ಅಮೆರಿಕ ಘೋಷಿಸಿದ ಸುಂಕ ಯುದ್ಧ!

ಡೊನಾಲ್ಡ್ ಟ್ರಂಪ್ (Photo: PTI)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೂರನೇ ಮಹಾ ಯುದ್ಧವನ್ನು ‘ಸುಂಕ’ದ ರೂಪದಲ್ಲಿ ಅಮೆರಿಕ ವಿಶ್ವದ ಮೇಲೆ ಹೇರಲು ಮುಂದಾಗಿದೆ. ಈಗಾಗಲೇ ಭಾರತದ ಉತ್ಪನ್ನಗಳ ಮೇಲೆ ಶೇ.26ರಷ್ಟು ಸುಂಕವನ್ನು ಹೇರಿರುವ ಟ್ರಂಪ್, ಚೀನಾ, ಬಾಂಗ್ಲಾ, ಶ್ರೀಲಂಕಾ, ಜಪಾನ್ ಸೇರಿದಂತೆ 180 ದೇಶಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಸುಂಕ ಹೇರುವ ಮೂಲಕ, ಎದುರಾಳಿಯ ಪ್ರತಿಕ್ರಿಯೆಗಾಗಿ ಕಾದಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇದಕ್ಕೆ ಇನ್ನೂ ಪ್ರತಿಕ್ರಿಯಿಸುವ ಧೈರ್ಯವನ್ನು ಪ್ರದರ್ಶಿಸಿಲ್ಲ. ಭಾರತವೂ ಇದಕ್ಕೆ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಿದರೆ, ಅದು ಉಭಯ ದೇಶಗಳ ನಡುವೆ ಭಾರೀ ಆರ್ಥಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಆದುದರಿಂದ ಒಳ ಮಾತುಕತೆಗಳಿಂದ ಪರಿಹರಿಸಿ ಕೊಳ್ಳುವ ದಾರಿಯನ್ನು ಭಾರತ ಹುಡುಕುತ್ತಿದೆ. ಅಮೆರಿಕ ವಿಧಿಸಿರುವ ಸುಂಕದಿಂದಾಗಿ ಭಾರತದ ಸಾಗರೋತ್ಪನ್ನ ರಫ್ತಿನ ಮೇಲೆ ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮಗಳು ಉಂಟಾಗಲಿದೆ ಎಂದು ರಫ್ತುದಾರರ ಒಕ್ಕೂಟ ಹೇಳಿಕೆ ನೀಡಿದೆ. ಸುಮಾರು 2.5 ಶತ ಕೋಟಿ ಡಾಲರ್ ಮೌಲ್ಯದ ಸಾಗರೋತ್ಪನ್ನಗಳು ಕಳೆದ ವರ್ಷ ಭಾರತದಿಂದ ಅಮೆರಿಕಕ್ಕೆ ರಫ್ತಾಗಿತ್ತು. ಸಿಗಡಿಯಂತಹ ಉತ್ಪನ್ನಗಳ ರಫ್ತಿಗೆ ಇದು ಆಘಾತ ನೀಡಿದ್ದು, ಭಾರತದ ಸ್ಥಾನವನ್ನು ಈಕ್ವೆಡಾರ್‌ನಂತಹ ದೇಶಗಳು ಆಕ್ರಮಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ. ಬರೇ ಸಾಗರೋತ್ಪನ್ನ ಎಂದಲ್ಲ, ಭಾರತದ ಹಲವು ಕ್ಷೇತ್ರಗಳ ಮೇಲೆ ಇದು ದುಷ್ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪರ್ಯಾಯವಾಗಿ ಸ್ವದೇಶಿ ಆರ್ಥಿಕತೆಯನ್ನು ಕಟ್ಟುವ ಹೊಣೆಗಾರಿಕೆಯನ್ನು ದೇಶ ಎಷ್ಟರಮಟ್ಟಿಗೆ ಸವಾಲಾಗಿ ಸ್ವೀಕರಿಸಲಿದೆ ಎನ್ನುವುದರ ಮೇಲೆ ದೇಶದ ಆರ್ಥಿಕತೆಯ ಭವಿಷ್ಯ ನಿಂತಿದೆ.
