ಬಿಜೆಪಿಯಿಂದ 50 ಕೋಟಿ ಆಮಿಷ : ಕಾಂಗ್ರೆಸ್ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ

Update: 2024-11-15 05:38 GMT

PC: fb.com

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ಉಪಚುನಾವಣೆ ಮುಗಿದಿದೆಯಾದರೂ, ಕಾಂಗ್ರೆಸ್-ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಿಂತಿಲ್ಲ. ಉಪಚುನಾವಣೆಯ ಫಲಿತಾಂಶದ ಮೇಲೆ ರಾಜ್ಯ ಸರಕಾರದ ಭವಿಷ್ಯ ನಿಂತಿದೆ ಎಂದು ಬಿಜೆಪಿ ಹೇಳುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಬಿಜೆಪಿಯು ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಮಿಷವನ್ನು ಒಡ್ಡಿದೆ’’ ಎನ್ನುವ ಗಂಭೀರ ಆರೋಪ ಮಾಡಿದ್ದಾರೆೆ. ‘‘ಬಿಜೆಪಿಯವರು ಎಂದೂ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದವರಲ್ಲ. ಸಾಕಷ್ಟು ಭ್ರಷ್ಟಾಚಾರ ಮಾಡಿ ಲಂಚದಿಂದ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಆ ಹಣದಿಂದ ನಮ್ಮ 50 ಶಾಸಕರನ್ನು ತಲಾ 50 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಲು ಯತ್ನಿಸಿದ್ದರು. ಅವರು ಯಾರೂ ಹೋಗಲಿಲ್ಲ. ಹಾಗಾಗಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆ ಆರೋಪವನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ. ‘‘ಆಮಿಷ ಒಡ್ಡಿರುವುದು ಸತ್ಯ. ಆಪರೇಷನ್ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ. ಈ ವಿಚಾರವನ್ನು ಸಿಎಂ ಖುದ್ದಾಗಿ ನನ್ನ ಬಳಿ ಹಂಚಿಕೊಂಡಿದ್ದಾರೆ’’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಿಗೇ ‘‘ಶಾಸಕರಿಗೆ 50 ಕೋಟಿ ರೂ. ಆಮಿಷ ಆರೋಪದ ಬಗ್ಗೆ ಈ.ಡಿ. ತನಿಖೆಯಾಗಲಿ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ. ‘‘ಸರಕಾರ ಬೀಳಿಸಲು ಸಾವಿರಾರು ಕೋಟಿ ರೂ. ಬಂಡವಾಳ ಹೂಡಲು ತಯಾರಾಗಿರುವವರು ಯಾರು ಎಂಬುದು ಬಹಿರಂಗವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ.ಡಿ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ತುರ್ತು ಅಗತ್ಯವಿದೆ’’ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಒತ್ತಾಯದಲ್ಲೂ ಸತ್ಯವಿದೆ. ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಮಿಷ ಒಡ್ಡಿರುವುದು ನಿಜವೇ ಆಗಿದ್ದರೆ ಈ ಸಂಬಂಧ ಯಾಕೆ ದೂರು ದಾಖಲಿಸಬಾರದು? ಯಾವೆಲ್ಲ ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆಯೋ ಅವರಿಂದ ದೂರು ಕೊಡಿಸಿ ತನಿಖೆಗೆ ಅವಕಾಶ ಕೊಡಬಹುದಲ್ಲ? ಆರೋಪಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯೇ ತನಿಖೆಗೆ ಒತ್ತಾಯಿಸುತ್ತಿರುವಾಗ, ಕಾಂಗ್ರೆಸ್‌ಗೆ ದೂರು ದಾಖಲಿಸಲು ಇರುವ ಅಡ್ಡಿಯಾದರೂ ಏನು? ಎನ್ನುವ ಪ್ರಶ್ನೆಗಳು ಏಳುತ್ತವೆ. ಇದೀಗ ಉಪಚುನಾವಣೆಗಳು