ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರ ಹೆಸರು ಆಕಸ್ಮಿಕವೆ?

Update: 2024-12-03 10:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View


ಸೇಡಂನಲ್ಲಿ ಜನವರಿ 29ರಿಂದ ಆರಂಭವಾಗಲಿರುವ ಭಾರತೀಯ ಸಂಸ್ಕೃತಿ ಉತ್ಸವ ಎಂಬ ವಾರ ಕಾಲದ ಕಾರ್ಯಕ್ರಮ ಬೇರೆಯೇ ಕಾರಣಗಳಿಗಾಗಿ ರಾಜ್ಯದಲ್ಲಿ ಸುದ್ದಿಯಲ್ಲಿದೆ. ಈ ಕಾರ್ಯಕ್ರಮದ ರೂವಾರಿ ಆರೆಸ್ಸೆಸ್‌ನ ಧುರೀಣ ಗೋವಿಂದಾಚಾರ್ಯ ಎನ್ನುವುದಾಗಲೀ ಅಥವಾ ಈ ಆರೆಸ್ಸೆಸ್ ಪ್ರಾಯೋಜಿತ ಕಾರ್ಯಕ್ರಮ ತನ್ನ ವೈಶಿಷ್ಟ್ಯಗಳ ಕಾರಣದಿಂದಾಗಲೀ ಸುದ್ದಿಯಾಗಿರುವುದಲ್ಲ. ಆರೆಸ್ಸೆಸ್ ಅಜೆಂಡಾಗಳುಳ್ಳ ಕಾರ್ಯಕ್ರಮದ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದ ಹಲವು ಸಚಿವರು, ಗಣ್ಯರು ಗುರುತಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಯವರು ತಮ್ಮಲ್ಲಿ ಕೇಳದೇ ತಮ್ಮ ಹೆಸರು ಹಾಕಿಕೊಂಡಿದ್ದಾರೆ ಎಂಬರ್ಥದ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಕುರಿತಂತೆ ಎದ್ದಿರುವ ಆಕ್ಷೇಪಗಳು, ಅನುಮಾನಗಳು ಈ ಸ್ಪಷ್ಟೀಕರಣದಿಂದ ಪೂರ್ಣವಾಗಿ ಇತ್ಯರ್ಥವಾದಂತಿಲ್ಲ.

ಮುಖ್ಯವಾಗಿ ಸೇಡಂನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಉದ್ದೇಶ, ಗುರಿ ಏನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಗುಪ್ತಚರ ಇಲಾಖೆಯ ನೆರವಿನ ಅಗತ್ಯವೇನೂ ರಾಜ್ಯ ಸರಕಾರಕ್ಕಿಲ್ಲ. ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಹೊಕ್ಕುಳ ಬಳ್ಳಿಯಂತಿರುವ, ತಾಂತ್ರಿಕವಾಗಿ ಸ್ವತಂತ್ರವೆಂದು ತೋರುವ ಸಂಘಟನೆಗಳ ಮೂಲಕ ಆರೆಸ್ಸೆಸ್ ತನ್ನ ಅಜೆಂಡಾವನ್ನು ನಿರ್ವಹಿಸುತ್ತಿದೆ. ಈಗ ಸೇಡಂನಲ್ಲಿ ನಡೆಯಲಿರುವ ಕಾರ್ಯಕ್ರಮವೂ ಇಂತಹ ಸೇವೆ ಮತ್ತು ಅಜೆಂಡಾದ ಮುಂದುವರಿಕೆ.

