನಮತಗಳನ್ನು ಚಿವುಟಿ ಹಾಕುವಷ್ಟು ಸಾಮರ್ಥ್ಯವಿದೆಯೆ? ಎನ್ನುವುದನ್ನು ಕಾದು ನೋಡಬೇಕಾಗಿದೆ.

ಯತ್ನಾಳ್ ಎನ್ನುವುದು ಯಾರಿಗೂ ಬೇಡವಾದ ಸರಕು. ಅದಕ್ಕೆ ಗಿರಾಕಿಗಳಿರುವುದು ಬಿಜೆಪಿಯೊಳಗೇ ಹೊರತು, ಅವರನ್ನು ಸೇರಿಸಿಕೊಳ್ಳಲು ಉಳಿದ ಯಾವ ಪಕ್ಷವೂ ಸಿದ್ಧವಿಲ್ಲ. ಅಷ್ಟರಮಟ್ಟಿಗೆ ಅವರು ತಮ್ಮ ವರ್ಚಸ್ಸು ಕೆಡಿಸಿಕೊಂಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಆರೆಸ್ಸೆಸನ್ನು ಓಲೈಸುವ ಭರದಲ್ಲಿ ಬಸವಣ್ಣ ಅವರ ಕುರಿತಂತೆ ಕೇವಲವಾಗಿ ಮಾತನಾಡಿ ಸಮುದಾಯದ ನಿಷ್ಠುರವನ್ನು ಯತ್ನಾಳ್ ಕಟ್ಟಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಜನರ ಯಾವುದೇ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದೇ, ಬರೇ ಮುಸ್ಲಿಮ್ ದ್ವೇಷದ ರಾಜಕಾರಣದ ಮೂಲಕವೇ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸಿದವರು. ತಳಸ್ತರದ ಜನರನ್ನು ತನ್ನೊಂದಿಗೆ ಕರೆದುಕೊಂಡು ರಾಜಕೀಯ ನಡೆಸಲು ಅವರು ಸಂಪೂರ್ಣ ವಿಫಲವಾಗಿದ್ದಾರೆ. ಯತ್ನಾಳ್ ಉಚ್ಚಾಟನೆಯಿಂದ ವೈಯಕ್ತಿಕವಾಗಿ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎನ್ನುವುದು ಸ್ಪಷ್ಟ. ಈಶ್ವರಪ್ಪ ಕೂಡ ನಾಚಿಕೊಳ್ಳುವಂತಹ ಅವರ ಮೂರನೇ ದರ್ಜೆಯ ಭಾಷೆ ಅವರ ವ್ಯಕ್ತಿತ್ವವನ್ನು ಈಗಾಗಲೇ ಹರಾಜಿಗಿಟ್ಟಿದೆ. ಇದೇ ಹೊತ್ತಿಗೆ, ಯತ್ನಾಳ್ ಬಳಸಿದ ಭಾಷೆಗೆ ಅಷ್ಟೇ ಪ್ರಬುದ್ಧತೆಯಿಂದ ಪ್ರತಿಕ್ರಿಯಿಸಿದ ಕಾರಣದಿಂದಲೇ, ವಿಜಯೇಂದ್ರ ಇಂದಿಗೂ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಅರ್ಹತೆಯನ್ನು ಉಳಿಸಿಕೊಂಡಿದ್ದಾರೆ. ಎರಡು ಬಾರಿ ಉಚ್ಚಾಟನೆಗೊಂಡು ಮತ್ತೆ ಬಿಜೆಪಿಯ ನಾಯಕರಾಗಿ ಗುರುತಿಸಿಕೊಳ್ಳಲು ಯಶಸ್ವಿಯಾಗಿದ್ದ ಯತ್ನಾಳ್ ಅವರ ಈ ಬಾರಿಯ ‘ಉಚ್ಚಾಟನೆ’ಯ ಆಯಸ್ಸು ದೀರ್ಘವೇನಿಲ್ಲ. ಬಿಜೆಪಿಗೆ ಸವಾಲು ಹಾಕುವಂತೆ ಕಟು ಹಿಂದುತ್ವ ವಾದದ ಮೂಲಕ ವರಿಷ್ಠರ ಗಮನ ಸೆಳೆದು, ಮತ್ತೆ ತನ್ನನ್ನು ಒಪ್ಪಿಕೊಳ್ಳಲು ಬಿಜೆಪಿಗೆ ಅನಿವಾರ್ಯವಾಗಿಸುವ ಸಾಧ್ಯತೆಗಳಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯೊಂದಿಗೆ ಬಿಜೆಪಿಯ ಬಣ ರಾಜಕೀಯದ ಎರಡನೆ ಇನ್ನಿಂಗ್ಸ್ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಎದ್ದು ಕಾಣುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News