ಕರುನಾಡಿಗೆ ‘ಕಪ್ಪು ಚುಕ್ಕೆ’

Update: 2024-11-14 04:52 GMT

PC: fb.com

ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ ಕೊನೆಗೂ ಮುಕ್ತಾಯಗೊಂಡಿದೆ. ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆಯಿಲ್ಲದಂತೆ ಈ ಮೂರು ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಗಳನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡೆಸಿದವು. ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳ ಸುಪುತ್ರರು ಸ್ಪರ್ಧಿಸುತ್ತಿರುವುದರಿಂದಲೋ ಏನೋ, ಈ ಬಾರಿಯ ಉಪಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಉಪ ಚುನಾವಣೆಯ ಸೋಲು ಗೆಲುವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅಳತೆಗೋಲನ್ನಾಗಿ ಬಳಸಲು ವಿರೋಧ ಪಕ್ಷ ಸಿದ್ಧತೆಯನ್ನು ಮಾಡುತ್ತಿದ್ದರೆ, ಬಿಜೆಪಿಯ ಆರೋಪಗಳಿಗೆ ಸಮರ್ಥವಾಗಿ ಉತ್ತರವನ್ನು ನೀಡಲು ಈ ಚುನಾವಣೆಯನ್ನು ಗೆಲ್ಲಲೇ ಬೇಕು ಎನ್ನುವ ಸ್ಥಿತಿಗೆ ಬಂದು ನಿಂತಿದೆ ಕಾಂಗ್ರೆಸ್. ಚನ್ನಪಟ್ಟಣದಲ್ಲಿ ತನ್ನ ಮಗನನ್ನು ಗೆಲ್ಲಿಸುವುದಕ್ಕಾಗಿ ಕುಮಾರಸ್ವಾಮಿಯವರು ಸಕಲ ಪ್ರಯತ್ನಗಳನ್ನು ಮಾಡಿದ್ದಾರೆ. ಎದ್ದು ನಿಲ್ಲಲೂ ಸಾಧ್ಯವಿಲ್ಲದ ಮಾಜಿ ಪ್ರಧಾನಿ ದೇವೇಗೌಡರನ್ನು ತಂದು ವೇದಿಕೆಯಲ್ಲಿ ಕುಳ್ಳಿರಿಸಿ ಅವರಿಂದ ಪ್ರಚಾರ ಮಾಡಿಸಿರುವುದೇ ಈ ಚುನಾವಣೆ ಕುಮಾರಸ್ವಾಮಿ ಅವರಿಗೆ ಎಷ್ಟು ಮಹತ್ವದ್ದು ಎನ್ನುವುದನ್ನು ಹೇಳುತ್ತದೆ. ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯ ಈ ಉಪಚುನಾವಣೆಯ ಸೋಲು ಗೆಲುವಿನ ಮೇಲೆ ನಿಂತಿದೆ. ಲೈಂಗಿಕ ಹಗರಣಗಳ ಕಳಂಕದಿಂದ ತಲೆ ಎತ್ತಲಾಗದ ಸ್ಥಿತಿಯಲ್ಲಿರುವ ದೇವೇಗೌಡರ ಕುಟುಂಬ ಕಳೆದುಕೊಂಡ ಮಾನ, ಮರ್ಯಾದೆಯನ್ನು ಚನ್ನಪಟ್ಟಣ ಚುನಾವಣೆಯ ಫಲಿತಾಂಶದಲ್ಲಿ ಹುಡುಕುತ್ತಿದೆ. ಇದೇ ಸಂದರ್ಭದಲ್ಲಿ ಚೆನ್ನಪಟ್ಟಣದಲ್ಲಿ ಯಾರೇ ನಿಂತರೂ ಅದು ನಾನು ಸ್ಪರ್ಧಿಸಿದಂತೆ ಎಂದು ಘೋಷಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರಿಗೂ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಒಕ್ಕಲಿಗರನ್ನು ತನ್ನ ಒಕ್ಕಲು ಮಾಡಿಕೊಳ್ಳಲು ಸಂಚು ಹಾಕಿರುವ ಆರೆಸ್ಸೆಸ್‌ಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲ್ಲಬೇಕಾಗಿದೆ. ಆದುದರಿಂದಲೇ, ಉಪ ಚುನಾವಣಾ ಪ್ರಚಾರದುದ್ದಕ್ಕೂ ಕೆಸರೆರಚಾಟ ಅತಿರೇಕವನ್ನು ತಲುಪಿತು. ನಿಂದನೆಗಳು ವೈಯಕ್ತಿಕ ಮಟ್ಟಕ್ಕೆ ಇಳಿದವು.

