ರೈತರ ಹೆಸರಿನಲ್ಲಿ ಬಿಜೆಪಿಯ ಟೊಳ್ಳು-ಸುಳ್ಳು ಹೋರಾಟ

Update: 2024-11-09 05:57 GMT

ವಕ್ಫ್‌ ವಿಚಾರವಾಗಿ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಭೇಟಿ ಮಾಡಿದ ಬಿಜೆಪಿ ನಿಯೋಗ PC: fb.com/bjpkarnataka

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ವಕ್ಫ್ ಬೋರ್ಡ್ ರೈತರ ಆಸ್ತಿಯನ್ನು ಕಬಳಿಸುತ್ತಿದೆ’ ಎನ್ನುವ ಹೊಸತೊಂದು ಗುಮ್ಮನನ್ನು ಸೃಷ್ಟಿಸಿ, ಆ ಗುಮ್ಮನ ಮೂಲಕ ರೈತರ ಹೊಲದಲ್ಲಿ ಕೇಸರಿ ಬೆಳೆಯನ್ನು ಕೊಯ್ಯಲು ಬಿಜೆಪಿ ರಾಜ್ಯದಲ್ಲಿ ಮುಂದಾಗಿದೆ. ತಾನು ಹಬ್ಬಿಸುತ್ತಿರುವ ವದಂತಿಗಳಿಗೆ ಸರಿಯಾದ ಸಾಕ್ಷ್ಯವನ್ನು ಒದಗಿಸುವಲ್ಲಿ ಮಾತ್ರ ಬಿಜೆಪಿ ನಾಯಕರು ವಿಫಲರಾಗುತ್ತಿದ್ದಾರೆ. ಬದಲಾಗಿ, ಕಾಂಗ್ರೆಸ್ ಮೇಲೆ ಮಾಡಿರುವ ಆರೋಪಗಳು ನಿಧಾನಕ್ಕೆ ಬಿಜೆಪಿಯ ಕೊರಳಿಗೂ ಸುತ್ತಿಕೊಳ್ಳಲಾರಂಭಿಸಿವೆ. ಇದರಿಂದ ಹತಾಶೆಗೊಂಡಿರುವ ಬಿಜೆಪಿ ನಾಯಕರು, ಪ್ರಕರಣವನ್ನು ಇನ್ನಷ್ಟು ಉದ್ವಿಗ್ನಗೊಳಿಸುವ ಉದ್ದೇಶದಿಂದ, ರೈತರ ಕೊರಳಿಗೆ ನೇಣು ಬಿಗಿಯಲು ಮುಂದಾಗಿದ್ದಾರೆ. ಸುಳ್ಳು ಹೇಳಿಕೆಗಳಿಗೆ ಈಗಾಗಲೇ ಕುಖ್ಯಾತರಾಗಿರುವ, ಕೊರೋನ ವಾರ್ ರೂಂನ ಅಕ್ರಮಗಳಲ್ಲಿ ಗುರುತಿಸಿಕೊಂಡಿದ್ದ, ತೇಜಸ್ವಿ ಸೂರ್ಯ ‘‘ ವಕ್ಫ್ ಬೋರ್ಡ್ ಆಸ್ತಿ ಕಿರಿಕಿರಿಗೆ ಬೇಸತ್ತು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು’’ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದಾರೆ. ಈ ಸುಳ್ಳು ಸುದ್ದಿ ವೈರಲ್ ಆಗುತ್ತಿರುವಂತೆಯೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು, ತಕ್ಷಣ ಸ್ಪಷ್ಟೀಕರಣ ನೀಡಿದರು. ತೇಜಸ್ವಿ ಸೂರ್ಯ ಉಲ್ಲೇಖಿಸಿದ ಪ್ರಕರಣ ನಡೆದಿರುವುದು ಬಿಜೆಪಿ ಆಡಳಿತದ ಕಾಲದಲ್ಲಿ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಮಳೆಯಿಂದ ಹಾನಿಗೀಡಾದ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸ್ ತನಿಖೆಯಿಂದ ಇದು ಸ್ಪಷ್ಟವಾಗಿತ್ತು ಮಾತ್ರವಲ್ಲ, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿತ್ತು ಎನ್ನುವ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸರು ಸ್ಪಷ್ಟನೆ ನೀಡುತ್ತಿದ್ದಂತೆಯೇ ಸಂಸದ ತೇಜಸ್ವಿ ಸೂರ್ಯ ತನ್ನ ಟ್ವೀಟ್‌ನ್ನು ಅಳಿಸಿದ್ದಾರೆ. ಇದೀಗ ವದಂತಿಗಳನ್ನು ಹರಡಿ ಉದ್ವಿಗ್ನ ವಾತಾವರಣ ನಿರ್ಮಿಸಲು ಪ್ರಯತ್ನಿಸಿದ ಕಾರಣಕ್ಕೆ ಅವರ ಮೇಲೆ ದೂರುಗಳು ದಾಖಲಾಗಿವೆ.

