ಒಳಮೀಸಲಾತಿ: ದಲಿತರ ಒಳ ಸಂಕಟಗಳಿಗೆಂದು ಪರಿಹಾರ?
ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದಲಿತರಿಗೆ ಒಳ ಮೀಸಲಾತಿ ನೀಡುವ ರಾಜ್ಯಗಳ ಅಧಿಕಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಾಗ ‘ಇನ್ನಾದರೂ ಮೀಸಲಾತಿ ಎಲ್ಲ ಸ್ತರದ ದಲಿತರಿಗೂ ತಲುಪುತ್ತದೆ’’ ಎಂದು ಭಾವಿಸಿದ್ದರು. ಆದರೆ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತಾಗಿದೆ ದಲಿತ ಸಮುದಾಯದ ಒಂದು ವರ್ಗದ ಜನರ ಸ್ಥಿತಿ. ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘‘ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನಕ್ಕಿದ್ದ ಮುಖ್ಯ ಅಡ್ಡಿಯೊಂದು ನಿವಾರಣೆಯಾದಂತಾಗಿದೆ. ಈ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ. ಹಿಂದಿನ ಕಾಂಗ್ರೆಸ್ ಪಕ್ಷವೇ ರಚಿಸಿದ್ದ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಪಕ್ಷ ಬದ್ಧವಾಗಿದೆ’’ ಎಂದು ಹೇಳಿಕೆ ನೀಡಿದ್ದರು. ಆವರೆಗೆ ಒಳಮೀಸಲಾತಿಯ ಅನುಷ್ಠಾನಕ್ಕೆ ‘ಸಂವಿಧಾನ ಅಡ್ಡಿ’ಯಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೆಲ್ಲ ಕೇಂದ್ರದ ಕಡೆಗೆ ಕೈತೋರಿಸುತ್ತಾ ಬಂದಿದ್ದರು. ಕೇಂದ್ರ ಸರಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸದೇ ನಾವೇನೂ ಮಾಡುವಂತಿಲ್ಲ ಎಂದು ರಾಜ್ಯ ಸರಕಾರ ಒಳಮೀಸಲಾತಿಯ ಕುರಿತಂತೆ ‘ಮೊಸಳೆ ಕಣ್ಣೀರು’ ಸುರಿಸುತ್ತಾ ಬಂದಿತ್ತು. ಇದೇ ಸಂದರ್ಭದಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ‘ದಲಿತರ ಒಳಮೀಸಲಾತಿಯ’ ಬಗ್ಗೆ ಏಕಾಏಕಿ ಕಾಳಜಿ ವ್ಯಕ್ತಪಡಿಸಿತ್ತು. ಒಳ ಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಂಡು ಅದರ ಶಿಫಾರಸನ್ನು ಅಂದಿನ ರಾಜ್ಯ ಬಿಜೆಪಿ ಸರಕಾರ ಕೇಂದ್ರಕ್ಕೆ ಕಳುಹಿಸಿತ್ತು. ಇದನ್ನೇ ‘‘ಒಳ ಮೀಸಲಾತಿ ಜಾರಿಗೊಳಿಸಿಯೇ ಬಿಟ್ಟಿದ್ದೇವೆ’’ ಎಂಬಂತೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಳಸಿಕೊಂಡಿತು. ಆದರೆ, ಆ ಶಿಫಾರಸಿನಿಂದ ದಲಿತರಿಗೆ ವಿಶೇಷ ಪ್ರಯೋಜನವಾಗದೇ ಇದ್ದರೂ, ಒಳಮೀಸಲಾತಿ ಹೋರಾಟಕ್ಕೆ ಹೊಸ ತಿರುವು ಕೊಟ್ಟಿತ್ತು ಎನ್ನುವುದು ಸುಳ್ಳಲ್ಲ. ತನ್ನೆಡೆಗೆ ಬಂದ ಚೆಂಡನ್ನು ಕೇಂದ್ರ ಸರಕಾರವು ಸುಪ್ರೀಂಕೋರ್ಟ್ ಮೂಲಕ ಮತ್ತೆ ರಾಜ್ಯದ ಅಂಗಳಕ್ಕೆ ಒಗೆಯಿತು. ಪರಿಣಾಮವಾಗಿ ತೆಲಂಗಾಣವು ಒಳಮೀಸಲಾತಿ ಜಾರಿಗೊಳಿಸಲು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ನಿಂತಿದೆ. ಆದರೆ ರಾಜ್ಯ ಸರಕಾರ ಮಾತ್ರ ಈ ವಿಷಯದಲ್ಲಿ ಮೀನಾಮೇಷ ಎಣಿಸುತ್ತಾ ಕೂತಿದೆ. ಇದು ರಾಜ್ಯದಲ್ಲಿ ಮತ್ತೆ ಒಳಮೀಸಲಾತಿ ಹೋರಾಟಕ್ಕೆ ಜೀವಕೊಟ್ಟಿದೆ.
