ದಲಿತರ ದೇವಸ್ಥಾನ ಪ್ರವೇಶ: ಶ್ರೀಗಳು ಮಾತನಾಡಲಿ

Update: 2024-11-18 05:28 GMT

ದಲಿತರು ದೇವಸ್ಥಾನದೊಳಗೆ ಬಂದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ ಸವರ್ಣೀಯರು PC: facebook.com/Tv9Kannada

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ಕಾಲದಲ್ಲಿ ಸಕ್ಕರೆಗಾಗಿ ಮಂಡ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿತ್ತು. ಕಾವೇರಿ ನದಿ ನೀರು ಮಂಡ್ಯದ ಜೀವದ್ರವವಾಗಿತ್ತು ಕಾವೇರಿ ನೀರಿನ ಹಕ್ಕಿಗಾಗಿ ಬೀದಿಗಳಲ್ಲಿ ಭಾರೀ ಚಳವಳಿಗಳನ್ನು ನಡೆಸಿದ ಹೆಗ್ಗಳಿಕೆ ಮಂಡ್ಯದ ರೈತರದ್ದು. ಇಂತಹ ಮಂಡ್ಯದಲ್ಲಿ ಇದೀಗ ಜೆಡಿಎಸ್-ಬಿಜೆಪಿ ನಾಯಕರು ಜಂಟಿಯಾಗಿ ದ್ವೇಷದ ಕಹಿಯನ್ನು ಬೆಳೆದು ನಾಡಿನ ಜನತೆಗೆ ಹಂಚಲು ಮುಂದಾಗಿದ್ದಾರೆ. ನೀರಿನ ಹಕ್ಕಿಗಾಗಿ ಬೀದಿಗಿಳಿದ ಮಂಡ್ಯ ಇಂದು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೀದಿಗಿಳಿಯುವ ಮೂಲಕ ಸುದ್ದಿಯಲ್ಲಿದೆ. ರೈತರ ಹಿತಾಸಕ್ತಿಗಳನ್ನು ಸಂಪೂರ್ಣ ಬದಿಗೆ ಸರಿಸಲಾಗಿದೆ. ರೈತರ ಕಬ್ಬಿನ ಬೆಳೆಯ ಬದಲಿಗೆ ಕಲ್ಲಡ್ಕ ಪ್ರಭಾಕರ ಭಟ್ಟ-ಕುಮಾರಸ್ವಾಮಿ ಜೋಡಿ ಎತ್ತುಗಳನ್ನು ನೊಗಕ್ಕೆ ಕಟ್ಟಿ ಅಲ್ಲಿ ದ್ವೇಷವನ್ನು ಬಿತ್ತಿ ಬೆಳೆಯಲು ಆರೆಸ್ಸೆಸ್ ಮುಂದಾಗಿದೆ. ಅದರ ಕೊಯ್ಲನ್ನು ಈಗಾಗಲೇ ಮಂಡ್ಯದ ಜನರು ಉಣ್ಣ ತೊಡಗಿದ್ದಾರೆ. ಒಂದು ಕಾಲದಲ್ಲಿ ಆರೆಸ್ಸೆಸ್ ದ್ವೇಷ ಸಿದ್ಧಾಂತದ ವಿರುದ್ಧ ಕೆಂಡ ಕಾರುತ್ತಿದ್ದ ಕುಮಾರಸ್ವಾಮಿ ಇಂದು, ಅಧಿಕಾರದ ಆಸೆಗಾಗಿ ಆ ಸಿದ್ಧಾಂತಕ್ಕೆ ಹೆಗಲು ನೀಡಿದ್ದಾರೆ. ರೈತರ ಬದಲಿಗೆ ಹಿಂದೂಗಳ ರಕ್ಷಕರೆಂದು ತಮ್ಮನ್ನು ಬಿಂಬಿಸಲು ಹೊರಟಿದ್ದಾರೆ. ಈ ಮೂಲಕ ರೈತರನ್ನೂ ‘ಹಿಂದೂ ರೈತರು- ಮುಸ್ಲಿಮ್ ರೈತರು’ ಎಂದು ವಿಭಜಿಸುವ ಪ್ರಯತ್ನ ನಡೆಸಿದ್ದಾರೆ.