ಜನಕಲ್ಯಾಣೋತ್ಸವ ಯಶಸ್ಸು: ಜೆಡಿಎಸ್ ಗಾಯಗಳಿಗೆ ಬರೆ

Update: 2024-12-07 05:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಪಚುನಾವಣೆಯ ಗೆಲುವನ್ನು ಕಾಂಗ್ರೆಸ್ ಪಕ್ಷ ಅದ್ದೂರಿಯಾಗಿ ಆಚರಿಸಿಕೊಂಡಿದೆ. ಉಪಚುನಾವಣೆಯ ಫಲಿತಾಂಶದ ಬಳಿಕವಾದರೂ, ಕಾಂಗ್ರೆಸ್‌ನೊಳಗಿನ ಬಿರುಕು ಬಹಿರಂಗವಾಗಿ ಮಾಧ್ಯಮಗಳಿಗೆ ಆಹಾರವಾಗುತ್ತದೆ ಎಂದು ಕಾದುಕೊಂಡಿದ್ದ ಬಿಜೆಪಿ ವರಿಷ್ಠರಿಗೆ ಜನಕಲ್ಯಾಣೋತ್ಸವದ ಯಾಶಸ್ಸು ಭಾರೀ ನಿರಾಶೆಯನ್ನು ತಂದಿದೆ. ರಾಜ್ಯದಲ್ಲಿ ಬಿಜೆಪಿ ಒಡೆದ ಮನೆಯಾಗಿ ಸುದ್ದಿಯಲ್ಲಿರುವ ಹೊತ್ತಿನಲ್ಲಿ, ಬೃಹತ್ ಜನಕಲ್ಯಾಣೋತ್ಸವವನ್ನು ಹಮ್ಮಿಕೊಂಡು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿರುವುದು ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳ ಗಾಯಗಳಿಗೆ ಬರೆ ಎಳೆದಂತಾಗಿದೆ. ಉಪಚುನಾವಣೆಯ ಗೆಲುವಿನಿಂದ ನಾವು ಮೈಮರೆತು ಕುಳಿತಿಲ್ಲ ಎನ್ನುವುದನ್ನು ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ ಸ್ಪಷ್ಟಪಡಿಸಿದೆ ಮಾತ್ರವಲ್ಲ, ಪಕ್ಷವನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಪಡಿಸಲು ಪೂರಕವಾಗಿ ಬಳಸಿಕೊಂಡಿದೆ. ಇಡೀ ಜನಕಲ್ಯಾಣೋತ್ಸವ ಜೆಡಿಎಸ್‌ನ್ನೇ ಗುರಿಯಾಗಿಸಿಕೊಂಡಿರುವುದು ಇನ್ನೊಂದು ವಿಶೇಷ. ಜೆಡಿಎಸ್‌ನ ಕಾರಣದಿಂದ ಬಿಜೆಪಿಯ ಕಡೆಗೆ ವಾಲುತ್ತಿರುವ ಒಕ್ಕಲಿಗ ಮತಗಳನ್ನು ತನ್ನದಾಗಿಸುವ ಪ್ರಧಾನ ಗುರಿಯನ್ನು ಈ ಸಮಾವೇಶ ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಉಪಚುನಾವಣೆಯಲ್ಲಿ ಒಕ್ಕಲಿಗರ ಮತಗಳಿಗಾಗಿ ಡಿಕೆಶಿ ಮತ್ತು ಎಚ್‌ಡಿಕೆ ನಡುವೆ ಭಾರೀ ಹಗ್ಗಜಗ್ಗಾಟ ನಡೆದಿತ್ತು. ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಒಕ್ಕಲಿಗ ಸಮುದಾಯ ಕೂಡ ಕೈಕೊಟ್ಟಿತು. ಕಬ್ಬಿಣ ಕಾದಾಗಲೇ ಬಡಿಯಬೇಕು ಎಂಬಂತೆ, ಸೋಲಿನ ಬೆನ್ನಿಗೇ ಹಾಸನದಲ್ಲಿ ಬೃಹತ್ ಜನಕಲ್ಯಾಣೋತ್ಸವ ಮಾಡಿ ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಉಪಚುನಾವಣೆಯಲ್ಲಿ ನಿಖಿಲ್ ಕುಮಾರ ಸ್ವಾಮಿಯ ಪರವಾಗಿ ದೇವೇಗೌಡರನ್ನೇ ಜೆಡಿಎಸ್ ಬೀದಿಗಿಳಿಸಿತ್ತು. ಸಾರ್ವಜನಿಕ ಸಮಾವೇಶದಲ್ಲಿ ದೇವೇಗೌಡರು ‘ಸಿದ್ದರಾಮಯ್ಯ ಅವರ ಗರ್ವಭಂಗ’ಕ್ಕೆ ಕರೆ ನೀಡಿದ್ದರು. ಇದೀಗ ಆ ಕರೆಗೆ, ಹಾಸನ ಸಮಾವೇಶದ ಮೂಲಕ ಪ್ರತಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಜೆಡಿಎಸ್‌ನಿಂದ ದೂರ ಸರಿಯುತ್ತಿರುವ ಒಕ್ಕಲಿಗ ಮತಗಳು ಬಿಜೆಪಿಯ ಕಡೆಗೆ ಹರಿದು ಹೋಗದಂತೆ ಬೇಲಿ ಹಾಕುವ ಪ್ರಯತ್ನವನ್ನು ಈ ಸಮಾವೇಶದ ಮೂಲಕ ಮಾಡಿದ್ದಾರೆ.

