ಬೆಲೆ ಕಳೆದುಕೊಂಡ ಬೆಲೆಯೇರಿಕೆ ವಿರುದ್ಧದ ಬಿಜೆಪಿ ಹೋರಾಟ

Update: 2025-04-03 08:30 IST
ಬೆಲೆ ಕಳೆದುಕೊಂಡ ಬೆಲೆಯೇರಿಕೆ ವಿರುದ್ಧದ ಬಿಜೆಪಿ ಹೋರಾಟ

PC:screengrab/x.com/BJP4Karnataka

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೊದಲ ಬಾರಿಗೆ ವಿರೋಧ ಪಕ್ಷವಾಗಿ ಬಿಜೆಪಿಯು ಜನಪರವಾದ ವಿಷಯವನ್ನು ಎತ್ತಿಕೊಂಡು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗಿಳಿದಿದೆ. ನೂತನ ಸರಕಾರ ರಚನೆಯಾದ ದಿನದಿಂದ ಬಿಜೆಪಿ ಸೂಕ್ತ ನಾಯಕತ್ವದ ಕೊರತೆಯಿಂದ ವಿರೋಧ ಪಕ್ಷವಾಗಿ ವಿಫಲವಾಗುತ್ತಲೇ ಬಂದಿತ್ತು. ಬಿಜೆಪಿಯೊಳಗೇ ಯತ್ನಾಳ್ ನೇತೃತ್ವದ ಬಣ, ಮುಸ್ಲಿಮ್ ವಿರೋಧಿ ಪ್ರತಿಭಟನೆಗಳ ಮೂಲಕ ಸುದ್ದಿಯಲ್ಲಿರಲು ಪ್ರಯತ್ನಿಸಿತು. ಅಭಿವೃದ್ಧಿ ರಾಜಕಾರಣದ ನಿರೀಕ್ಷಿಯಲ್ಲಿದ್ದ ಜನರ ನಡುವೆ ದ್ವೇಷ ರಾಜಕಾರಣವನ್ನು ಬಿತ್ತಲು ಹೊರಟು, ಬಿಜೆಪಿಯ ಯತ್ನಾಳ್ ಬಣ ತೀವ್ರ ಮುಖಭಂಗ ಅನುಭವಿಸಿತ್ತು. ವಕ್ಫ್‌ನ ಹೆಸರಿನಲ್ಲಿ ಅದು ನಡೆಸಿದ ಪ್ರತಿಭಟನೆ ಬಿಜೆಪಿಗೆ ಯಾವ ರೀತಿಯಲ್ಲೂ ಲಾಭವನ್ನು ತಂದುಕೊಡಲಿಲ್ಲ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಮುಂದೆ ಯತ್ನಾಳ್ ಬಣದ ದ್ವೇಷ ರಾಜಕಾರಣ ಮಕಾಡೆ ಮಲಗಿತ್ತು. ಇದೀಗ ಬಿಜೆಪಿಯಲ್ಲಿ ಯತ್ನಾಳ್ ಉಚ್ಚಾಟನೆ ಬೆನ್ನಿಗೇ, ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯು ಜನಪರ ವಿಷಯಗಳನ್ನು ಮುಂದಿಟ್ಟು, ರಾಜ್ಯ ಸರಕಾರದ ವಿರುದ್ಧ ಹೋರಾಟವನ್ನು ರೂಪಿಸಲು ಮುಂದಾಗಿದೆ. ಪದೇ ಪದೇ ಬೆಲೆಯೇರಿಕೆಯಾಗುತ್ತಿರುವುದನ್ನು ಖಂಡಿಸಿ, ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ, ಕೊನೆಗೂ ಈ ರಾಜ್ಯದಲ್ಲಿ ವಿರೋಧ ಪಕ್ಷವೆನ್ನುವುದು ಜೀವಂತವಿದೆ ಎಂದು ಜನಸಾಮಾನ್ಯರು ಸಮಾಧಾನ ಪಡುವಂತಾಗಿದೆ. ಬಿಜೆಪಿಯು ಪ್ರತಿಭಟನೆಗಾಗಿ ಕೈಗೆತ್ತಿಕೊಂಡಿರುವ ವಿಷಯದಲ್ಲಿ ಎಷ್ಟು ಪ್ರಾಮಾಣಿಕವಾಗಿದೆ ಎನ್ನುವುದನ್ನು ಬದಿಗಿಟ್ಟು, ಕನಿಷ್ಠ ಈಗಲಾದರೂ ಜನರ ಮೂಲಭೂತ ಅಗತ್ಯಗಳು, ಬೇಡಿಕೆಗಳು ಏನು ಎನ್ನುವುದು ಬಿಜೆಪಿಯ ಅರಿವಿಗೆ ಬಂತಲ್ಲ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