‘ಹಿಂದೂಗಳೆಲ್ಲ ಒಂದು’ ಎನ್ನುವ ಈ ಕುಮಾರಸ್ವಾಮಿಯವರ ಹೊಸ ಮಾತುಗಳನ್ನು ನಂಬಿದ ಇಲ್ಲಿನ ದಲಿತರು ಇದೀಗ ದೇವಸ್ಥಾನ ಪ್ರವೇಶಿಸಲು ಹೊರಟು, ಅಲ್ಲಿನ ಸ್ಥಳೀಯರ ತೀವ್ರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಮಂಡ್ಯದ ಹನಕೆರೆ ಎಂಬಲ್ಲಿರುವ ದೇವಸ್ಥಾನಕ್ಕೆ ದಲಿತರು ಪ್ರವೇಶಿಸಿದ ಕಾರಣಕ್ಕಾಗಿ ಒಂದು ಗುಂಪು ದೇವಸ್ಥಾನದೊಳಗಿರುವ ದೇವರನ್ನೇ ಹೊತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

ಮಂಡ್ಯದ ಹನಕೆರೆಯ ಕಾಲಭೈರವೇಶ್ವರ ದೇವಸ್ಥಾನವನ್ನು ವರ್ಷಗಳ ಹಿಂದೆ ನವೀಕರಿಸಲಾಗಿತ್ತು. ಕಳೆದ ಒಂದು ವರ್ಷದಿಂದಲೂ ದಲಿತರು ಈ ದೇವಸ್ಥಾನಕ್ಕೆ ಹೋಗುತ್ತಾ ಬರುತ್ತಾ ಇದ್ದರು ಎಂದು ಕೆಲವು ದಲಿತ ಮುಖಂಡರು ಹೇಳುತ್ತಾರೆ. ಆದರೆ ದಲಿತರ ದೇವಸ್ಥಾನ ಪ್ರವೇಶಕ್ಕೆ ಇಲ್ಲಿ ಮುಕ್ತ ವಾತಾವರಣವಿರಲಿಲ್ಲ. ಯಾವಾಗ ಕುಮಾರಸ್ವಾಮಿ ಅವರು ಆರೆಸ್ಸೆಸ್ ಜೊತೆ ಸೇರಿಕೊಂಡು ಮಂಡ್ಯದಲ್ಲಿ ಕೋಮುದ್ವೇಷವನ್ನು ಬಿತ್ತತೊಡಗಿದರೋ ಅಲ್ಲಿಂದ, ಮೇಲ್ ಜಾತಿಯ ಜನರಲ್ಲಿ ಜಾತೀಯ ಪ್ರಜ್ಞೆ ಜಾಗೃತಿಗೊಂಡಿತು. ಆರಂಭದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದ ಈ ದ್ವೇಷ ಇದೀಗ ದಲಿತರ ಕಡೆಗೆ ತಿರುಗಿದೆ. ಪರಿಣಾಮವಾಗಿಯೇ ದಲಿತರು ದೇವಸ್ಥಾನ ಪ್ರವೇಶಿಸುವುದು ಅವರಲ್ಲಿ ಅಸಹನೆಯನ್ನು ಹುಟ್ಟಿಸಿ ಹಾಕಿದೆ. ಸ್ಥಳೀಯ ದಲಿತರು ಸಂಘಟಿತವಾಗಿ ದೇವಸ್ಥಾನ ಪ್ರವೇಶಿಸಿದಾಗ, ಇದನ್ನು ವಿರೋಧಿಸಿದ ಮೇಲ್‌ಜಾತಿಯ ಒಂದು ಗುಂಪು ದೇವಸ್ಥಾನದಲ್ಲಿ ದಾಂಧಲೆ ಎಸಗಿದ್ದೇ ಅಲ್ಲದೆ ದೇವರನ್ನೇ ಹೊತ್ತೊಯ್ದರು. ಈ ಜಗತ್ತಿನಲ್ಲಿ ಇತರೆಲ್ಲ ಧರ್ಮಗಳು ಜನರನ್ನು ತಮ್ಮ ಧರ್ಮ, ಸಿದ್ಧಾಂತವನ್ನು ಅನುಸರಿಸುವುದಕ್ಕೆ ಕೈ ಬೀಸಿ ಕರೆಯುತ್ತಿದ್ದರೆ ನಮ್ಮಲ್ಲಿ ಮಾತ್ರ, ದೇವಸ್ಥಾನಕ್ಕೆ ದಲಿತರು ಪ್ರವೇಶಿಸಿದ ಕಾರಣಕ್ಕಾಗಿಯೇ ದೇವರು ಮಲಿನಗೊಳ್ಳುತ್ತಾರೆ. ಇದು ನಿಜಕ್ಕೂ ವಿಪರ್ಯಾಸವಾಗಿದೆ. ಮಂಡ್ಯದಲ್ಲಿ ಅಸ್ಪಶ್ಯತೆಯ ಆಚರಣೆಯ ಮೂಲಕ ಸಂವಿಧಾನಕ್ಕೆ ಮಾತ್ರವಲ್ಲ, ಹಿಂದೂ ಧರ್ಮಕ್ಕೂ ಕೆಲವರು ಅಪಚಾರವೆಸಗಿದ್ದಾರೆ.

ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿರುವುದರಿಂದ, ಸ್ಥಳೀಯಾಡಳಿತ ಮಧ್ಯ ಪ್ರವೇಶಿಸಿದೆ. ಅಷ್ಟೇ ಅಲ್ಲ, ಹೊತ್ತೊಯ್ದ ದೇವರನ್ನು ದೇವಸ್ಥಾನಕ್ಕೆ ಮರಳಿಸಬೇಕು ಎಂದು ಆದೇಶವನ್ನೂ ನೀಡಿದೆ. ಸ್ಥಳೀಯರ ನಡುವೆ ಸೌಹಾರ್ದವನ್ನು ಮೂಡಿಸಲು ಕ್ರಮಗಳನ್ನು ತೆಗೆದುಕೊಂಡಿದೆಯಾದರೂ, ದಲಿತ ಮನಸ್ಸಿಗೆ ಆಗಿರುವ ಗಾಯ ಮಾತ್ರ ಒಣಗಿಲ್ಲ. ಇಲ್ಲಿ ದಲಿತರ ಸಮಸ್ಯೆ ಕೇವಲ ದೇವಸ್ಥಾನ ಪ್ರವೇಶ ಮಾತ್ರವೇ ಅಲ್ಲ. ಪೊಲೀಸರಿಗೆ, ಕಾನೂನು ಕ್ರಮಕ್ಕೆ ಹೆದರಿ ದೇವರನ್ನು ಮತ್ತೆ ದೇವಸ್ಥಾನದೊಳಗೆ ತಂದು ಕೂರಿಸಬಹುದು. ದಲಿತರಿಗೂ ಪ್ರವೇಶವನ್ನು ನೀಡಬಹುದು. ಆದರೆ, ಸಮಾಜ ತಮ್ಮನ್ನು ಹಿಂದೂಗಳೆಂದು ಹೃದಯಪೂರ್ವಕವಾಗಿ ಪರಿಗಣಿಸಿಲ್ಲ ಮತ್ತು ಆಳದಲ್ಲಿ ಮೇಲ್‌ಜಾತಿಯ ಜನರು ತಮ್ಮನ್ನು ಅಸ್ಪಶ್ಯವಾಗಿಯೇ ನೋಡುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಾಗಿ ಬಿಟ್ಟಿದೆ. ಈ ಗಾಯದ ನೋವನ್ನು ಯಾವ ಕಾನೂನಿನ ಔಷಧಿಯೂ ಗುಣ ಪಡಿಸದು. ಒಂದೆಡೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಅವರ ಹೊಸ

ಮಿತ್ರರಾಗಿರುವ ಆರೆಸ್ಸೆಸ್ ನಾಯಕರು ಮಂಡ್ಯದಲ್ಲಿ ಸಾರ್ವಜನಿಕ ಸಭೆ ಸೇರಿಸಿ ‘ಹಿಂದೂಗಳೆಲ್ಲ ಒಂದು’ ಎಂದು ಭಾಷಣ ಬಿಗಿಯುತ್ತಾರೆ. ಹಿಂದೂಗಳಿಗೆ ಇನ್ನೊಂದು ಧರ್ಮದಿಂದ ಅಪಾಯವಿದೆ ಎಂದು ಪರಸ್ಪರ ಎತ್ತಿ ಕಟ್ಟುತ್ತಾರೆ. ಸಾರ್ವಜನಿಕರ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾರೆ. ಇದೇ ಹೊತ್ತಿಗೆ ಮತ್ತೊಂದೆಡೆ, ಹಿಂದೂಗಳ ದೇವಸ್ಥಾನಗಳಿಗೆ ದಲಿತರು ಹೋಗುವುದನ್ನು ಹಿಂದೂ ಸಮಾಜದ ಮೇಲ್‌ಜಾತಿಯ ಜನರು ಎಂದು ಗುರುತಿಸಿಕೊಂಡವರೇ ತಡೆಯುತ್ತಾರೆ. ದಲಿತರು ದೇವಸ್ಥಾನ ಪ್ರವೇಶಿಸಿದರು ಎನ್ನುವ ಕಾರಣಕ್ಕೆ ದೇವಸ್ಥಾನದೊಳಗಿರುವ ದೇವರನ್ನೇ ಹೊತ್ತು ಹೊರ ಹೋಗುತ್ತಾರೆ. ಈ ಪ್ರಕರಣವನ್ನು ಕಾನೂನು, ಸರಕಾರ ಒಂದು ಹಂತದವರೆಗೆ ನಿಭಾಯಿಸಬಹುದು. ಆದರೆ ಇದು ನಂಬಿಕೆಯ ವಿಷಯವಾಗಿರುವುದರಿಂದ ಬಲವಂತವಾಗಿ ಅಥವಾ ಬೆದರಿಸಿ ಜಾತೀಯ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಕಾನೂನು ಮಧ್ಯ ಪ್ರವೇಶಿಸಿದಷ್ಟೂ ಸಮಸ್ಯೆ ಬಿಗಡಾಯಿಸುತ್ತದೆ. ದೇವಸ್ಥಾನದ ಪೂಜೆ ಪುನಸ್ಕಾರಕ್ಕೆ ಸಂಬಂಧಿಸಿ ಆಚರಣೆಗಳನ್ನು ರೂಪಿಸಿರುವುದು ಸಂವಿಧಾನವಲ್ಲ, ಧಾರ್ಮಿಕ ಮುಖಂಡರು. ದಲಿತರು ದೇವಸ್ಥಾನ ಪ್ರವೇಶಿಸಬಾರದು ಎಂದು ಮೇಲ್‌ಜಾತಿಯ ಕೆಲವರು ಭಾವಿಸಿದ್ದರೆ ಅದಕ್ಕೆ ಕಾರಣ ಧಾರ್ಮಿಕ ಮತ್ತು ಆಯಾ ಧರ್ಮದ ರಾಜಕೀಯ ಮುಖಂಡರೇ ಹೊರತು ಸರಕಾರವಲ್ಲ. ಆದುದರಿಂದ, ಈ ಸಮಸ್ಯೆಯನ್ನು ಪರಿಹರಿಸಲು ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ‘ಹಿಂದೂ ಒಂದು’ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಅಬ್ಬರಿಸುವ ಆರೆಸ್ಸೆಸ್ ಮುಖಂಡರು ಮಧ್ಯ ಪ್ರವೇಶಿಸಬೇಕಾಗಿತ್ತು. ಹಿಂದೂ ಧರ್ಮದ ಸಂಘಟನೆಯ ಹೆಸರಿನಲ್ಲಿ ಮಂಡ್ಯದಲ್ಲಿ ಸಾರ್ವಜನಿಕ ಸಮಾವೇಶ ಮಾಡಿ, ಇನ್ನೊಂದು ಧರ್ಮದ ಮಹಿಳೆಯರ ಕುರಿತಂತೆ ಹೀನಾಯ ಮಾತುಗಳನ್ನಾಡಿದ ಆರೆಸ್ಸೆಸ್ ಮುಖಂಡರಾಗಲಿ, ಅವರಿಗೆ ಹೆಗಲು ನೀಡಿರುವ ಕುಮಾರಸ್ವಾಮಿಯಾಗಲಿ ಈ ಘಟನೆಯ ಬಗ್ಗೆ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಘಟನೆಯನ್ನು ಖಂಡಿಸಿಲ್ಲ. ರಾಮಮಂದಿರ ಉದ್ಘಾಟನೆಯಲ್ಲೂ ಪಾಲುಗೊಂಡು ಮಾಧ್ಯಮಗಳಲ್ಲಿ ಸುದ್ದಿ ಮಾಡಿರುವ, ಬ್ರಾಹ್ಮಣರಿಗೆ ಅನ್ಯಾಯವಾದಾಗ ತಕ್ಷಣ ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ನೀಡುವ ಪೇಜಾವರ ಶ್ರೀಗಳೂ ಮಂಡ್ಯದ ಘಟನೆಗೆ ಪ್ರತಿಕ್ರಿಯೆ ನೀಡಿಲ್ಲ. ‘‘ಹಿಂದೂಗಳೆಲ್ಲ ಒಂದು. ಹಿಂದೂಗಳಿಗೆ ದೇವಸ್ಥಾನ ಪ್ರವೇಶ ನೀಡದೇ ಇರುವುದು ಅನ್ಯಾಯ’’ ಎಂದು ಜೆಡಿಎಸ್ ಮುಖಂಡ ಕುಮಾರ ಸ್ವಾಮಿ ತಕ್ಷಣ ಮಂಡ್ಯಕ್ಕೆ ಸುಪುತ್ರನ ಸಹಿತ ಆಗಮಿಸಿ ಆಂದೋಲನ ನಡೆಸಬೇಕಾಗಿತ್ತು. ವಿಪರ್ಯಾಸವೆಂದರೆ, ಈವರೆಗೆ ಅವರ ಪತ್ತೆಯೇ ಇಲ್ಲ.