ಚುನಾವಣಾ ಪ್ರಚಾರದ ಕೊನೆಯ ದಿನ ಕಾಂಗ್ರೆಸ್‌ನ ಮುಖಂಡ ಝಮೀರ್ ಅಹ್ಮದ್ ಅವರು ಕುಮಾರಸ್ವಾಮಿಯವರನ್ನು ಸಾರ್ವಜನಿಕವಾಗಿ ‘ಕರಿಯ’ ಎಂದು ಕರೆಯುವ ಮೂಲಕ ಪ್ರಚಾರದ ಮಟ್ಟವನ್ನು ಪಾತಾಳಕ್ಕೆ ಇಳಿಸಿದರು. ಸ್ವತಃ ತನ್ನ ಧರ್ಮದ ಕಾರಣಕ್ಕಾಗಿ ಬೇರೆ ಬೇರೆ ರೀತಿಯ ಜನಾಂಗೀಯ ನಿಂದನೆಗಳನ್ನು ಎದುರಿಸುತ್ತಿರುವ ಝಮೀರ್ ಅಹ್ಮದ್ ಅವರು, ಬಣ್ಣವನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಹೀಯಾಳಿಸಿರುವುದು ಉಪಚುನಾವಣೆಯ ಪ್ರಚಾರಕ್ಕೆ ಬಹುದೊಡ್ಡ ‘ಕಪ್ಪು’ ಚುಕ್ಕೆ. ಇದು ಭಾರೀ ಟೀಕೆ, ಪ್ರತಿ ಟೀಕೆಗೆ ಕಾರಣವಾಯಿತು. ಬಿಜೆಪಿಯ ನಾಯಕರು ಝಮೀರ್ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಇನ್ನಷ್ಟು ಕೆಳಮಟ್ಟಕ್ಕೆ ಇಳಿದರು. ಮಾಧ್ಯಮಗಳು ಕೂಡ ಈ ‘ಕರಿಯ’ ಹೇಳಿಕೆಗೆ ಭಾರೀ ಪ್ರಚಾರವನ್ನು ನೀಡಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಜುಗರವನ್ನುಂಟು ಮಾಡಿದವು. ಝಮೀರ್ ಅಹ್ಮದ್ ಅವರು ‘‘ನನ್ನನ್ನು ಈ ಹಿಂದೆ ಕುಮಾರಸ್ವಾಮಿಯವರು ‘ಕುಳ್ಳ’ ಎಂದು ವ್ಯಂಗ್ಯವಾಡುತ್ತಿದ್ದರು’’ ಪ್ರತಿ ಆರೋಪ ಮಾಡಿ, ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು. ವೈಯಕ್ತಿಕವಾಗಿ ಭೇಟಿಯಾದಾಗ ಆತ್ಮೀಯತೆಯ ಭರದಲ್ಲಿ ಪರಸ್ಪರ ‘ಕರಿಯ’, ‘ಕುಳ್ಳ’ ಎಂದೆಲ್ಲ ಕರೆದರೆ ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಝಮೀರ್ ಅವರು ಸಾರ್ವಜನಿಕವಾಗಿ ಕುಮಾರಸ್ವಾಮಿಯವರನ್ನು ಟೀಕಿಸುವ ಸಂದರ್ಭದಲ್ಲಿ, ಈ ಪದವನ್ನು ಬಳಸಿದ್ದಾರೆ. ಆದುದರಿಂದ, ಇದನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಬಹುಷಃ ಪಕ್ಷದೊಳಗೆ ವರಿಷ್ಠರ ಛೀಮಾರಿಯ ಬಳಿಕ ಝಮೀರ್ ಅವರಿಗೆ ತಪ್ಪಿನ ಅರಿವಾಗಿದ್ದು, ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.

