ಸರಕಾರಿ ಶಾಲೆಗಳ ದುರವಸ್ಥೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವಗಳಲ್ಲಿ ನೆಲದ ಭಾಷೆ ಕನ್ನಡವನ್ನು ಬೆಳೆಸುವ ಸಂಕಲ್ಪವನ್ನು ಮಾಡಲಾಯಿತು. ಆದರೆ ವಾಸ್ತವವಾಗಿ ಕನ್ನಡ ಭಾಷೆ ಕ್ರಮೇಣ ಅಳಿವು ಉಳಿವಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇತರ ಅದರಲ್ಲೂ ಉತ್ತರದ ರಾಜ್ಯಗಳ ಜನರು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬಂದು ತಮ್ಮ ನಾಡ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ. ಭಾಷೆಗಳ ವಿಷಯದಲ್ಲಿ ನಮ್ಮ ಕನ್ನಡಿಗರು ಕೂಡ ಸಾಕಷ್ಟು ಧಾರಾಳಿಗಳು. ಅವರು ಅನ್ಯ ರಾಜ್ಯಗಳಿಂದ ವಲಸೆ ಬರುವವರಿಗೆ ಕನ್ನಡ ಕಲಿಸುವುದನ್ನು ಬಿಟ್ಟು ತಾವೇ ಅವರ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಬಹುತೇಕ ಸರಕಾರಿ ಶಾಲೆಗಳ ಪರಿಸ್ಥಿತಿ ಇನ್ನೂ ದಾರುಣವಾಗಿದೆ.
ಇನ್ನೊಂದೆಡೆ ಸರಕಾರಿ ಕನ್ನಡ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆಯೂ ಪ್ರತಿನಿತ್ಯ ಕುಸಿಯುತ್ತಿರುವುದು ಸಾಮಾನ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದರಿಂದ ಸರಕಾರಿ ಶಾಲೆಗಳ ಪರಿಸ್ಥಿತಿ ದಾರುಣವಾಗಿದೆ. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಬ್ಬರು ಸೇವೆ ಸಲ್ಲಿಸಿದ ಸರಕಾರಿ ಶಾಲೆ ಈ ವರ್ಷ ಮುಚ್ಚಿ ಹೋಗಿದೆ. ಸರಕಾರವು ಇನ್ನಾದರೂ ಸರಕಾರಿ ಶಾಲೆಗಳು ಮುಚ್ಚುವುದನ್ನು ತಡೆಯಲು ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕಾಗಿದೆ.
ಸರಕಾರಿ ಶಾಲೆಗಳ ದುರವಸ್ಥೆಯನ್ನು ಸರಿಪಡಿಸಲು ಈ ವರೆಗೆ ರಾಜ್ಯವನ್ನಾಳಿದ ಯಾವ ಸರಕಾರವೂ ಆಸಕ್ತಿ ತೋರಿಸಿಲ್ಲ. ಈ ಬಗ್ಗೆ ಹೈಕೋರ್ಟ್ ಕೂಡ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೂ ಸರಕಾರಿ ಕನ್ನಡ ಶಾಲೆಗಳ ಪರಿಸ್ಥಿತಿ ಸುಧಾರಿಸಿಲ್ಲ. ಯಾವುದೇ ಸರಕಾರಿ ಶಾಲೆ ಸರಿಯಾಗಿ ನಡೆಯಬೇಕೆಂದರೆ ಪ್ರತಿಯೊಂದು ಸರಕಾರಿ ಶಾಲೆಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಅಂದರೆ ಸರಕಾರಿ ಶಾಲೆಗಳಲ್ಲಿ ಪ್ರತ್ಯೇಕ ಕೊಠಡಿ, ಕುಡಿಯುವ ನೀರಿನ ಪೂರೈಕೆ ಹಾಗೂ ಶೌಚಾಲಯದ ಸೌಕರ್ಯವನ್ನು ಒದಗಿಸಬೇಕು. ಅಷ್ಟೇ ಅಲ್ಲ, ಪಾಠ ಮಾಡಲು ಅಗತ್ಯವಾದಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಈ ವಿಷಯಗಳಲ್ಲಿ ಸರಕಾರಿ ಕನ್ನಡ ಶಾಲೆಗಳು ಹಿಂದೆ ಉಳಿದಿರುವುದು ಹಲವಾರು ಸಮೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
ರಾಜ್ಯದ ಬಹುತೇಕ ಕನ್ನಡ ಪ್ರಾಥಮಿಕ ಶಾಲೆಗಳು ದುರಸ್ತಿಯಾಗದೆ ನೆಲಕ್ಕೆ ಉರುಳುವ ಸ್ಥಿತಿಯಲ್ಲಿವೆ. ಸರಕಾರ ಅನುದಾನವನ್ನೇನೋ ನೀಡುತ್ತದೆ. ಆದರೆ ಬೀಳುವ ಹಂತದಲ್ಲಿರುವ ಶಾಲೆಗಳ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಕೆಲವು ಹಳ್ಳಿಗಳಲ್ಲಿ ಶಾಲಾ ತರಗತಿಗಳು ಮರದ ಕೆಳಗೆ ಇಲ್ಲವೇ ಯಾವುದೋ ದೇವಾಲಯದ ಮುಂಭಾಗದಲ್ಲಿ ನಡೆಯುತ್ತವೆ. ಅನೇಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಈ ಹಲವು ಕಾರಣಗಳಿಂದಾಗಿ ಬಹುತೇಕ ಶಾಲೆಗಳು ಮುಚ್ಚುವ ಹಂತದಲ್ಲಿ ಇವೆ. ಹಾಗಾಗಿ ಸರಕಾರ ಇತ್ತ ಗಮನವನ್ನು ಹರಿಸಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಸಂರಕ್ಷಿಸಬೇಕಾಗಿದೆ.
ಕಳೆದ ಐದು ವರ್ಷಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಮಕ್ಕಳು ಕೂಡಾ ಸರಕಾರಿ ಶಾಲೆಗಳನ್ನು ಬಿಟ್ಟು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಕೇಂದ್ರ ಸರಕಾರದ ಸಮೀಕ್ಷೆಯಿಂದ ಗೊತ್ತಾಗಿದೆ. ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಬಹುತೇಕ ಮಕ್ಕಳು ಶಾಲೆಗಳಿಂದ ಹೊರಗುಳಿಯುವ ಪರಿಸ್ಥಿತಿ ಉಂಟಾಗಿದೆ. ಸಂವಿಧಾನದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದ್ದರೂ ವಾಸ್ತವವಾಗಿ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗಿದೆ
ಯಾವ ಉದ್ದೇಶದಿಂದ ಸಂವಿಧಾನದ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಲಾಗಿದೆಯೋ ಅದು ನಿರರ್ಥಕವಾದಂತಾಗಿದೆ. ಯಾವ ಮಕ್ಕಳು ಸರಕಾರಿ ಶಾಲೆಗಳಿಗೆ ಹೋಗುತ್ತಾರೆ ಎಂಬುದನ್ನು ತಿಳಿಯಲು ಸಮೀಕ್ಷೆ ಮಾಡಬೇಕಾಗಿಲ್ಲ ಕಡು ಬಡವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸಹಜವಾಗಿ ಸೇರಿಸುತ್ತಾರೆ. ಉಳ್ಳವರು ಶಾಲಾ ಶಿಕ್ಷಣ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈಗ ಅಧಿಕೃತವಾಗಿ ತಿಳಿದು ಬಂದಂತೆ ರಾಜ್ಯದ ೪೬೪ ಸರಕಾರಿ ಶಾಲೆಗಳಲ್ಲಿ ಶೌಚಾಲಯವಿಲ್ಲ, ೮೭ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದಂತಹ ಸೌಕರ್ಯಗಳನ್ನು ಒದಗಿಸಲು ಕೋಟ್ಯಂತರ ಹಣವೇನೂ ಬೇಕಾಗಿಲ್ಲ. ಸರಕಾರ ಆಸಕ್ತಿ ತೋರಿಸಿದರೆ ಪಂಚಾಯತ್ ಮಟ್ಟದಲ್ಲಿ ಅನುದಾನವನ್ನು ನೀಡಿ ಒಂದೇ ತಿಂಗಳಲ್ಲಿ ಅಗತ್ಯದ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಇದನ್ನೆಲ್ಲ ಯಾರು ಸರಿಪಡಿಸಬೇಕು? ಜನ ಪ್ರತಿನಿಧಿಗಳು ಆಸಕ್ತಿ ತೋರಿಸಿದರೆ ಇದು ಸಾಧ್ಯವಾಗುತ್ತದೆ.
