ಪಟಾಕಿ: ಸ್ಫೋಟಿಸಿದ ಸುಪ್ರೀಂಕೋರ್ಟ್

Update: 2024-11-13 04:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಟಾಕಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ಆದೇಶವೊಂದನ್ನು ನೀಡಿದೆ. ದಿಲ್ಲಿಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕಾಗಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ನಗರದಲ್ಲಿ ಪಟಾಕಿಗಳ ಮಾರಾಟ ಮತ್ತು ಸಿಡಿಸುವುದನ್ನು ನಿಲ್ಲಿಸಲು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ದಿಲ್ಲಿಯ ವಾಯುಗುಣಮಟ್ಟ ಬಿಕ್ಕಟ್ಟು ಕುರಿತ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ‘ಯಾವುದೇ ಧರ್ಮವು ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ. ಈ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸಿದರೆ ಅದು ನಾಗರಿಕರ ಆರೋಗ್ಯದ ಮೂಲಭೂತ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ’ ಎಂದು ಹೇಳಿದ್ದಾರೆ. ಹಾಗೆಯೇ ನಗರದಲ್ಲಿ ಪಟಾಕಿಗಳನ್ನು ಶಾಶ್ವತವಾಗಿ ನಿಷೇಧಿಸುವ ಕುರಿತಂತೆ ನವೆಂಬರ್ ೨೫ರ ಒಳಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ದಿಲ್ಲಿ ಸರಕಾರವನ್ನು ಆಗ್ರಹಿಸಿದೆ. ಕಳೆದ ಕೆಲವು ವರ್ಷಗಳಿಂದ ದಿಲ್ಲಿಯ ವಾಯು ಮಾಲಿನ್ಯ ಉಸಿರಾಡುವುದಕ್ಕೇ ಕಷ್ಟ ಎನ್ನುವಷ್ಟು ಕೆಟ್ಟು ಹೋಗಿದೆ. ಇದಕ್ಕಾಗಿ ನೆರೆ ರಾಜ್ಯಗಳ ಗಡಿಭಾಗದಲ್ಲಿರುವ ರೈತರನ್ನು ಹೊಣೆ ಮಾಡುತ್ತಾ ಬರಲಾಗಿದೆ. ರೈತರು ತಮ್ಮ ಗದ್ದೆಯ ಕಳೆಗಳನ್ನು ಸುಟ್ಟು ಹಾಕುವುದರ ಕಾರಣದಿಂದಾಗಿ ದಿಲ್ಲಿಯ ವಾಯುಮಾಲಿನ್ಯ ಹೆಚ್ಚುತ್ತಿದೆ ಎನ್ನುವುದು ಸರಕಾರದ ಆರೋಪ. ಆದರೆ ರೈತ ವರ್ಗ ಈ ಆರೋಪ ಪೂರ್ಣ ಸತ್ಯವಲ್ಲ ಎಂದು ಸ್ಪಷ್ಟೀಕರಣ ನೀಡುತ್ತಲೇ ಬರುತ್ತಿದೆ. ನಗರಗಳಲ್ಲಿ ಪರಿಸರ ಮಾಲಿನ್ಯ ಉಂಟಾದರೆ, ದೂರದ ಹಳ್ಳಿಯಲ್ಲಿರುವ ರೈತರ ತಲೆಗೆ ಕಟ್ಟಲು ಹಿಂಜರಿಯದ, ಅವರ ಮೇಲೆ ಮೊಕದ್ದಮೆಗಳನ್ನು ದಾಖಲಿಸುವ ಇದೇ ರಾಜಕಾರಣಿಗಳು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯ ಬಗ್ಗೆ ಜಾಣ ಮೌನ ತಾಳುತ್ತಾರೆ. ಇದರ ಜೊತೆ ಜೊತೆಗೆ ಹಬ್ಬಗಳ ಹೆಸರಿನಲ್ಲಿ ಹಗಲು ರಾತ್ರಿ ಪಟಾಕಿಗಳನ್ನು ಸುಡುತ್ತಾ ಈ ಮಾಲಿನ್ಯಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಪಟಾಕಿಯ ವಿರುದ್ಧ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಅದಕ್ಕೆ ಧರ್ಮದ ಬಣ್ಣ ಕೊಟ್ಟು, ತಮ್ಮ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಈ ಕಾರಣದಿಂದಲೇ, ದಿಲ್ಲಿಯ ಮಾತ್ರವಲ್ಲ, ದೇಶದ ಪರಿಸರ ದಿನದಿಂದ ದಿನಕ್ಕೆ ಕೆಡುತ್ತಿದೆ. ಭಾರತದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಈಗಾಗಲೇ ವಿಶ್ವಸಂಸ್ಥೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.

ಪಟಾಕಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ನ ನಿರ್ದೇಶನ ಬರೇ ದಿಲ್ಲಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯವಾಗಬೇಕಾಗಿದೆ. ಯಾವುದೇ ಧರ್ಮದ ಯಾವುದೇ ಹಬ್ಬಗಳು ಪರಿಸರ ಮಾಲಿನ್ಯವನ್ನು ಉತ್ತೇಜಿಸುವುದಿಲ್ಲ. ಹಬ್ಬಗಳು ಜಗತ್ತಿಗೆ, ಮಾನವ ಕುಲಕ್ಕೆ ಒಳಿತನ್ನು ಹರಡುವ ಉದ್ದೇಶದೊಂದಿಗೆ ಬರುತ್ತದೆ. ಆದರೆ ಮನುಷ್ಯನ ತಪ್ಪು ನಡೆಗಳು ಹಬ್ಬಗಳ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ. ಪರಿಣಾಮವಾಗಿ ಬೆಳಕನ್ನು ಹೊತ್ತು ತರುವ ದೀಪಾವಳಿ ಹಲವು ಬಾರಿ ಇನ್ನಷ್ಟು ಕತ್ತಲನ್ನು ತುಂಬಿ ಹೋಗುತ್ತದೆ. ಭಾರತದ ಎಲ್ಲ ಹಬ್ಬಗಳು ಪ್ರಕೃತಿಯ ಜೊತೆಗೆ ನೇರ ಸಂಬಂಧವನ್ನು ಹೊಂದಿವೆ. ಕೃಷಿ, ಮರ ಗಿಡಗಳು, ನೆಲ ಜಲದೊಂದಿಗೆ ಈ ಹಬ್ಬಗಳು ಬೆಸೆದುಕೊಂಡಿವೆೆ. ವಿಪರ್ಯಾಸವೆಂದರೆ, ಈ ಹಬ್ಬಗಳ ಹೆಸರಿನಲ್ಲೇ ನಾವು ಮರಗಿಡಗಳಿಗೆ, ಪರಿಸರಕ್ಕೆ ಧಕ್ಕೆಯನ್ನು ತರುತ್ತೇವೆ. ಇಂದು ಪಟಾಕಿಯನ್ನು ದೀಪಾವಳಿಯ ಸಂದರ್ಭದಲ್ಲಿ ಅನಿವಾರ್ಯ ಮಾಡಿರುವುದು ಯಾವುದೇ ಧರ್ಮವಲ್ಲ. ಇದರ ಹಿಂದಿರುವ ಉದ್ಯಮ ಪತಿಗಳು. ಪಟಾಕಿಗೂ ಬೆಳಕಿಗೂ ಯಾವ ಸಂಬಂಧವೂ ಇಲ್ಲ. ದೀಪಾವಳಿಗೆ ಸಂಬಂಧವಿರುವುದು ಹಣತೆಯ ಜೊತೆಗೆ. ಪಟಾಕಿ ಸದ್ದು ಮಾಡುತ್ತಾ ಉರಿದು ಬೂದಿಯಾಗುತ್ತದೆ. ಗಂಧಕದ ವಾಸನೆಯನ್ನು, ಮಾಲಿನ್ಯವನ್ನು, ಹೊಗೆಯನ್ನು ಬಿಟ್ಟು ಹೋಗುತ್ತದೆ. ಬಳಿಕ ಉಳಿಯುವುದು ಗಾಢ ಕತ್ತಲೆ. ಆದರೆ ಹಣತೆ, ರಾತ್ರಿಯಿಡೀ ಬೆಳಗುತ್ತಾ ಬದುಕಿಗೆ ಸಂದೇಶವನ್ನು, ಭರವಸೆಯನ್ನು ನೀಡುತ್ತದೆ. ವಿಪರ್ಯಾಸವೆಂದರೆ, ರಾಜಕೀಯ ಕಾರಣಕ್ಕಾಗಿ ಕೆಲವರು ಹಬ್ಬಗಳ ಮೇಲೆ ಬಲವಂತವಾಗಿ ಪಟಾಕಿಗಳನ್ನು ಹೇರುತ್ತಾ ಬಂದಿದ್ದಾರೆ. ಹಬ್ಬಗಳು ಪಟಾಕಿಗಳಿಲ್ಲದೆ ನಡೆಯುವುದಿಲ್ಲ ಎನ್ನುವುದನ್ನು ನಂಬಿಸಿದ್ದಾರೆ.

