ಒಳ ಮೀಸಲಾತಿಯ ಒಳ ಬಾಗಿಲು ತೆರೆಯಲಿ

Update: 2025-03-28 08:45 IST
ಒಳ ಮೀಸಲಾತಿಯ ಒಳ ಬಾಗಿಲು ತೆರೆಯಲಿ
  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಳ ಮೀಸಲಾತಿ ಜಾರಿಗಾಗಿ ದಲಿತ ಸಂಘಟನೆಗಳು ಪ್ರತಿಭಟನೆಗಳನ್ನು ತೀವ್ರಗೊಳಿಸಿದಂತೆಯೇ, ಸರಕಾರ ಎಚ್ಚೆತ್ತುಕೊಂಡಿದೆ. ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯ ಸರಕಾರಗಳಿಗೆ ನೀಡಿ ಒಂದು ವರ್ಷ ಕಳೆಯುತ್ತಾ ಬಂದರೂ, ಈ ಬಗ್ಗೆ ಮೀನಾಮೇಷ ಎಣಿಸುತ್ತಲೇ ಸರಕಾರ ಕಾಲ ಕಳೆದಿತ್ತು. ಪಕ್ಕದ ತೆಲಂಗಾಣ ರಾಜ್ಯ ತೆಗೆದು ಕೊಂಡ ನಿರ್ಧಾರವನ್ನು ಮಾದರಿಯಾಗಿಟ್ಟುಕೊಂಡು ರಾಜ್ಯದಲ್ಲಿ ಮುಂದುವರಿಯುವ ಅವಕಾಶ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕಿದ್ದರೂ, ಅದಾವುದೋ ಕಾಣದ ಕೈ, ಮುಂದೆ ಹೋಗದಂತೆ ತಡೆದಿತ್ತು. ಸದಾಶಿವ ಆಯೋಗದ ವರದಿಯು ಕಾಂಗ್ರೆಸ್ ಸರಕಾರದ ಮುಂದಿದ್ದರೂ, ಒಳಮೀಸಲಾತಿ ಜಾರಿ ಮಾಡುವ ಸಂದರ್ಭದಲ್ಲಿ ಅದರ ದತ್ತಾಂಶ ಕಾನೂನು ಮಾನ್ಯತೆಯನ್ನು ಪಡೆಯುವುದಿಲ್ಲ ಎಂದು ಗೃಹ ಸಚಿವರೇ ಹಿಂದೇಟು ಹಾಕಿದರು. ಈ ನಡುವೆ, ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ನೇತೃತ್ವದ ಏಕ ಸದ್ಯ ಸಮಿತಿಯನ್ನು ಸರಕಾರ ನೇಮಕ ಮಾಡಿತಾದರೂ, ಅದು ಆಮೆಗತಿಯಲ್ಲಿ ಹೆಜ್ಜೆಯಿಡುತ್ತಿತ್ತು. ಸರಕಾರದ ನಿರೀಕ್ಷಿತ ಬೆಂಬಲವಿಲ್ಲದೇ ಇದ್ದುದರಿಂದ ವರದಿ ಸಲ್ಲಿಕೆಯ ಕೆಲಸ ನನೆಗುದಿಗೆ ಬಿದ್ದಿತ್ತು. ಆದರೆ ಯಾವಾಗ ಸರಕಾರದ ನಡೆಗಳ ಬಗ್ಗೆ ದಲಿತ ಸಮುದಾಯದ ಒಂದು ವರ್ಗ ಅನುಮಾನ ವ್ಯಕ್ತಪಡಿಸಿ ಬೀದಿಗಿಳಿಯಿತೋ ಅದರ ಬೆನ್ನಿಗೇ ನಾಗಮೋಹನ್ ದಾಸ್ ಸಮಿತಿ ಚುರುಕಾಯಿತು. ಕಳೆದ ಸೋಮವಾರ ಸರಕಾರ ಒಳ ಮೀಸಲಾತಿ ಸಂಬಂಧ ತುರ್ತು ಸಭೆ ಕರೆದಯಿತು. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ಮಧ್ಯಂತರ ವರದಿಯು ಸಲ್ಲಿಕೆಯಾದ ಬೆನ್ನಿಗೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ಣಯಕ್ಕೆ ಬರಲಾಯಿತು. ಸರಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ ಬೆನ್ನಿಗೇ ಸಮಿತಿಯೂ ತಕ್ಷಣ ಮಧ್ಯಂತರ ವರದಿಯನ್ನು ಸಲ್ಲಿಸಲು ಸಾಧ್ಯವಾಯಿತು. ವರದಿ ಸಲ್ಲಿಸಿದ ಬೆನ್ನಿಗೇ ಸಂಪುಟ ಸಭೆಯು ಅದನ್ನು ಅಂಗೀಕರಿಸಿದೆ ಮಾತ್ರವಲ್ಲ, ಅದರ ಶಿಫಾರಸನ್ನು ಜಾರಿಗೆ ತರಲು ಕ್ರಮ ತೆಗೆದುಕೊಂಡಿದೆ.

ಮಧ್ಯಂತರ ವರದಿಯ ಆಧಾರದಲ್ಲಿ ಏಕಾಏಕಿ ಒಳಮೀಸಲಾತಿಯನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿರುವುದೇ ಆಗಿದೆ. ಮುಖ್ಯವಾಗಿ ಮೀಸಲಾತಿ ಹಂಚಿಕೆಗೆ ಬೇಕಾದ ದತ್ತಾಂಶಗಳಿಗೆ ಏನನ್ನು ಆಧರಿಸಬೇಕು ಎನ್ನುವುದು ನಿರ್ಧಾರವಾಗದೆ ಮುನ್ನಡಿ ಇಡುವಂತಿಲ್ಲ. ಸದಾಶಿವ ಆಯೋಗ ವರದಿ ಮಾನ್ಯವಾಗುವುದಿಲ್ಲ. ಜಾತಿ ಗಣತಿ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಅದನ್ನು ಜಾರಿಗೊಳಿಸುವುದಕ್ಕೆ ಸರಕಾರವೇ ಸಿದ್ಧವಿಲ್ಲ. ಸಿದ್ಧವಿದ್ದರೂ ಜಾತಿ ಗಣತಿಯಲ್ಲಿ ಉಪಜಾತಿಗಳ ಬಗ್ಗೆ ಸ್ಪಷ್ಟ ವಿವರಗಳು ದೊರಕುವುದು ಅನುಮಾನ. ಸಮೀಕ್ಷೆಯ ಸಂದರ್ಭದಲ್ಲಿ ತಮ್ಮ ಉಪಜಾತಿಗಳನ್ನು ಬರೆಯುವಾಗ ಸರಿಯಾದ, ಸ್ಪಷ್ಟವಾದ ಮಾಹಿತಿಗಳನ್ನು ನೀಡದೇ ಇರುವುದರಿಂದ ಒಳ ಜಾತಿಗಳ ಅಂಕಿಅಂಶಗಳಲ್ಲಿ ಗೊಂದಲಗಳಿವೆ. ಆದುದರಿಂದ ಆ ದತ್ತಾಂಶದ ಆಧಾರದಲ್ಲೂ ಒಳ ಮೀಸಲಾತಿಯನ್ನು ಹಂಚುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು ಎಂದು ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿದೆ. ಹೊಸ ಸಮೀಕ್ಷೆಯ ಹೆಸರಿನಲ್ಲಿ ಒಳಮೀಸಲಾತಿ ಜಾರಿಗೊಳಿಸುವುದನ್ನು ಇನ್ನಷ್ಟು ಮುಂದೂಡುವುದು ಸರಕಾರದ ಉದ್ದೇಶ ಎಂದು ಕೆಲವು ದಲಿತ ನಾಯಕರು ಆರೋಪಿಸುತ್ತಾರಾದರೂ, ಇದಕ್ಕೆ ಹೊರತಾದ ಬೇರೆ ದಾರಿಗಳಿಲ್ಲ. ಯಾಕೆಂದರೆ, ಊಹೆ, ಅಂದಾಜುಗಳ ಮೇಲೆ ಮೀಸಲಾತಿಯನ್ನು ಹಂಚಲು ಮುಂದಾದರೆ ಅದು ಇನ್ನಷ್ಟು ಗೊಂದಲಗಳಿಗೆ ಕಾರಣವಾಗುತ್ತದೆ ಮಾತ್ರವಲ್ಲ,್ಲ ಜಾರಿಗೊಂಡ ಮೀಸಲಾತಿಯನ್ನು ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ. ಈಗಾಗಲೇ ದಲಿತರೊಳಗೇ ಕೆಲವು ಸಂಘಟನೆಗಳು ಈ ಒಳಮೀಸಲಾತಿಯನ್ನು ವಿರೋಧಿಸುತ್ತಿರುವುದರಿಂದ, ಸ್ಪಷ್ಟವಾದ ದತ್ತಾಂಶದ ಜೊತೆಗೇ ಒಳಮೀಸಲಾತಿಯನ್ನು ಜಾರಿಗೊಳಿಸುವುದು ಸೂಕ್ತ. ಸಮೀಕ್ಷೆಯ ಹೆಸರಿನಲ್ಲಿ ದಿನ ದೂಡದಂತೆ, ಸಮಿತಿಯು 30-40 ದಿನಗಳ ಒಳಗೆ ಸಮೀಕ್ಷೆ ಮುಗಿಯಬೇಕು ಎಂದೂ ಸರಕಾರಕ್ಕೆ ಸೂಚನೆ ನೀಡಿದೆ. ಆದುದರಿಂದ ಸಮೀಕ್ಷೆಯ ಬಗ್ಗೆ ಸದ್ಯಕ್ಕಂತೂ ಅನುಮಾನಿಸುವ ಅಗತ್ಯವಿಲ್ಲ. ಎರಡು ತಿಂಗಳ ಒಳಗೆ ಸಮೀಕ್ಷೆ ಮುಗಿದು ದತ್ತಾಂಶ ಸಿದ್ಧವಾಗದೇ ಇದ್ದರೆ ಆಗ ಸರಕಾರವನ್ನು ಮತ್ತೆ ಪ್ರಶ್ನಿಸಬೇಕಾಗಬಹುದು.