ರಾಜ್ಯದಲ್ಲಿ ನೀರು, ವಿದ್ಯುತ್, ಹಾಲು, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಬಿಜೆಪಿ ನಾಯಕರು ಅಹೋರಾತ್ರಿ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಿರುವುದು ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದರ ವಿರುದ್ಧ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಳ್ಳುವುದಾಗಿಯೂ ಹೇಳಿದ್ದಾರೆ. ಒಂದೆಡೆ ಗ್ಯಾರಂಟಿ ಯೋಜನೆಗಳಿಂದ ಸರಕಾರ ದಿವಾಳಿಯಾಗಿದೆ ಎಂದು ಹೇಳುತ್ತಿರುವ ಬಿಜೆಪಿ, ಅದನ್ನು ತುಂಬಿಸುವುದಕ್ಕಾಗಿ ಸರಕಾರ ಬೆಲೆಯೇರಿಕೆಗೆ ಇಳಿದಿದೆ ಎಂದು ಆರೋಪಿಸುತ್ತಿದೆ. ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎನ್ನುವ ತಕರಾರನ್ನೂ ಬಿಜೆಪಿ ತೆಗೆದಿದೆ. ‘‘ಹಾಲಿನ ದರ ಏರಿಕೆ ಮಾಡಿದ್ದಾಯಿತು. ಕಸ ಸಂಗ್ರಹ ಮೇಲೆ ಸೆಸ್ ಹಾಕಿದ್ದಾಯಿತು. ಇದೀಗ ಡೀಸೆಲ್ ಬೆಲೆ ಲೀಟರ್‌ಗೆ 2 ರೂ. ಏರಿಕೆ ಮಾಡಿದೆ’’ ಎಂದು ಪ್ರತಿ ಪಕ್ಷ ನಾಯಕ ಅಶೋಕ್ ಆರೋಪ ಮಾಡಿದ್ದಾರೆ. ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಹಾಲು ಮತ್ತು ಡೀಸೆಲ್ ಬೆಲೆಯೇರಿಕೆ, ವಿದ್ಯುತ್ ದರ ಹೆಚ್ಚಳ ಇವೆಲ್ಲವೂ ಶ್ರೀಸಾಮಾನ್ಯರಿಗೆ ತಾಕಿದ ಬಿಸಿಯೇ ಆಗಿದೆ. ಆದರೆ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಗ್ಯಾರಂಟಿ ಯೋಜನೆಗಳು ಜನರ ಬಾಯಿಯನ್ನು ಮುಚ್ಚಿಸಿದೆ. ಮುಖ್ಯವಾಗಿ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಸರಕಾರದ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ವಿರೋಧ ಪಕ್ಷದ ಆರೋಪ, ಆಕ್ರೋಶಗಳ ಜೊತೆಗೆ ಜನಸಾಮಾನ್ಯರು ಗುರುತಿಸಿಕೊಳ್ಳದೇ ಇರುವುದು ಬಿಜೆಪಿ ಹೋರಾಟಕ್ಕೆ ಭಾರೀ ಹಿನ್ನಡೆಯಾಗಿದೆ.