ಸುಪ್ರೀಂಕೋರ್ಟ್ ತೀರ್ಪು ಬಂದಾಗ ‘‘ಮುಖ್ಯ ಅಡ್ಡಿಯೊಂದು ನಿವಾರಣೆಯಾಗಿದೆ’’ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಈಗ ಇರುವ ಅಡ್ಡಿ ಯಾವುದು ಎಂದು ಹೋರಾಟಗಾರರು ಕೇಳುತ್ತಿದ್ದಾರೆ. ಒಳ ಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ. ಈ ಹೋರಾಟಕ್ಕೆ 40 ವರ್ಷಗಳ ಇತಿಹಾಸವಿದೆ. ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಆರಂಭಗೊಂಡ ಈ ಹೋರಾಟ ನಿಧಾನಕ್ಕೆ ರಾಯಚೂರು ಮೂಲಕ ಕರ್ನಾಟಕಕ್ಕೂ ಕಾಲಿಟ್ಟಿತು. ಹೋರಾಟ ತೀವ್ರವಾದಂತೆ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಅಂದಿನ ಧರಂಸಿಂಗ್ ಸರಕಾರವು, 2004ರಲ್ಲಿ ಎ.ಜೆ. ಸದಾಶಿವ ಆಯೋಗವನ್ನು ರಚಿಸಿತು. ಇದು ಒಳಮೀಸಲಾತಿಗೆ ಸಂಬಂಧಿಸಿ ಒಂದು ಮಹತ್ವದ ಘಟ್ಟ. ಸುಮಾರು ಏಳು ವರ್ಷಗಳ ಕಾಲ ಆಮೆಯಂತೆ ತೆವಲುತ್ತಾ ಸಾಗಿದ ಈ ಆಯೋಗ, 2012ರಲ್ಲಿ ತನ್ನ ವರದಿಯನ್ನು ನೀಡಿತು. ಆದರೆ ಈ ವರದಿಯನ್ನು ಬಿಡಿಸುವ ಧೈರ್ಯವನ್ನು ಯಾವ ಸರಕಾರವೂ ಪ್ರದರ್ಶಿಸಲಿಲ್ಲ. ಬಳಿಕ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೂ ಈ ವರದಿಯ ಮೇಲೆ ವಿಶೇಷ ಆಸಕ್ತಿಯಿರಲಿಲ್ಲ. ಅದನ್ನು ಜಾರಿಗೊಳಿಸುವ ಬದಲು ‘‘ಜಾರಿಗೊಳಿಸುವ ಅಧಿಕಾರ ರಾಜ್ಯದ ಬಳಿ ಇಲ್ಲ’’ ಎನ್ನುವ ಸಂವಿಧಾನದ ಅಡ್ಡಿಯನ್ನು ತೋರಿಸಿ ಹೆಗಲು ಜಾರಿಸಿಕೊಂಡಿತು. ಆದರೆ ಯಾವಾಗ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿತೋ ಆಗ ಈ ನಾಯಕರ ನಿಜ ಬಣ್ಣ ಬಯಲಾಗತೊಡಗಿತು. ಕಳೆದ ಚುನಾವಣೆಯ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿಯನ್ನು ಮುಂದಿಟ್ಟು ಒಳ ಮೀಸಲಾತಿಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದ ಕಾಂಗ್ರೆಸ್, ಇದೀಗ ಸದಾಶಿವ ಆಯೋಗದ ವರದಿಯ ಅಂಕಿಅಂಶಗಳು ಕಾನೂನು ಬದ್ಧವಾಗುವುದಿಲ್ಲ ಎನ್ನುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದು ಇಷ್ಟು ಸಮಯದವರೆಗೆ ಕಾಂಗ್ರೆಸ್ ಏನು ಮಾಡುತ್ತಿತ್ತು ಎನ್ನುವುದು ಇನ್ನೊಂದು ಪ್ರಶ್ನೆ. ಸಮಯ ಕಳೆಯುವುದಕ್ಕಾಗಿಯೇ ಸರಕಾರ ಎಚ್. ಎನ್. ನಾಗಮೋಹನ್ ದಾಸ್ ಅವರ ಹೆಗಲಿಗೆ ಮೀಸಲಾತಿ ವರ್ಗೀಕರಣದ ಶಿಫಾರಸಿನ ಜವಾಬ್ದಾರಿಯನ್ನು ವಹಿಸಿದೆ. ಆದರೆ ಈ ಆಯೋಗದ ಕೆಲಸವೂ ನಿರೀಕ್ಷೆಯ ಮಟ್ಟದಲ್ಲಿ ಮುಂದೆ ಸಾಗುತ್ತಿಲ್ಲ. ಸರಕಾರದೊಳಗೇ ಒಳಮೀಸಲಾತಿಗೆ ಯಾರಾದರೂ ಅಡ್ಡಿಯಾಗಿದ್ದಾರೆಯೇ ಎಂದು ಇದೀಗ ಮಾದಿಗ ಸಮುದಾಯ ಅನುಮಾನ ಪಡುತ್ತಿದೆ. ಸರಕಾರದ ಈ ಬೇಜವಾಬ್ದಾರಿಯನ್ನೇ ಬಿಜೆಪಿ ಮತ್ತು ಸಂಘಪರಿವಾರ ತನ್ನದಾಗಿಸಲು ಹೊರಟಿದೆ. ಒಂದೆಡೆ ಮೀಸಲಾತಿಯ ಬಗ್ಗೆಯೇ ಅಸಮ್ಮತಿಯನ್ನು ಹೊಂದಿರುವ, ಜಾತಿಗಣತಿ ವರದಿ ಜಾರಿಗೊಳ್ಳದಂತೆ ಸಕಲ ರೀತಿಯಲ್ಲೂ ಸಂಚು ನಡೆಸುತ್ತಿರುವ ಬಿಜೆಪಿ, ಮಾದಿಗರ ಒಳ ಮೀಸಲಾತಿ ಚಳವಳಿಗೆ ತನ್ನ ಕೈ ಜೋಡಿಸಿದೆ. ಒಂದು ರೀತಿಯಲ್ಲಿ ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಮಾದಿಗ ಸಮುದಾಯ ಎಂದರೆ ತುಳಿತಕ್ಕೊಳಗಾದವರಲ್ಲೇ ಅತಿಯಾಗಿ ನೊಂದವರು. ಸದ್ಯಕ್ಕೆ ತನ್ನ ಹೋರಾಟಕ್ಕೆ ಯಾವುದೇ ರಾಜಕೀಯ ಶಕ್ತಿಗಳು ಬೆಂಬಲನೀಡಿದರೂ ಅದನ್ನು ನಿರಾಕರಿಸುವ ಸ್ಥಿತಿಯಲ್ಲಿ ಈ ಸಮುದಾಯ ಇಲ್ಲ. ಒಂದು ರೀತಿಯಲ್ಲಿ, ದಲಿತ ಸಮುದಾಯದ ಒಂದು ವಿಭಾಗವನ್ನು ಕಾಂಗ್ರೆಸ್ ಪಕ್ಷ ತಾನಾಗಿಯೇ ಬಿಜೆಪಿಗೆ ಒಪ್ಪಿಸುತ್ತಿದೆಯೇ ಎಂದು ಅನುಮಾನಪಡುವಂತಾಗಿದೆ. ಮಾದಿಗರ ಅಸಹಾಯಕತೆಯನ್ನು ಸಂಘಪರಿವಾರ ತನ್ನ ಒಡೆದು ಆಳುವ ರಾಜಕೀಯಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದೆ. ಇದು ನಿರೀಕ್ಷಿತವಾಗಿದೆ.
ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದ ಬಳಿಕವೂ ರಾಜ್ಯ ಸರಕಾರ ಯಾಕೆ ಒಳಮೀಸಲಾತಿ ಜಾರಿಗೊಳಿಸಲು ಬೇಕಾದ ಕ್ರಮವನ್ನು ತೆಗೆದುಕೊಳ್ಳಲು ಉದಾಸೀನ ತೋರಿಸುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವೇನೂ ಇಲ್ಲ. ಸರಕಾರದೊಳಗಿರುವ ಕೆಲವು ದಲಿತ ಮುಖಂಡರೇ ಒಳ ಮೀಸಲಾತಿ ಜಾರಿಗೆ ಬಹುದೊಡ್ಡ ತೊಡಕಾಗಿದ್ದಾರೆ ಎನ್ನುವ ಆರೋಪಗಳಿವೆ. ಸುಪ್ರೀಂಕೋರ್ಟ್ ಒಳಮೀಸಲಾತಿಯ ಪರವಾಗಿ ತೀರ್ಪು ನೀಡಿದಾಗ ಅದರ ವಿರುದ್ಧ ದೇಶದ ಪ್ರಮುಖ ದಲಿತ ನಾಯಕರೇ ಆಕ್ರೋಶ ವ್ಯಕ್ತಪಡಿಸಿದರು ಎನ್ನುವುದು ಕಹಿ ಸತ್ಯವಾಗಿದೆ. ಇದು ದಲಿತರನ್ನು ಒಡೆಯುವ ಸಂಚು ಎಂದು ವ್ಯಾಖ್ಯಾನ ನೀಡಲು ಕೆಲವರು ಪ್ರಯತ್ನಿಸಿದರು. ಶೋಷಣೆಯ ವಿರುದ್ಧ ಹೋರಾಡುವ ಮೊದಲು ತನ್ನೊಳಗಿರುವ ದುರ್ಬಲರನ್ನು ಗುರುತಿಸಿ ಅವರನ್ನು ಸಬಲಗೊಳಿಸಿ ಇಡೀ ಸಮುದಾಯವನ್ನು ಮೇಲ್‌ಜಾತಿಯ ವಿರುದ್ಧ ಸಂಘಟಿತಗೊಳಿಸುವ ಅಗತ್ಯ ದಲಿತ ನಾಯಕರಿಗೇ ಅರ್ಥವಾಗುತ್ತಿಲ್ಲ. ದಲಿತರಲ್ಲಿ ಮೇಲ್‌ಸ್ತರದಲ್ಲಿರುವವರು ಕೆಳಸ್ತರವನ್ನು ಗುರುತಿಸಿ ಮೀಸಲಾತಿಯ ಸೌಲಭ್ಯವನ್ನು ಹಂಚಿ ಉಣ್ಣುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅದು ನಡೆಯದೇ ಇದ್ದಾಗ ಒಂದು ಸಮುದಾಯ ತಮ್ಮ ಹಕ್ಕಿಗಾಗಿ ಪ್ರತ್ಯೇಕ ಹೋರಾಟವನ್ನು ಮಾಡುವುದು ಅನಿವಾರ್ಯವಾಯಿತು. ಹಂಚಿ ಉಣ್ಣುವ ಮೂಲಕ ದಲಿತರು ತಮ್ಮೊಳಗಿನ ಅಸಮಾನತೆಗಳನ್ನು ನಿವಾರಿಸಿಕೊಂಡು ಸಮಾಜದ ಉಳಿದ ಜಾತಿಗಳಿಗೆ ಮಾದರಿಯಾಗಬೇಕು. ಒಳ ಮೀಸಲಾತಿಯ ಮೂಲಕ ದಲಿತರು ಇನ್ನಷ್ಟು ಸದೃಢಗೊಳ್ಳಬೇಕು ಮತ್ತು ಸಂಘಟಿತಗೊಳ್ಳಬೇಕೇ ಹೊರತು, ವಿಚ್ಛಿದ್ರವಾಗಬಾರದು. ಆದುದರಿಂದ ಒಳ ಮೀಸಲಾತಿ ಜಾರಿ ಹೊಣೆಗಾರಿಕೆಯನ್ನು ದಲಿತ ಸಮುದಾಯದಲ್ಲಿರುವ ಮೇಲ್‌ಸ್ತರದ ವಿಭಾಗ ಹೊತ್ತುಕೊಳ್ಳಬೇಕು.