ಈ ಕಾರ್ಯಕ್ರಮದ ನೇತೃತ್ವ ವಹಿಸಿರುವ ಗೋವಿಂದಾಚಾರ್ಯ ಅವರ ಹಿನ್ನೆಲೆಯೇನು, ಕಾಂಗ್ರೆಸ್‌ನ ಕುರಿತಂತೆ ಅವರ ಮತ್ತು ಅವರ ಸಂಘಟನೆಯ ನಿಲುವೇನು ಎನ್ನುವುದನ್ನು ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕವಾಗಿ ತಿಳಿಸಿಕೊಡಬೇಕಾಗಿಲ್ಲ. ಗೋವಿಂದಾಚಾರ್ಯ ಈ ಹಿಂದೆ ಭಾಜಪದ ಪ್ರಭಾವಿ ನಾಯಕರಾಗಿದ್ದು ಬಳಿಕದ ರಾಜಕೀಯ ಸ್ಥಿತ್ಯಂತರಗಳ ಕಾರಣಕ್ಕೆ ಈ ತರಹದ ಸಾಂಸ್ಕೃತಿಕ ಸಂಘಟನೆಯ ಚುಕ್ಕಾಣಿ ಹಿಡಿದಿದ್ದಾರೆ. ಸಂವಿಧಾನ ಬದಲಾಯಿಸಬೇಕು ಎಂಬ ಮೊದಲ ಪ್ರಸ್ತಾವ ಇಟ್ಟಿದ್ದೇ ಈ ಗೋವಿಂದಾಚಾರ್ಯ. ರಾಜಕೀಯದಿಂದಾಚೆಗೆ ಪರಿಸರ, ಕೃಷಿ, ಕಲೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಹಲವು ಸಾಧಕರನ್ನು ತನ್ನ ತೆಕ್ಕೆಗೆ ತಗೆದುಕೊಂಡು ಅವರನ್ನು ಆರೆಸ್ಸೆಸ್‌ನ ಅಜೆಂಡಾಕ್ಕೆ ತಲೆಬಾಗುವಂತೆ ಮಾಡುವುದು ಈ ಸಂಘಟನೆಯ ಉದ್ದೇಶ. ಸದರಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಭಾಜಪ/ಆರೆಸ್ಸೆಸಿಗರು ಅಥವಾ ತೆರೆಮರೆಯ ಬೆಂಬಲಿಗರು. ಇವರ ಸಾರ್ವಜನಿಕ ಹೇಳಿಕೆಗಳು ಕ್ರಿಯೆಗಳು ಈಗಾಗಲೇ ಅವರ ಹಿಂದುತ್ವದ ಕುರಿತ ನಿಲುವನ್ನು ಢಾಳಾಗಿ ತೋರಿಸಿದೆ. ಸ್ಪಷ್ಟವಾಗಿ ಹೇಳುವುದಾದರೆ ಈ ಸಮ್ಮೇಳನವೂ ಮಾರುವೇಶದ ಆರೆಸ್ಸೆಸ್ ಕಾರ್ಯಕ್ರಮ. ಇಂತಹ ಸಮಾರಂಭದಲ್ಲಿ ಸಿದ್ದರಾಮಯ್ಯ ಮತ್ತು ಅವರ ಸಂಗಡಿಗರ ಹೆಸರುಗಳು ಕಾಣಿಸಿಕೊಂಡಾಗ ನಾಡಿನ ಜನತೆ ಗೊಂದಲಕ್ಕೀಡಾಗುವುದು ಸಹಜ. ಈ ಗೊಂದಲ, ಅನುಮಾನ, ಶಂಕೆ ಕೇವಲ ಅದರಲ್ಲಿ ಭಾಗವಹಿಸಿದ ನಾಯಕರ ಬಗ್ಗೆ ಮಾತ್ರವಲ್ಲ, ಒಟ್ಟು ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವುಗಳ ಬಗ್ಗೆಯೂ ಆಗಿದೆ.

