ರೋಹಿತ್ ಕಾಯ್ದೆ ಜಾರಿಯಾಗಲು ಇನ್ನೆಷ್ಟು ರೋಹಿತ್ ಗಳು ಬಲಿಯಾಗಬೇಕು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂದೆಡೆ ಒಳಮೀಸಲಾತಿಗಾಗಿ ರಾಜ್ಯದ ದಲಿತ ಸಮುದಾಯ ಹೋರಾಟ ನಡೆಸುತ್ತಿರುವ ಹೊತ್ತಿಗೇ, ಎಪ್ರಿಲ್ 14ರೊಳಗೆ ರಾಜ್ಯದಲ್ಲಿ ‘ರೋಹಿತ್ ಕಾಯ್ದೆ’ಯನ್ನು ಜಾರಿಗೊಳಿಸಬೇಕು ಎಂದು ದಲಿತ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದಿವೆ. ಉನ್ನತ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದಕ್ಕಾಗಿ ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಬೇಕು ಎನ್ನುವ ಆಗ್ರಹ ಕೆಲವು ವರ್ಷಗಳಿಂದ ಮಹತ್ವವನ್ನು ಪಡೆದುಕೊಳ್ಳುತ್ತಿದೆ. 2016ರಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ, ದೇಶದ ವಿಶ್ವವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಹೀನಾಯ ಸ್ಥಿತಿಗತಿಗಳನ್ನು ಮುನ್ನೆಲೆಗೆ ತಂದಿತ್ತು. ರೋಹಿತ್ ವೇಮುಲಾ ಆತ್ಮಹತ್ಯೆ ವೈಯಕ್ತಿಕ ಪ್ರಕರಣವಾಗಿರಲಿಲ್ಲ. ಆತ ತನ್ನ ಆತ್ಮಹತ್ಯೆಗೆ ಮುನ್ನ ಬರೆದ ಪತ್ರದಲ್ಲಿ ‘‘ದಲಿತ ವಿದ್ಯಾರ್ಥಿಗಳಿಗೆ, ವಿಶ್ವವಿದ್ಯಾಲಯ ಪ್ರವೇಶಿಸುವಾಗಲೇ ಆತ್ಮಹತ್ಯೆ ಮಾಡಿಕೊಳ್ಳಲು ಉಚಿತವಾಗಿ ವಿಷವನ್ನು ಹಂಚಿ’’ ಎಂದು ಮನವಿ ಮಾಡಿದ್ದ. ತಾನು ದಲಿತನಾದ ಕಾರಣಕ್ಕೇ ತನ್ನ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿತ್ತು. ಅಷ್ಟೇ ಅಲ್ಲ, ಏಳು ತಿಂಗಳಿಂದ ಫೆಲೋಶಿಪ್ನ್ನು ತಡೆಹಿಡಿಯಲಾಗಿತ್ತು ಎಂದು ಆತ ಬರೆದ ಪತ್ರವೊಂದರಲ್ಲಿ ತೋಡಿಕೊಂಡಿದ್ದಾನೆ. ಸಾಯುವ ಕೆಲವು ದಿನಗಳ ಮೊದಲು ತನ್ನ ಹಕ್ಕಿಗಾಗಿ ಆತ ಹಗಲು ರಾತ್ರಿಯೆನ್ನದೇ ಧರಣಿ ನಡೆಸಿದ್ದ. ಆತನ್ನು ಹಂತಹಂತವಾಗಿ ಮಾನಸಿಕವಾಗಿ ಶೋಷಿಸಿ, ಆತ್ಮಹತ್ಯೆಗೆ ತಳ್ಳಲಾಗಿತ್ತು. ರೋಹಿತ್ ವೇಮುಲಾ ಆತ್ಮಹತ್ಯೆಯ ಬಳಿಕ, ಆತನಿಗಾದ ಅನ್ಯಾಯ ದೇಶಾದ್ಯಂತ ಚರ್ಚೆಗೊಳಗಾಯಿತು. ಸಂಸತ್ನಲ್ಲೂ ಈ ಆತ್ಮಹತ್ಯೆ ಪ್ರತಿಧ್ವನಿಸಿತು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದಕ್ಕಾಗಿ ರೋಹಿತ್ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆಯೊಂದನ್ನು ಜಾರಿಗೊಳಿಸಬೇಕು ಎನ್ನುವ ಒತ್ತಾಯ ಮುನ್ನೆಲೆಗೆ ಬಂತು.
ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ರ್ಯಾಗಿಂಗ್ಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆೆ. ಅತ್ಯಂತ ಸುಶಿಕ್ಷಿತ ರಾಜ್ಯವೆಂದು ಗುರುತಿಸಲ್ಪಡುವ ನೆರೆಯ ಕೇರಳದಲ್ಲೇ ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ರ್ಯಾಗಿಂಗ್ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು. ಈ ರ್ಯಾಗಿಂಗ್ನ ಹಿಂದೆ ಡ್ರಗ್ಸ್, ಮಾದಕ ಪದಾರ್ಥಗಳ ಕೈವಾಡವಿರಬಹುದು ಎಂದು ಸಂಶಯಿಸಲಾಗಿದೆ. ಆದರೆ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುವ ರ್ಯಾಗಿಂಗ್ಗಳ ಹಿಂದೆ, ‘ಜಾತೀಯತೆ’ ಎನ್ನುವ ವಿಷ ಕೆಲಸ ಮಾಡುತ್ತಿದೆ. ದಲಿತ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಮೆಟ್ಟಿಲು ತುಳಿಯುವುದನ್ನೇ ಅಸಹನೆಯಿಂದ ನೋಡುವ ಸಮಾಜ ಇಂದಿಗೂ ಜೀವಂತವಿದೆ. ಮೀಸಲಾತಿಯನ್ನು ಮುಂದಿಟ್ಟುಕೊಂಡು ದಲಿತ ವಿದ್ಯಾರ್ಥಿಗಳನ್ನು ವ್ಯಂಗ್ಯ ಮಾಡುವುದು, ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಅವರನ್ನು ಅನ್ಯರಂತೆ ಉಪಚರಿಸುವುದು ವಿಶ್ವವಿದ್ಯಾನಿಲಯಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲ, ಅಧ್ಯಾಪಕರೂ ದಲಿತರ ವಿರುದ್ಧದ ಈ ರ್ಯಾಂಗಿಂಗ್ನಲ್ಲಿ ಕೈ ಜೋಡಿಸುತ್ತಾರೆ. ವಿದ್ಯಾರ್ಥಿಗಳ ಕುರಿತಂತೆ ಪೂರ್ವಾಗ್ರಹ ಪೀಡಿತರಾಗುವುದು, ಅವರಿಗೆ ಸಿಗಬೇಕಾದ ಫೆಲೋಶಿಪ್ಗಳನ್ನು ಕ್ಷುಲ್ಲಕ ನೆಪಗಳನ್ನು ಮುಂದಿಟ್ಟು ತಡೆಯುವುದು, ಹಾಸ್ಟೆಲ್ಗಳಲ್ಲಿ ಅವರಿಗೆ ಕಳಪೆ ಸೌಕರ್ಯಗಳನ್ನು ಒದಗಿಸುವುದು, ಶುಚಿತ್ವದ ಕೆಲಸಗಳನ್ನು ಅವರಿಗೆ ವಹಿಸುವುದು ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳು ಕೀಳರಿಮೆಯಿಂದ ಬದುಕುವಂತೆ ನೋಡಿಕೊಳ್ಳುತ್ತಾರೆ. ದಲಿತ ವಿದ್ಯಾರ್ಥಿಗಳು ಸಾಮಾನ್ಯ ವರ್ಗದವರಂತೆ ಬದುಕುವುದಕ್ಕೆ ಅನರ್ಹರು ಎಂದು ವ್ಯವಸ್ಥೆಯೇ ತೀರ್ಮಾನಿಸಿ ಬಿಟ್ಟಿರುತ್ತದೆ. ಉತ್ತರ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳ ಮುಂದೆ ದಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬದುಕಲು ಮುಂದಾದರೆ, ಅದು ಜಾತಿ ಕಲಹಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ, ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಬೆದರಿಸಿ ಅವರನ್ನು ಕಾಲೇಜು ತೊರೆಯುವಂತೆ ಮಾಡಲಾಗುತ್ತದೆ ಅಥವಾ ಪ್ರತಿರೋಧಿಸಿದ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಅಂತಿಮ ಆಯ್ಕೆಯಾಗಿರುತ್ತದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)ಯಲ್ಲಿ ಜಾತಿತಾರತಮ್ಯ ಸುದ್ದಿಯಾಗಿರುವುದು ಇಂದು ನಿನ್ನೆಯಲ್ಲ. 2007ರಲ್ಲಿ ಥೋರಟ್ ಸಮಿತಿ ಸಲ್ಲಿಸಿದ ವರದಿಯಲ್ಲಿ ಇಲ್ಲಿರುವ ತಾರತಮ್ಯವು ಜಗಜ್ಜಾಹೀರಾಗಿತ್ತು. ಈ ವರದಿಯ ಪ್ರಕಾರ, ಶೇ. 69ರಷ್ಟು ವಿದ್ಯಾರ್ಥಿಗಳು ಶಿಕ್ಷಕರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇವರಲ್ಲಿ, ಶೇ. 30ರಷ್ಟು ವಿದ್ಯಾರ್ಥಿಗಳು ಜಾತಿ ಹಿನ್ನೆಲೆಯೇ ಇದಕ್ಕೆ ಕಾರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಶೇ. 72ರಷ್ಟು ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಜಾತಿ ತಾರತಮ್ಯವನ್ನು ಎದುರಿಸಿದ್ದಾರೆ. ಶೇ. 85ರಷ್ಟು ದಲಿತ ವಿದ್ಯಾರ್ಥಿಗಳು ಉನ್ನತ ಜಾತಿಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ ತಮ್ಮ ಬಗ್ಗೆ ತಾರತಮ್ಯದಿಂದ ವರ್ತಿಸುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಶೇ. 84ರಷ್ಟು ವಿದ್ಯಾರ್ಥಿಗಳು ಜಾತಿ ಕಾರಣದಿಂದಾಗಿ ತಮ್ಮ ಶ್ರೇಣಿಯ ಮೇಲೆ ದುಷ್ಪರಿಣಾಮವಾಗಿದೆ ಎನ್ನುವುದನ್ನು ತಿಳಿಸಿದ್ದಾರೆ. ಶೇ. 84 ವಿದ್ಯಾರ್ಥಿಗಳು ವಿವಿಧ ರೀತಿಯ ದೌರ್ಜನ್ಯಗಳನ್ನು ಅನುಭವಿಸಿದ್ದಾರೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ ಜಾತಿಯ ಹೊಲಸು ಇಷ್ಟೊಂದು ಹೆಪ್ಪುಗಟ್ಟಿರಬೇಕಾದರೆ, ಇನ್ನುಳಿದ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳು ಎಂತಹ ಪರಿಸ್ಥಿತಿಯನ್ನು ಅನುಭವಿಸಿರಬೇಡ?ಇತ್ತೀಚೆಗೆ ಕರ್ನಾಟಕದಲ್ಲೇ ಒಂದು ಕಾಲೇಜಿನಲ್ಲಿ ಅಂಬೇಡ್ಕರ್ರನ್ನು ವ್ಯಂಗ್ಯವಾಡುವ ಪ್ರಹಸನವೊಂದನ್ನು ಶಾಲಾ ಸಾಂಸ್ಕೃತಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳು ಅಭಿನಯಿಸಿ ತೋರಿಸಿದರು. ಇಲ್ಲಿ ಅಂಬೇಡ್ಕರ್ರನ್ನು, ದಲಿತ ವಿದ್ಯಾರ್ಥಿಗಳ ಮೀಸಲಾತಿಯನ್ನು ಪರೋಕ್ಷವಾಗಿ ವ್ಯಂಗ್ಯವಾಡಲಾಗಿತ್ತು. ಇದನ್ನು ವೀಕ್ಷಿಸುವ ದಲಿತ ವಿದ್ಯಾರ್ಥಿಯ ಸ್ಥಿತಿ ಏನಾಗಬೇಡ? ಆತ ಮಾನಸಿಕವಾಗಿ ಅದೆಷ್ಟು ಕುಗ್ಗಿರಬೇಕು ಮತ್ತು ಸಹವಿದ್ಯಾರ್ಥಿಗಳ ಮುಂದೆ ಅದೆಷ್ಟು ಕೀಳರಿಮೆಯನ್ನು ಅನುಭವಿಸಿರಬೇಕು?
2021ರಲ್ಲಿ ಕೇಂದ್ರ ಶಿಕ್ಷಣ ಸಚಿವರು ನೀಡಿರುವ ಅಂಕಿ ಅಂಶದ ಪ್ರಕಾರ 2014ರಿಂದ 2021ರ ಅವಧಿಯಲ್ಲಿ ಐಐಟಿ, ಐಐಎಂ.ಎನ್ಐಟಿ ಮತ್ತು ಇತರ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ 68 ವಿದ್ಯಾರ್ಥಿಗಳು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. 2023ರಲ್ಲಿ ಸರಕಾರ ಸಂಸತ್ತಿನಲ್ಲಿ ನೀಡಿದ ಮಾಹಿತಿಯಂತೆ, ಕೇವಲ ಕೇಂದ್ರೀಯ ವಿವಿಗಳಿಂದಲೇ 2018-23ರ ಮಧ್ಯೆ 13,000ಕ್ಕೂ ಹೆಚ್ಚು ದಲಿತ ಮತ್ತು ಒಬಿಸಿ ಸಮುದಾಯದ ವಿದ್ಯಾರ್ಥಿಗಳು ಅರ್ಧದಲ್ಲೇ ಕಲಿಕೆಯಿಂದ ಹೊರದಬ್ಬಲ್ಪಟ್ಟಿದ್ದಾರೆ. ಇದಕ್ಕೆ ರ್ಯಾಗಿಂಗ್ಗಳು ಮಾತ್ರವಲ್ಲ, ದಲಿತ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಬೇರೆ ಬೇರೆ ರೀತಿಯಲ್ಲಿ ನೀಡುತ್ತಿರುವ ಉಪಟಳಗಳೇ ಕಾರಣ ಎನ್ನುವುದು ಈಗಾಗಲೇ ವಿವಿಧ ಅಧ್ಯಯನಗಳಿಂದ ಬಹಿರಂಗವಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಸರಕಾರ ಬೇರೆ ಬೇರೆ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆಯೇನೋ ನಿಜ. ಆದರೆ ಅದನ್ನು ತಮ್ಮದಾಗಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹತ್ತು ಹಲವು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಅಧ್ಯಾಪಕರುಗಳಿಂದ, ಅಧಿಕಾರಿಗಳಿಂದ, ಸಹವಿದ್ಯಾರ್ಥಿಗಳಿಂದ ಅಸಹನೆ, ವ್ಯಂಗ್ಯ, ತಿವಿತಗಳನ್ನು ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ರೋಹಿತ್ ಕಾಯ್ದೆಯನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಈ ಬಗ್ಗೆ ರಾಜ್ಯದಲ್ಲಿ ಈಗಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಭರವಸೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಒತ್ತಡವನ್ನು ಹೇರಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಸರಕಾರ ಈವರೆಗೆ ಇದನ್ನು ಗಂಭೀರವಾಗಿ ಸ್ವೀಕರಿಸಿದಂತೆ ಇಲ್ಲ. ಈ ನಿಟ್ಟಿನಲ್ಲಿ ದಲಿತ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳ ನಾಯಕರು ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಗಡುವನ್ನು ವಿಧಿಸಿದ್ದಾರೆ. ವಿದ್ಯಾರ್ಥಿಗಳ ಅದರಲ್ಲೂ ದಲಿತ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಅದಕ್ಕಾಗಿ ಕಾನೂನೊಂದನ್ನು ಜಾರಿಗೊಳಿಸಲು ಪ್ರತ್ಯೇಕವಾದ ಹೋರಾಟ ನಡೆಸುವ ಅನಿವಾರ್ಯತೆಯನ್ನು ಸರಕಾರ ಯಾವ ಕಾರಣಕ್ಕೂ ಸೃಷ್ಟಿಸಬಾರದು.