ವಕ್ಫ್ ಭೂಮಿ: ಬಾಣಲೆಯಿಂದ ಬೆಂಕಿಗೆ!

Update: 2025-04-04 09:30 IST
ವಕ್ಫ್ ಭೂಮಿ: ಬಾಣಲೆಯಿಂದ ಬೆಂಕಿಗೆ!

PC: PTI

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನೂರಾರು ವರ್ಷಗಳಿಂದ ದೇವರ ಹೆಸರಿನಲ್ಲಿ ಮುಸ್ಲಿಮ್ ದಾನಿಗಳು ಸಮುದಾಯದ ಅಭಿವೃದ್ಧಿಗಾಗಿ ದಾನ ಮಾಡುತ್ತಾ ಬಂದಿದ್ದ ವಕ್ಫ್ ಭೂಮಿ ಮೇಲೆ ಪರೋಕ್ಷ ಹಕ್ಕು ಸಾಧಿಸಲು ಸರಕಾರ ಯತ್ನಿಸುತ್ತಿದ್ದು, ವಕ್ಫ್ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಮಾಡುವ ಮೂಲಕ ಅದರಲ್ಲಿ ಭಾಗಶಃ ಯಶಸ್ವಿಯಾಗಿದೆ. ಹಾಗೆಂದು, ಈವರೆಗೆ ವಕ್ಫ್ ಭೂಮಿ ಪೂರ್ಣಪ್ರಮಾಣದಲ್ಲಿ ಸದುಪಯೋಗವಾಗುತ್ತಾ ಬಂದಿತ್ತೆ? ಎಂದು ಪ್ರಶ್ನಿಸಿದರೆ ಉತ್ತರ ನಿಸ್ಸಂಶಯವಾಗಿ ಇಲ್ಲ ಎಂದಾಗಿದೆ. ವಕ್ಫ್ ಮಂಡಳಿಯ ದೌರ್ಬಲ್ಯ ಮತ್ತು ವೈಫಲ್ಯಗಳಿಂದಾಗಿ ‘ವಕ್ಫ್ ಆಸ್ತಿಯೆಂದರೆ ಕೆಲವೇ ಉಳ್ಳವರ ಪಾಲಿಗೆ ಬೊಜ್ಜದ ಊಟ’ವಾಗಿತ್ತು. ವಕ್ಫ್ ಆಸ್ತಿಗಳ ಆದಾಯ ಸೋರಿಕೆಯಾಗದಂತೆ ಮಾಡಿ, ಅದರಿಂದ ಬರುವ ಆದಾಯವನ್ನು ಮುಸ್ಲಿಮ್ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ಬಲಪಡಿಸುವ ಅವಕಾಶ ಇದ್ದರೂ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದ ಪರಿಣಾಮವಾಗಿ ದೇಶದಲ್ಲಿ ಸಹಸ್ರಾರು ಎಕರೆ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ವಕ್ಫ್ ಬೋರ್ಡ್ ಮಾಲಕತ್ವದ 9.4 ಲಕ್ಷ ಎಕರೆ ಜಮೀನಿನಲ್ಲಿ, 8.7 ಲಕ್ಷ ಸೊತ್ತುಗಳಿವೆ ಮತ್ತು ಇವುಗಳ ಮಾರುಕಟ್ಟೆ ಬೆಲೆ 1.2 ಲಕ್ಷ ಕೋಟಿ ರೂಪಾಯಿಗಳು ಎನ್ನಲಾಗಿದೆ. ಆದರೆ ಇಂದಿಗೂ ವಕ್ಫ್ ಆಸ್ತಿಯ ಪೂರ್ಣ ಲಾಭ ಈ ಸಮುದಾಯದ ಬಡ ವರ್ಗಕ್ಕೆ ಸಿಕ್ಕಿಲ್ಲ. ಮಾಲಕತ್ವ ವಕ್ಫ್ ಬೋರ್ಡ್ ಕೈಯಲ್ಲಿದ್ದರೂ ಅಪಾರ ಭೂಮಿ ಕಂಡವರ ಪಾಲಾಗಿದೆ. ಭೂಸುಧಾರಣೆ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಅಪಾರ ಭೂಮಿ ವಕ್ಫ್ನಿಂದ ಕೈಜಾರಿದ್ದರೆ, ಸಾವಿರಾರು ಎಕರೆ ವಕ್ಫ್ ಭೂಮಿಯನ್ನು ಅಕ್ರಮವಾಗಿ ಕೆಲವೇ ಕೆಲವು ಖಾಸಗಿ ವ್ಯಕ್ತಿಗಳ ಕೈವಶದಲ್ಲಿವೆ. ಇದೇ ಸಂದರ್ಭದಲ್ಲಿ ಶತಮಾನಗಳ ಹಿಂದೆ ಮಾಡಿದ ಒಪ್ಪಂದದ ಆಧಾರದಲ್ಲಿ ಕೋಟ್ಯಂತರ ಬೆಲೆಬಾಳುವ ಜಮೀನುಗಳನ್ನು ಬೃಹತ್ ಉದ್ಯಮಿಗಳು ಅತಿ ಸಣ್ಣ ಬೆಲೆಗೆ ಅನುಭೋಗಿಸುತ್ತಾ ಇದ್ದಾರೆ. ಕರ್ನಾಟಕದಲ್ಲಿ ಮಾಣಿಪ್ಪಾಡಿ ವರದಿಯು, ವಕ್ಫ್ ಭೂಮಿಯ ಅಕ್ರಮ ಒತ್ತುವರಿಯಲ್ಲಿ ರಾಜಕಾರಣಿಗಳ ಪಾಲೆಷ್ಟು ಎನ್ನುವುದನ್ನು ಬಹಿರಂಗ ಪಡಿಸಿತ್ತು. ಈ ವರದಿ ಸಾಕಷ್ಟು ಚರ್ಚೆ, ಗದ್ದಲಗಳಿಗೂ ಕಾರಣವಾಗಿತ್ತು. ವಕ್ಫ್ ಮಂಡಳಿಯನ್ನು ಬಲಪಡಿಸಿ, ಉದ್ಯಮಿಗಳು ಮತ್ತು ರಾಜಕಾರಣಿಗಳಿಂದ ನಡೆದಿರುವ ಅಕ್ರಮ ಒತ್ತುವರಿಗಳಿಂದ ವಕ್ಫ್ ಭೂಮಿಯನ್ನು ಬಿಡಿಸಿ ಅದರ ಲಾಭವನ್ನು ಮುಸ್ಲಿಮ್ ಸಮುದಾಯದ ತಳಸ್ತರದ ಜನರಿಗೆ ತಲುಪಿಸುವ ಮಹತ್ತರ ಹೊಣೆಗಾರಿಕೆ ಸರಕಾರದ ಮೇಲಿತ್ತು. ದುರದೃಷ್ಟಕ್ಕೆ, ನೂತನವಾಗಿ ಅಂಗೀಕರಿಸಲ್ಪಟ್ಟ ವಕ್ಫ್ ತಿದ್ದುಪಡಿ ಮಸೂದೆಯು ಈ ವಕ್ಫ್ ಆಸ್ತಿಗಳನ್ನು ಇನ್ನಷ್ಟು ಕಬಳಿಸುವುದಕ್ಕೆ ಮಾತ್ರವಲ್ಲ, ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳಿಗೆ ಕಿರುಕುಳ ನೀಡುವುದಕ್ಕೆ ತನ್ನಕೊಡುಗೆಗಳನ್ನು ನೀಡಲಿದೆ. ಈ ಮೂಲಕ ದೇಶದ ವಕ್ಫ್ ಆಸ್ತಿಯ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ.