ಕಳೆದ ಹದಿನೈದು ದಿನಗಳಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಗಳು ಇವು. ದಲಿತ ಸಮುದಾಯದ ಪ್ರತಿಭಟನೆಯ ಬಿಸಿ ತಾಗಿದಾಕ್ಷಣ ಸರಕಾರ ಎಚ್ಚೆತ್ತುಕೊಂಡಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸರಕಾರ ನಿಜಕ್ಕೂ ಮನಸ್ಸು ಮಾಡಿದ್ದರೆ ಈ ಶಿಪಾರಸನ್ನು ಹಲವು ತಿಂಗಳುಗಳ ಹಿಂದೆಯೇ ತನ್ನ ಕೈಗೆ ಸಿಗುವಂತೆ ಮಾಡಬಹುದಿತ್ತು. ಈಗ ಸಮೀಕ್ಷೆ ಮುಗಿದು ಅತ್ಯಗತ್ಯ ದತ್ತಾಂಶಗಳು ಸರಕಾರದ ಕೈಗೆ ಸಿಕ್ಕಿಯೂ ಬಿಡುತ್ತಿತ್ತು. ಆದರೆ ಸರಕಾರ ಮಾತ್ರ, ‘ದತ್ತಾಂಶ ಎಲ್ಲಿದೆ?’ ಎಂದು ಬರಿದೇ ಹುಡುಕುವ ನಾಟಕವನ್ನಷ್ಟೇ ಮಾಡಿತು. ಸರಕಾರದೊಳಗಿರುವ ಹಿರಿಯ ದಲಿತ ನಾಯಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾರಿ ತಪ್ಪಿಸಿದ್ದಾರೆ ಎನ್ನುವ ಆರೋಪಗಳೂ ಇವೆ. ದಲಿತ ಸಂಘಟನೆಗಳು ಮೊದಲಾಗಿ ಒಳ ಮೀಸಲಾತಿಯ ಬಗ್ಗೆ ತಮ್ಮೊಳಗೆ ಇರುವ ಆತಂಕ, ಅನುಮಾನಗಳನ್ನು ಪರಿಹರಿಸಿಕೊಂಡು ಸಂಘಟಿತರಾಗಿ ಧ್ವನಿಯೆತ್ತಿದ್ದರೆ ಒಳಮೀಸಲಾತಿ ಜಾರಿ ಇಷ್ಟು ಕಷ್ಟವಾಗುತ್ತಿರಲಿಲ್ಲ. ದಕ್ಷಿಣ ಭಾರತದಲ್ಲಿ ಸಾಧ್ಯವಾಗುತ್ತಿರುವುದು ಉತ್ತರಭಾರತದಲ್ಲಿ ಸಾಧ್ಯವಾಗದೇ ಇರುವುದಕ್ಕೂ ದಲಿತರೊಳಗಿರುವ ಭಿನ್ನಾಭಿಪ್ರಾಯಗಳೇ ಕಾರಣ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿದವರೆಲ್ಲರೂ ಹಿರಿಯ ದಲಿತ ನಾಯಕರೇ ಆಗಿದ್ದಾರೆ. ಉತ್ತರ ಭಾರತದಲ್ಲಿ ದಲಿತ ನಾಯಕರು ಈ ತೀರ್ಪಿನ ವಿರುದ್ಧ ಭಾಗಶಃ ಬಂದ್ ಆಚರಿಸಿದ್ದರು ಎನ್ನುವುದನ್ನು ನಾವು ನೆನಪಿಲ್ಲಿಡಬೇಕಾಗುತ್ತದೆ. ಇಂದು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಹೊರಬಾಗಿಲು ತೆರೆದಿದೆ. ಆದರೆ ಒಳಬಾಗಿಲು ಮುಚ್ಚೇ ಇದೆ. ಆ ಒಳಬಾಗಿಲು ತೆರೆದ ದಿನ ಮೀಸಲಾತಿ ಜಾರಿಗೊಳಿಸುವುದು ಸುಲಭ ಸಾಧ್ಯವಾಗಲಿದೆ.