ಝಮೀರ್ ಅವರು ಬಳಸಿದ ‘ಕರಿಯ’ ಪದವನ್ನು ಈ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ವಿರೋಧ ಪಕ್ಷಗಳ ನಾಯಕರು ನಿಂದನೆಯ ರೂಪದಲ್ಲಿ ಎದುರಾಳಿ ನಾಯಕರ ವಿರುದ್ಧ ಬಳಸಿದ್ದಾರೆ. ಆದಿವಾಸಿಗಳು, ದಲಿತರನ್ನು ಅವರ ಬಣ್ಣದ ಕಾರಣಕ್ಕಾಗಿಯೇ ಶತಶತಮಾನಗಳಿಂದ ಶೋಷಿಸುತ್ತಾ ಬಂದಿರುವ ಸಮಾಜ ನಮ್ಮದು. ಬಣ್ಣದ ಆಧಾರದಲ್ಲಿ ಮನುಷ್ಯನ ವ್ಯಕ್ತಿತ್ವವನ್ನು ಅಳೆಯುವ ಮನಸ್ಥಿತಿ ಇಲ್ಲಿ ಇನ್ನೂ ಜೀವಂತವಿದೆ. ‘ಕರಿಯ’ ಎಂಬ ಪದ ಬಳಸಿದ್ದಕ್ಕಾಗಿ ಝಮೀರ್ ಅಹ್ಮದ್ ಅವರನ್ನು ಟೀಕಿಸಿರುವ ಇದೇ ಬಿಜೆಪಿ ನಾಯಕರು, ಈ ಹಿಂದೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣವನ್ನು ಉಲ್ಲೇಖಿಸಿ ನಿಂದಿಸಿದಾಗ ಮೌನವಾಗಿ ಸಮರ್ಥಿಸಿದ್ದರು. ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ಭರದಲ್ಲಿ, ಇಡೀ ಉತ್ತರ ಕರ್ನಾಟಕದ ಜನರನ್ನೇ ಅವರ ಬಣ್ಣವನ್ನು ಮುಂದಿರಿಸಿ ಜ್ಞಾನೇಂದ್ರ ನಿಂದಿಸಿದ್ದರು. ‘‘ಉತ್ತರ ಕರ್ನಾಟಕದ ಜನರಿಗೆ ಹಸಿರು, ಕಾಡಿನ ಬಗ್ಗೆ ಏನು ಗೊತ್ತು? ಅವರು ಬಿಸಿಲಿನಲ್ಲಿ ಸುಟ್ಟು ಕರಕಲಿನಂತಿರುತ್ತಾರೆ. ಖರ್ಗೆಯವರನ್ನು ನೋಡಿದರೇ ಗೊತ್ತಾಗುತ್ತದೆ. ಅವರ ತಲೆಯ ಮೇಲಿನ ಬಿಳಿಕೂದಲಿನಿಂದ ಅವರನ್ನು ಗುರುತು ಹಿಡಿಯಬಹುದು ಅಷ್ಟೇ...’’ಎಂದು ಹೇಳುವ ಮೂಲಕ, ಉತ್ತರ ಕರ್ನಾಟಕದ ಜನರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಮೂಲಕ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರ ಕರ್ನಾಟಕದ ಬಗ್ಗೆ ಎಂತಹ ಮನಸ್ಥಿತಿಯನ್ನು ಹೊಂದಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು. ಆಗ ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಬಿಜೆಪಿ ಆಳದಲ್ಲಿ ಜನರನ್ನು ಬಣ್ಣದ ಆಧಾರದಿಂದಲೇ ವಿಂಗಡಿಸುತ್ತಾ ಬಂದಿದೆ. ಜಾತೀಯತೆಯೂ ಬಣ್ಣದ ತಳಹದಿಯ ಮೇಲೆಯೇ ನಿಂತಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಈ ಹಿಂದೆ ಇದೇ ಬಿಜೆಪಿ ಐಟಿ ಸೆಲ್‌ಗಳು ಕುಮಾರಸ್ವಾಮಿಯವರನ್ನು ‘ಕರಿ ಇಡ್ಲಿ’ ಎಂದು ಟ್ರೋಲ್ ಮಾಡಿತ್ತು. ಆಗಲೂ ಬಿಜೆಪಿ ನಾಯಕರಿಗೆ ಅದು ತಪ್ಪು ಅನ್ನಿಸಿರಲಿಲ್ಲ. ಯಾವಾಗ ಕುಮಾರಸ್ವಾಮಿಯವರು ಬಿಜೆಪಿಯ ಜೊತೆಗೆ ಕೈ ಜೋಡಿಸಿದರೋ ಅಲ್ಲಿಂದ, ಕುಮಾರಸ್ವಾಮಿಯ ಬಣ್ಣದ ಬಗ್ಗೆ ಬಿಜೆಪಿಗೆ ಅನುಕಂಪ ಬಂದು ಬಿಟ್ಟಿದೆ. ‘ಕರಿಯ’ ಪದವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿರುವ ಮಾಧ್ಯಮದಲ್ಲಿರುವ ಮಂದಿ ಕೂಡ ಬಣ್ಣದ ಕುರಿತಂತೆ ಪೂರ್ವಾಗ್ರಹದಲ್ಲಿ ಹಿಂದೆ ಬಿದ್ದಿಲ್ಲ. ಕನ್ನಡದ ಹಿರಿಯ ಪತ್ರಕರ್ತರೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಣ್ಣವನ್ನು ಕಾಗೆಗೆ ಹೋಲಿಸಿ ನಿಂದಿಸಿದ್ದರು. ‘‘... ಮರುಭೂಮಿಯಲ್ಲಿ ನಿಂತರೆ ಥೇಟು ಸುಟ್ಟು ಕರಕಲಾದ ಕಾಗೆ. ಮುರ್ಮು ಅವತಾರ...’’ ಎಂದು ಬರೆದು ರಾಷ್ಟ್ರೀಯ ಮಹಿಳಾ ಆಯೋಗದಿಂದ ನೋಟಿಸ್ ಪಡೆದಿದ್ದರು. ಆ ಬಳಿಕ ಅವರು ಬೇಷರತ್ ಕ್ಷಮೆಯಾಚನೆ ಮಾಡುವ ಸ್ಥಿತಿ ನಿರ್ಮಾಣವಾಯಿತು. ನಮ್ಮ ಸಮಾಜ ಎಷ್ಟರಮಟ್ಟಿಗೆ ಜಾತೀಯವಾಗಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ವಿಪರ್ಯಾಸವೆಂದರೆ, ಬಣ್ಣದ ಕಾರಣಕ್ಕಾಗಿ ನಿಂದನೆಯನ್ನು ಎದುರಿಸಿದ ಇದೇ ಕುಮಾರಸ್ವಾಮಿಯವರು, ಒಂದು ಸಮುದಾಯದ ವಿರುದ್ಧ ಅವರ ಧರ್ಮದ ಕಾರಣಕ್ಕಾಗಿ ದ್ವೇಷವನ್ನು ಕಾರುವ ಮಟ್ಟಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ಮುಸ್ಲಿಮರ ವಿರುದ್ಧ ಒಕ್ಕಲಿಗ ಸಮುದಾಯವನ್ನು ಎತ್ತಿ ಕಟ್ಟಿ ಆರೆಸ್ಸೆಸ್‌ನ ಮುದ್ದಿನ ಮಗುವಾಗಲು ಯತ್ನಿಸುತ್ತಿರುವ ಕುಮಾರಸ್ವಾಮಿಯ ಒಳಗಿರುವ ಜಾತಿವಾದಿ, ಕೋಮುವಾದಿಯ ಮುಂದೆ ಈ ಕರಿಯ ಪದ ಏನೇನೂ ಅಲ್ಲ. ಕುಮಾರಸ್ವಾಮಿಯವರ ಜಾತೀಯ ಮತ್ತು ಕೋಮುವಾದಿ ಮನಸ್ಥಿತಿಗೆ ಅಲ್ಲಿನ ಅಲ್ಪಸಂಖ್ಯಾತರು ಈಗಾಗಲೇ ಭಾರೀ ಬೆಲೆಯನ್ನು ತೆತ್ತಿದ್ದಾರೆ.