ಹಿಂದೂ ಧರ್ಮವನ್ನು ಉದ್ಧಾರ ಮಾಡುವುದೆಂದರೆ ಇನ್ನೊಂದು ಧರ್ಮದ ವಿರುದ್ಧ ಕೆಂಡ ಕಾರುವುದು ಎಂದು ಭಾವಿಸಿ ಹೇಳಿಕೆ ನೀಡುವ ಯಾವ ಸ್ವಾಮೀಜಿಗಳಾಗಲಿ, ಮುಖಂಡರಾಗಲಿ ಮಂಡ್ಯದ ಹನಕೆರೆಗೆ ಈ ವರೆಗೆ ಭೇಟಿ ನೀಡಿಲ್ಲ. ಇದರ ಅರ್ಥ, ಅಲ್ಲಿ ನಡೆದಿರುವುದು ಸರಿಯಾಗಿದೆ ಎಂದು ಒಪ್ಪಿಕೊಂಡಂತೆ ಅಲ್ಲವೆ? ಹನಕೆರೆಯಲ್ಲಿ ನಡೆದಿರುವುದು ಸರಿ ಎಂದಾದರೆ, ಕನಿಷ್ಠ ‘ದಲಿತರು ಹಿಂದೂಗಳಲ್ಲ’ ಎನ್ನುವುದನ್ನಾದರೂ ಆರೆಸ್ಸೆಸ್ ಮುಖಂಡರು ಮತ್ತು ಸ್ವಾಮೀಜಿಗಳು ಬಹಿರಂಗ ಹೇಳಿಕೆಯ ಮೂಲಕ ಸ್ಪಷ್ಟಪಡಿಸಬೇಕು. ಈ ಮೂಲಕ ದಲಿತರಿಗೆ ಹಿಂದೂಧರ್ಮದಲ್ಲಿ ಅವರ ಸ್ಥಾನವನ್ನು ಸ್ಪಷ್ಟಪಡಿಸಿದಂತಾಗುತ್ತದೆ. ತಾವು ಹಿಂದೂಧರ್ಮೀಯರಲ್ಲ, ಚುನಾವಣೆಯ ಸಂದರ್ಭದಲ್ಲಷ್ಟೇ ತಮ್ಮನ್ನು ಹಿಂದೂಗಳೆಂದು ಈ ರಾಜಕೀಯ ನಾಯಕರು ಮತ್ತು ರಾಜಕೀಯ ಸ್ವಾಮೀಜಿಗಳು ಗುರುತಿಸುತ್ತಾರೆ ಎನ್ನುವ ವಾಸ್ತವ ಅವರಿಗೆ ಅರ್ಥವಾದರೆ ಅವರಾಗಿಯೇ ಈ ಹಿಂದೂಧರ್ಮದಿಂದ ಮತ್ತು ಅವರ ದೇವಸ್ಥಾನಗಳಿಂದ ದೂರವಾಗಿ ತಮ್ಮದೇ ಆಧ್ಯಾತ್ಮಿಕ ಕೇಂದ್ರಗಳನ್ನು ಕಟ್ಟಿಕೊಳ್ಳಲು ಅನುಕೂಲವಾಗಬಹುದು. ಅಥವಾ ಅಂಬೇಡ್ಕರ್ ಮಾಡಿದಂತೆ ಬೌದ್ಧ ಧರ್ಮದ ಕಡೆಗೆ ಹೊರಳಲು ಇದು ಇನ್ನಷ್ಟು ಸಹಾಯ ಮಾಡಬಹುದು. ಈ ಮೂಲಕ ಸಮಾಜದಲ್ಲಿ ಅನಗತ್ಯ ಸಂಘರ್ಷಗಳೂ ತಪ್ಪಿದಂತಾಗುತ್ತದೆ. ಆದುದರಿಂದ, ತಕ್ಷಣ ‘ಹಿಂದೂ ಒಂದು’ ಎನ್ನುವ ರಾಜಕೀಯ ನಾಯಕರು, ಸ್ವಾಮೀಜಿಗಳು ಹನಕೆರೆ ದೇವಸ್ಥಾನಕ್ಕೆ ದಲಿತರ ಪ್ರವೇಶದ ಬಗ್ಗೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News