ಜೆಡಿಎಸ್‌ನ ದೇಹಕ್ಕೆ ಆರೆಸ್ಸೆಸ್‌ನ ತಲೆಯನ್ನು ಜೋಡಿಸಿ ನಡೆಸಿದ ಸರ್ಜರಿಗೆ ರಾಜ್ಯದಲ್ಲಿ ಎನ್‌ಡಿಎ ಎಂದು ಕರೆಯಲಾಗಿದೆ. ಅಂದರೆ ತಲೆ ಹೇಳಿದಂತೆ ದೇಹ ಕೇಳಲೇ ಬೇಕಾಗುತ್ತದೆ. ತಲೆಯ ಆಲೋಚನೆಗೆ ತಕ್ಕಂತೆ ದೇಹ ರೂಪಾಂತರಗೊಳ್ಳಲೇ ಬೇಕು. ಚನ್ನಪಟ್ಟಣದ ಸೋಲಿನ ಬಳಿಕ ಈ ರೂಪಾಂತರ ಭಾರೀ ವೇಗವನ್ನು ಪಡೆದಿದೆ. ಈಗಾಗಲೇ ನಿಖಿಲ್ ಅವರು ಆರೆಸ್ಸೆಸ್ ಮುಖಂಡ ಸಂತೋಷ್ ಅವರನ್ನು ಭೇಟಿಯೂ ಆಗಿದ್ದಾರೆ. ಹೀಗೆ ಆದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ನಿಖಿಲ್ ಅವರು ಜೆಡಿಎಸ್‌ನ್ನು ಬಿಜೆಪಿಯ ಜೊತೆಗೆ ವಿಲೀನಗೊಳಿಸಿ, ಬಿಜೆಪಿಯಿಂದಲೇ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಜೆಡಿಎಸ್‌ನಲ್ಲಿ ಗೊಂದಲದಲ್ಲಿರುವ ಒಕ್ಕಲಿಗ ಸಮುದಾಯದ ಕಾರ್ಯಕರ್ತರನ್ನು ತನ್ನೆಡೆಗೆ ಸೆಳೆಯಲು ಜನಕಲ್ಯಾನೋತ್ಸವದ ಮೂಲಕ ಡಿಕೆಶಿ ಅವರು ಪ್ರಯತ್ನಿಸಿದ್ದಾರೆ.

