‘ರಮ್ ರಾಜ್ಯ’ ರಾಮರಾಜ್ಯವಾಗುವುದೆಂದು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಎರಡು ದಿನಗಳ ಹಿಂದೆಯಷ್ಟೇ ‘ಮಾದಕ ವಸ್ತು ಕಳ್ಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ’ಯ ಬಗ್ಗೆ ಮಾತನಾಡುತ್ತಾ ಗೃಹ ಸಚಿವ ಅಮಿತ್ ಶಾ ಅವರು ‘‘ಭಾರತದ ಶೇ. 7ರಷ್ಟು ಜನರು ಮಾದಕ ವ್ಯಸನಿಗಳು’’ ಎನ್ನುವುದನ್ನು ಉಲ್ಲೇಖಿಸಿದ್ದಾರೆ. ಅವರ ಅಭಿಪ್ರಾಯದಂತೆ ದೇಶದ ಶೇ. 7ರಷ್ಟು ಜನರು ಮಾದಕ ವಸ್ತುಗಳನ್ನು ಕಾನೂನು ಬಾಹಿರವಾಗಿ ಬಳಸುತ್ತಾರೆ. ಅಂದರೆ, ಕಾನೂನಿನ ಚೌಕಟ್ಟಿನ ಒಳಗೆ ಮಾದಕ ವಸ್ತುಗಳನ್ನು ಬಳಸುವವರು ಬೇರೆಯೇ ಇದ್ದಾರೆ ಎಂದಾಯಿತು. 2024ರಲ್ಲಿ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಸುಮಾರು 16,914 ಕೋಟಿ ರೂಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2004ರಿಂದ 2014ರವರೆಗೆ 3.63 ಲಕ್ಷ ಕೆ.ಜಿ. ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, 2014ರಿಂದ 2024ರವರೆಗೆ ಅದರ ಏಳು ಪಟ್ಟು ಹೆಚ್ಚು ಅಂದರೆ, 24 ಲಕ್ಷ ಕೆ.ಜಿ. ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನೆಲ್ಲ ಅಂತಿಮವಾಗಿ ಸುಟ್ಟು ಹಾಕಲಾಗುತ್ತದೆ ಎಂದು ಹೇಳಲಾಗುತ್ತದೆಯಾದರೂ, ಅಧಿಕೃತವಾಗಿ ಸುಟ್ಟು ಹಾಕುವ ಮಾದಕ ದ್ರವ್ಯ ಪ್ರಮಾಣಗಳನ್ನು ಅಂದಾಜಿಸುವುದು ಕಷ್ಟ. ಯಾಕೆಂದರೆ, ಈ ದೇಶದಲ್ಲಿ ಮಾದಕ ದ್ರವ್ಯಗಳ ಜಾಲಗಳು ಪೊಲೀಸ್ ಇಲಾಖೆಯ ಸಹಕಾರದಿಂದಲೇ ಕಾರ್ಯಾಚರಿಸುತ್ತಿವೆ ಎನ್ನುವ ಆರೋಪ ಬಹುಕಾಲದಿಂದ ಕೇಳಿ ಬರುತ್ತಿದೆ. ಇದು ವಶಪಡಿಸಿಕೊಂಡ ಮಾದಕ ದ್ರವ್ಯದ ಬಗ್ಗೆಯಾಗಿದ್ದರೆ, ಯಶಸ್ವಿಯಾಗಿ ಕಳ್ಳಸಾಗಣೆಯಾಗಿರುವ ಮಾದಕ ದ್ರವ್ಯಗಳ ಪ್ರಮಾಣ ಬೇರೆಯೇ ಇದೆ ಎನ್ನುವುದನ್ನೂ ನಾವು ಈ ಸಂದರ್ಭದಲ್ಲಿ ಗಮನಿಸಬೇಕಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಸರಕಾರವೇ ಅಧಿಕೃತವಾಗಿ ಮಾರಾಟ ಮಾಡುತ್ತಿರುವ ಮದ್ಯಗಳನ್ನು ಅಮಿತ್ ಶಾ ಅವರು ‘ಮಾದಕ ವ್ಯಸನ’ದೊಳಗೆ ಸೇರ್ಪಡಿಸಿಲ್ಲ. ಒಂದೆಡೆ ಸರಕಾರ ಮದ್ಯಗಳನ್ನು ಮಾರುತ್ತಾ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುತ್ತದೆ. ಇನ್ನೊಂದೆಡೆ ಅದು ಮಾದಕ ವ್ಯಸನಗಳ ಬಗ್ಗೆ ಉಪದೇಶಗಳನ್ನು ನೀಡುತ್ತದೆೆ. ಮಾದಕ ವ್ಯಸನದ ಕುರಿತಂತೆ ತಾನು ಅನುಸರಿಸುತ್ತಿರುವ ಈ ದ್ವಂದ್ವ ನೀತಿಯ ಕಾರಣದಿಂದಲೇ, ಮಾದಕ ವ್ಯಸನದಿಂದ ಸಂಭವಿಸುವ ದುರಂತಗಳನ್ನು ತಡೆಯಲು ಸರಕಾರ ವಿಫಲವಾಗುತ್ತಾ ಬಂದಿದೆ. ಅದು ಮಾದಕ ವ್ಯಸನದ ಬಗ್ಗೆ ಹುಸಿ ಹೋರಾಟವನ್ನಷ್ಟೇ ಮಾಡುತ್ತಿದೆ. ಅದನ್ನು ಸಂಪೂರ್ಣ ನಿರ್ಮೂಲನಗೊಳಿಸುವುದು ಸ್ವತಃ ಸರಕಾರಕ್ಕೇ ಇಷ್ಟವಿಲ್ಲದ ವಿಷಯವಾಗಿದೆ.
ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿವರು ‘ಭಾರತ ರಸ್ತೆ ಅಪಘಾತಗಳ ಕಾರಣಕ್ಕೆ ಕುಖ್ಯಾತ’ವಾಗುತ್ತಿರುವುದು ತನ್ನನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿಕೆ ನೀಡಿದ್ದರು ಮತ್ತು ರಸ್ತೆ ಅಪಘಾತದ ಗಾಯಾಳುಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಭಾರತದ ರಸ್ತೆಗಳಲ್ಲಿ ಪ್ರತಿ ವರ್ಷ ಸಂಭವಿಸುವ ಸುಮಾರು ಒಂದು ಲಕ್ಷ ಸಾವುಗಳು ಮದ್ಯ ಸೇವನೆಗೆ ಸಂಬಂಧಿಸಿದ್ದಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ತನ್ನ ವರದಿಯಲ್ಲಿ ತಿಳಿಸಿದೆ. ಇಂದು ರಾಜ್ಯ ಸರಕಾರಗಳು ಮದ್ಯ ಮಾರಿ ತುಂಬಿಸುವ ಖಜಾನೆಯ ದುಡ್ಡಿನ ದುಪ್ಪಟ್ಟನ್ನು ಆಸ್ಪತ್ರೆಗಳಿಗೆ ಸುರಿಯಬೇಕಾದ ಅನಿವಾರ್ಯ ಸ್ಥಿತಿಗೆ ಬಂದು ನಿಂತಿದೆ ಸರಕಾರ. ಮದ್ಯ ಪಾನವು ಪ್ರತಿ ವರ್ಷ 2.6 ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ ಎನ್ನುವ ಅಂಶವನ್ನೂ ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಅನಾರೋಗ್ಯ, ರಸ್ತೆ ಅಪಘಾತಗಳಿಗೆ ಮದ್ಯಪಾನ ಚಟ ಬಹುಮುಖ್ಯ ಕಾರಣ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ. ವಿಶ್ವದಲ್ಲಿ ಈ ಮದ್ಯ ಪ್ರತಿ ದಿನ ಆರು ಸಾವಿರ ಜನರನ್ನು ಬಲಿ ತೆಗೆದುಕೊಳ್ಳುತ್ತದೆ. ಮೇಲ್ನೋಟಕ್ಕೆ ಲಿವರ್ ಕಾಯಿಲೆಗಳು, ಹೃದಯ ಕಾಯಿಲೆಗಳು ಸಾವಿಗೆ ಕಾರಣವೆಂದು ಗುರುತಿಸಲ್ಪಟ್ಟಿದ್ದರೂ ಆ ಕಾಯಿಲೆಗಳ ಮೂಲ ಮದ್ಯ ಸೇವನೆಯೇ ಆಗಿರುತ್ತದೆ ಎನ್ನುವ ಅಂಶವನ್ನು ವರದಿ ಹೇಳುತ್ತದೆ. ಪ್ರತಿ ದಿನ ಸಂಭವಿಸುವ 6,000 ಸಾವುಗಳಲ್ಲಿ, ಶೇ. 28ರಷ್ಟು ರಸ್ತೆ ಅವಘಡಗಳಿಂದ, ಹಿಂಸಾಚಾರಗಳಿಂದ ಸಂಭವಿಸಿದ್ದರೆ, ಶೇ. 21ರಷ್ಟು ಸಾವುಗಳು ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳಿಂದ, ಶೇ. 19 ಹೃದಯಸಂಬಂಧಿ ಕಾಯಿಲೆಗಳಿಂದ, ಉಳಿದವುಗಳು ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಮೊದಲಾದ ಕಾರಣಗಳಿಂದ ಸಂಭವಿಸುತ್ತವೆೆ. ಆದರೆ ಇವೆಲ್ಲದರ ಹಿಂದೆಯೂ ಮದ್ಯ ಸೇವನೆಯ ಚಟ ತನ್ನ ಪಾತ್ರವನ್ನು ವಹಿಸಿರುತ್ತದೆ.