ಮುಗಿದಿವೆ. ಫಲಿತಾಂಶಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ, ಮತ್ತೆ ಈ ಕುದುರೆ ವ್ಯಾಪಾರ ಕುದುರುವ ಸಾಧ್ಯತೆಗಳು ಇಲ್ಲದಿಲ್ಲ. ಭವಿಷ್ಯದಲ್ಲಿ ಸರಕಾರವನ್ನು ದುರ್ಬಲಗೊಳಿಸುವ ಸಂಚುಗಳನ್ನು ವಿಫಲಗೊಳಿಸುವ ದೃಷ್ಟಿಯಿಂದಲಾದರೂ, ಕಾಂಗ್ರೆಸ್ ಸರಕಾರ ಈ ಕೋಟ್ಯಂತರ ರೂಪಾಯಿ ಆಮಿಷದ ತನಿಖೆಗೆ ಮುಂದಾಗಬೇಕು. ಇದೇ ಸಂದರ್ಭದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ‘ಇದು ನೀವು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ನಿಮ್ಮ ಈ ಹೇಳಿಕೆ ಕಾಂಗ್ರೆಸ್ ಘಟಕವು ಶಾಸಕರನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಹಾಗೂ ನಿಮ್ಮನ್ನು ಸುತ್ತುವರಿದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎನ್ನುವುದು ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೆ ಅರಿವಾಗುತ್ತದೆ’’ ಎಂದೂ ಹೇಳಿಕೊಂಡಿದ್ದಾರೆ. ಇದು ಮಾತ್ರ ತಮಾಷೆಯಾಗಿದೆ. ಈ ಹಿಂದೆ ಬಿಜೆಪಿ ಎರಡೆರಡು ಬಾರಿ ಸರಕಾರ ರಚನೆ ಮಾಡಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸಂಪೂರ್ಣ ಮರೆತಂತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದಾಗ, ಸರಕಾರದೊಳಗಿರುವ ಶಾಸಕರನ್ನು ಕೊಂಡು ಅವರನ್ನು ರೆಸಾರ್ಟ್‌ನಲ್ಲಿರಿಸಿ ಸರಕಾರವನ್ನು ಉರುಳಿಸಿತು ಮಾತ್ರವಲ್ಲ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಸರಕಾರ ರಚನೆ ಮಾಡಿತು. ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳನ್ನು ರಾಜೀನಾಮೆ ಕೊಡಿಸಿ ಅವರನ್ನು ಮತ್ತೆ ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಮಾಡಿ ಪ್ರಜಾಸತ್ತೆಯ ಗೌರವ, ಘನತೆಯನ್ನು ಮೂರಾಬಟ್ಟೆ ಮಾಡಿದ್ದು ಬಿಜೆಪಿಯೇ ಆಗಿದೆ. ಆದುದರಿಂದ, ಕಾಂಗ್ರೆಸ್ ಆರೋಪವನ್ನು ಸಂಪೂರ್ಣ ತಿರಸ್ಕರಿಸಲು ಆಗುವುದಿಲ್ಲ . ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುವ ಮೊದಲೇ ಬಿಜೆಪಿಯ ಹಲವು ನಾಯಕರು ‘ಆಪರೇಷನ್ ಕಮಲ’ದ ಬೆದರಿಕೆಯನ್ನು ಒಡ್ಡಿದ್ದರು ಎನ್ನುವುದನ್ನು ವಿಜಯೇಂದ್ರ ಮರೆಯಬಾರದು.

ಇದೇ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧ ಆರೋಪ ಮಾಡುವ ಮೊದಲು, ಕಾಂಗ್ರೆಸ್ ಪಕ್ಷದ ತನ್ನ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. 2008ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾದವರು ಯೋಗೇಶ್ವರ್. 2020ರಲ್ಲಿ ಬಿಜೆಪಿ ಆಪರೇಷನ್ ಕಮಲದಲ್ಲಿ ಮತ್ತೆ ಮಹತ್ವದ ಪಾತ್ರವನ್ನು ಯೋಗೇಶ್ವರ್ ನಿರ್ವಹಿಸಿದರು. ಕೊರೋನ ಹಗರಣದಲ್ಲಿ ಬಿಜೆಪಿಯ ಪಾತ್ರವನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿತು. ಆದರೆ ಕೋರೋನ ಹಗರಣ ನಡೆಯುತ್ತಿರುವಾಗ, ಕಾಂಗ್ರೆಸ್‌ನ ಚನ್ನಪಟ್ಟಣದ ಅಭ್ಯರ್ಥಿ ಯೋಗೇಶ್ವರ್ ಅವರು ಬಿಜೆಪಿಯ ಸರಕಾರದೊಳಗೆ ಮಹತ್ವದ ಸ್ಥಾನವನ್ನು ನಿರ್ವಹಿಸುತ್ತಿದ್ದರು. ಕೊರೋನ ಹಗರಣವನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷ ಏನೆಲ್ಲ ಟೀಕೆಗಳನ್ನು ಮಾಡಿದೆಯೋ ಆ ಟೀಕೆ ಮೊದಲು ಇರಿಯುತ್ತಾ ಹೋಗುವುದು ಅವರದೇ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಅವರನ್ನು ಎನ್ನುವ ವಾಸ್ತವವನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ತಮ್ಮದೇ ಸರಕಾರವನ್ನು ಉರುಳಿಸಲು ಮಹತ್ವದ ಪಾತ್ರವನ್ನು ವಹಿಸಿರುವ ಯೋಗೇಶ್ವರ್ ಅವರನ್ನು ಈ ಬಾರಿ ಕಾಂಗ್ರೆಸ್ ತನ್ನ ಪಕ್ಷಕ್ಕೆ ಕರೆಸಿ ಅವರಿಗೆ ಚನ್ನಪಟ್ಟಣದ ಟಿಕೆಟ್‌ನ್ನು ನೀಡಿತು. ಈ ಮೂಲಕ ಕಾಂಗ್ರೆಸ್ ಪಕ್ಷವೇ ಪರೋಕ್ಷವಾಗಿ ಆಪರೇಷನ್ ಕಮಲವನ್ನು ಸಮರ್ಥಿಸಿಕೊಂಡಂತಾಗಿದೆ. ಒಂದು ಕಾಲದಲ್ಲಿ ಬಿಜೆಪಿಯ ಹಣ, ಅಧಿಕಾರ ಆಮಿಷಕ್ಕೆ ಬಲಿಯಾಗಿದ್ದ ಯೋಗೇಶ್ವರ್ ಅವರನ್ನು ಸ್ವತಃ ಕಾಂಗ್ರೆಸ್ ರಾಜಹಾಸು ಹಾಸಿ ತನ್ನ ಪಕ್ಷಕ್ಕೆ ಸ್ವಾಗತಿಸಬಹುದಾದರೆ, ಬಿಜೆಪಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಯಾಕೆ ಸ್ವೀಕರಿಸಬಾರದು ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಆಪರೇಷನ್ ಕಮಲ ಸಂವಿಧಾನ ವಿರೋಧಿಯಾದದ್ದು, ಪ್ರಜಾಸತ್ತೆಗೆ ಮಾರಕವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಟೀಕಿಸುವ ನೈತಿಕತೆಯನ್ನು ಕಾಂಗ್ರೆಸ್ ಎಷ್ಟರಮಟ್ಟಿಗೆ ಉಳಿಸಿಕೊಂಡಿದೆ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಬಿಜೆಪಿ ತನ್ನ ಪಕ್ಷದ ಶಾಸಕರನ್ನು ಕೊಂಡುಕೊಳ್ಳಲು ಮುಂದಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೆದರಿಕೊಂಡರೆ ಅದರ ಅರ್ಥ, ತಮ್ಮನ್ನು ತಾವು ಮಾರಿಕೊಳ್ಳಲು ಕಾಂಗ್ರೆಸ್‌ನೊಳಗಿರುವ ಶಾಸಕರು ಸಿದ್ಧರಿದ್ದಾರೆ ಎಂದಾಗುತ್ತದೆ. ತಲಾ 50 ಕೋಟಿಗೆ ಮಾರಾಟವಾಗಲು ಸಿದ್ಧರಾಗಿಲ್ಲ ಎನ್ನುವುದರ ಅರ್ಥ ಅವರು ಪ್ರಾಮಾಣಿಕರು ಎಂದಾಗಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಅವರು ನಿರೀಕ್ಷಿಸಿದ ಬೆಲೆ ಸಿಕ್ಕಿಲ್ಲ ಎಂದು ಅದರ ಅರ್ಥ. ಸರಿಯಾದ ಬೆಲ್ಡೆ ಸಿಕ್ಕಿದರೆ ಬಿಜೆಪಿಯ ಸಿದ್ಧಾಂತವನ್ನು ಮೆದುಳಲ್ಲಿ ತುಂಬಿಕೊಳ್ಳಲು ಸಿದ್ಧ ಎನ್ನುವ ಶಾಸಕರನ್ನು ಪಕ್ಷದೊಳಗೆ ಬೆಳೆಸಿರುವುದು ಕಾಂಗ್ರೆಸ್‌ನ ತಪ್ಪು. ಜಾತ್ಯತೀತ ಬದ್ಧತೆಯುಳ್ಳ ನಾಯಕರನ್ನು ಬೆಳೆಸಿ ಅವರನ್ನು ಶಾಸಕರಾಗುವಂತೆ ನೋಡಿಕೊಳ್ಳುವುದು ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ. ಇದೇ ಸಂದರ್ಭದಲ್ಲಿ, ‘ಬಿಜೆಪಿಯ ಶಾಸಕರು ಕಾಂಗ್ರೆಸ್‌ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ’ ಎಂದು ಪದೇ ಪದೇ ಹೇಳಿಕೆ ನೀಡುವ ಕಾಂಗ್ರೆಸ್‌ನ ಮುಖಂಡರು ಕೂಡ ಆತ್ಮವಿಮರ್ಶೆ ಮಾಡಬೇಕು. ಬಿಜೆಪಿಯ ಶಾಸಕರು ಕಾಂಗ್ರೆಸ್‌ಗೆ ಬಂದರೆ ಓಕೆ. ಹಾಗಿದ್ದರೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ವಲಸೆ ಹೋದರೆ ಅಭ್ಯಂತರ ಯಾಕೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News