ಸಮೀಕ್ಷೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ಜಾತಿ, ಉಪಜಾತಿಗಳು ದಾಖಲಾಗುವಂತೆ ನೋಡಿಕೊಳ್ಳುವುದು ಕೂಡ ದಲಿತ ಮುಖಂಡರ ಕರ್ತವ್ಯವಾಗಿದೆ. ಈಗಾಗಲೇ ಕೆಲವು ದುರ್ಬಲ ಉಪಜಾತಿಗಳು ಒಳಮೀಸಲಾತಿಯಲ್ಲಿ ತಮ್ಮ ಪಾಲೆಷ್ಟು ಎಂದು ಕೇಳುವುದಕ್ಕೆ ತೊಡಗಿವೆ. ನಾಳೆ, ಹೊಸದಾಗಿ ಇನ್ನಷ್ಟು ಉಪಜಾತಿಗಳು ಸಮೀಕ್ಷೆಯ ದತ್ತಾಂಶಗಳ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಲು ಮುಂದಾದರೆ, ಸರಕಾರಕ್ಕೆ ಒಳಮೀಸಲಾತಿ ಜಾರಿಯನ್ನು ಮುಂದೂಡಲು ದಲಿತರೇ ಅವಕಾಶವನ್ನು ಮಾಡಿಕೊಟ್ಟಂತಾಗಬಹುದು. ಇದೇ ಸಂದರ್ಭದಲ್ಲಿ, ಕಾಂತರಾಜ್ ನೇತೃತ್ವದ ಜಾತಿ ಗಣತಿಯ ವರದಿ ಜಾರಿಗೊಳ್ಳುವುದು ಯಾವಾಗ ಎಂದು ಎಲ್ಲ ದುರ್ಬಲ ಜಾತಿಗಳು ಸಂಘಟಿತವಾಗಿ ಸರಕಾರವನ್ನು ಕೇಳಬೇಕಾಗಿದೆ. ಕಾಂತರಾಜ್ ವರದಿ ಜಾರಿಗೊಂಡದ್ದೇ ಆದಲ್ಲಿ, ಈ ನಾಡಿನ ಬಹುಸಂಖ್ಯಾತರ ಸಾಮಾಜಿಕ, ಆರ್ಥಿಕ ಬದುಕಿನ ಬಗ್ಗೆ ಇನ್ನಷ್ಟು ಸ್ಪಷ್ಟತೆಯೊಂದು ದೊರಕಲಿದೆ. ಭವಿಷ್ಯದಲ್ಲಿ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಹಂಚಲು ಸಹಾಯವಾಗಲಿದೆ. ಆದುದರಿಂದ, ಜಾತಿ ಗಣತಿ ವರದಿ ಅನುಷ್ಠಾನಕ್ಕಾಗಿ ದುರ್ಬಲ ಜಾತಿಗಳೆಲ್ಲ ಒಂದಾಗಿ ನಿಂತರೆ, ಅದರ ವಿರುದ್ಧ ಬಲಿಷ್ಟ ಜಾತಿಗಳು ನಡೆಸುತ್ತಿರುವ ಸಂಚುಗಳನ್ನು ವಿಫಲಗೊಳಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News