ಇದೀಗ ‘‘ಕಮೆಂಟ್ ಬಾಕ್ಸ್‌ನಲ್ಲಿ ಬಂದ ಮಾಹಿತಿಯ ಆಧಾರದಲ್ಲಿ ಟ್ವೀಟ್ ಮಾಡಿದ್ದೆ’’ ಎಂದು ಸಂಸದ ನುಣುಚಿಕೊಳ್ಳಲು ಮುಂದಾಗಿದ್ದಾರೆ. ಬಿಜೆಪಿ ನಾಯಕರು ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆಗಳನ್ನು ಆಂದೋಲನ ರೂಪದಲ್ಲಿ ಹಮ್ಮಿಕೊಂಡಿದ್ದಾರೆ. ರೈತರನ್ನು ವಕ್ಫ್‌ನ ವಿರುದ್ಧ ಮತ್ತು ಸರಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದರೆ ಈವರೆಗೆ ಇದಕ್ಕೆ ಸಂಬಂಧಿಸಿ ಅಧಿಕೃತವಾದ ಯಾವುದೇ ದಾಖಲೆಗಳನ್ನು ಬಹಿರಂಗಪಡಿಸಲು ಅವರಿಗೆ ಸಾಧ್ಯವಾಗಿಲ್ಲ. ಇಷ್ಟೇ ಅಲ್ಲದೆ, ಕಮೆಂಟ್ ಬಾಕ್ಸ್‌ನಲ್ಲಿ ಬಂದ ಯಾವುದೋ ಮಾಹಿತಿಯನ್ನು ಯಾವುದೇ ವಿಚಾರಣೆ ನಡೆಸದೆಯೇ ಬಿಜೆಪಿಯ ಪ್ರತಿಭಟನೆಗಳಿಗೆ ಸಮರ್ಥನೆಯಾಗಿ ಟ್ವೀಟ್ ಮಾಡಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಬಂದ ಅನಾಮಿಕ ಕಮೆಂಟ್‌ಗಳ ಆಧಾರದಲ್ಲಿ ಪ್ರತಿಭಟನೆ ನಡೆಸುವುದು, ಆರೋಪಗಳನ್ನು ಹೊರಿಸುವುದು ಎಷ್ಟು ಸರಿ? ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳ ಟೊಳ್ಳುತನವನ್ನು ಸಂಸದ ಸೂರ್ಯ ಅವರ ಟ್ವೀಟ್ ಬಹಿರಂಗ ಪಡಿಸಿದೆ. ತಮ್ಮ ಅಧಿಕಾರಾವಧಿಯಲ್ಲಿ ತಳೆದ ರೈತ ವಿರೋಧಿ ನಿಲುವುಗಳನ್ನು ಚರ್ಚೆಗೆ ತರಲು ಈ ಮೂಲಕ ಬಿಜೆಪಿಯೇ ವೇದಿಕೆಯನ್ನು ಹಾಕಿಕೊಟ್ಟಂತಾಗಿದೆ. ಕೇಂದ್ರ ಸರಕಾರದ ರೈತ ವಿರೋಧಿ ನಿಲುಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ಮಹಾ ಆಂದೋಲನವನ್ನು ನಡೆಸುತ್ತಿದ್ದಾಗ, ಮೋದಿಯವರ ಕೃಷಿ ನೀತಿಗಳನ್ನು ಬೆಂಬಲಿಸಿದವರು ಬಿಜೆಪಿ ಸಂಸದರು. ಅನಾವೃಷ್ಟಿ, ಅತಿವೃಷ್ಟಿಯಿಂದ ರಾಜ್ಯದ ರೈತರು ತಮ್ಮ ಬೆಳೆ ನಷ್ಟದಿಂದ ಕಂಗಾಲಾಗಿದ್ದಾಗ ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ದೊಡ್ಡ ಧ್ವನಿಯಲ್ಲಿ ಕೇಳುವುದಕ್ಕೆ ಹಿಂದೇಟು ಹಾಕಿದವರು ಈ ಬಿಜೆಪಿ ನಾಯಕರು. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಮಳೆ ಪರಿಹಾರ ನಿಧಿಗಾಗಿ ದಿಲ್ಲಿಗೆ ಅಲೆದಾಡುತ್ತಿದ್ದಾಗ ಪರಿಹಾರ ನೀಡುವ ಅಗತ್ಯವೇ ಇಲ್ಲ ಎಂದು ಹೇಳಿಕೆ ನೀಡಿ ಸ್ವತಃ ರಾಜ್ಯದ ಬಿಜೆಪಿ ಮುಖಂಡರಿಂದ ಛೀಮಾರಿ ಹಾಕಿಸಿಕೊಂಡವರು ಇದೇ ಸಂಸದ ತೇಜಸ್ವಿ ಸೂರ್ಯ. ಇಂತಹ ನಾಯಕರು ರೈತರ ಪರವಾಗಿ ಮಾತನಾಡುವುದೆಂದರೆ, ತೋಳ ಕುರಿಗಳ ಹಕ್ಕುಗಳಿಗಾಗಿ ಬೀದಿಗಿಳಿದ ಕತೆಯಂತಾಗುತ್ತದೆ.

ಹಾಗೆಂದು ವಕ್ಫ್ ಕಾರಣದಿಂದ ರೈತರು ಸಮಸ್ಯೆಗಳಿಗೆ ಸಿಕ್ಕಿ ಹಾಕಿಕೊಂಡಿಲ್ಲ ಎಂದಲ್ಲ. ವಕ್ಫ್‌ನ ವ್ಯಾಪ್ತಿಯಲ್ಲಿರುವ ಬರುವ ರೈತರ ಭೂಮಿಗಳು ಬಹಳಷ್ಟಿವೆ. ಆದರೆ ಅದಕ್ಕಾಗಿ ವಕ್ಫ್ ಬೋರ್ಡ್ ಮತ್ತು ಈಗಿನ ಕಾಂಗ್ರೆಸ್ ಸರಕಾರವನ್ನು ಹೊಣೆ ಮಾಡುವ ಮೂಲಕ ಬಿಜೆಪಿ ರೈತರಿಗೆ ವಂಚಿಸುತ್ತಿದೆ. ಇಂದಿನ ಸಮಸ್ಯೆ ಹುಟ್ಟಿಕೊಂಡಿರುವುದು ಈಗಾಗಲೇ ನ್ಯಾಯಾಲಯ ನೀಡಿರುವ ಆದೇಶಗಳಿಂದಲೇ ಹೊರತು, ಈಗ ಇರುವ ಕಾಂಗ್ರೆಸ್ ಸರಕಾರದಿಂದ ಅಲ್ಲ. ಈ ಆದೇಶದ ಪ್ರಕಾರ ಈ ಹಿಂದಿನ ಬಿಜೆಪಿ ಸರಕಾರವೂ ನೂರಾರು ರೈತರಿಗೆ ವಕ್ಫ್ ಒತ್ತುವರಿಯ ಬಗ್ಗೆ ನೋಟಿಸ್ ನೀಡಿತ್ತು. ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಯಾವುದೇ ಭೂರ್ಮಿಯನ್ನು ಏಕಾಏಕಿ ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನೂರಾರು ವರ್ಷಗಳ ಹಿಂದೆ ದಾನಿಗಳು ಧಾರ್ಮಿಕ ಕಾರಣಗಳಿಗಾಗಿ ವಕ್ಫ್ ಮಾಡಿದ ಜಮೀನನ್ನು ರೈತರು ಒತ್ತುವರಿ ಮಾಡಿಕೊಂಡು ಬಂದಿದ್ದರೆ, ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ವಕ್ಫ್‌ಬೋರ್ಡ್ ಬಳಿ ಇದ್ದರೆ ನೋಟಿಸ್‌ಗಳನ್ನು ಸರಕಾರ ಕಳುಹಿಸುತ್ತದೆ. ಈ ಹಿಂದೆ ಬಿಜೆಪಿ ಸರಕಾರ ಹೀಗೆ ವಕ್ಫ್ ಒಡೆತನದಲ್ಲಿರುವ ಹಲವು ಜಮೀನುಗಳಿಗೆ ನೋಟಿಸ್‌ಗಳನ್ನು ನೀಡಿತ್ತು. ಅಷ್ಟೇ ಅಲ್ಲ, ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರಕಾರ, ವಕ್ಫ್‌ನ ಒತ್ತುವರಿ ಜಮೀನಿನ ಬಗ್ಗೆ ವರದಿ ತಯಾರಿಸಲು, ಒಂದು ಸಮಿತಿಯನ್ನು ನೇಮಕ ಮಾಡಿತ್ತು. ಈ ಸಮಿತಿಯು ಹಲವು ರಾಜಕೀಯ ನಾಯಕರು ಸಾವಿರಾರು ಎಕರೆ ವಕ್ಫ್ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ಬಹಿರಂಗ ಪಡಿಸಿತ್ತು.