ಇಷ್ಟಕ್ಕೂ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರು ಮಾತ್ರ ಭಾಗವಹಿಸದೆ ಇರುವ ಬಗ್ಗೆ ತಮ್ಮ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಇನ್ನೂ ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸುವ ವಿವರ ಇದ್ದು, ಅವರ ವಿವರಗಳು ಹೊರಬಿದ್ದಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರಾದರೂ, ಆ ಕಾರ್ಯಕ್ರಮದ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಪ್ರಕಟವಾಯಿತು? ಅದನ್ನು ಪ್ರಕಟಿಸಲು ಅನುಮೋದನೆ ನೀಡಿದವರು ಯಾರು? ಒಂದು ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಅವರ ಅನುಮತಿಯಿಲ್ಲದೆ ಪ್ರಕಟಿಸುವುದಕ್ಕೆ ಸಾಧ್ಯವೆ? ಎನ್ನುವ ಪ್ರಶ್ನೆಗಳು ಉಳಿದೇ ಇವೆ. ಯಾಕೆಂದರೆ, ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಅಥವಾ ಸಚಿವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಬೇಕಾದರೆ ಸಂಬಂಧಪಟ್ಟವರನ್ನು ಸಂಪರ್ಕಿಸದೆ, ಅನುಮತಿ ಪಡೆಯದೇ ಇರುವಷ್ಟು ಹೆಡ್ಡತನವನ್ನು ಸಂಘಟಕರು ತೋರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವುದಕ್ಕಾಗಿ ಸಂಘಟಕರು ಇಷ್ಟೊಂದು ಧೈರ್ಯವನ್ನು ಪ್ರದರ್ಶಿಸುತ್ತಾರೆ ಎನ್ನಲಾಗದು. ಮುಖ್ಯವಾಗಿ ತಮ್ಮ ಅನುಮತಿ ಇಲ್ಲದೆ ಹೆಸರನ್ನು ಹಾಕಿಕೊಂಡಿರುವುದಕ್ಕಾಗಿ ಸಂಘಟನೆಯನ್ನು ಮುಖ್ಯಮಂತ್ರಿಯಾಗಲಿ ಅವರ ಹಿಂಬಾಲಕರಾಗಲಿ ಇಲ್ಲಿಯವರೆಗೆ ತರಾಟೆಗೆ ತೆಗೆದುಕೊಂಡ, ಕಾರ್ಯಕ್ರಮದ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಯಾವ ವಿವರಗಳೂ ಹೊರ ಬಿದ್ದಿಲ್ಲ. ಕನಿಷ್ಠ ಕಾರ್ಯಕ್ರಮದ ಬಗ್ಗೆ ತನ್ನ ದಾರಿ ತಪ್ಪಿಸಿದ ಅಧಿಕಾರಿಗಳ ಬಗ್ಗೆಯಾದರೂ ಕಠಿಣ ಕ್ರಮ ತೆಗೆದುಕೊಳ್ಳುವುದು ಮುಖ್ಯಮಂತ್ರಿಗಳ ಕರ್ತವ್ಯವಾಗಿದೆ. ಆದರೆ ಅಂತಹದೇನೂ ಈವರೆಗೆ ನಡೆದಿಲ್ಲ.

ಒಂದೆಡೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಆರೆಸ್ಸೆಸ್ ವಿರುದ್ಧ ಕಠಿಣ ಮಾತುಗಳನ್ನಾಡುತ್ತಿರುವಾಗ, ಒಳಗಿಂದೊಳಗೆ ಈ ಬಗ್ಗೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಮುಜುಗರವನ್ನು, ಆತಂಕವನ್ನು ಅನುಭವಿಸುತ್ತಾ ಬಂದಿದ್ದಾರೆ. ‘ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ, ಗಾಂಧಿ’ ಎಂದಾಗ, ಬಿಜೆಪಿಗಿಂತಲೂ ಹೆಚ್ಚು ನೊಂದುಕೊಂಡ ಕಾಂಗ್ರೆಸ್‌ನ ನಾಯಕರಿದ್ದರು. ಇಂದಿಗೂ ಆರೆಸ್ಸೆಸ್ ದೇಶಭಕ್ತ ಸಂಘಟನೆ ಎಂದು ಒಳಗೊಳಗೆ ನಂಬಿಕೊಂಡ ಮುಖಂಡರು ಇದ್ದಾರೆ ಮಾತ್ರವಲ್ಲ, ಆರೆಸ್ಸೆಸ್‌ನ ಹಲವು ಅಜೆಂಡಾಗಳಿಗೆ ಒಳಗಿಂದೊಳಗೆ ಸಹಕರಿಸುತ್ತಾ ಬರುತ್ತಿದ್ದಾರೆ. ಸುಮಾರು 70 ವರ್ಷಗಳ ಕಾಲ ಈ ದೇಶವನ್ನು ಕಾಂಗ್ರೆಸ್ ಆಳುತ್ತಿದ್ದಾಗ, ಆರೆಸ್ಸೆಸ್ ಒಳಗಿಂದೊಳಗೆ ಕಾಂಗ್ರೆಸ್‌ನೊಳಗಿರುವ ಮೃದು ಆರೆಸ್ಸೆಸ್‌ವಾದಿಗಳ ನೆರವಿನಿಂದಲೇ ದೇಶಾದ್ಯಂತ ತನ್ನ ಬೇರುಗಳನ್ನು ಹರಡಿಕೊಂಡಿತು.