ಇದೇ ಸಂದರ್ಭದಲ್ಲಿ ಸಂಘಪರಿವಾರ ಒಳಮೀಸಲಾತಿಯ ಹೆಸರಿನಲ್ಲಿ ದಲಿತರ ನಡುವೆ ನುಸುಳಿರುವುದು ದಲಿತರನ್ನು ಒಡೆಯುವುದಕ್ಕಾಗಿ ಮತ್ತು ದಲಿತರನ್ನು ಪರಸ್ಪರ ಕಚ್ಚಾಡಿಸುವುದಕ್ಕಾಗಿ. ಯಾವ ಸಂಘಟನೆ ಮೀಸಲಾತಿಯ ಜೊತೆಗೇ ಸಮ್ಮತಿಯನ್ನು ಹೊಂದಿಲ್ಲವೋ ಅದು, ಒಳಮೀಸಲಾತಿಯ ಬಗ್ಗೆ ಯಾಕೆ ಆಸಕ್ತಿ ತೋರಿಸುತ್ತದೆ? ಜಾತಿ ಗಣತಿಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಾ ಬಂದ ಈ ಸಂಘಪರಿವಾರ ಸಂಘಟನೆಗಳು ದಲಿತರು ಬಲಾಢ್ಯರಾಗುವುದನ್ನೇ ಸಹಿಸುವುದಿಲ್ಲ. ದಲಿತರನ್ನು ಹಿಂದು ಎಂದು ಗುರುತಿಸುವುದಿರಲಿ, ಅವರನ್ನು ಮನುಷ್ಯರೆಂದೇ ಪರಿಗಣಿಸಲು ಸಿದ್ಧವಿಲ್ಲದ ಸಿದ್ಧಾಂತಕ್ಕೆ ಬದ್ಧವಾಗಿರುವ ಬಿಜೆಪಿ ಮತ್ತು ಸಂಘಪರಿವಾರ ಒಳಮೀಸಲಾತಿಯನ್ನು ಜಾರಿಗೆ ಬೆಂಬಲ ನೀಡಿದಂತೆ ನಟಿಸುತ್ತಿದೆಯೇ ಹೊರತು, ವಾಸ್ತವದಲ್ಲಿ ಒಳಮೀಸಲಾತಿ ಜಾರಿಗೊಳ್ಳುವುದು ಅದಕ್ಕೂ ಬೇಡವಾಗಿದೆ. ಒಳಮೀಸಲಾತಿ ಜಾರಿಗೊಳಿಸುವಲ್ಲಿ ಸರಕಾರ ಇನ್ನೂ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದೇ ಆದರೆ, ದಲಿತ ಸಮುದಾಯ ಎಲ್ಲ ಶೋಷಿತ ವರ್ಗಗಳ ಬೆಂಬಲದ ಜೊತೆಗೆ ಹೋರಾಟ ಮುಂದುವರಿಸಬೇಕಾಗಿದೆ. ಒಳ ಮೀಸಲಾತಿ ಜಾರಿಗೆ ಮೊತ್ತ ಮೊದಲು ಕ್ರಮ ತೆಗೆದುಕೊಂಡಿದ್ದೇ ಕಾಂಗ್ರೆಸ್ ಸರಕಾರ ಎನ್ನುವುದು ನಿಜವೇ ಆಗಿದ್ದರೆ, ಈಗಲೂ ಕಾಲ ಮಿಂಚಿಲ್ಲ. ಒಳಮೀಸಲಾತಿಗಾಗಿ ಪ್ರತ್ಯೇಕ ಸಮೀಕ್ಷೆಯೊಂದನ್ನು ನಡೆಸಿದರೂ ಸರಿಯೇ, ತನ್ನ ಅಧಿಕಾರಾವಧಿಯಲ್ಲೇ ದಲಿತ ಸಮುದಾಯದೊಳಗಿನ ಒಳ ಸಂಕಟಗಳಿಗೆ ಪರಿಹಾರವನ್ನು ಒದಗಿಸಿಕೊಡಬೇಕು.