ಧರ್ಮಾಂಧತೆ, ಕೋಮುವಾದ ಒಂದು ಅಮಲು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಈ ಅಮಲು ಸದ್ಯಕ್ಕೆ ಅತಿ ಹೆಚ್ಚು ಬಿಕರಿಯಲ್ಲಿದೆ ಮತ್ತು ಈ ಅಮಲನ್ನು ಏರಿಸಿಕೊಂಡವರು ಮದ್ಯಸೇವನೆಗಿಳಿದರೆ ಅದು ಹಿಂಸೆ, ಗಲಭೆ, ದೊಂಬಿಗಳಲ್ಲಿ ಮುಕ್ತಾಯವಾಗುತ್ತದೆ ಎನ್ನುವುದು ಭಾರತದ ಪಾಲಿನ ಕಹಿ ವಾಸ್ತವವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮದ್ಯ ಅಕ್ರಮವಾಗಿ ಮತ್ತು ಸಕ್ರಮವಾಗಿ ಅತಿ ಹೆಚ್ಚು ಮಾರಾಟವಾಗುವುದೂ ಇದೇ ಕಾರಣಕ್ಕೆ. ಮದ್ಯದ ಅಮಲು ಮತ್ತು ಧರ್ಮದ ಅಮಲು ಜೀವಂತವಾಗಿರುವುದು ರಾಜಕೀಯಕ್ಕೂ ಅತ್ಯಗತ್ಯವಾಗಿದೆ. ಒಂದು ಕಾಲದಲ್ಲಿ ‘ಕೊಡು ತಾಯಿ ವರವನ್ನು, ಕುಡುಕನಲ್ಲದ ಗಂಡನನ್ನು’ ಎನ್ನುವ ಸರಕಾರಿ ಜಾಹೀರಾತು ಅತ್ಯಂತ ಜನಪ್ರಿಯವಾಗಿತ್ತು. ಭಾರತದಲ್ಲಿ ಕುಟುಂಬ ದೌರ್ಜನ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದಕ್ಕೆ ಮದ್ಯ ಮುಖ್ಯ ಕಾರಣವಾಗಿದೆ. ಈ ದೌರ್ಜನ್ಯಗಳು ನಿಧಾನಕ್ಕೆ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತವೆೆ. ಮಕ್ಕಳ ಶಿಕ್ಷಣದ ಮೇಲೆ, ಅವರ ಪೌಷ್ಟಿಕತೆಯ ಮೇಲೆ, ಆರೋಗ್ಯದ ಮೇಲೆಯೂ ದುಷ್ಪರಿಣಾಮಗಳನ್ನು ಬೀರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಳೆಯುವ ಮಕ್ಕಳ ಮಾನಸಿಕತೆಯ ಮೇಲೆ ಇದು ಅತ್ಯಂತ ಮಾರಕ ಪರಿಣಾಮಗಳನ್ನು ಬೀರುತ್ತಾ ಬಂದಿದೆ. ಶಾಲೆಗಳ ಸಮೀಪ ಬೀಡಿ, ಸಿಗರೇಟ್, ತಂಬಾಕು ಮಾರಾಟ ಮಾಡಬಾರದು ಎಂದು ಸರಕಾರ ಆದೇಶಿಸುತ್ತದೆ. ಆದರೆ ಮನೆಗಳ ಸಮೀಪದಲ್ಲಿ ಮದ್ಯ ಮಾರಾಟಕ್ಕೆ ಸರಕಾರದ ಯಾವ ಆಕ್ಷೇಪವೂ ಇಲ್ಲ. ಅಥವಾ ಪೋಷಕರು ಮನೆಗಳಲ್ಲಿ ಮಕ್ಕಳ ಮುಂದೆ, ವಿದ್ಯಾರ್ಥಿಗಳ ಮುಂದೆ ಕುಡಿದು ರಂಪಾಟ ಮಾಡುವುದಕ್ಕೂ ಯಾವ ಆಕ್ಷೇಪಗಳಿಲ್ಲ. ಅವರನ್ನು ಶಿಕ್ಷಿಸುವುದಕ್ಕೆ ಕಾನೂನೂ ಇಲ್ಲ.
