ಮರಕ್ಕೆ ಕಟ್ಟಿ ಮಹಿಳೆಗೆ ಹಲ್ಲೆ: ಉಡುಪಿ ಉತ್ತರ ಪ್ರದೇಶವಾಗುತ್ತಿದೆಯೇ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯೊಬ್ಬರನ್ನು ಗುಂಪೊಂದು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಈ ಅನಾಗರಿಕ ಕೃತ್ಯ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭರವಸೆಯನ್ನು ನೀಡಿದ್ದಾರೆ. ಎಲ್ಲೋ ಉತ್ತರ ಭಾರತದಲ್ಲಿ ವರದಿಯಾಗುತ್ತಿದ್ದ ಕೃತ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಅದರಲ್ಲೂ, ಬುದ್ಧಿವಂತರ ಜಿಲ್ಲೆ ಎಂದು ಗುರುತಿಸಲ್ಪಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸುದ್ದಿಯಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಭಾರತಕ್ಕೆ ಮಾದರಿಯಾಗಿದ್ದ ಕರ್ನಾಟಕವು ಇತ್ತೀಚಿನ ದಿನಗಳಲ್ಲಿ, ಉತ್ತರ ಭಾರತದ ಅನಿಷ್ಟಗಳನ್ನು ಮಾದರಿಯಾಗಿಸಿಕೊಳ್ಳಲು ಮುಂದಾಗುತ್ತಿದೆಯೇ ಎಂದು ನಾಗರಿಕರೆನಿಸಿಕೊಂಡವರು ಅನುಮಾನ ಪಡುವಂತಾಗಿದೆ.
ಉಡುಪಿಯಲ್ಲಿ ಹಲ್ಲೆಗೀಡಾಗಿರುವ ಸಂತ್ರಸ್ತ ಮಹಿಳೆ ನಮ್ಮದೇ ರಾಜ್ಯದ ವಿಜಯನಗರ ಜಿಲ್ಲೆಯವರು. ಜೊತೆಗೆ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಾ. 18ರಂದು ಬೋಟ್‌ನಿಂದ ಮೀನುಖಾಲಿ ಮಾಡುವ ಸಂದರ್ಭದಲ್ಲಿ ಒಂದು ಬುಟ್ಟಿ ಮೀನನ್ನು ಕದ್ದೊಯ್ದಿದ್ದಾಳೆ ಎನ್ನುವುದು ಈಕೆಯ ಮೇಲಿರುವ ಆರೋಪ. ಆಕೆ ಕದ್ದೊಯ್ದಿರುವುದು ನಿಜವೇ ಆಗಿದ್ದರೂ, ಸಾರ್ವಜನಿಕವಾಗಿ ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವುದು ಎಷ್ಟು ಸರಿ? ಗುಂಪುಗೂಡಿ ಜನರೇ ನ್ಯಾಯವನ್ನು ನಿರ್ಧರಿಸುವುದು, ಮರಕ್ಕೆ ಕಟ್ಟಿ ಹಾಕಿ ಥಳಿಸುವ ಸಂಸ್ಕೃತಿ ಅವಿಭಜಿಕ ದಕ್ಷಿಣ ಕನ್ನಡ ಜಿಲ್ಲೆಗೆ ತೀರಾ ಅಪರಿಚಿತವಾದುದು. ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಇಂತಹ ಕೃತ್ಯಗಳು ಕರಾವಳಿಗೆ ಕಾಲಿಟ್ಟಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಅನಾಗರಿಕ ಕೃತ್ಯಗಳು ಇದೇ ಮೊದಲ ಬಾರಿ ನಡೆದಿರುವುದೇನು ಅಲ್ಲ. ನಾಗರಿಕ ಸಮಾಜ ಬೆಚ್ಚಿ ಬೀಳಿಸುವ ಇಂತಹ ಗುಂಪು ದಾಂಧಲೆಗಳು ಈ ಹಿಂದೆಯೂ ನಡೆದಿದ್ದವಾದರೂ ಸಂಘಪರಿವಾರ ಅವುಗಳನ್ನು ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗಿದ್ದವು. ಹಲವು ವರ್ಷಗಳ ಹಿಂದೆ, ಇದೇ ಉಡುಪಿಯಲ್ಲಿ ಹಾಜಬ್ಬ ಮತ್ತು ಹಸನಬ್ಬ ಎಂಬ ಇಬ್ಬರನ್ನು ಬೆತ್ತಲೆಗೊಳಿಸಿ ಥಳಿಸಿದ ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಉಡುಪಿ ಜಿಲ್ಲೆ ಸುದ್ದಿಯಾಗಿತ್ತು. ಈ ಕೃತ್ಯದ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗ ಕೆಲವು ಸಂಘಟನೆಗಳು ಆರೋಪಿಗಳನ್ನು ಬೆಂಬಲಿಸಿ ಪ್ರತಿ ಸಮಾವೇಶವನ್ನು ಹಮ್ಮಿಕೊಂಡಿದ್ದವು. ವಿಪರ್ಯಾಸವೆಂದರೆ, ಆ ಕೃತ್ಯದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಸಂಘಪರಿವಾರ ಮುಖಂಡ ಇಂದು ಅದೇ ಉಡುಪಿಯ ಶಾಸಕರಾಗಿ, ಕೃತ್ಯವನ್ನು ಖಂಡಿಸುತ್ತಿದ್ದಾರೆ.
ಇದೇ ಉಡುಪಿ ಜಿಲ್ಲೆಯಲ್ಲಿ ದನದ ವ್ಯಾಪಾರ ಮಾಡುತ್ತಿದ್ದ ಪ್ರವೀಣ್ ಪೂಜಾರಿ ಎಂಬಾತನನ್ನು ಸಂಘಪರಿವಾರದ ದುಷ್ಕರ್ಮಿಗಳ ಗುಂಪೊಂದು ಥಳಿಸಿ ಕೊಂದು ಹಾಕಿತ್ತು. ಆತ ಯಾವುದೇ ದನವನ್ನು ಅಕ್ರಮವಾಗಿ ಅಥವಾ ಕದ್ದು ಮಾರಾಟ ಮಾಡಿರಲಿಲ್ಲ. ಆತ ದನದ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದುದೇ ಮಹಾ ಅಪರಾಧವಾಯಿತು. ಈತನನ್ನು ದುಷ್ಕರ್ಮಿಗಳ ಗುಂಪು ಸಾರ್ವಜನಿಕವಾಗಿ ಕಬ್ಬಿಣದ ರಾಡುಗಳು, ಮಾರಕಾಯುಧಗಳಿಂದ ಥಳಿಸಿ ಕೊಲೆಗೈದಿತ್ತು. ಬಿಹಾರದಲ್ಲಿ, ಉತ್ತರ ಪ್ರದೇಶದಲ್ಲಿ ನಡೆಯುವ ಇಂತಹ ಬರ್ಬರ ಕೃತ್ಯವನ್ನು ಕೆಲವು ಬಿಜೆಪಿ ಮುಖಂಡರೇ ಹಿಂದುತ್ವದ ಹೆಸರಿನಲ್ಲಿ, ಗೋರಕ್ಷಣೆಯ ಹೆಸರಿನಲ್ಲಿ ಸಮರ್ಥಿಸಿಕೊಂಡಿದ್ದರು. ಪೊಲೀಸರ ಕುಮ್ಮಕ್ಕು ಕೂಡ ಇವರಿಗಿತ್ತು. ಹಾಗೆಯೇ ಇದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರೇ ಕೆಲವು ದುಷ್ಕರ್ಮಿಗಳ ಜೊತೆಗೆ ದನದ ವ್ಯಾಪಾರಿಯನ್ನು ಕೊಂದು ಹಾಕಿ ಕಾಡಿನಲ್ಲಿ ಎಸೆದ ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಲ್ಲಿನ ಕೋಮುಗಲಭೆ, ಕೋಮುದ್ವೇಷಗಳು ನಿಧಾನಕ್ಕೆ ಗುಂಪು ಥಳಿತ, ಗುಂಪು ಹತ್ಯೆಗಳ ರೂಪದಲ್ಲಿ ವಿಸ್ತೃತಗೊಳ್ಳುತ್ತಿವೆ. ಇದೀಗ ಅದು ದಲಿತ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ. ಹಿಂದೆಲ್ಲ, ಗೋಮಾಂಸ, ಗೋಸಾಗಾಟದ ಹೆಸರಿನಲ್ಲಿ ದಾಳಿಗಳು ನಡೆದಿದ್ದರೆ ಈಗ ಮೀನಿನ ಹೆಸರಿನಲ್ಲಿ ಹಲ್ಲೆ ನಡೆದಿದೆ. ಇಲ್ಲಿ ಮಹಿಳೆ ದಲಿತ ಸಮುದಾಯಕ್ಕೆ ಸೇರಿದವಳು ಮಾತ್ರವಲ್ಲ, ಹೊರ ಜಿಲ್ಲೆಗೆ ಸೇರಿದ್ದಾಳೆ ಎನ್ನುವ ಹಗುರ ಭಾವನೆಯೇ ಜನರಿಂದ ಇಂತಹ ಕೃತ್ಯವನ್ನು ಎಸಗುವಂತೆ ಮಾಡಿದೆ. ಬಿಜಾಪುರ, ಬೆಳಗಾವಿಯಂತಹ ಜಿಲ್ಲೆಗಳಿಂದ ಬಂದ ಕೂಲಿ ಕಾರ್ಮಿಕರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬುದ್ಧಿವಂತ ಜನರು ಕೇವಲವಾಗಿ ನಡೆದುಕೊಳ್ಳುತ್ತಿರುವ ಆರೋಪ ಇಂದು ನಿನ್ನೆಯದಲ್ಲ. ಹೊರ ರಾಜ್ಯಗಳಿಂದ, ಹೊರ ಜಿಲ್ಲೆಗಳಿಂದ ಬಂದ ಕೂಲಿ ಕಾರ್ಮಿಕರು ಕಳವು ಸೇರಿದಂತೆ ದುಷ್ಕೃತ್ಯಗಳಲ್ಲಿ ಭಾಗವಹಿಸುತ್ತಿರುವ ಬಗ್ಗೆ ಸ್ಥಳೀಯರಿಗೆ ಅನುಮಾನ, ಶಂಕೆಗಳಿವೆ. ಹಾಗೆಂದು, ಯಾರೋ ಒಬ್ಬನ ಮೇಲೆ ಕಳವು ಆರೋಪ ಹೊರಿಸಿ ಮರಕ್ಕೆ ಕಟ್ಟಿ ಹಲ್ಲೆ ನಡೆಸುವುದು ಅರಾಜಕತೆಗೆ ಕಾರಣವಾಗಬಹುದು. ಮಲ್ಪೆ ಬಂದರಿನಲ್ಲಿ ಆವೇಶ, ಸಿಟ್ಟಿಗೆ ಬಲಿಯಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದವರು ಕೂಡ ಮೀನುಗಾರ ಸಮುದಾಯಕ್ಕೆ ಸೇರಿದ ಶ್ರಮಜೀವಿ ಮಹಿಳೆಯರೇ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸುವುದು, ಮರಕ್ಕೆ ಕಟ್ಟಿ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ.