ತಲೆತಲಾಂತರಗಳಿಂದ ಅನುಭವಿಸುತ್ತಿರುವ ಭೂಮಿ ವಕ್ಫ್‌ಗೆ ಸೇರಿರುವುದೇ ಆಗಿದ್ದರೆ, ಅದಕ್ಕೆ ಸಂಬಂಧಿಸಿ ವಕ್ಫ್ ಬೋರ್ಡ್‌ನ ಬಳಿ ಸ್ಪಷ್ಟ ದಾಖಲೆಗಳಿದ್ದಾಗ ಮಾತ್ರ ರೈತರಿಗೆ ಸಮಸ್ಯೆಯಾಗುತ್ತದೆ. ವಕ್ಫ್ ಬೋರ್ಡ್ ಇದು ತನ್ನ ಭೂಮಿ ಎಂದಾಕ್ಷಣ ರೈತರ ಜಮೀನು ವಕ್ಫ್‌ಗೆ ಸೇರಿ ಬಿಡುತ್ತದೆ ಎನ್ನುವುದು ಬಿಜೆಪಿ ಹರಿಯ ಬಿಡುತ್ತಿರುವ ವದಂತಿಯಾಗಿದೆ. ಭೂಸುಧಾರಣೆಯ ಕಾಯ್ದೆಯ ಅನುಷ್ಠಾನದ ಸಂದರ್ಭದಲ್ಲಿ ಲಕ್ಷಾಂತರ ಎಕರೆ ವಕ್ಫ್ ಭೂಮಿ ರೈತರ ಪಾಲಾಗಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾಗಿದೆ. ಹೀಗೆ ಭೂಮಿಯನ್ನು ಪಡೆದುಕೊಂಡವರಲ್ಲಿ ಸರ್ವ ಧರ್ಮೀಯರೂ ಸೇರಿಕೊಂಡಿದ್ದಾರೆ. ಒಂದು ಕಾಲದಲ್ಲಿ ವಕ್ಫ್ ಮಾಡಲ್ಪಟ್ಟ ಭೂಮಿಯನ್ನು ಪಡೆದು ಪಿತ್ರಾರ್ಜಿತವಾಗಿ ಕೃಷಿ ಮಾಡುತ್ತಾ ಬಂದವರು ಈಗ ಸಮಸ್ಯೆ ಅನುಭವಿಸುತ್ತಿರಬಹುದು. ಆದರೆ ಇದಕ್ಕೆ ಯಾರನ್ನು ಹೊಣೆ ಮಾಡಬೇಕು? ಯಾರನ್ನು ಹೊಣೆ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು? ಸದ್ಯಕ್ಕೆ ಇರುವ ಸರಕಾರವನ್ನು ಹೊಣೆ ಮಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುವುದು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿದೆ. ಆದುದರಿಂದ ಅದು ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಯಾಕೆಂದರೆ ವಾಸ್ತವವಾಗಿ ಅದಕ್ಕೆ ರೈತರ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುವುದೇ ಅದಕ್ಕೆ ಇಷ್ಟವಿಲ್ಲ. ದೇಶಾದ್ಯಂತ ಲಕ್ಷಾಂತರ ಎಕರೆ ವಕ್ಫ್ ಭೂಮಿ ಒತ್ತುವರಿಯಾಗಿದ್ದು ಇವು ನರಿ ನಾಯಿ ಪಾಲಾಗಿದೆ. ಈ ಭೂಮಿಯನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಈ ದೇಶದ ಬಡ ಮುಸ್ಲಿಮರ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶ ವಕ್ಫ್ ಮಂಡಳಿಗಳಿಗಿತ್ತು. ಯಾಕೆಂದರೆ ಈ ಹಿಂದೆ ತಮ್ಮ ಜಮೀನನ್ನು ದೇವರ ಹೆಸರಿನಲ್ಲಿ ದಾನಕೊಟ್ಟವರ ಉದ್ದೇಶ, ಸಮುದಾಯದ ಏಳಿಗೆಯೇ ಆಗಿತ್ತು. ಆದರೆ, ಬೃಹತ್ ಕಾರ್ಪೊರೇಟ್‌ಗಳಿಂದ ಹಿಡಿದು, ಪ್ರಭಾವಿ ರಾಜಕಾರಣಿಗಳ ವರೆಗೆ ಶ್ರೀಮಂತ ವರ್ಗವೇ ಈ ವಕ್ಫ್ ಭೂಮಿಯ ನಿಜವಾದ ಫಲವನ್ನು ಅನುಭವಿಸುತ್ತಿದೆ. ಅವರು ತಿಂದುಂಡು ಬಿಟ್ಟದ್ದನ್ನು ಮದ್ರಸ, ಮಸೀದಿಗಳಿಗೆ ಸರಕಾರ ಕೊಟ್ಟಂತೆ ಮಾಡುತ್ತಿದೆ.