ಹಾಲಿನ ಬೆಲೆಯೇರಿಕೆಗೆ ಸರಕಾರ ‘ರೈತರನ್ನು’ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ. ಏರಿಕೆ ಮಾಡಿದ ಹಣವನ್ನು ನಾವು ರೈತರಿಗೆ ಪಾವತಿ ಮಾಡುತ್ತಿದ್ದೇವೆ. ಮೇವು ಸೇರಿದಂತೆ ದನಗಳನ್ನು ಸಾಕುವ ವೆಚ್ಚ ಹೆಚ್ಚಳವಾಗಿರುವುದರಿಂದ, ಹಾಲಿನ ದರ ಏರಿಸುವುದು ಅನಿವಾರ್ಯ. ರೈತರಿಗೆ ಹಣ ಪಾವತಿ ಮಾಡುವುದು ಬಿಜೆಪಿಗೆ ಇಷ್ಟವಿಲ್ಲ. ಬಿಜೆಪಿ ರೈತರ ವಿರೋಧಿ ಎಂದು ಕಾಂಗ್ರೆಸ್ ಸರಕಾರ ಆರೋಪಿಸಿ, ಬಿಜೆಪಿಯ ಪ್ರತಿಭಟನೆಯನ್ನು ಚಿವುಟಿ ಹಾಕಲು ಯತ್ನಿಸುತ್ತಿದೆ. ಕಾಂಗ್ರೆಸ್‌ನ ಮಾತುಗಳನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ. ಹೈನೋದ್ಯಮದ ವೆಚ್ಚ ಏರಲು ಕೇವಲ ಮೇವಿನ ಬೆಲೆಯೇರಿಕೆಯಷ್ಟೇ ಕಾರಣವಲ್ಲ. ರೈತರ ಮೇಲೆ ‘ಜಾನುವಾರು ಮಾರಾಟ ನಿಷೇಧ ಕಾಯ್ದೆ’ಯನ್ನು ಹೇರಿದ ದಿನದಿಂದ, ಗೋಸಾಕಣೆಯ ವೆಚ್ಚ ಇದ್ದಕ್ಕಿದ್ದಂತೇಯೇ ದುಬಾರಿಯಾಯಿತು. ಅನುಪಯುಕ್ತ ದನಗಳನ್ನು ಮೇವು ಹಾಕಿ ಸಾಕುವ ಹೊರೆ ರೈತರ ಹೆಗಲ ಮೇಲೆ ಬಿತ್ತು. ತಾವೇ ಸಾಕಿದ ಗೋವುಗಳನ್ನು ಮಾರಾಟ ಮಾಡುವ ಅಧಿಕಾರ ರೈತರಿಂದ ಕಿತ್ತುಕೊಳ್ಳಲಾಯಿತು. ಬೆಲೆಬಾಳುವ ಅನುಪಯುಕ್ತ ಹಸುಗಳನ್ನು ಉಚಿತವಾಗಿ ಗೋಶಾಲೆಗಳಿಗೆ ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಈ ಹಸುಗಳನ್ನು ಮಾರಿದ್ದೇ ಆದರೆ ಅದರಿಂದ ರೈತರಿಗೆ ಬಹಳಷ್ಟು ಲಾಭಗಳಿದ್ದವು. ಅಷ್ಟೇ ಅಲ್ಲ, ಈ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿ ಸರಕಾರ ಅನಗತ್ಯ ಅನುದಾನಗಳನ್ನು ಗೋಶಾಲೆಗಳಿಗೆ ಬಿಡುಗಡೆ ಮಾಡುತ್ತಿದೆ. ನಿಜಕ್ಕೂ ಈ ಅನುದಾನ ರೈತರಿಗೆ ಸೇರಬೇಕಾದದ್ದು. ಅಧಿಕಾರಕ್ಕೆ ಬಂದಾಕ್ಷಣ ಈ ಕಾಯ್ದೆಯನ್ನು ಹಿಂದೆಗೆಯುವ ಭರವಸೆಯನ್ನು ಕಾಂಗ್ರೆಸ್ ಸರಕಾರ ನೀಡಿತ್ತು. ಈ ಕಾಯ್ದೆ ಹಿಂದೆಗೆದು ರೈತರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕನ್ನು ಮರಳಿಸುವುದಲ್ಲದೆ, ಗೋಶಾಲೆಗಳಿಗೆ ನೀಡುವ ಅನುದಾನವನ್ನು ಈ ರೈತರಿಗೆ ನೀಡಿದ್ದೇ ಆದರೆ ಸಾಕಣೆಯ ವೆಚ್ಚದಲ್ಲಿ ಇಳಿಕೆಯಾಗುತ್ತದೆ. ಇದೇ ಸಂದರ್ಭದಲ್ಲಿ, ಈ ಕಾಯ್ದೆಯನ್ನು ಜಾರಿಗೆ ತಂದಿರುವುದು ಬಿಜೆಪಿ ಸರಕಾರ. ಹಾಲಿನ ಬೆಲೆಯೇರಿಕೆಯ ಬಗ್ಗೆ ಹುಯಿಲೆಬ್ಬಿಸುವ ಬಿಜೆಪಿ ನಾಯಕರು, ಈ ಬೆಲೆಯೇರಿಕೆಯಲ್ಲಿ ತನ್ನ ಪಾತ್ರ ಎಷ್ಟು ಎನ್ನುವುದರ ಬಗ್ಗೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ತೆರಿಗೆ ಹೆಚ್ಚಳದ ಕಾರಣದಿಂದಾಗಿ ರಾಜ್ಯದಲ್ಲಿ ಡೀಸೆಲ್ ಬೆಲೆಯೇರಿಕೆಯಾಗಿದೆ. ಆದರೆ, ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಜನರಿಗೆ ಬಗೆದ ದ್ರೋಹದ ಬಗ್ಗೆ ಯಾಕೆ ಬಿಜೆಪಿ ನಾಯಕರು ಮೌನವಾಗಿದ್ದರು ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳುತ್ತಿದೆ. ಅಂತರ್‌ರಾಷ್ಟ್ರೀಯ ಕಚ್ಚಾ ತೈಲದ ಬೆಲೆಗೆ ಅನುಸಾರವಾಗಿ ಏರಿಕೆ-ಇಳಿಕೆಯಾಗುತ್ತದೆ ಎಂದ ಸರಕಾರ, ಬಳಿಕ ಅಂತರ್‌ರಾಷ್ಟ್ರೀಯ ಬೆಲೆ ಇಳಿಕೆಯಾದಾಗ ಬೆಲೆ ಇಳಿಸಲು ಮುಂದಾಗಲೇ ಇಲ್ಲ. ಕೇಂದ್ರದ ಈ ದ್ವಂದ್ವ ನಿಲುವಿನ ಬಗ್ಗೆ ಬಿಜೆಪಿ ನಾಯಕರ ಮೌನವನ್ನೇ ಅವರಿಗೆ ತಿರುಗುಬಾಣವಾಗಿ ರಾಜ್ಯ ಸರಕಾರ ಬಳಸುತ್ತಿದೆ. ಆರೋಗ್ಯ ವಿಮೆಯನ್ನೂ ಬಿಡದೆ ಜನರ ಮೂಲಭೂತ ಅಗತ್ಯಗಳ ಮೇಲೆಲ್ಲ ಜಿಎಸ್‌ಟಿಯನ್ನು ಹೇರುತ್ತಾ, ಬದುಕನ್ನು ದುಬಾರಿ ಮಾಡಿದ ಕೇಂದ್ರ ಸರಕಾರದ ನೀತಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಾ, ರಾಜ್ಯ ಸರಕಾರದ ಬೆಲೆಯೇರಿಕೆ ನೀತಿಯ ವಿರುದ್ಧ ಹೋರಾಟ ನಡೆಸಿದರೆ ಅದು ಯಶಸ್ವಿಯಾಗಬಹುದೆ? ಇಷ್ಟಕ್ಕೂ ಬೆಲೆಯೇರಿಕೆಯ ನಡುವೆಯೂ ಜನಸಾಮಾನ್ಯರಿಗಾಗಿ ಕಾಂಗ್ರೆಸ್ ಸರಕಾರ ನೀಡುತ್ತಿರುವ ಕೊಡುಗೆ ಮಧ್ಯಮವರ್ಗದ ಅದರಲ್ಲೂ ಮಹಿಳಾ ವರ್ಗದ ಬದುಕಿನ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ. ಗ್ಯಾರಂಟಿ ಯೋಜನೆಗಳಿಂದ ಸರಕಾರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನುವುದು ನಿಜ. ಆದರೆ, ಬಿಜೆಪಿ ಅಧಿಕಾರಾವಧಿಯಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ನೀಡಿರಲಿಲ್ಲ. ಆದರೂ, ಸರಕಾರ ದಿವಾಳಿ ಸ್ಥಿತಿಯಲ್ಲೇ ಇತ್ತು. ತಮ್ಮ ಸರಕಾರದ ಅವಧಿಯಲ್ಲಿ ಬೆಲೆಯೇರಿಕೆಯಾಗಿರಲೇ ಇಲ್ಲ ಎಂದು ಬಿಜೆಪಿ ನಾಯಕರು ಎದೆ ಮುಟ್ಟಿ ಹೇಳಲು ಸಿದ್ಧರಿದ್ದಾರೆಯೆ?

ಜನಸಾಮಾನ್ಯರ ಪರವಾಗಿ ಹೋರಾಟ ಮಾಡಿದಂತೆ ನಟಿಸುತ್ತಿರುವ ಬಿಜೆಪಿಯ ಮುಖಂಡರೇ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸರಕಾರದ ಮೇಲೆ ಒತ್ತಡಗಳನ್ನು ಹಾಕುತ್ತಿರುವುದು ಅವರ ಹೋರಾಟದ ಪ್ರಾಮಾಣಿಕತೆಯನ್ನು ಸಂಶಯಿಸುವಂತೆ ಮಾಡಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲಿನ ಹಣಕ್ಕಾಗಿ ಕೇಂದ್ರದಲ್ಲಿ ಧ್ವನಿಯೆತ್ತುವ ಸಂದರ್ಭದಲ್ಲಿ ಬಿಜೆಪಿ ಸಂಸದರು ಯಾಕೆ ಮೌನವಾಗಿದ್ದಾರೆ ಎನ್ನುವ ಪ್ರಶ್ನೆಗೂ ಉತ್ತರ ನೀಡುವುದು ಅಗತ್ಯವಾಗಿದೆ. ಕ್ಷೇತ್ರ ಮರು ವಿಂಗಡಣೆಯಿಂದಾಗಿ ರಾಜ್ಯದ ರಾಜಕೀಯ ಪ್ರಾತಿನಿಧ್ಯ ಇಳಿಮುಖವಾಗಲಿದೆ ಎಂಬ ಆತಂಕಗಳಿಗೆ ಬಿಜೆಪಿ ನಾಯಕರು ಸ್ಪಂದಿಸಬೇಕಾಗಿದೆ. ಆದರೆ ಈ ಬಗ್ಗೆ ಯಾಕೆ ಬಿಜೆಪಿ ನಾಯಕರು ಮೌನವಾಗಿದ್ದಾರೆ? ಈ ಮೌನಕ್ಕೆ ರಾಜ್ಯದ ಬಿಜೆಪಿ ನಾಯಕರು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಬೆಲೆಯೇರಿಕೆಯ ವಿರುದ್ಧದ ಬಿಜೆಪಿ ಹೋರಾಟ ಬೆಲೆಕಳೆದುಕೊಳ್ಳುವುದಕ್ಕೆ ಈ ದ್ವಂದ್ವ ನೀತಿಯೇ ಮುಖ್ಯ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News