ಕೆಲವು ಖಾಸಗಿ ಶಾಲೆಗಳಲ್ಲಿ ಜಾತಿ, ಮತ, ಕೋಮು ದ್ವೇಷವನ್ನು ವಿದ್ಯೆಯ ಹೆಸರಿನಲ್ಲಿ ಮುಗ್ಧ ಮಕ್ಕಳ ಮೆದುಳಿಗೆ ತುಂಬುವ ಹುನ್ನಾರಗಳು ನಿರಂತರವಾಗಿ ನಡೆದಿವೆ. ಬಹುತೇಕ ಶಿಕ್ಷಕರು ಕೋಮುವಾದಿ ಸಂಘಗಳಿಂದ ಬಂದಿರುವುದರಿಂದ ಮಕ್ಕಳ ಮೆದುಳಿನಲ್ಲಿ ಗಾಂಧೀಜಿಯವರನ್ನು ಖಳ ನಾಯಕನಂತೆ ಬಿಂಬಿಸಿ, ಗೋಡ್ಸೆಯನ್ನು ವೈಭವೀಕರಿಸಲಾಗುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಇದನ್ನು ತಡೆಗಟ್ಟಲು ಸರಕಾರಿ ಶಾಲೆಗಳಲ್ಲಿ ಸಂವಿಧಾನ, ಅಂಬೇಡ್ಕರ್, ಗಾಂಧೀಜಿಯವರ ಬಗ್ಗೆ ಅರಿವು ಮೂಡಿಸಬೇಕಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಸರಕಾರಿ ಪ್ರಾಥಮಿಕ ಶಾಲೆಗಳ ಸುಧಾರಣೆಯ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಅಲ್ಲದೆ ಬಹುತೇಕ ಶಾಸಕರು, ರಾಜಕಾರಣಿಗಳು ತಮ್ಮದೇ ಶಾಲೆಗಳನ್ನು ಹೊಂದಿರುವುದರಿಂದ ಸರಕಾರಿ ಕನ್ನಡ ಶಾಲೆಗಳ ಅಭಿವೃದ್ಧಿ ಬಗ್ಗೆ ಒಳಗೊಳಗೆ ಅಡ್ಡಿಯುಂಟು ಮಾಡುತ್ತಾರೆ ಎಂಬ ಆರೋಪಗಳೂ ಇವೆ. ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತ ಗಮನಿಸಿ ಲೋಪವನ್ನು ಸರಿಪಡಿಸಬೇಕಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಖಾಸಗಿ ಶಾಲೆಗಳು, ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಸಾರಿಗೆ ವ್ಯವಸ್ಥೆಯ ಬಗ್ಗೆ ವಿಶೇಷ ಆಸಕ್ತಿ ಇರುವುದರಿಂದ ಬಡವರಿಗೆ ಶಿಕ್ಷಣ ಸೌಕರ್ಯಗಳನ್ನು ಒದಗಿಸಲು ಬಹುದೊಡ್ಡ ಚಳವಳಿ ನಡೆಯಬೇಕಾಗಿದೆ.