ಸರಕಾರ ದೇಶದ ಕಣ್ಣಿಗೆ ಮಣ್ಣೆರಚಿ ತಿದ್ದುಪಡಿ ಮಸೂದೆಯನ್ನು ಅಂಗೀರಿಸಿದೆ. ಆರಂಭದಲ್ಲಿ ದೇಶಾದ್ಯಂತ ವಕ್ಫ್ ಆಸ್ತಿಯ ಬಗ್ಗೆ, ಕಾನೂನುಗಳ ಬಗ್ಗೆ ವದಂತಿಗಳನ್ನು ಹರಡಿತು. ‘ಈ ದೇಶದ ರೈತರ ಸಾವಿರಾರು ಎಕರೆ ಭೂಮಿಯನ್ನು ವಕ್ಫ್ನ ಹೆಸರಿನಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ’ ‘ಯಾರದೋ ಆಸ್ತಿಯ ಮೇಲೆ ವಕ್ಫ್ ಹಕ್ಕು ಪ್ರತಿಪಾದಿಸಿದರೆ ಇದನ್ನು ಕೋರ್ಟ್ನಲ್ಲಿ ಪ್ರಶ್ನಿಸುವಂತೆಯೇ ಇಲ್ಲ’ ‘ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಆಕ್ರಮಿಸಲಾಗಿದೆ’ ಎಂಬಿತ್ಯಾದಿ ಸಾಂಕ್ರಾಮಿಕ ವೈರಸ್ಗಳನ್ನು ಉತ್ಪಾದಿಸಿ ಸರಕಾರ ಹರಿಯಬಿಟ್ಟಿತು. ರಾಜ್ಯದಲ್ಲಂತೂ ರೈತ ಆತ್ಮಹತ್ಯೆಕೊಂಡರೆ ಅದಕ್ಕೆ ಕಾರಣ ‘ವಕ್ಫ್ ಭೂಮಿ’ ಎಂದು ಬಿಜೆಪಿಯ ಕೆಲವು ನಾಯಕರು ಗುಲ್ಲೆಬ್ಬಿಸತೊಡಗಿದರು. ವಕ್ಫ್ ಬೋರ್ಡ್ನ ಮಾಲಕತ್ವದಲ್ಲಿರುವ ಭೂಮಿಯ ವಿಸ್ತೀರ್ಣ ಪಾಕಿಸ್ತಾನಕ್ಕಿಂತ ಹೆಚ್ಚು ಎಂದು ಕೆಲವು ಸಂಘಪರಿವಾರದ ನಾಯಕರು ಸುಳ್ಳನ್ನು ಹರಿಬಿಟ್ಟರು. ಇದೇ ಸಂದರ್ಭದಲ್ಲಿ, ವಕ್ಫ್ ಬೋರ್ಡ್ಗಿಂತ ಹಲವು ಪಟ್ಟು ಹೆಚ್ಚು ಭೂಮಿ ಮತ್ತು ಸಂಪತ್ತುಗಳು ದೇವಸ್ಥಾನಗಳ ಕೈವಶವಿರುವುದನ್ನು ಮುಚ್ಚಿಟ್ಟರು. ವಕ್ಫ್ ಆಸ್ತಿಯ ಬಗ್ಗೆ ಉತ್ಪ್ರೇಕ್ಷೆಗಳನ್ನು ಹರಡುತ್ತಾ, ತಿದ್ದುಪಡಿ ಮಸೂದೆ ಅಂಗೀಕರಿಸುವುದು ಯಾಕೆ ಅನಿವಾರ್ಯ ಎನ್ನುವುದನ್ನು ಪ್ರತಿಪಾದಿಸತೊಡಗಿದರು. ವಿಷಾದನೀಯ ಸಂಗತಿಯೆಂದರೆ, ಮಂಡನೆಯ ಸಂದರ್ಭದಲ್ಲಿ ‘‘ತಿದ್ದು ಪಡಿ ಇಲ್ಲದಿರುತ್ತಿದ್ದಲ್ಲಿ ಸಂಸತ್ ಭವನ ಕೂಡ ವಕ್ಫ್ ಆಸ್ತಿಯಾಗಿರುತ್ತಿತ್ತು’’ ಎಂಬ ಸುಳ್ಳು ಮಾಹಿತಿಯನ್ನು ಸಚಿವ ಕಿರಣ್ ರಿಜಿಜು ಸಂಸತ್ನ ಮುಂದಿಟ್ಟರು. ಆ ಹೇಳಿಕೆಯನ್ನು ನಿರಾಕರಿಸುತ್ತಾ ವಕ್ಫ್ ಮಂಡಳಿ ‘‘ನನ್ನಲ್ಲಿ ಅಂತಹ ಯಾವುದೇ ಮಾಹಿತಿಯಿಲ್ಲ’’ ಎಂದು ಈಗಾಗಲೇ ಸ್ಪಷ್ಟೀಕರಣ ನೀಡಿದೆ.