ಪಟಾಕಿಗಳಿಂದ ಕೇವಲ ಪರಿಸರ ಮಾಲಿನ್ಯ ಮಾತ್ರ ಆಗುತ್ತಾ ಬಂದಿರುವುದಲ್ಲ. ಪ್ರತಿ ವರ್ಷ ಸಾವಿರಾರು ಮಂದಿ ಈ ಪಟಾಕಿ ದುರಂತಗಳಿಂದ ಸಂತ್ರಸ್ತರಾಗುತ್ತಾ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಕೇರಳದಲ್ಲಿ ಪಟಾಕಿ ದುರಂತದಲ್ಲಿ ೨೦೦ಕ್ಕೂ ಅಧಿಕ ಮಂದಿ ಗಾಯಗೊಂಡರು. ಇವರಲ್ಲಿ ೧೦ ಜನರ ಸ್ಥಿತಿ ಗಂಭೀರವಾಗಿದೆ. ಪಟಾಕಿ ಸ್ಫೋಟಗಳಿಗಾಗಿ ಕೇರಳ, ತಮಿಳು ನಾಡು ಕುಖ್ಯಾತಿಯನ್ನು ಪಡೆದಿವೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಕಣ್ಣುಗಳನ್ನು ಕಳೆದುಕೊಳ್ಳುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿವೆ. ಪ್ರಾಣಿ,ಪಕ್ಷಿಗಳು, ಆಸ್ಪತ್ರೆಗಳಲ್ಲಿರುವ ರೋಗಿಗಳು ಈ ಪಟಾಕಿಗಳಿಂದ ಅನುಭವಿಸುತ್ತಿರುವ ತೊಂದರೆ ಬೇರೆಯೇ ಇದೆ. ಇದೇ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವ ವಿಷಯದಲ್ಲೇ ಜಗಳಗಳು ನಡೆದು ಅಂತಿಮವಾಗಿ ಅದು ಸಾವುನೋವುಗಳಿಗೆ ಕಾರಣವಾಗುವುದಿದೆ. ಇಷ್ಟಾದರೂ, ಕೆಲವು ರಾಜಕಾರಣಿಗಳು ಯಾವುದೇ ನಾಚಿಕೆಯಿಲ್ಲದೆ ವೇದಿಕೆಯ ಮೇಲೆ ನಿಂತು ಪಟಾಕಿಗಳನ್ನು ಸುಡಲು ಕರೆ ನೀಡುತ್ತಿದ್ದಾರೆ. ಇತ್ತೀಚೆಗೆ ತಮಿಳು ನಾಡಿನ ಬಿಜೆಪಿ ನಾಯಕರೊಬ್ಬರು ‘‘ಪಟಾಕಿಗಳನ್ನು ಹಬ್ಬದ ಸಂದರ್ಭದಲ್ಲಿ ಸುಡಬೇಕು’’ ಎಂದು ಬಹಿರಂಗವಾಗಿ ಕರೆ ನೀಡಿದರು. ಹೀಗೆ ಕರೆ ನೀಡಿದ ಮರುದಿನವೇ ಕೇರಳದಲ್ಲಿ ಪಟಾಕಿ ಗೋದಾಮು ಸ್ಫೋಟಗೊಂಡು ನೂರಾರು ಜನರು ಗಾಯಗೊಂಡರು. ಪಟಾಕಿ ಸುಡಲು ವೇದಿಕೆಗಳಲ್ಲಿ ನಿಂತು ಬಹಿರಂಗವಾಗಿ ಕರೆ ನೀಡುವ ಈ ರಾಜಕಾರಣಿಗಳು ಪಟಾಕಿ ಸುಡುವ ಸಂದರ್ಭದಲ್ಲಿ ನಡೆಯುವ ದುರಂತಗಳ ಹೊಣೆ ಹೊತ್ತುಕೊಳ್ಳಲು ಸಿದ್ಧರಿದ್ದಾರೆಯೆ? ಪಟಾಕಿಗಳಿಗೆ ಬೆಂಬಲ ನೀಡುವ ರಾಜಕಾರಣಿಗಳನ್ನೇ, ಇಂತಹ ಪಟಾಕಿ ದುರಂತಗಳಿಗೆ ನೇರವಾಗಿ ಹೊಣೆ ಮಾಡಬೇಕಾಗಿದೆ.

ಮುಖ್ಯವಾಗಿ ಇವರು ಪಟಾಕಿಗಳನ್ನು ಬೆಂಬಲಿಸುವುದು ಧರ್ಮಗಳ ಮೇಲಿನ ಪ್ರೀತಿಯಿಂದ ಅಲ್ಲ. ಯಾಕೆಂದರೆ ಪಟಾಕಿಗಳು ಹುಟ್ಟುವ ಮೊದಲೇ ಈ ಹಬ್ಬಗಳು ಹುಟ್ಟಿವೆ. ಇವರು ಬೆಂಬಲಿಸುತ್ತಿರುವುದು ಪಟಾಕಿಗಳ ಹಿಂದಿರುವ ಮಾಫಿಯಾವನ್ನು. ಈ ಪಟಾಕಿ ಉದ್ಯಮದೊಂದಿಗೆ ಭಾರೀ ಅಕ್ರಮಗಳು ತಳಕು ಹಾಕಿಕೊಂಡಿವೆ. ಮುಖ್ಯವಾಗಿ, ಮಹಿಳೆಯರು ಮತ್ತು ಮಕ್ಕಳನ್ನು ಶೋಷಿಸುವುದರಲ್ಲಿ ಈ ಪಟಾಕಿ ಉದ್ಯಮ ಕುಖ್ಯಾತವಾಗಿವೆ. ಇದೇ ಸಂದರ್ಭದಲ್ಲಿ ಪಟಾಕಿಗಳ ಹೆಸರಿನಲ್ಲಿಯೇ ಅಕ್ರಮ ಸ್ಫೋಟಕಗಳನ್ನು ತಯಾರಿಸುವುದು, ಅವುಗಳನ್ನು ದಾಸ್ತಾನು ಮಾಡುವ ಕೆಲಸಗಳೂ ವ್ಯಾಪಕವಾಗಿ ನಡೆಯುತ್ತಿವೆ. ಬೃಹತ್ ಕಲ್ಲುಕೋರೆ ಗಣಿಗಾರಿಕೆಗಳು ಮತ್ತು ಪಟಾಕಿ ಉದ್ಯಮಗಳ ನಡುವೆ ಅನೈತಿಕ ಸಂಬಂಧಗಳಿವೆ. ಈ ಸಂಬಂಧಗಳ ಮಧ್ಯವರ್ತಿಗಳಾಗಿ ರಾಜಕಾರಣಿಗಳು ಕೆಲಸ ಮಾಡುತ್ತಿರುವ ಕಾರಣದಿಂದ ಪಟಾಕಿ ಉದ್ಯಮವನ್ನು ಇವರು ಜೀವಂತವಾಗಿಡಲು ಬಯಸಿದ್ದಾರೆ. ನೆಪಕ್ಕೆ ಧರ್ಮದ ಹೆಸರನ್ನು, ಹಬ್ಬಗಳ ಹೆಸರುಗಳನ್ನು ಬಳಸುತ್ತಿದ್ದಾರೆ. ಈ ಪಟಾಕಿ ಸ್ಫೋಟಕಗಳ ಲಾಭವನ್ನು ದೇಶದಲ್ಲಿರುವ ದುಷ್ಕರ್ಮಿಗಳೂ ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದಾರೆ. ಒಂದು ರೀತಿಯಲ್ಲಿ ಪಟಾಕಿ ಉದ್ಯಮ ತನ್ನ ಕಳಂಕವನ್ನು ಧರ್ಮಗಳ, ಹಬ್ಬಗಳ ಮೂತಿಗೆ ಒರೆಸಿ, ಸಮಾಜದಲ್ಲಿ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದೆ.

ಪಟಾಕಿ ಉದ್ಯಮವನ್ನು ರಾಜಕಾರಣಿಗಳು ಬೇಕಾದರೆ ‘ಉದ್ಯಮ’ದ ಹೆಸರಿನಲ್ಲಿ ಪೋಷಿಸಲಿ. ಆದರೆ ಧರ್ಮದ ಹೆಸರಿನಲ್ಲಿ, ಹಬ್ಬದ ಹೆಸರಿನಲ್ಲಿ ಬೇಡ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನ ಆದೇಶ ಕೇವಲ ದಿಲ್ಲಿಗೆ ಸೀಮಿತವಾಗದೆ, ಇಡೀ ದೇಶಕ್ಕೆ ಅನ್ವಯವಾಗುವಂತೆ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು. ಪರಿಸರವನ್ನು ಅಗಾಧವಾಗಿ ಗೌರವಿಸುತ್ತಾ ಬಂದಿರುವ ಭಾರತೀಯ ಸಮಾಜದಲ್ಲಿ ಹಬ್ಬಗಳ ಹೆಸರಿನಲ್ಲಿ ಪರಿಸರಕ್ಕೆ, ಮನುಷ್ಯರಿಗೆ ಹಾನಿ ತರುವ ಆಚರಣೆಗಳನ್ನು ಕೈ ಬಿಡುವುದು ಇಂದಿನ ಅಗತ್ಯವಾಗಿದೆ. ಈ ಮೂಲಕ ನಾವು ಹಬ್ಬಗಳ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News