ಮುಕುಟಕ್ಕೆ ಗರಿಯೋ? ಮುಖಕ್ಕೆ ಕರಿಯೋ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಮತ್ತೆ ಎನ್‌ಕೌಂಟರ್ ಸದ್ದು ಮಾಡಿದೆ. ನಕ್ಸಲ್ ನಾಯಕ ಎಂದು ಎಎನ್‌ಎಫ್‌ನಿಂದ ಗುರುತಿಸಲ್ಪಟ್ಟ ವಿಕ್ರಂ ಗೌಡ ಎಂಬ ಯುವಕ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ನಕ್ಸಲೀಯರ ಕಬಿನಿ-2 ತಂಡವನ್ನು ಮುನ್ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದು, ಸೋಮವಾರ ರಾತ್ರಿ ಜಯಂತ್ ಗೌಡ ಎಂಬವರ ಮನೆಗೆ ದಿನಸಿ ಕೊಂಡೊಯ್ಯಲು ಬರುತ್ತಿದ್ದಾಗ ನಡೆದ ಮುಖಾಮುಖಿಯಲ್ಲಿ ಗುಂಡಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ರಾಜ್ಯ ಸರಕಾರ ಈ ಎನ್‌ಕೌಂಟರ್‌ನ್ನು ಈಗಾಗಲೇ ಸಮರ್ಥಿಸಿಕೊಂಡಿದೆ. ಈ ಬಲಿಯು ಎಎನ್‌ಎಫ್ ಮುಕುಟಕ್ಕೆ ದೊರೆತ ಗರಿ ಎಂದು ಐಜಿಪಿ ರೂಪಾ ಅವರು ಬಣ್ಣಿಸಿದ್ದಾರೆ. ವಿಕ್ರಂ ಗೌಡ ಮತ್ತು ಆತನ ತಂಡ ನಿಜಕ್ಕೂ ಪೊಲೀಸರ ವಿರುದ್ಧ ಗುಂಡು ಹಾರಿಸಿದ್ದಾರೆ ಎಂದಾದರೆ, ಅದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಯಾವುದೇ ಅನ್ಯಾಯ, ಅಸಮಾನತೆಗಳನ್ನು ಎದುರಿಸುವುದಕ್ಕೆ ಪ್ರಜಾಸತ್ತಾತ್ಮಕವಾದ ದಾರಿಗಳು ನಮ್ಮ ಮುಂದೆ ಬೇಕಾದಷ್ಟಿವೆ. ಈ ದೇಶದ ಸ್ವಾತಂತ್ರ್ಯವನ್ನೇ ನಾವು ಅಹಿಂಸಾತ್ಮಕ ಹೋರಾಟಗಳ ಮೂಲಕ ಗಳಿಸಿ, ಉಳಿಸಿಕೊಂಡಿರುವುದು. ಉಗ್ರವಾದಕ್ಕೆ ಕಾರಣಗಳು ಏನೇ ಇರಲಿ ಅದು ಸಮರ್ಥನೀಯವಲ್ಲ. ಈ ಕಾರಣದಿಂದ, ವಿಕ್ರಂ ಗೌಡ ಮತ್ತು ಆತನ ತಂಡ ಪೊಲೀಸರ ವಿರುದ್ಧ ಗುಂಡು ಹಾರಿಸಿದ್ದು ಹೌದೇ ಆಗಿದ್ದರೆ ತಮ್ಮ ಆತ್ಮರಕ್ಷಣೆಗಾಗಿ ಪ್ರತಿ ಗುಂಡು ಹಾರಿಸುವ ಹಕ್ಕು ಪೊಲೀಸರಿಗೂ ಇದೆ. ಹಿಂಸೆ ಇನ್ನಷ್ಟು ಹಿಂಸೆಗೆ ಕುಮ್ಮಕ್ಕು ನೀಡುತ್ತದೆಯೇ ಹೊರತು, ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾರದು. ಈ ನಿಟ್ಟಿನಲ್ಲಿ, ಈಗಾಗಲೇ ವ್ಯವಸ್ಥೆಯ ಅನ್ಯಾಯದ ವಿರುದ್ಧ ಕೋವಿ ಕೈಗೆತ್ತಿಕೊಂಡಿದ್ದ ಹಲವರು ಯುವಕರು ಹಿಂಸೆಯ ಮಿತಿಯನ್ನು ಅರ್ಥೈಸಿಕೊಂಡು ಮತ್ತೆ ಮುಖ್ಯವಾಹಿನಿಗೆ ಬಂದಿದ್ದಾರೆ. ಪ್ರಜಾಸತ್ತಾತ್ಮಕವಾದ ಹೋರಾಟಕ್ಕೆ ಜೊತೆಯಾಗಿದ್ದಾರೆ. ಇನ್ನೂ ಕೋವಿ ಕೆಳಗಿಳಿಸದ ಯುವಕರಿಗೆ ಈ ನಡೆ ಮಾದರಿಯಾಗಬೇಕು. ‘ಶರಣಾಗತರಿಗೆ ಅಗತ್ಯ ನೆರವು ನೀಡಲು ಸರಕಾರ ಬದ್ಧ’ ಎಂದು ಗೃಹ ಸಚಿವರು ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ. ಅಂತೆಯೇ ಅವರು ಶರಣಾಗಲು ಬೇಕಾದ ವೇದಿಕೆಯನ್ನು ಸರಕಾರವೇ ಸಿದ್ಧಪಡಿಸಬೇಕಾಗಿದೆ. ಇನ್ನಷ್ಟು ಜೀವಗಳು ಬಲಿಯಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವೂ ಆಗಿದೆ.
ಆದರೆ, ವಿಕ್ರಂ ಗೌಡ ಪೊಲೀಸರ ಗುಂಡಿಗೆ ಬಲಿಯಾದುದನ್ನು ‘ಎಎನ್‌ಎಫ್ ಮುಕುಟಕ್ಕೆ ದೊರೆತ ಗರಿ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಣ್ಣಿಸಿರುವುದು ಅತ್ಯಂತ ಅಮಾನವೀಯವಾಗಿದೆ. ಮೊತ್ತ ಮೊದಲಾಗಿ ಬಲಿಯಾದವನು ಯಾವುದೇ ಅನ್ಯ ಲೋಕದ ಜೀವಿಯಲ್ಲ. ಕಾಡು ಮೃಗವೂ ಅಲ್ಲ. ವಿದೇಶಿಯನಂತೂ ಅಲ್ಲವೇ ಅಲ್ಲ. ನಮ್ಮದೇ ನೆಲದ, ಮಲೆಕುಡಿಯ ಸಮುದಾಯಕ್ಕೆ ಸೇರಿದ ದಾರಿ ತಪ್ಪಿದ ಯುವಕ. ಆತನ ಹೆಣವನ್ನು ತನ್ನ ಕಿರೀಟಕ್ಕೆ ಗರಿಯಾಗಿ ಧರಿಸುವ ದೌರ್ಭಾಗ್ಯ ಪೊಲೀಸ್ ಇಲಾಖೆಗೆ ಯಾವತ್ತೂ ಬರಬಾರದು. ಕಾಡಿನ ಹಾರುವ ಹಕ್ಕಿಗಳಂತಿರುವ ಆದಿವಾಸಿಗಳ ಮಕ್ಕಳ ರೆಕ್ಕೆ ಮುರಿದು, ಆ ರೆಕ್ಕೆಯ ರಕ್ತಸಿಕ್ತ ಗರಿಯನ್ನು ಕಿತ್ತು ತಮ್ಮ ಕಿರೀಟಕ್ಕೆ ಸಿಕ್ಕಿಸಿಕೊಳ್ಳುವುದು ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಷಯವಾಗಬಾರದು. ಒಬ್ಬ ಮಲೆಕುಡಿಯನನ್ನು ನಕ್ಸಲ್ ಉಗ್ರವಾದಿಯಾಗಿಸಿರುವುದರಲ್ಲಿ ತನ್ನ ಪಾತ್ರ ಎಷ್ಟು ಎನ್ನುವುದನ್ನು ಮೊದಲು ಸರಕಾರ ಮತ್ತು ಪೊಲೀಸ್ ಇಲಾಖೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಆತನನ್ನು ಕೊಂದು ಹಾಕಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾದುದಕ್ಕೆ ಸಣ್ಣದೊಂದು ಪಾಪಪ್ರಜ್ಞೆ ನಮ್ಮೆಲ್ಲರಲ್ಲೂ ಇರಬೇಕಾಗಿದೆ ಮತ್ತು ಇಂತಹ ದುರಂತ ಮುಖಾಮುಖಿಗಳಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ನಮ್ಮ ಯುವಕರು ಉಗ್ರವಾದದೆಡೆಗೆ ವಾಲದಂತೆ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಇಷ್ಟಕ್ಕೂ ವಿಕ್ರಂ ಗೌಡ ಅವರ ಹಿನ್ನೆಲೆಯನ್ನು ನಾವು ಗಮನಿಸಬೇಕಾಗಿದೆ. ನಾಲ್ಕನೇ ತರಗತಿಯಷ್ಟೇ ಓದಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿದ ವಿಕ್ರಂ ಗೌಡ, ಕೂಲಿ ವೃತ್ತಿಯನ್ನು ಮಾಡಿಕೊಂಡಿದ್ದರು. ಹೋಟೆಲ್‌ನಲ್ಲಿ ಕ್ಲೀನರ್‌ನಂತಹ ವೃತ್ತಿಯನ್ನು ನಿಭಾಯಿಸಿ ಮನೆ, ಕುಟುಂಬದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದವರು. ತನ್ನ ತಂಗಿಯ ಮದುವೆಯ ಹೊಣೆಗಾರಿಕೆಯನ್ನೂ ನಿಭಾಯಿಸಿದವರು. ಈತನಿಗೆ ನಕ್ಸಲ್ ಸಿದ್ಧಾಂತಗಳು ಪರಿಚಯವಾಗುವುದಕ್ಕೆ ಯಾವ ಕಾರಣವೂ ಇರಲಿಲ್ಲ. ಅಂತಹದೊಂದು ಕಾರಣವನ್ನು ತೆರೆದುಕೊಟ್ಟದ್ದು ಯಾರು ಎನ್ನುವುದನ್ನು ಅರಣ್ಯಾಧಿಕಾರಿಗಳು, ಪೊಲೀಸರು ಮತ್ತು ಸರಕಾರ ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕು. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಮತ್ತು ಅರಣ್ಯ ಕಾಯ್ದೆಗಳು ತಮ್ಮ ಬದುಕಿನ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಹೊತ್ತಿನಲ್ಲಿ ಇವರು ಎಲ್ಲರಂತೆಯೇ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಸಕ್ರಿಯನಾಗಿದ್ದರು. ಇಂದಿಗೂ ಇವರ ಊರು ಕಡುಕತ್ತಲೆಯಲ್ಲೇ ಇದೆ. ನಾಗರಿಕತೆಗೆ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಗಳಿಂದ ನರಳುತ್ತಿದೆ. ಜೊತೆಗೆ ಅರಣ್ಯ ಇಲಾಖಾಧಿಕಾರಿಗಳ ಕಿರುಕುಳ ಬೇರೆ. ಈ ದೌರ್ಜನ್ಯಗಳ ವಿರುದ್ಧದ ಹೋರಾಟದಲ್ಲಿ ವಿಕ್ರಮ್ ಗೌಡ ಸಕ್ರಿಯರಾಗಿದ್ದರು. ಆಗ ಅವರೆೇನೂ ಕೋವಿಯನ್ನು ಕೈಗೆತ್ತಿಕೊಂಡಿರಲಿಲ್ಲ. ಈ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದೇ ಮಹಾಪರಾಧವಾಯಿತು. ಆತನ ಮೇಲೆ ವಿವಿಧ ಪ್ರಕರಣಗಳನ್ನು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ದಾಖಲಿಸಿದರು. ಪರಿಣಾಮವಾಗಿ ಪದೇ ಪದೇ ಆತ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬೇಕಾಯಿತು. ಪ್ರಜಾಸತ್ತಾತ್ಮಕ ಹೋರಾಟದ ಕಾರಣಗಳಿಗಾಗಿಯೇ ಆತ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡಬೇಕಾಯಿತು. ಆತ ಯಾವುದೇ ದರೋಡೆ, ಕಳವು ಪ್ರಕರಣಗಳಲ್ಲಿ ಭಾಗವಹಿಸಿದ ಆರೋಪಿಯಲ್ಲ. ಕರಾವಳಿಯಲ್ಲಿ ಸಕ್ರಿಯವಾಗಿರುವ ಬಜರಂಗಿಗಳಂತೆ ನಕಲಿ ಗೋರಕ್ಷಕರ ವೇಷ ಧರಿಸಿ ಯಾವುದೇ ರೈತರನ್ನು, ಬಡ ವ್ಯಾಪಾರಿಗಳನ್ನು ಸುಲಿಗೆ ಮಾಡಿರಲಿಲ್ಲ. ತನ್ನ ಹಾಗೂ ತನ್ನ ಸಮುದಾಯದ ಜನರ ಭೂಮಿಯ ಹಕ್ಕಿಗಾಗಿ, ಮೂಲಭೂತ ಸೌಕರ್ಯಗಳಿಗಾಗಿ ಅವರು ಹೋರಾಡುತ್ತಿದ್ದರು. ಆದರೆ ಅದುವೇ ಅವರಿಗೆ ಮುಳುವಾಯಿತು. ಪೊಲೀಸರ ಕಿರುಕುಳಕ್ಕೆ ಹೆದರಿಯೇ ಆತನ ತಲೆಮರೆಸಿಕೊಂಡರು. ಇವರ ಸ್ಥಿತಿಯನ್ನು ನಕ್ಸಲರು ಪೂರಕವಾಗಿ ಬಳಸಿಕೊಂಡರು.
‘ಮುಖ್ಯವಾಹಿನಿಗೆ ಬನ್ನಿ, ಹೋರಾಟ ಪ್ರಜಾಸತ್ತಾತ್ಮಕವಾಗಿರಲಿ’ ಎಂದು ನಕ್ಸಲ್ ಉಗ್ರವಾದಿಗಳಿಗೆ ಕರೆ ನೀಡುವ ಸರಕಾರ, ಈ ನಾಡಿನಲ್ಲಿ ಪ್ರಜಾಸತ್ತಾತ್ಮಕವಾಗಿ ಹೋರಾಟವನ್ನು ನಡೆಸುತ್ತಿರುವವರ ಗತಿ ಏನಾಗಿದೆ ಎನ್ನುವುದನ್ನೊಮ್ಮೆ ಅವಲೋಕಿಸಬೇಕು. ಸಾಯಿಬಾಬಾ, ಫಾದರ್ ಸ್ಟ್ಯಾನ್ ಸ್ವಾಮಿಯಂತಹ ಸಾಮಾಜಿಕ ಹೋರಾಟಗಾರರು ಯಾವುದೇ ಕೋವಿ ಹಿಡಿದಿರಲಿಲ್ಲ. ಆದರೂ ಅವರನ್ನು ಜೈಲಿಗೆ ತಳ್ಳಿದ ಸರಕಾರ ಹೇಗೆ ಬರ್ಬರವಾಗಿ ಕೊಂದು ಹಾಕಿತು ಎನ್ನುವುದು ಜಗತ್ತಿಗೇ ಗೊತ್ತಿದೆ. ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಿದ ಹಲವು ಹೋರಾಟಗಾರರು ಇಂದಿಗೂ ನೂರಾರು ಕೇಸುಗಳನ್ನು ಮೈಮೇಲೆ ಜಡಿಸಿಕೊಂಡು ಪೊಲೀಸರಿಂದ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಜೈಲುಗಳಲ್ಲಿ ಜಾಮೀನು ಇಲ್ಲದೆ ಕೊಳೆಯುತ್ತಿದ್ದಾರೆ. ಪ್ರಜಾಸತ್ತಾತ್ಮಕವಾದ ಹೋರಾಟಗಳನ್ನು ಸರಕಾರವೇ ಒಂದೆಡೆ ವಿಫಲಗೊಳಿಸುತ್ತಾ, ಅವರನ್ನು ಅಪರಾಧಿಗಳೆಂದು ಘೋಷಿಸಿ ಜೈಲಿಗೆ ತಳ್ಳುತ್ತಿರುವುದರಿಂದಲೇ ಅಸಹಾಯಕ ಜನರು ಇಂತಹ ಹೋರಾಟಗಳಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗೆ ವಿಶ್ವಾಸವನ್ನು ಕಳೆದುಕೊಂಡ ಜನರನ್ನು ಉಗ್ರವಾದಿ ಸಂಘಟನೆಗಳು ಸುಲಭದಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತವೆೆ. ಆದುದರಿಂದ, ಸರಕಾರ ಮೊದಲು ಪ್ರಜಾಸತ್ತಾತ್ಮಕ ಹೋರಾಟಗಳನ್ನು ದಮನಿಸುವುದನ್ನು ನಿಲ್ಲಿಸಿ, ಅವುಗಳಿಗೆ ಕಿವಿಯಾಗಬೇಕು.
ಇದೇ ಸಂದರ್ಭದಲ್ಲಿ ವಿಕ್ರಂ ಗೌಡರ ಕೊಲೆ ನಕಲಿ ಎನ್‌ಕೌಂಟರ್‌ನಿಂದ ನಡೆದಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ನಿಜಕ್ಕೂ ಅವರು ಶರಣಾಗತನಾಗುವ ಇರಾದೆಯನ್ನು ಇಟ್ಟುಕೊಂಡು ಅಲ್ಲಿಗೆ ಬಂದಿದ್ದರೆೆ? ಎನ್ನುವ ಪ್ರಶ್ನೆಯೂ ಎದ್ದಿದೆ. ಪೊಲೀಸರು ಬಂಧಿಸಿ ಬಳಿಕ ಆತನನ್ನು ಕೊಂದು ಹಾಕಿದ್ದಾರೆಯೇ ಎನ್ನುವುದು ಕೂಡ ತನಿಖೆಯಾಗಬೇಕು. ಕೊಲೆಯಾಗಿರುವುದು ನಮ್ಮದೇ ನೆಲದ ಮಲೆಕುಡಿಯ ಸಮುದಾಯದ ದಲಿತ ಹುಡುಗ. ಆತನ ಸಾವು ಈ ನಾಡನ್ನು ಸೂತಕಕ್ಕೆ ತಳ್ಳಿದೆ. ದಾರಿತಪ್ಪಿದ್ದ ಎನ್ನುವ ಒಂದೇ ಕಾರಣಕ್ಕೆ ಯಾವ ತಾಯಿಯೂ ತನ್ನ ಮನೆ ಮಕ್ಕಳ ಅಮಾನವೀಯ ಸಾವನ್ನು ಸಂಭ್ರಮಿಸುವುದಿಲ್ಲ. ಸಂಭ್ರಮಿಸಬಾರದು ಕೂಡ. ಆದುದರಿಂದ, ವಿಕ್ರಂ ಗೌಡರ ವಿರುದ್ಧ ಪೊಲೀಸರಿಗೆ ಗುಂಡು ಹಾರಿಸುವುದು ಯಾವ ರೀತಿಯಲ್ಲಿ ಅನಿವಾರ್ಯವಾಯಿತು ಎನ್ನುವುದು ಬೆಳಕಿಗೆ ಬರುವುದು ಅತ್ಯಗತ್ಯವಾಗಿದೆ. ದಲಿತ ಯುವಕನೊಬ್ಬನ ಹತ್ಯೆ ಯಾವ ಕಾರಣಕ್ಕೂ ಕಾನೂನಿನ ಮುಕುಟಕ್ಕೆ ಗರಿಯಲ್ಲ, ವ್ಯವಸ್ಥೆಯ ಮುಖಕ್ಕೆ ಬಳಿದ ಕರಿಯಾಗಿದೆ. ಆ ಕರಿಯ ಕಳಂಕವನ್ನು ಅಳಿಸಬೇಕಾದರೆ ತನಿಖೆ ಅನಿವಾರ್ಯವಾಗಿದೆ.