ಕನ್ನಡ ನಾಡನ್ನು ಕರುನಾಡು ಎಂದು ಕರೆಯುತ್ತಾರೆ. ಇದು ಕಪ್ಪು ಮಣ್ಣಿನ ನಾಡು. ಕಪ್ಪು ಮಣ್ಣು ಫಲವತ್ತಾದ ನೆಲವೆಂದು ಗುರುತಿಸಲ್ಪಡುತ್ತದೆ. ಶ್ರೀ ಕೃಷ್ಣ , ಶ್ರೀರಾಮ ಮೊದಲಾದ ದೇವರನ್ನು ಕಪ್ಪು ಬಣ್ಣದಿಂದ ಈ ನೆಲ ಗುರುತಿಸುತ್ತಾ ಬಂದಿದೆ. ಶಿವನ ಬಣ್ಣವೂ ಕಪ್ಪು. ಕಸ್ತೂರಿಯ ಬಣ್ಣವೂ ಕಪ್ಪು. ಯಾವಾಗ ಜಾತಿ, ಧರ್ಮದ ಮೇಲರಿಮೆ ಕಪ್ಪನ್ನು ನಿಕೃಷ್ಟವಾಗಿ ಕಾಣಲಾರಂಭಿಸಿತೋ ಆಗಲೇ ನಮ್ಮ ಸಮಾಜದ ಪತನ ಆರಂಭವಾಯಿತು. ಇತ್ತೀಚೆಗೆ ಮಂಡ್ಯದಲ್ಲಿ ದೇವಸ್ಥಾನದೊಳಗೆ ದಲಿತರು ಪ್ರವೇಶಿಸಿದರು ಎಂದು ಒಂದು ಸಮುದಾಯ ದೇವರ ಮೂರ್ತಿಯನ್ನೇ ಅಲ್ಲಿಂದ ಸ್ಥಳಾಂತರಿಸಿದ ಘಟನೆ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಈ ಮೂಲಕ ನಮ್ಮ ಸಮಾಜದ ನಿಜವಾದ ಬಣ್ಣ ಬಯಲಾಯಿತು. ಯಥಾ ರಾಜಾ ತಥಾ ಪ್ರಜಾ ಎಂಬಂತೆ, ನಮ್ಮ ರಾಜಕಾರಣಿಗಳಂತೆಯೇ ನಮ್ಮ ಪ್ರಜೆಗಳು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಬಣ್ಣದಿಂದ ಸಮಾಜವನ್ನು, ಜನರನ್ನು ಅಳೆಯುವ ಮನಸ್ಥಿತಿಯಿಂದ ಹೊರ ಬರದೆ ನಾವು ಸಮೃದ್ಧ ನಾಡನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಮೊದಲು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News