ಮುಸ್ಲಿಮರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ವಕ್ಫ್ ಭೂಮಿಯ ಲಾಭವನ್ನು ತಲುಪಿಸುವುದೆಂದರೆ ಏನು? ಆ ಭೂಮಿಯ ಮೇಲೆ ವಕ್ಫ್ ಮಂಡಳಿ ಮತ್ತು ಟ್ರಿಬ್ಯೂನಲ್ನ ಅಧಿಕಾರವನ್ನು ದುರ್ಬಲಗೊಳಿಸುವುದರಿಂದ ಅದು ಹೇಗೆ ಸಾಧ್ಯವಾಗುತ್ತದೆ? ಚುನಾವಣೆಯ ಮೂಲಕ ಆಯ್ಕೆಯಾಗುತ್ತಿದ್ದ ಮಂಡಳಿಯ ಸದಸ್ಯರನ್ನು ನಾಮನಿರ್ದೇಶನದ ಮೂಲಕ ತುಂಬಲು ಹೊರಟಿರುವ ಸರಕಾರ, ಆ ಮೂಲಕ ಮಂಡಳಿಯ ನಿಯಂತ್ರಣವನ್ನು ಹಂತಹಂತವಾಗಿ ತನ್ನ ಕೈಗೆ ತೆಗೆದುಕೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ಕೈವಶ ಮಾಡಿಕೊಂಡು, ತನ್ನ ಉದ್ಯಮಿ ಮಿತ್ರರಿಗೆ ಹಂಚುವ, ರಿಯಲ್ ಎಸ್ಟೇಟ್ಗೆ ಬಳಸುವ ದುರುದ್ದೇಶವನ್ನು ಸರಕಾರ ಹೊಂದಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ವಕ್ಫ್ ಭೂಮಿಯ ಒತ್ತುವರಿಯಲ್ಲಿ, ಅಕ್ರಮಗಳಲ್ಲಿ ಪಾಲುದಾರರಾಗಿರುವ ಬೃಹತ್ ಉದ್ಯಮಿಗಳು ಕೂಡ ಈ ಮಸೂದೆಯ ಅಂಗೀಕಾರಕ್ಕೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ತನ್ನ ದುರುದ್ದೇಶವನ್ನು ಸಾಧಿಸುವುದಕ್ಕಾಗಿ ತಿದ್ದುಪಡಿ ಮಸೂದೆಯ ಮೂಲಕ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನೇ ಕಿತ್ತುಕೊಳ್ಳಲು ಸರಕಾರ ಮುಂದಾಗಿದೆ. ಯಾರು ಮುಸ್ಲಿಮರು? ಯಾರು ವಕ್ಫ್ ದಾನಗಳನ್ನು ನೀಡಲು ಅರ್ಹರು ಎನ್ನುವುದನ್ನು ಸರಕಾರವೇ ನಿರ್ಧರಿಸಲು ಮುಂದಾಗಿದೆ. ತನ್ನ ಭೂಮಿಯನ್ನು ಒಬ್ಬ ವಕ್ಫ್ ಮಾಡಬೇಕಾದರೆ ಆತ ‘ನಾನು ಕಳೆದ ಐದುವರ್ಷಗಳಿಂದ ಮುಸ್ಲಿಮ್ ಆಚರಣೆಗಳೊಂದಿಗೆ ಬದುಕುತ್ತಿದ್ದೇನೆ’’ ಎಂದು ಪ್ರಮಾಣಪತ್ರ ಸಲ್ಲಿಸಬೇಕು. ಈ ಪ್ರಮಾಣಪತ್ರವನ್ನು ಆತ ಎಲ್ಲಿಂದ ಪಡೆದುಕೊಳ್ಳಬೇಕು? ಈ ಪ್ರಮಾಣ ಪತ್ರಗಳಿಗೆ ಮಾನದಂಡಗಳೇನು ಎನ್ನುವ ಅಂಶಗಳು ಬಗ್ಗೆ ಸರಕಾರದ ಬಳಿ ಸ್ಪಷ್ಟತೆಯಿಲ್ಲ. ವಕ್ಫ್ ಮಾಡಲು ಮುಸ್ಲಿಮನಾಗಿ ಐದು ವರ್ಷ ಆಗಿರುವುದು ಕಡ್ಡಾಯ ಎಂದು ಹೇಳುವ ಅದೇ ಸರಕಾರ, ಇನ್ನೊಂದೆಡೆ ಅದೇ ವಕ್ಫ್ ಮಂಡಳಿಗೆ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರರನ್ನು ನೇಮಿಸಲು ಹೊರಟಿದೆ. ಮುಸ್ಲಿಮನೊಬ್ಬ ವಕ್ಫ್ ಮಾಡಲು ಅರ್ಹತೆಯನ್ನು ಸರಕಾರ ನಿಗದಿ ಪಡಿಸಲು ಮುಂದಾಗಿರುವುದು ಧಾರ್ಮಿಕ ಹಸ್ತಕ್ಷೇಪ ಎನ್ನುವುದು ಸ್ಪಷ್ಟ. ಭವಿಷ್ಯದಲ್ಲಿ ವಕ್ಫ್ ಭೂಮಿಯನ್ನು ಒತ್ತುವರಿ ಮಾಡಿದವರನ್ನು ಪ್ರಶ್ನಿಸುವುದು ಅಪರಾಧವಾಗಲಿದೆ ಮಾತ್ರವಲ್ಲ, ಯಾವುದು ವಕ್ಫ್ ಭೂಮಿ, ಯಾವುದು ಸರಕಾರಿ ಭೂಮಿ ಎನ್ನುವ ಚರ್ಚೆಯನ್ನು ಹುಟ್ಟಿಸಿ ದೊಂಬಿ, ಗಲಭೆಗಳನ್ನು ಎಬ್ಬಿಸಲು ಸರಕಾರ ಹೊರಟಿದೆ. ವಕ್ಫ್ ನ್ಯಾಯ ಮಂಡಳಿಯ ಅಧಿಕಾರವನ್ನು ಕಿತ್ತುಕೊಂಡು, ಅದರ ತಲೆಯ ಮೇಲೆ ಜಿಲ್ಲಾಧಿಕಾರಿಯನ್ನು ಕೂರಿಸಲಾಗಿದೆ.