ಒಂದೆಡೆ ಆರೆಸ್ಸೆಸ್‌ನ ಅಜೆಂಡಾಗಳ ಬಗ್ಗೆ ಜೊಲ್ಲು ಸುರಿಸುತ್ತಲೇ, ಕಾಂಗ್ರೆಸ್‌ನ ಜಾತ್ಯತೀತ ನಿಲುವು, ಸಿದ್ಧಾಂತಗಳ ಕುರಿತಂತೆ ಕೀಳರಿಮೆ ಪಡುವ ನಾಯಕರು, ಕಾರ್ಯಕರ್ತರು ಪಕ್ಷದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಪಕ್ಷದೊಳಗಿರುವ ಈ ಬಳಗವನ್ನು ಖುಷಿ ಪಡಿಸುವುದಕ್ಕಾಗಿ ಕಾಂಗ್ರೆಸ್ ನಾಯಕರು ಆತುರದಿಂದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಇತ್ತೀಚಿನ ದಿನಗಳಲ್ಲಿ ಅಧಿಕಾರವಂಚಿತ ಬಿಜೆಪಿ ನಾಯಕರು ಕಾಂಗ್ರೆಸ್ ಕಡೆಗೆ ವಲಸೆ ಬರುತ್ತಿದ್ದಾರೆ. ಹಾಗೆ ವಲಸೆ ಬಂದವರಿಗೆ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನವಿದೆಯೇ ಹೊರತು, ಆರೆಸ್ಸೆಸ್‌ನ ಸಿದ್ಧಾಂತದ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಜೊತೆಗೆ ಕಾಂಗ್ರೆಸ್‌ನ ಜಾತ್ಯತೀತ, ಸಂವಿಧಾನ ಪರ ಸಿದ್ಧಾಂತದ ಬಗ್ಗೆ ನಂಬಿಕೆಯೂ ಇಲ್ಲ. ಕಾಂಗ್ರೆಸ್‌ಗೆ ಬಂದ ಬಳಿಕವೂ ಇವರು ‘ನಾನು ಆರೆಸ್ಸೆಸ್‌ನಿಂದ ಬಂದ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿಕೆ ನೀಡುತ್ತಾರೆ. ಹಾಲಿ ಶಾಸಕರು ವಿಶ್ವ ಹಿಂದೂ ಪರಿಷತ್ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮಾತ್ರವಲ್ಲ, ಸಾರ್ವಜನಿಕ ವೇದಿಕೆಯಲ್ಲಿ ನಾಯಕರ ಪಾದಗಳಿಗೆ ನಮಸ್ಕರಿಸುತ್ತಾರೆ. ಅಷ್ಟೇ ಯಾಕೆ, ಸ್ಪೀಕರ್ ನೇತೃತ್ವದಲ್ಲೇ ಸಂಘಪರಿವಾರ ಸಿದ್ಧಾಂತಗಳ ಮುಖಂಡರಿಂದ ಶಾಸಕರಿಗೆ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ರೈತ ಸಂಘದ ಶಾಸಕರೊಬ್ಬರು ತಮ್ಮ ಕಚೇರಿಯನ್ನು ಆರೆಸ್ಸೆಸ್ ಮುಖಂಡನಿಂದ ಉದ್ಘಾಟಿಸುತ್ತಾರೆ. ಇವೆಲ್ಲ ಕಾಂಗ್ರೆಸ್‌ನೊಳಗಿನ ಸೈದ್ಧಾಂತಿಕ ಗೊಂದಲಗಳಿಗೆ ಸಾಕ್ಷಿಯಾಗಿದೆ. ಇದೀಗ ಸೇಡಂನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕಾಣಿಸಿಕೊಂಡಿರುವುದು ಈ ಗೊಂದಲಗಳ ಮುಂದುವರಿದ ಭಾಗವಾಗಿದೆ.