ಸಮಾವೇಶದಲ್ಲಿ ದೇವೇಗೌಡರನ್ನು ಗುರಿಯಾಗಿಸಿಕೊಂಡು ಸಿದ್ದರಾಮಯ್ಯ ಮಾಡಿದ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ. ‘‘ನಾನು ಸಿದ್ದರಾಮಯ್ಯರನ್ನು ಬೆಳೆಸಿದೆ. ಅವರು ನಮಗೆ ದ್ರೋಹ ಮಾಡಿದರು’’ ಎಂದು ಪದೇ ಪದೇ ನೆನಪಿಸುವ ದೇವೇಗೌಡರು ಮತ್ತು ಅವರ ಮಕ್ಕಳಿಗೆ ಕೆಲವು ವಾಸ್ತವಗಳನ್ನು ತೆರೆದಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಮುತ್ಸದ್ದಿತನ ಜೆಡಿಎಸ್‌ನ್ನು ಕೂಡ ಬೆಳೆಸಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗದಂತೆ ನೋಡಿಕೊಂಡು, ಅವರಿಗೆ ಪಕ್ಷ ತೊರೆಯುವ ಸ್ಥಿತಿ ನಿರ್ಮಾಣ ಮಾಡಿರುವುದು ಕೂಡ ದೇವೇಗೌಡರು ಎನ್ನುವುದನ್ನು ಜನರು ಮರೆತಿಲ್ಲ. ಇದೇ ಸಂದರ್ಭದಲ್ಲಿ ಜೆಡಿಎಸ್‌ನ್ನು ನಂಬಿ ಅದನ್ನು ಬೆಳೆಸಿದ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರತಿಯಾಗಿ ಕೊಟ್ಟದ್ದೇನು? ಎನ್ನುವ ಪ್ರಶ್ನೆಯನ್ನು ದೇವೇಗೌಡರಿಗೆ ಸಿದ್ದರಾಮಯ್ಯ ನೆನಪಿಸಿದ್ದಾರೆ. ದೇವೇಗೌಡರನ್ನು ಪ್ರಧಾನಿ ಮಾಡುವಲ್ಲಿ, ಕುಮಾರಸ್ವಾಮಿಯನ್ನು ಎರಡು ಬಾರಿ ಮುಖ್ಯಮಂತ್ರಿಯಾಗಿಸುವಲ್ಲಿ ನಾಡಿನ ಅಲ್ಪಸಂಖ್ಯಾತರ ಪಾತ್ರವೂ ಬಹುದೊಡ್ಡದಿದೆ. ಆದರೆ ಅಂತಿಮವಾಗಿ ತನ್ನನ್ನು ಬೆಳೆಸಿದ ಅಲ್ಪಸಂಖ್ಯಾತರನ್ನು ಸಾಮೂಹಿಕವಾಗಿ ಆರೆಸ್ಸೆಸ್‌ಗೆ ಬಲಿಕೊಡಲು ಮುಂದಾದರು. ಅದರ ಫಲವನ್ನೇ ಅವರು ಕಳೆದ ಉಪಚುನಾವಣೆಯಲ್ಲಿ ಅನುಭವಿಸಿದರು. ದೇವೇಗೌಡರನ್ನೇ ನಂಬಿದ್ದ ಎಂ.ಪಿ. ಪ್ರಕಾಶ್, ದತ್ತಾರಂತಹ ಮುತ್ಸದ್ದಿ ನಾಯಕರಿಗೆ ಕುಮಾರಸ್ವಾಮಿ ಅವರು ಎಂತಹ ಸ್ಥಿತಿಯನ್ನು ತಂದೊಡ್ಡಿದರು ಎನ್ನುವುದನ್ನೂ ನಾಡು ಕಂಡಿದೆ. ಒಂದು ವೇಳೆ ಸಿದ್ದರಾಮಯ್ಯ ಜೆಡಿಎಸ್‌ನಲ್ಲೇ ಮುಂದುವರಿದಿದ್ದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆಗಳೇ ಇದ್ದಿರಲಿಲ್ಲ. ಪುತ್ರವ್ಯಾಮೋಹಿಯಾಗಿರುವ ದೇವೇಗೌಡರು ಅದಕ್ಕೆ ಅವಕಾಶವನ್ನು ನೀಡುತ್ತಿರಲಿಲ್ಲ.

ಇಂದು ಕಾಂಗ್ರೆಸ್ ವಿರುದ್ಧ ದಾಳಿ ಮಾಡುತ್ತಿರುವ ದೇವೇಗೌಡರು, ತಾನು ರಾಜ್ಯ ಸಭಾ ಸದಸ್ಯರಾಗಿರುವುದೇ ಕಾಂಗ್ರೆಸ್ ಪಕ್ಷದ ಋಣದಿಂದ ಎನ್ನುವುದನ್ನು ಮರೆತಿದ್ದಾರೆ. ‘ಸೋನಿಯಾಗಾಂಧಿಯವರು ಬೆಂಬಲಿಸುವ ಭರವಸೆ ನೀಡಿದ ಕಾರಣಕ್ಕಾಗಿ ಅಪ್ಪಾಜಿ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆೆ’ ಎಂದು ಈ ಹಿಂದೆ ಕುಮಾರಸ್ವಾಮಿಯವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಬೆಂಬಲ ದೇವೇಗೌಡರು ರಾಜ್ಯಸಭೆಗೆ ಪ್ರವೇಶಿಸುವಂತೆ ಮಾಡಿತು. ಆದರೆ ಬಳಿಕ ಬೆಂಬಲಿಸಿದ ಕಾಂಗ್ರೆಸ್‌ನ್ನು ಮರೆತು, ದೇವೇಗೌಡರು ತನ್ನನ್ನು ವಿರೋಧಿಸಿದ ಬಿಜೆಪಿಯೊಂದಿಗೆ ಕೈ ಜೋಡಿಸಿದರು. ಹೀಗಿರುವಾಗ, ಸಿದ್ದರಾಮಯ್ಯ ಅವರು ನನಗೆ ವಿಶ್ವಾಸಘಾತ ಮಾಡಿದರು ಎನ್ನುವ ನೈತಿಕತೆ ದೇವೇಗೌಡರಿಗೆಲ್ಲಿದೆ? 