ರಾಷ್ಟ್ರೀಯತೆಯ ತಳಹದಿಯ ಮೇಲೆ ಹೊಸ ಅಮೆರಿಕವನ್ನು ಕಟ್ಟುವ ಭರವಸೆಯೊಂದಿಗೆ ಟ್ರಂಪ್ ಈ ‘ಪರೋಕ್ಷ ಯುದ್ಧ’ಕ್ಕೆ ಮುಂದಾಗಿದ್ದಾರೆ. ಅಮೆರಿಕವನ್ನು ಸಂತ್ರಸ್ತ ದೇಶವೆಂದು ಬಿಂಬಿಸುತ್ತಾ, ಭಾರತದಂತಹ ದೇಶಗಳು ಅಮೆರಿಕದ ಹೃದಯ ವೈಶಾಲ್ಯವನ್ನು ದುರುಪಯೋಗಗೊಳಿಸುತ್ತಿವೆ ಎಂದು ಅವರು ಪ್ರತಿಪಾದಿಸಲು ಯತ್ನಿಸುತ್ತಿದ್ದಾರೆ ಮತ್ತು ಅಮೆರಿಕದ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದೇನೆ ಎಂದು ತನ್ನ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಾಸ್ತವದಲ್ಲಿ, ಅಭಿವೃದ್ಧಿ ಶೀಲ ದೇಶಗಳು ಅಮೆರಿಕದ ಕುರಿತಂತೆ ಭ್ರಮ ನಿರಸನಗೊಂಡಿವೆೆ. ಈ ನಿಟ್ಟಿನಲ್ಲಿ ಅದು ಚೀನಾ, ರಶ್ಯ, ಮಧ್ಯ ಪ್ರಾಚ್ಯ ದೇಶಗಳ ಜೊತೆಗೆ ಸಂಬಂಧವನ್ನು ಸುಧಾರಿಸಲು ಮುಂದಾಗುತ್ತಿದೆ ಮತ್ತು ಆ ಮೂಲಕ ಹೊಸ ಆರ್ಥಿಕ ಅವಕಾಶಗಳನ್ನು ಹುಡುಕುತ್ತಿದೆ. ಶಸ್ತ್ರಾಸ್ತ್ರ ಮತ್ತು ತೈಲಕ್ಕೆ ಸಂಬಂಧಿಸಿ ತನ್ನ ನಿರ್ಬಂಧಗಳನ್ನು ಮೀರಿ ಇತರ ದೇಶಗಳ ಜೊತೆಗೆ ಒಪ್ಪಂದಗಳಿಗೆ ಕೈ ಚಾಚುತ್ತಿರುವುದನ್ನು ಅಮೆರಿಕ ಸಹಿಸುತ್ತಿಲ್ಲ. ಟ್ರಂಪ್‌ನ ‘ಆದೇಶ’ವನ್ನು ಮೀರಿ ಭಾರತವು ರಶ್ಯದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ತೈಲಕ್ಕೆ ಸಂಬಂಧಿಸಿಯೂ ಪರ್ಯಾಯ ದಾರಿಯನ್ನು ಹುಡುಕುತ್ತಿದೆ. ಇದರಿಂದ ರೊಚ್ಚಿಗೆದ್ದಿರುವ ಅಮೆರಿಕ, ಬೇರೆ ಬೇರೆ ನೆಪಗಳನ್ನು ಮುಂದಿಟ್ಟುಕೊಂಡು ಭಾರತದಂತಹ ದೇಶಗಳ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಲು ನೋಡುತ್ತಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಬೆನ್ನಿಗೇ ಭಾರತದ ಸಾವಿರಾರು ನಾಗರಿಕರನ್ನು ‘ಅಕ್ರಮ ವಲಸೆ’ಯ ಹೆಸರಿನಲ್ಲಿ ಗಡಿ ಪಾರು ಮಾಡಲಾಯಿತು. ಅಷ್ಟೇ ಅಲ್ಲ, ಪೌರತ್ವ ಮಸೂದೆಯನ್ನು ಮಂಡಿಸುವ ಮೂಲಕ, ಇನ್ನಷ್ಟು ಭಾರತೀಯರನ್ನು ಅಮೆರಿಕದಿಂದ ಓಡಿಸುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡಲಾಯಿತು. ಬೇರೆ ಬೇರೆ ವಲಯಗಳಿಂದ ಭಾರತದ ಮೇಲೆ ಒತ್ತಡಗಳನ್ನು ಹೇರುವುದು ಮತ್ತು ತನ್ನ ಮೂಗಿನ ನೇರಕ್ಕಿರುವ ಆರ್ಥಿಕ ಒಪ್ಪಂದಗಳಿಗೆ ಭಾರತದಿಂದ ‘ಹೆಬ್ಬೆಟ್ಟು’ ಒತ್ತಿಸುವುದೇ ಅದರ ಉದ್ದೇಶ ಎನ್ನುವುದು ಸ್ಪಷ್ಟವಾಗಿದೆ.
ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಗರಿಷ್ಠ ಲಾಭಗಳನ್ನು ಅಮೆರಿಕ ಈವರೆಗೆ ತನ್ನದಾಗಿಸಿದೆ. ವಿಶ್ವ ವ್ಯಾಪಾರ ಸಂಘಟನೆ ರಚನೆಯಾದ ಬಳಿಕ, ಬೃಹತ್ ಮಾರುಕಟ್ಟೆಯುಳ್ಳ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆಗೆ ಪ್ರವೇಶಿಸಲು ಶ್ರೀಮಂತ ದೇಶಗಳಿಗೆ ಮುಕ್ತ ವಾತಾವರಣವನ್ನು ಸೃಷ್ಟಿ ಮಾಡಲಾಯಿತು. ಬೃಹತ್ ದೇಶಗಳ ಜೊತೆಗೆ ಸ್ಪರ್ಧಿಸಲು ಸಾಧ್ಯವಿಲ್ಲದೆ ಈ ದೇಶದ ನೂರಾರು ಮಾರುಕಟ್ಟೆಗಳು ನುಚ್ಚು ನೂರಾದವು. ಸಣ್ಣ ಪುಟ್ಟ ಉದ್ದಿಮೆಗಳು ಸರ್ವನಾಶವಾದವು. ಇವೆಲ್ಲವನ್ನು ಅಮೆರಿಕದಂತಹ ಶ್ರೀಮಂತ ದೇಶಗಳು ಆರ್ಥಿಕ ಸುಧಾರಣೆ ಎಂದೇ ಕರೆದವು. ಗ್ಯಾಟ್, ಡಂಕೆಲ್ ಒಪ್ಪಂದ ಗಳು ಶ್ರೀಮಂತ ದೇಶಗಳ ಪರವಾಗಿದ್ದವೇ ಹೊರತು, ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಉದ್ಧರಿಸುವುದಕ್ಕಾಗಿರಲಿಲ್ಲ. ವಿಶ್ವ ವ್ಯಾಪಾರ ಒಪ್ಪಂದಕ್ಕೆ ತೃತೀಯ ದೇಶಗಳು ಸೇರುವುದು ಅನಿವಾರ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಯಿತು. ಇದೆಲ್ಲದರ ಲಾಭಗಳನ್ನು ಬಾಚಿಕೊಂಡಿರುವುದು ಅಮೆರಿಕದಂತಹ ದೇಶಗಳೇ ಆಗಿವೆ. ಬಲಿಷ್ಠ ದೇಶಗಳು ಮತ್ತು ಬಡ ದೇಶಗಳ ನಡುವೆ ನಡೆದ ಅಸಮಾನ ಆರ್ಥಿಕ ಒಪ್ಪಂದಗಳಲ್ಲಿ, ಕೃಷಿ ಮೊದಲಾದ ವಲಯಗಳಿಗೆ ರಕ್ಷಣೆಯನ್ನು ಕೋರಲಾಗಿತ್ತು. ತಂತ್ರಜ್ಞಾನ ವಿಷಯಗಳಲ್ಲಿ ಬಡ ದೇಶಗಳು ಸ್ಪರ್ಧಿಸುವಂತೆಯೇ ಇದ್ದಿರಲಿಲ್ಲ. ಒಂದು ರೀತಿಯಲ್ಲಿ ನರಿ ಮತ್ತು ಕರಡಿಗಳು ಜೊತೆಗೆ ಕೃಷಿ ಮಾಡಿದಂತೆಯೇ ಆಗಿತ್ತು. ಲಾಭವೆಲ್ಲ ಶ್ರೀಮಂತ ದೇಶಗಳಿಗೆ, ನಷ್ಟಗಳೆಲ್ಲ ಬಡ ದೇಶಗಳಿಗೆ. ಇದೀಗ ತಾನೇ ರೂಪಿಸಿದ ವಿಶ್ವ ವ್ಯಾಪಾರ ಸಂಸ್ಥೆಯನ್ನು ಅಣಕಿಸುವಂತೆ ಅಮೆರಿಕ ‘ಸುಂಕ ಯುದ್ಧ’ವನ್ನು ಘೋಷಿಸಿದೆ.