ರಾಜ್ಯ ಸರಕಾರ ಮಹಿಳೆಯರ ಅಭಿವೃದ್ಧಿಗಾಗಿ ‘ಸ್ತ್ರೀ ಶಕ್ತಿ’ ‘ಗೃಹ ಲಕ್ಷ್ಮಿ’ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಹಲವು ದಶಕಗಳಿಂದ ರಾಜ್ಯದ ಮಹಿಳೆಯರು ‘ಮದ್ಯ ಮಾರಾಟ’ದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಬೀದಿ ಮೆರವಣಿಗೆಗಳನ್ನು ನಡೆಸಿದ್ದಾರೆ. ಆದರೆ ಈವರೆಗೆ ಮದ್ಯ ನಿಷೇಧವನ್ನು ಜಾರಿಗೆ ತರಲು ಎಲ್ಲ ಸರಕಾರಗಳೂ ವಿಫಲವಾಗಿವೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನೆಲ್ಲ ಸ್ತ್ರೀಪರವಾದ ಯೋಜನೆಗಳನ್ನು ಹಿಂದೆಗೆದುಕೊಂಡರೂ ಪರವಾಗಿ, ಅದರ ಬದಲಿಗೆ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವನ್ನು ಜಾರಿಗೆ ತಂದರೆ, ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ಗಟ್ಟಿ ಹೆಜ್ಜೆಯೊಂದನ್ನು ಮುಂದಿಟ್ಟಂತಾಗುತ್ತದೆ. ಇಲ್ಲದೇ ಇದ್ದರೆ ಮಹಿಳೆಯರ ಪರವಾಗಿ ಜಾರಿಗೊಳಿಸುವ ಎಲ್ಲ ಯೋಜನೆಗಳು ತೂತು ಪಾತ್ರೆಯಲ್ಲಿ ನೀರು ತುಂಬಿಸಿಕೊಟ್ಟಂತಾಗುತ್ತದೆ. ಮಹಿಳೆಯರ ಖಾತೆಗೆ ಬೀಳುವ ಗೃಹ ಲಕ್ಷ್ಮಿ ಯೋಜನೆಯ ಹಣಕ್ಕಾಗಿ ಮದ್ಯ ವ್ಯಸನಿಗಳು ತಮ್ಮ ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಅಲ್ಲಲ್ಲಿ ವರದಿಗಳು ಬರುತ್ತಿವೆ. ಮಹಿಳೆಯರಿಗೆ ನೀಡುವ ಸಹಾಯ ಧನ ಅರ್ಥಪೂರ್ಣವಾಗಿ ಬಳಕೆಯಾಗಬೇಕಾದರೆ, ಮದ್ಯ ನಿಷೇಧವನ್ನು ಜಾರಿಗೆ ತರುವುದು ಅತ್ಯಗತ್ಯ. ಮದ್ಯ ಮಾರಾಟದ ಹಣದಿಂದ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ಮದ್ಯ ಮಾರಾಟದಿಂದ ಬಂದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಸರಕಾರ, ಅದರಿಂದಾದ ಹಾನಿಯನ್ನು ತುಂಬಿಸಲು ವ್ಯಯ ಮಾಡಬೇಕಾಗುತ್ತದೆ. ಈಗಾಗಲೇ ಮಾಡುತ್ತಿದೆ ಕೂಡ. ಆದುದರಿಂದ ರಾಜ್ಯದಲ್ಲಿ ಎಲ್ಲಿಯವರೆಗೆ ಮದ್ಯ ನಿಷೇಧ ಸಾಧ್ಯವಿಲ್ಲವೋ ಅಲ್ಲಿಯವರೆಗೆ ರಾಜ್ಯ‘ರಮ್ ರಾಜ್ಯ’ವಾಗಿ ಉಳಿಯುತ್ತದೆಯೇ ಹೊರತು, ರಾಮರಾಜ್ಯವಾಗಲು ಸಾಧ್ಯವಿಲ್ಲ.