ಇಂದು ರಾಜ್ಯದಲ್ಲಿ ಜೆಡಿಎಸ್‌ನೊಳಗೆ ನಾಯಕರಾಗಿ ದೇವೇಗೌಡರ ಕುಟುಂಬವನ್ನು ಹೊರತು ಪಡಿಸಿದ ಇನ್ನೊಬ್ಬ ಇಲ್ಲ. ಈ ಕಾರಣದಿಂದಲೇ ಗೌಡ ಕುಟುಂಬ ಲೈಂಗಿಕ ಹಗರಣ ಹೊರ ಬಿದ್ದ ಬೆನ್ನಿಗೇ, ಅದರ ಕಳಂಕವನ್ನು ಇಡೀ ಜೆಡಿಎಸ್ ಹೊತ್ತುಕೊಳ್ಳಬೇಕಾಯಿತು. ಇದು ಜೆಡಿಎಸ್ ಕಾರ್ಯಕರ್ತರನ್ನು ತೀವ್ರ ಮುಜುಗರಕ್ಕೆ ತಳ್ಳಿದೆ. ಈ ಕಳಂಕದಿಂದ ಪಾರಾಗಲು ಅವರು ಪರ್ಯಾಯ ದಾರಿಯನ್ನು ಹುಡುಕುತ್ತಿದ್ದಾರೆ. ಅವರಿಗೆ ಉಳಿದಿರುವುದು ಬಿಜೆಪಿ ಮಾತ್ರ. ಹೀಗೆ ಬಿಜೆಪಿಯ ಕಡೆಗೆ ಮುಖ ಮಾಡಿರುವ ಜೆಡಿಎಸ್ ಕಾರ್ಯಕರ್ತರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಹಾಸನದಲ್ಲಿ ಭಾಗಶಃ ಯಶಸ್ವಿಯಾಗಿದೆ. 

ಮುಖ್ಯಮಂತ್ರಿಯ ಅವಧಿಯ ಕುರಿತಂತೆ ಇರುವ ಭಿನ್ನಾಭಿಪ್ರಾಯಗಳಿಗೂ ಡಿ.ಕೆ. ಶಿವಕುಮಾರ್ ಸಾರ್ವಜನಿಕ ವೇದಿಕೆಯಲ್ಲೇ ಪೂರ್ಣವಿರಾಮ ಹಾಕಿದ್ದಾರೆ. ‘‘ಸಾಯುವವರೆಗೆ ಸಿದ್ದರಾಮಯ್ಯ ಬೆಂಬಲಕ್ಕಿರುತ್ತೇನೆ’’ ಎಂದು ಘೋಷಿಸುವ ಮೂಲಕ ಗೊಂದಲಗಳಿಗೆ ತಾತ್ಕಾಲಿಕ ವಿರಾಮವನ್ನು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಾಸನದ ಒಕ್ಕಲಿಗರು ಕಾಂಗ್ರೆಸ್‌ಗೆ ಒಲವು ತೋರಿಸಿದಷ್ಟೂ ಅದು ಡಿ.ಕೆ. ಶಿವಕುಮಾರ್ ಅವರ ಬುಡವನ್ನು ಕಾಂಗ್ರೆಸ್‌ನೊಳಗೆ ಗಟ್ಟಿಗೊಳಿಸುತ್ತಾ ಹೋಗುತ್ತದೆ. ಕಾಂಗ್ರೆಸ್ ವರಿಷ್ಠರಾಗಿರುವ ಸುರ್ಜೆವಾಲ ಅವರು ಮಾತನಾಡುತ್ತಾ, ರಾಜ್ಯ ಕಾಂಗ್ರೆಸ್‌ನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿಯಾಗಿ ಮುನ್ನಡೆಸುತ್ತಾರೆ ಎಂದಿರುವುದು ಕೂಡ ಡಿಕೆಶಿಯವರ ರಾಜಕೀಯ ಭವಿಷ್ಯಕ್ಕೆ ಪೂರಕವಾಗಿಯೇ ಇದೆ. ಒಟ್ಟಿನಲ್ಲಿ, ಒಕ್ಕಲಿಗರನ್ನು ಸೆಳೆಯುವ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಈ ಯಶಸ್ವೀ ಸಮಾವೇಶದ ಮೂಲಕ ಸಮರ್ಥ ಉತ್ತರವನ್ನೇ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News