ಸುಂಕವನ್ನು ಹಾಕುವ ಸಂದರ್ಭದಲ್ಲಿ ಭಾರತದಂತಹ ದೇಶಗಳು ಸುಲಭದಲ್ಲಿ ಮಣಿಯುತ್ತವೆ ಎನ್ನುವ ಆತ್ಮವಿಶ್ವಾಸವನ್ನು ಟ್ರಂಪ್ ಹೊಂದಿದ್ದಾರೆ. ಭಾರತವು ಈ ಸುಂಕ ಹೇರಿಕೆಗೆ ತಕ್ಷಣದ ಪ್ರತಿಕ್ರಿಯೆನ್ನು ನೀಡಿಲ್ಲ. ಭಾರತದ ಆರ್ಥಿಕತೆಯ ಮೇಲೆ ಅಮೆರಿಕ ಹೂಡಿದ ಯುದ್ಧದ ಬಗ್ಗೆ ಪ್ರಧಾನಿ ಮೋದಿಯವರು ಯಾವ ಹೇಳಿಕೆಯನ್ನೂ ನೀಡಿಲ್ಲ. ಭಾರತದ ಆಟೋ ಉದ್ಯಮ, ಫಾರ್ಮಾಸ್ಯೂಟಿಕಲ್ ಮತ್ತು ಕೃಷಿ ಕ್ಷೇತ್ರವನ್ನು ಇದು ತೀವ್ರವಾಗಿ ಬಾಧಿಸಲಿರುವುದರಿಂದ, ಭಾರತ ಸ್ಪಷ್ಟ ನಿರ್ಧಾರವನ್ನು ತಳೆಯುವುದು ಅನಿವಾರ್ಯವಾಗಿದೆ. ಅಮೆರಿಕದ ಸುಂಕ ಹೇರಿಕೆಯ ವಿರುದ್ಧ ಸಣ್ಣ ಪುಟ್ಟ ದೇಶಗಳು ಒಂದಾಗಿ ನಿಂತು, ಸ್ವದೇಶಿ ಮಟ್ಟದಲ್ಲಿ ಆರ್ಥಿಕತೆಯನ್ನು ಪುನರ್ ನಿರ್ಮಿಸಲು ಮುಂದಾದರೆ ವಿಶ್ವದಲ್ಲಿ ಅಮೆರಿಕ ಒಂಟಿಯಾಗುತ್ತದೆ. ಅಮೆರಿಕದಿಂದ ಇತರ ದೇಶಗಳಿರುವುದಲ್ಲ, ಅಮೆರಿಕವು ಇತರ ದೇಶಗಳಿಂದ ಬೆಳೆದಿರುವುದು ಎನ್ನುವುದನ್ನು ಸ್ಪಷ್ಟಪಡಿಸಲು ಇದು ಸರಿಯಾದ ಸಮಯವಾಗಿದೆ. ಆದರೆ ಇದಕ್ಕಾಗಿ ಸಾಕಷ್ಟು ಬೆಲೆಯನ್ನು ಭಾರತದಂತಹ ದೇಶಗಳು ತೆರಬೇಕಾಗಬಹುದು. ಎರಡೂ ದೇಶಗಳು ಪರಸ್ಪರ ಸುಂಕಗಳನ್ನು ಹೇರುತ್ತಾ ಹೋದರೆೆ ದೇಶದ ಆರ್ಥಿಕತೆ 1930ರ ಕಾಲಕ್ಕೆ ಬಂದು ತಲುಪಬಹುದು. ಯಾವುದೇ ಯುದ್ಧಗಳು ನಡೆಯದೆಯೂ ಜಾಗತಿಕವಾಗಿ ದೇಶಗಳು ಭಾರೀ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಆದರೆ ಈ ಕಾರಣವನ್ನು ಮುಂದಿಟ್ಟುಕೊಂಡು ಅಮೆರಿಕವು ಇತರ ದೇಶಗಳ ಮೇಲೆ ಒತ್ತಡವನ್ನು ಹೇರುವುದಕ್ಕೆ ಅವಕಾಶ ನೀಡಬಾರದು. ಆರ್ಥಿಕ ತಜ್ಞರ ಪ್ರಕಾರ ಅಮೆರಿಕದ ಈ ತಕ್ಷಣದ ನಡೆಯಿಂದ ಸ್ವತಃ ಆ ದೇಶದಲ್ಲೇ ವಿಷಮ ಪರಿಸ್ಥಿತಿ ಸೃಷ್ಟಿಯಾಗಬಹುದು. ಈ ಬಗ್ಗೆ ಅಲ್ಲಿನ ಉದ್ಯಮಿಗಳಿಗೆ ಆತಂಕಗಳಿವೆ.
ಸುಂಕದವನ ಮುಂದೆ ಸುಖ ದುಃಖ ಹೇಳಿಕೊಳ್ಳುವುದು ವ್ಯರ್ಥ. ಸದ್ಯಕ್ಕಂತೂ ಟ್ರಂಪ್ ನಡೆಗೆ ಅಷ್ಟೇ ತೀವ್ರವಾದ ಉತ್ತರವನ್ನು ಇತರ ದೇಶಗಳು ನೀಡುವುದು ಅನಿವಾರ್ಯವಾಗಿದೆ. ಅಮೆರಿಕದ ಜೊತೆಗೆ ಹೊಂದಿಕೊಂಡು ನಡೆಯುವುದು ಎಂದರೆ, ನಮ್ಮ ದೇಶದ ಹಿತಾಸಕ್ತಿಗಳನ್ನು ಬಲಿಕೊಡುವುದು ಎಂದೇ ಅರ್ಥ. ಇತ್ತೀಚೆಗೆ ಉಕ್ರೇನ್ ದೇಶದ ಜೊತೆಗೆ ಅಮೆರಿಕ ನಡೆದುಕೊಂಡ ರೀತಿ ಮತ್ತು ಬಲವಂತವಾಗಿ ಆ ದೇಶದ ಕೈಯಲ್ಲಿ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದ ಅದರ ಉದ್ಧಟತನದಲ್ಲಿ ವಿಶ್ವಕ್ಕೆ ಬಹಳಷ್ಟು ಪಾಠಗಳಿವೆ. ಭಾರತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ತನ್ನ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾಗಳ ಸ್ಥಿತಿ ಏನಾಗಿದೆ ಎನ್ನುವುದರ ವಿವರಗಳನ್ನು ದೇಶಕ್ಕೆ ಇನ್ನಾದರೂ ಒದಗಿಸಬೇಕು. ಚೀನಾದಂತಹ ದೇಶಗಳು ಅಮೆರಿಕದ ಸವಾಲನ್ನು ಎದುರಿಸಲು ಶಕ್ತವಾಗಿವೆ ಮಾತ್ರವಲ್ಲ, ಸ್ವದೇಶಿ ಉದ್ದಿಮೆಗಳಿಗೆ ಹೂಡಿಕೆ ಮಾಡುವ ಮೂಲಕ ಅದು ತನ್ನತನವನ್ನು ಉಳಿಸಿಕೊಳ್ಳಲು ಸಮರ್ಥವಾಗಿವೆೆ. ರಾಮಮಂದಿರ, ವಕ್ಫ್ ಬಿಲ್, ಲವ್ ಜಿಹಾದ್ ಮೊದಲಾದವುಗಳ ಮೂಲಕ ಅಮೆರಿಕದ ಸುಂಕ ಯುದ್ಧವನ್ನು ಎದುರಿಸಲು ಭಾರತಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಕೇಂದ್ರ ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಸಾರ್ವಭೌಮ ಭಾರತದ ಹಿತಾಸಕ್ತಿಯನ್ನು ಅಮೆರಿಕಕ್ಕೆ ಬಲಿಕೊಡದೆ, ಅದಕ್ಕೆ ಪ್ರತ್ಯುತ್ತರ ನೀಡುವ ಧೈರ್ಯವನ್ನು ಸರಕಾರ ಪ್ರದರ್ಶಿಸಬೇಕು.