ರೈತರ ಜಮೀನಿಗೆ ಸಂಬಂಧಿಸಿದ ಸಮಸ್ಯೆಯನ್ನು ವಕ್ಫ್‌ಬೋರ್ಡ್ ಅನುಕಂಪದ ನೆಲೆಯಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಮಾತುಗಳು ನಡೆದು ಒಂದು ರಾಜಿ ರೂಪದ ಮಾರ್ಗವನ್ನು ಕಂಡುಕೊಳ್ಳುವುದು ಅತ್ಯಗತ್ಯ. ಆದರೆ ಇದೇ ಸಂದರ್ಭದಲ್ಲಿ ವಾಣಿಜ್ಯಗಳಿಗಾಗಿ ಅತ್ಯಮೂಲ್ಯ ವಕ್ಫ್ ಜಮೀನನ್ನೂ ಶ್ರೀಮಂತ ಕುಳಗಳಿಗೆ ಲೀಸ್ ರೂಪದಲ್ಲಿ ನೀಡಲಾಗಿದೆ. ಅವರಿನ್ನೂ ಅಲ್ಪ ಮೊತ್ತದ ಹಣವನ್ನು ನೀಡುತ್ತಾ, ದೇವರ ಹೆಸರಿನಲ್ಲಿರುವ ಬಡವರ ಸೊತ್ತಿನ ಲಾಭವನ್ನು ಅನುಭವಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಶ್ರೀಮಂತ ಕುಳಗಳಿಂದ ಸಾವಿರಾರು ಎಕರೆ ಭೂಮಿ ಒತ್ತುವರಿಯೂ ಆಗಿದೆ. ಅವರಿಂದ ಆ ಭೂಮಿಯನ್ನು ವಶಪಡಿಸಿಕೊಳ್ಳಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್‌ನೊಳಗಿರುವ ಹಲವು ನಾಯಕರೂ ಈ ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ರೈತರ ಮೇಲೆ ನಿಜಕ್ಕೂ ಬಿಜೆಪಿಗೆ ಕಾಳಜಿಯಿದ್ದರೆ, ತನ್ನದೇ ಸರಕಾರ ಕೇಂದ್ರದಲ್ಲಿ ಜಾರಿಗೆ ತರಲು ಯತ್ನಿಸುತ್ತಿರುವ ರೈತವಿರೋಧಿ ಕೃಷಿನೀತಿಗಳ ವಿರುದ್ಧ ಬೀದಿಗಿಳಿಯಲಿ. ಭೂಸುಧಾರಣೆ ಕಾಯ್ದೆಯ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಬೃಹತ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟದ್ದು ತಮ್ಮದೇ ಸರಕಾರ ಎನ್ನುವುದನ್ನು ಬಿಜೆಪಿ ಮರೆಯಬಾರದು. ಎಪಿಎಂಸಿ ತಿದ್ದುಪಡಿ ಮೂಲಕ, ರೈತ ಬೆಳೆದ ಬೆಳೆಗೆ ಬೆಲೆ ನಿರ್ಧರಿಸುವ ಅಧಿಕಾರವನ್ನು ಮಧ್ಯವರ್ತಿಗಳ ಕೈಗೆ ನೀಡಿದ್ದು ಯಾರು ಎನ್ನುವುದರ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೂ ಇದು ಸರಿಯಾದ ಸಮಯವಾಗಿದೆ. ಕಮೆಂಟ್ ಬಾಕ್ಸ್‌ನಲ್ಲಿ ಬಂದ ‘ವಾಟ್ಸ್‌ಆ್ಯಪ್ ಯುನಿವರ್ಸಿಟಿ’ಯ ಮಾಹಿತಿಯ ಆಧಾರದಲ್ಲಿ ರೈತರ ಬಗ್ಗೆ ಮಾತನಾಡುವುದನ್ನು ಬಿಜೆಪಿ ನಾಯಕರು ಇನ್ನಾದರೂ ನಿಲ್ಲಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News