ಇದನ್ನೆಲ್ಲ ನೋಡುವಾಗ, ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಮಾತ್ರವಲ್ಲ, ಕಾಂಗ್ರೆಸ್‌ನ ಮುಖಂಡರಿಗೆ ಸಂವಿಧಾನ ಬೋಧಿಸುವ ಜಾತ್ಯತೀತ ಸಿದ್ಧಾಂತಗಳ ಬಗ್ಗೆ ತರಬೇತಿ, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಕಾಂಗ್ರೆಸ್‌ನಲ್ಲಿ ಆಗಿ ಹೋಗಿರುವ ಮುತ್ಸದ್ದಿ ನಾಯಕರ ರಾಜಕೀಯ ಚಿಂತನೆಗಳನ್ನು ಪರಿಚಯಿಸಿ, ಅದರ ತಳಹದಿಯಲ್ಲಿ ಕಾರ್ಯಕರ್ತರನ್ನು ಬೆಳೆಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಬೇಕಾಗಿದೆ. ಹಾಗೆಯೇ ಆರೆಸ್ಸೆಸ್ ಕಾರ್ಯಸೂಚಿಗಳ ಬಗ್ಗೆ ಪಕ್ಷದೊಳಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಆರೆಸ್ಸೆಸ್ ಪ್ರಾಯೋಜಿತ ವೇದಿಕೆಗಳಲ್ಲಿ ಕಾಂಗ್ರೆಸ್ ನಾಯಕರು ಅದೆಷ್ಟು ಬಾರಿ ಕಾಣಿಸಿಕೊಂಡರೂ, ಒಂದು ಮತವನ್ನೂ ಅದರಿಂದ ತಮ್ಮೆಡೆಗೆ ಸೆಳೆಯಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನೂ ಇದರ ಜೊತೆ ಜೊತೆಗೇ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂತಹ ದ್ವಂದ್ವ ನಿಲುವುಗಳಿಂದ ಕಾಂಗ್ರೆಸ್ ನಿಧಾನಕ್ಕೆ ಯಾರಿಗೂ, ಯಾವುದಕ್ಕೂ ಸಲ್ಲದ ಪಕ್ಷವಾಗಿ ಬಿಡುವ ಸಾಧ್ಯತೆಯೇ ಹೆಚ್ಚು.

ಬೆಳಗಾವಿಯಲ್ಲಿ ಶತಮಾನದ ಹಿಂದೆ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿಯವರೇ ಅಧ್ಯಕ್ಷರಾಗಿದ್ದರು. ಅದರ ಶತಮಾನೋತ್ಸವವನ್ನೂ ಕಾಂಗ್ರೆಸ್ ಆಚರಿಸಲಿದೆ. ಈ ಆಚರಣೆ ಕಾಂಗ್ರೆಸ್‌ನ ಸೈದ್ಧಾಂತಿಕ ಚಿಂತನೆಗಳನ್ನು ಕ್ರಿಯಾಶೀಲವಾಗಿಸದಿದ್ದರೆ ಅದೊಂದು ಸಾಂಕೇತಿಕ ಗೌರವಾರ್ಪಣೆ ಆಗುತ್ತದೆ ಅಷ್ಟೆ. ಈ ಶತಮಾನದ ನೆನಪಿನ ಕಾಂಗ್ರೆಸ್‌ಅಧಿವೇಶನ ಮತ್ತು ಆರೆಸ್ಸೆಸ್‌ನ ಶತಮಾನೋತ್ಸವದ ಪೀಠಿಕಾ ಕಾರ್ಯಕ್ರಮದಂತಿರುವ ಸೇಡಂನ ಕಾರ್ಯಕ್ರಮ-ಎರಡು ವಿಭಿನ್ನ ಸೈದ್ಧಾಂತಿಕ ಮುಖಾಮುಖಿಯಾಗಿದೆ. ಕಾಂಗ್ರೆಸ್ ಈ ಮುಖಾಮುಖಿಯಲ್ಲಿ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ ಎಂಬುದೇ ನಮ್ಮೆದುರು ಇರುವ ಪ್ರಶ್ನೆ. ಅಧಿಕಾರ ರಾಜಕಾರಣದಿಂದಾಚೆಯ ಸವಾಲು ಇದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News