ಸಮಾಜವಾದಿ ಹಿನ್ನೆಲೆಯಿರುವ ನಿತೀಶ್ ಕುಮಾರ್ರಂತಹ ನಾಯಕರು ಈ ಮಸೂದೆ ಅಂಗೀಕಾರದಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿರುವುದು ಅತ್ಯಂತ ವಿಷಾದನೀಯವಾಗಿದೆ. ರಾಜ್ಯಸಭೆಯಲ್ಲಿ ದೇವೇಗೌಡರಂತೂ ತಾನು ಈ ಹಿಂದೆ ಏರಿದ್ದ ಸ್ಥಾನವನ್ನು ಮರೆತು, ಬಿಜೆಪಿಯ ಕೀಲಿ ಗೊಂಬೆಯಂತೆ ಮಾತನಾಡಿದರು. ಕಾಂಗ್ರೆಸ್ನ ಕೆಲವು ನಾಯಕರು ಸಂಸತ್ನಲ್ಲಿ ಸದನದಲ್ಲಿ ಮಸೂದೆಯ ವಿರುದ್ಧ ಧ್ವನಿಯೆತ್ತಿದ್ದಾರಾದರೂ, ಸ್ವತಃ ಸಂಸದೆ ಪ್ರಿಯಾಂಕಾಗಾಂಧಿಯ ಅನುಪಸ್ಥಿತಿ ಕಾಂಗ್ರೆಸ್ನ ನೈತಿಕ ಶಕ್ತಿಯನ್ನು ಸಂಪೂರ್ಣ ಉಡುಗಿಸಿತ್ತು. ಕಾಂಗ್ರೆಸ್ನ ವಿಪ್ನ್ನು ಪ್ರಿಯಾಂಕಾಗಾಂಧಿಯೇ ಉಲ್ಲಂಘಿಸಿ, ಇತರ ಸಂಸದರಿಗೆ ಮಾದರಿಯಾದರು. ಮುಸ್ಲಿಮರ ಪೂರ್ಣ ಬೆಂಬಲದೊಂದಿಗೆ ವಯನಾಡ್ನಿಂದ ಸಂಸತ್ಗೆ ಪ್ರವೇಶಿಸಿದ ಪ್ರಿಯಾಂಕಾಗಾಂಧಿ ಈ ಅನುಪಸ್ಥಿತಿಗೆ ಭವಿಷ್ಯದಲ್ಲಿ ಭಾರೀ ಬೆಲೆ ತೆರುವ ಸಾಧ್ಯತೆಗಳಿವೆ. ರಾಹುಲ್ಗಾಂಧಿ ಕೂಡ ಚರ್ಚೆಯಲ್ಲಿ ಭಾಗವಹಿಸದೇ ಇರುವುದು, ಮಸೂದೆಯ ಕುರಿತ ಅವರ ಅಸ್ಪಷ್ಟ ನಿಲುವನ್ನು ಎತ್ತಿ ಹಿಡಿದಿತ್ತು. ಉದಾತ್ತ ಆಶಯಗಳನ್ನಿಟ್ಟುಕೊಂಡು ದೇವರ ಹೆಸರಿನಲ್ಲಿ ಸಮಾಜಕ್ಕೆ ಅರ್ಪಿಸಿದ ಭೂಮಿಯನ್ನು ಕಬಳಿಸಲು ಹೊಂಚು ಹಾಕಿರುವ ‘ಭೂ ಮಾಫಿಯಾ’ಗಳ ಪರವಾಗಿ ಅಂಗೀಕಾರಗೊಂಡಿರುವ ಈ ಮಸೂದೆ, ಮುಸ್ಲಿಮ್ ಸಮುದಾಯದ ಜನರ ಧಾರ್ಮಿಕ, ಸಾಮಾಜಿಕ ಹಕ್ಕುಗಳ ಮೇಲೆ ಮತ್ತು ಸಂವಿಧಾನದ ಆಶಯಗಳ ಮೇಲೆ ಏಕಕಾಲದಲ್ಲಿ ನಡೆದ ದಾಳಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News