ಕಳೆದ ವರ್ಷ ಬೆಳಗಾವಿಯ ಬೈಲಹೊಂಗಲ ತಾಲೂಕಿನಲ್ಲಿ ಮಹಿಳೆಯೊಬ್ಬರನ್ನು ಸಮಾರು 20 ಜನರು ಸೇರಿ ಅರೆಬೆತ್ತಲೆಗೊಳಿಸಿ ಥಳಿಸಿದ್ದರು. ಆರೋಪಿಗಳಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಸದಸ್ಯ ಕೂಡ ಸೇರಿದ್ದ. ಜಮೀನು ಒತ್ತುವರಿ ಪ್ರಶ್ನಿಸಿ ಮಹಿಳೆ ಕೋರ್ಟು ಮೆಟ್ಟಿಲು ಹತ್ತಿರುವುದೇ ಥಳಿತಕ್ಕೆ ಕಾರಣವಾಗಿತ್ತು. ಈ ಸಂಬಂಧ ಪೊಲೀಸರು ಕೂಡ ದೂರು ದಾಖಲಿಸಲು ಹಿಂಜರಿದಿದ್ದರು. ಪ್ರಕರಣ ಬೆಳಕಿಗೆ ಬಂದು ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳ ವಿರುದ್ಧ ದೂರು ದಾಖಲಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕೆಳಜಾತಿಗೆ ಸೇರಿದ ಮಹಿಳೆ ಸಾರ್ವಜನಿಕವಾಗಿ ಯಾವುದೇ ವಿಷಯಗಳ ವಿರುದ್ಧ ಧ್ವನಿಯೆತ್ತಿದರೆ ಆಕೆಯನ್ನು ಬಾಯಿ ಮುಚ್ಚಿಸಲು ಇಡೀ ಊರು ಒಂದಾಗಿ ಆಕೆಯನ್ನು ಅರೆಬೆತ್ತಲೆಯಾಗಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸುವ ಪ್ರಕರಣಗಳು ರಾಜ್ಯದಲ್ಲೂ ಹೆಚ್ಚುತ್ತಿವೆ. ಇಂತಹ ಹೆಚ್ಚಿನ ಪ್ರಕರಣಗಳಲ್ಲಿ ಪುರುಷ ಪ್ರಾಬಲ್ಯ ಮನಸ್ಥಿತಿ ಕೆಲಸ ಮಾಡುತ್ತಿರುತ್ತದೆ. ಪೊಲೀಸರು ಕೂಡ ದುಷ್ಕರ್ಮಿಗಳ ಪರವಾಗಿರುವುದರಿಂದ, ಇಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ಅಪರೂಪ. ಪ್ರಕರಣ ಬೆಳಕಿಗೆ ಬಂದು, ರಾಜ್ಯಮಟ್ಟದಲ್ಲಿ ಚರ್ಚೆಯಾಗುವವರೆಗೆ ಪೊಲೀಸರು ಎಚ್ಚರಗೊಳ್ಳುವುದಿಲ್ಲ. ಇಂತಹ ಸೂಕ್ಷ್ಮ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳದೇ ಇದ್ದರೆ, ಇದೇ ಮುಂದುವರಿದು ಗುಂಪುಗಲಭೆ, ದೊಂಬಿಯಾಗಿ ಪರಿವರ್ತನೆಯಾಗುವ ಅಪಾಯಗಳಿವೆ. ಕಂಬಾಲ ಪಳ್ಳಿ, ಖೈರ್ಲಾಂಜಿಯಂತಹ ಹತ್ಯಾಕಾಂಡಗಳು ಇಂತಹ ಅಪರಾಧ ಪ್ರಕರಣಗಳ ಮುಂದುವರಿದ ಭಾಗವೇ ಆಗಿವೆ. ಇಲ್ಲೆಲ್ಲ ಶೋಷಿತ ಸಮುದಾಯದ ಜನರೇ ಸಂತ್ರಸ್ತರಾಗಿರುವುದು ಆಕಸ್ಮಿಕವಲ್ಲ. ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣದ ಆಮೂಲಾಗ್ರ ತನಿಖೆ ನಡೆದು, ಅದರ ಹಿಂದಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮಾತ್ರವಲ್ಲ, ಇಂತಹ ಕೃತ್ಯಗಳನ್ನು ಚಿಗುರಿನಲ್ಲೇ ಚಿವುಟುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು.