ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿಯ ದುರ್ಬಳಕೆ ಎಷ್ಟು ಸರಿ?

Update: 2025-04-05 08:30 IST
ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿಯ ದುರ್ಬಳಕೆ ಎಷ್ಟು ಸರಿ?

ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ

  • whatsapp icon

ಬಣ ರಾಜಕೀಯದ ಮೂಲಕ ರಾಜ್ಯದಲ್ಲಿ ಸ್ವತಃ ಆತ್ಮಹತ್ಯೆಯ ದಾರಿ ಹಿಡಿದಿರುವ ಬಿಜೆಪಿಯು, ಇದೀಗ ತನ್ನ ಕಾರ್ಯಕರ್ತನೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಸರಕಾರವನ್ನು ಹೊಣೆ ಮಾಡಿ ಪ್ರತಿಭಟನೆಗಿಳಿದಿದೆ. ಮಡಿಕೇರಿ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಎಂಬಾತ ಬೆಂಗಳೂರಿನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ವೀರಾಜಪೇಟೆ ಶಾಸಕರು ಮತ್ತು ಅವರ ಆಪ್ತರೇ ಹೊಣೆ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಮ್ಯಾನ್ ಪವರ್ ಕಂಪೆನಿಯಲ್ಲಿ ಸಿಬ್ಬಂದಿಯಾಗಿದ್ದ ವಿನಯ್ ಅವರು ಇತ್ತೀಚೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಅವರನ್ನು ನಿಂದಿಸಿ ವಾಟ್ಸ್ಆ್ಯಪ್ ಪೋಸ್ಟ್ ಒಂದನ್ನು ಹಾಕಿದ್ದರು. ಇದರ ವಿರುದ್ಧ ಶಾಸಕರ ಆಪ್ತರು ಪೊಲೀಸ್ ದೂರು ನೀಡಿದ್ದು, ಈ ಸಂಬಂಧ ವಿನಯ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನೂ ನಡೆಸಿದ್ದರು. ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಕಟವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಏನು ಬೇಕಾದರೂ ಬರೆಯುವ ಅವಕಾಶವಿದೆ ಎಂದು, ಅದನ್ನು ದುರುಪಯೋಗ ಪಡಿಸಿಕೊಂಡರೆ ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಿಜೆಪಿ ಕಾರ್ಯಕರ್ತನೆಂದು ಕರೆಸಿಕೊಂಡಿರುವ ವಿನಯ್ ವಿಷಯದಲ್ಲೂ ಇದೇ ಆಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಪ್ರಕರಣ ಗಂಭೀರ ರೂಪ ಪಡೆಯುತ್ತಿರುವುದು ವಿನಯ್ ಅರಿವಿಗೆ ಬಂದಿದೆ. ಆಗಲೇ ಶಾಸಕರೊಂದಿಗೆ ಮಾತುಕತೆ ನಡೆಸಿ, ತಾನು ಮಾಡಿದ ಕೃತ್ಯಕ್ಕೆ ಕ್ಷಮೆ ಯಾಚಿಸಿ ಪ್ರಕರಣವನ್ನು ಮುಗಿಸಿ ಬಿಡುವ ಅವಕಾಶ ಆತನಿಗಿತ್ತು. ಆದರೆ ಕೆಲವು ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಆತ ಪ್ರತಿದೂರನ್ನು ಸಲ್ಲಿಸಿದ್ದು ಮಾತ್ರವಲ್ಲ, ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಪ್ರಕರಣ ಬೆಳೆಯುತ್ತಿದ್ದ ಹಾಗೆಯೇ ಅದು ಆತನ ವೈಯಕ್ತಿಕ ಬದುಕಿನ ಮೇಲೆ ಪರಿಣಾಮಗಳನ್ನು ಬೀರಿದ್ದು, ಅಂತಿಮವಾಗಿ ಅದು ಆತನನ್ನು ಆತ್ಮಹತ್ಯೆಯೆಡೆಗೆ ತಳ್ಳಿದೆ.

ಅಭಿವೃದ್ಧಿಗೆ ಸಂಬಂಧಿಸಿ ತನ್ನ ಕ್ಷೇತ್ರವನ್ನು ಒಬ್ಬ ಶಾಸಕ ಕಡೆಗಣಿಸಿದಾಗ ಆತನನ್ನು ಟೀಕಿಸಿದರೆ ಅದು ಅಪರಾಧವಾಗಬಾರದು. ಕ್ಷೇತ್ರದ ಗಂಭೀರ ಸಮಸ್ಯೆಗಳಿಗೆ ಶಾಸಕರನ್ನು ಹೊಣೆ ಮಾಡುವುದು, ಅದಕ್ಕೆ ಸಂಬಂಧಿಸಿ ಅವರನ್ನು ಖಂಡಿಸುವುದು ಜನರ ಹಕ್ಕಾಗಿದೆ. ಆದರೆ ರಾಜಕೀಯ ದುರುದ್ದೇಶವನ್ನು ಇಟ್ಟುಕೊಂಡು ಶಾಸಕರನ್ನು ವೈಯಕ್ತಿಕವಾಗಿ ನಿಂದಿಸುವ, ವ್ಯಂಗ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಟೀಕೆ, ವ್ಯಂಗ್ಯ ಅಭಿವ್ಯಕ್ತಿಯ ಗೆರೆಯನ್ನು ಮೀರಿದಾಗ ಅದರ ವಿರುದ್ಧ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳುವ ಅಧಿಕಾರ ಶಾಸಕರಿಗೂ ಇದೆ. ಇಲ್ಲಿ ಬಿಜೆಪಿ ಕಾರ್ಯಕರ್ತ ಶಾಸಕನನ್ನು ವೈಯಕ್ತಿಕವಾಗಿ ನಿಂದಿಸಿದ್ದಾನೆ ಎಂದು ಅವರ ಆಪ್ತರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್‌ಗೆ ಆರೋಪಿ ತಡೆಯಾಜ್ಞೆಯನ್ನು ತಂದಿರುವುದು ಮಾತ್ರವಲ್ಲ ಪ್ರತಿದೂರನ್ನೂ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇಲ್ಲಿ ಶಾಸಕರು ಅಥವಾ ಆಪ್ತರು ಕಾನೂನು ವ್ಯಾಪ್ತಿಯಲ್ಲಿ ದೂರು ಸಲ್ಲಿಸುವುದನ್ನು ಕಿರುಕುಳ ಎಂದು ಕರೆಯುವುದು ಎಷ್ಟು ಸರಿ? ಸಾಮಾಜಿಕ ಜಾಲತಾಣವನ್ನು ಬಳಸುವವರಿಗೆ ಅವರದೇ ಹೊಣೆಗಾರಿಕೆಗಳಿವೆ. ದ್ವೇಷ ರಾಜಕಾರಣಕ್ಕೆ, ಇನ್ನೊಬ್ಬರ ವ್ಯಕ್ತಿತ್ವ ಹನನ ಮಾಡುವುದಕ್ಕೆ ಅಭಿವ್ಯಕ್ತಿಯನ್ನು ದುರ್ಬಳಕೆ ಮಾಡಬಾರದು. ಇತ್ತೀಚೆಗೆ ಹಿರಿಯ ವಕೀಲರೊಬ್ಬರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ವಿರುದ್ಧ ಟೀಕೆ ಮಾಡಿದ್ದಾರೆ ಎಂದು ಕೊಡಗಿನ ಕೆಲವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಆ ಹಿರಿಯ ವಕೀಲರನ್ನು ಪೊಲೀಸರು ವಶಕ್ಕೂ ತೆಗೆದುಕೊಂಡಿದ್ದರು. ಅವರು ಕಾನೂನು ಮಾರ್ಗದಲ್ಲೇ ತನ್ನ ಮೇಲಿರುವ ಆರೋಪವನ್ನು ಎದುರಿಸಿದ್ದರು. ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬರನ್ನು ಟೀಕೆ, ವಿಮರ್ಶೆಗಳನ್ನು ಮಾಡುತ್ತೇವೆ ಎಂದಾದರೆ, ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಕಾನೂನಾತ್ಮಕವಾಗಿ ಎದುರಿಸುವುದಕ್ಕೂ ಸಿದ್ಧರಾಗಿರಬೇಕಾಗುತ್ತದೆ.

ರಾಜಕೀಯ ನಾಯಕರ ಭಾವೋದ್ವೇಗದ ಭಾಷಣ, ಮಾತುಗಳಿಗೆ ಬಲಿಯಾಗಿ ಅದೆಷ್ಟೋ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಧರ್ಮ, ಇನ್ನೊಂದು ರಾಜಕೀಯ ಪಕ್ಷ, ನಾಯಕರ ವಿರುದ್ಧ ನಿಂದನೀಯ ಮಾತುಗಳನ್ನಾಡಿ ವೈಯಕ್ತಿಕವಾಗಿ ಸಮಸ್ಯೆಗಳನ್ನು ಎದುರಿಸುದ್ದಾರೆ. ಗ್ಯಾರಂಟಿ ಯೋಜನೆಗಳ ಫಲಾನುಭವಿ ಕುಟುಂಬಕ್ಕೆ ಸೇರಿದ ಯುವಕರೇ ಯಾರದೋ ಮಾತುಗಳಿಗೆ ಬಲಿಯಾಗಿ, ಈ ಯೋಜನೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾರಣವಿಲ್ಲದೆ ಹರಿಹಾಯುವುದನ್ನು ನಾವು ನೋಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೀನಾಯವಾದ, ಅವಾಚ್ಯ ಮಾತುಗಳನ್ನಾಡಿ ಪೊಲೀಸ್ ಕೇಸುಗಳನ್ನು ಮೈಮೇಲೆ ಎಳೆದುಕೊಂಡವರಿದ್ದಾರೆ. ಕಾನೂನು ಕ್ರಮಕ್ಕೆ ಬಲಿಯಾದಾಗ ಇವರ ನೆರವಿಗೆ ಯಾರೂ ಬರುವವರಿಲ್ಲ. ಸಾರ್ವಜನಿಕವಾಗಿ ಬಡಿದಾಡಿಕೊಳ್ಳುವ ರಾಜಕೀಯ ನಾಯಕರು, ಖಾಸಗಿಯಾಗಿ ಅತ್ಯಂತ ಆತ್ಮೀಯ ಸಂಬಂಧಗಳನ್ನು ಉಳಿಸಿಕೊಂಡಿರುತ್ತಾರೆ. ಕಾರ್ಯಕರ್ತರು ಮಾತ್ರ ಇಲ್ಲಿ ಬಲಿಪಶುಗಳು. ಶಾಸಕನೊಬ್ಬನನ್ನು ಟೀಕಿಸುವ, ವಿಮರ್ಶಿಸುವ ಸಂದರ್ಭದಲ್ಲಿ ಎಂತಹ ಭಾಷೆ ಬಳಸಬೇಕು, ಬಳಸಬಾರದು ಎನ್ನುವುದನ್ನು ತಿಳಿಸಿಕೊಡುವ ಹೊಣೆಗಾರಿಕೆ ಆಯಾ ಪಕ್ಷದ ನಾಯಕರದ್ದಾಗಿರುತ್ತದೆ. ವಿನಯ್ ಸೋಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿದಾಗ ಅವರ ನೆರವಿಗೆ ಬಿಜೆಪಿ ನಾಯಕರು ಬಂದಿದ್ದರೆ ಬಹುಶಃ ಅವರು ಆತ್ಮಹತ್ಯೆ ಮಾಡುತ್ತಿರಲಿಲ್ಲ. ಕಾರ್ಯಕರ್ತ ಸಂಕಷ್ಟದಲ್ಲಿರುವಾಗ ಆತನನ್ನು ಕೈ ಬಿಟ್ಟು, ಇದೀಗ ಆತ್ಮಹತ್ಯೆ ಮಾಡಿಕೊಂಡಾಗ ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದರಲ್ಲಿ ಏನು ಅರ್ಥವಿದೆ? ಒಂದು ರೀತಿಯಲ್ಲಿ ಆತನನ್ನು ಆತ್ಮಹತ್ಯೆಗೆ ತಳ್ಳುವುದರಲ್ಲಿ ಬಿಜೆಪಿಯ ಪಾತ್ರವೂ ಇದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹವಾದುದನ್ನು ಬರೆದಾಗ ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುವುದು ಇದೇ ಮೊದಲಲ್ಲ. ಇತ್ತೀಚೆಗೆ, ಫೆಲೆಸ್ತೀನ್ ಪರವಾದ ಹೇಳಿಕೆಯನ್ನು ನೀಡಿದ್ದ್ದಕ್ಕಾಗಿ ಇದೇ ಕಾಂಗ್ರೆಸ್ ಸರಕಾರ ಅಮಾಯಕ ಮುಸ್ಲಿಮ್ ಯುವಕನೊಬ್ಬನ ಮೇಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರಕಾರ ಮತ್ತು ಪ್ರಧಾನಿಯ ವಿರುದ್ಧ ಬರೆದುದಕ್ಕಾಗಿ ಈಗಾಗಲೇ ನೂರಾರು ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಕೆಲವರನ್ನು ಬಂಧಿಸಿದ್ದಾರೆ. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಸಾಮಾಜಿಕ ಜಾಲತಾಣದಲ್ಲಿ ಏನನ್ನೇ ಬರೆಯುವ ಮೊದಲು ನಮಗೆ ನಾವೇ ನೈತಿಕ ಗಡಿಗಳನ್ನು ಹಾಕಿಕೊಳ್ಳುವ ಅಗತ್ಯವಿದೆ ಎನ್ನುವ ಅಂಶವನ್ನು ವಿನಯ್ ಸೋಮಯ್ಯ ಪ್ರಕರಣ ಎತ್ತಿ ತೋರಿಸುತ್ತದೆ. ಯಾವುದೇ ವಿಮರ್ಶೆ, ಟೀಕೆಗಳು ವೈಯಕ್ತಿಕ ನಿಂದನೆಗಳಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ರಾಜಕೀಯ ನಾಯಕರ ಮಾತುಗಳಿಗೆ ಬಲಿ ಬಿದ್ದು, ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಧರ್ಮದ ಅಥವಾ ರಾಜಕೀಯ ಪಕ್ಷಗಳ ವಿರುದ್ಧ ಬರೆಯುವಾಗ ಎರಡೆರಡು ಬಾರಿ ಯೋಚಿಸಬೇಕು. ವೈಯಕ್ತಿಕವಾಗಿಯಾಗಲಿ, ಸಮಾಜಕ್ಕಾಗಲಿ, ರಾಜ್ಯಕ್ಕಾಗಲಿ ಯಾವುದೇ ಪ್ರಯೋಜನವಿಲ್ಲದ, ದ್ವೇಷ, ಅಸೂಯೆಗಳನ್ನಷ್ಟೇ ಹರಡುವ ಸಾಲುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಎದುರಾಳಿ ಯಾವುದೇ ಕಾನೂನು ಕ್ರಮವನ್ನು ತನ್ನ ವಿರುದ್ಧ ತೆಗೆದುಕೊಳ್ಳಬಾರದು ಎಂದು ನಿರೀಕ್ಷಿಸಬಾರದು. ವಿನಯ್ ಸೋಮಯ್ಯ ಪ್ರಕರಣದಲ್ಲಿ ಶಾಸಕರು ವೈಯಕ್ತಿಕವಾಗಿ ತನ್ನ ಗೂಂಡಾಗಳಿಂದ ಬೆದರಿಕೆ ಹಾಕಿದ್ದಿದ್ದರೆ ಅದು ಬೇರೆ ಮಾತು. ತನ್ನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ನಡೆದ ದಾಳಿಯನ್ನು ಕಾನೂನು ಮೂಲಕ ಎದುರಿಸುವುದನ್ನು ‘ಕಿರುಕುಳ’ ಎಂದು ಕರೆದರೆ, ಡಿಜಿಟಲ್ ಮೂಲಕ ಹರಡುವ ದ್ವೇಷಗಳನ್ನು ನಿಯಂತ್ರಿಸುವ ಬಗೆ ಹೇಗೆ? ಪ್ರತಿಭಟನಾ ನಿರತ ಬಿಜೆಪಿ ನಾಯಕರೇ ಉತ್ತರಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News