ಗವಾಕ್ಷಿಯೊಳಗಿಂದ ಬಂದ ಟ್ರಂಪ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಹೋದೆಯಾ ಎಂದು ಕೇಳಿದರ್ ಬಂದೆ ಗವಾಕ್ಷಿಯಿಂದ’ ಎಂದರಂತೆ ಡೊನಾಲ್ಡ್ ಟ್ರಂಪ್. 2020ರ ನವೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆದ ಚುನಾವಣೆಯಲ್ಲಿ ಭಾರತದ ಪ್ರಧಾನಿ ತನ್ನ ಸ್ಥಾನದ ಘನತೆಯನ್ನು ಮರೆತು, ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದು ಸಾಮಾನ್ಯ ಕಾರ್ಯಕರ್ತನಾಗಿ ಟ್ರಂಪ್ ಪರ ದುಡಿದಿದ್ದರೂ, ಅಲ್ಲಿನ ಜನತೆ ಸಾರಾಸಗಟಾಗಿ ತಿರಸ್ಕರಿಸಿದ್ದರು. ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಭಾರೀ ವಿಜಯವನ್ನು ಸಾಧಿಸಿದ್ದರು. ಇಷ್ಟಾದರೂ, ಜನಾದೇಶವನ್ನು ಒಪ್ಪಲು ಟ್ರಂಪ್ ಸಿದ್ಧರಿರಲಿಲ್ಲ. ತನ್ನ ಬೆಂಬಲಿಗರ ಬಲದಿಂದ ಸಂಸತ್‌ನಲ್ಲಿ ಬೇರೂರುವ ಪ್ರಯತ್ನ ನಡೆಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅವರ ಬೆಂಬಲಿಗರು ಸಂಸತ್‌ಗೆ ನುಗ್ಗುವ ಪ್ರಯತ್ನ ನಡೆಸಿದ್ದರು. ಈ ಸಂಬಂಧವಾಗಿ ಟ್ರಂಪ್ ಬಳಿಕ ಸುದೀರ್ಘ ವಿಚಾರಣೆಯನ್ನು ಎದುರಿಸಿದ್ದರು. ಸಂಸತ್‌ನಲ್ಲಿ ವಾಗ್ದಂಡನೆಯ ಅವಮಾನದಿಂದ ಕೊನೆಯ ಕ್ಷಣದಲ್ಲಿ ಪಾರಾಗಿದ್ದರು. ಯಾವ ಜನಾದೇಶವನ್ನು ಟ್ರಂಪ್ ಪ್ರಶ್ನಿಸಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಯತ್ನಿಸಿದ್ದರೋ ಅದೇ ಜನಾದೇಶದ ಬಲದಿಂದ ಟ್ರಂಪ್ ಎಲ್ಲ ಕಳಂಕಗಳಿಂದ ಮುಕ್ತರಾಗಿ ಅಮೆರಿಕದ 47ನೇ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ, ಅಧ್ಯಕ್ಷನಾಗಿ ಬಳಿಕ ಚುನಾವಣೆಯಲ್ಲಿ ಸೋತು, ಮತ್ತೆ ಸ್ಪರ್ಧಿಸಿ ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ತನ್ನದಾಗಿಸಿಕೊಂಡ ದಾಖಲೆಯನ್ನು ಟ್ರಂಪ್ ಬರೆದಿದ್ದಾರೆ. ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷನಾಗಿಯೂ ಟ್ರಂಪ್ ಗುರುತಿಸಲ್ಪಟ್ಟಿದ್ದಾರೆ.
ಪ್ರಧಾನಿ ಮೋದಿಯವರು ಅಮೆರಿಕದ ಸ್ನೇಹಕ್ಕಾಗಿ ಈ ಹಿಂದೆ ಟ್ರಂಪ್‌ನ್ನು ಬಲವಾಗಿ ನೆಚ್ಚಿಕೊಂಡಿದ್ದರು. ಮೋದಿಯವರ ಟ್ರಂಪ್ ಓಲೈಕೆಗೆ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ತೀವ್ರ ಮುಜುಗರವನ್ನು ಅನುಭವಿಸಿದ್ದರು. ಜಗತ್ತನ್ನು ಕೊರೋನ ಕಾರ್ಮೋಡ ಕವಿದಿದ್ದಾಗ, ‘ನಮಸ್ತೆ ಟ್ರಂಪ್’ಗಾಗಿ ಭಾರತದ ಅಂತರ್‌ರಾಷ್ಟ್ರೀಯ ಹೆಬ್ಬಾಗಿಲನ್ನು ಕೊರೋನಕ್ಕೆ ತೆರೆದಿಟ್ಟವರು ಪ್ರಧಾನಿ ಮೋದಿ. ಭಾರತ ಅದಕ್ಕಾಗಿ ಬಳಿಕ ಭಾರೀ ಬೆಲೆಯನ್ನು ತೆತ್ತಿತು. ನಮಸ್ತೆ ಟ್ರಂಪ್ ಬಳಿಕ ‘ನಮಸ್ತೆ ಕೊರೋನಾ’ ಆಗಿ ಕುಖ್ಯಾತವಾಯಿತು. ಮೋದಿಯೂ ಇದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ತನ್ನ ಮೊದಲ ಅಧಿಕಾರಾವಧಿಯಲ್ಲಿ ಟ್ರಂಪ್ ಮೇಲ್ನೋಟಕ್ಕೆ ಭಾರತದ ಮಿತ್ರನಂತೆ ವರ್ತಿಸಿದ್ದರೂ, ಅಮೆರಿಕದ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಯಾವ ರಾಜಿಯನ್ನು ಮಾಡಿಕೊಂಡಿರಲಿಲ್ಲ. ತೈಲ ಒಪ್ಪಂದ, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಒಪ್ಪಂದಗಳಲ್ಲಿ ಭಾರತ ತಟಸ್ಥ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಆದರೆ ಇದು ಟ್ರಂಪ್‌ಗೆ ಇಷ್ಟದ ಸಂಗತಿಯಾಗಿರಲಿಲ್ಲ ಮಾತ್ರವಲ್ಲ, ಯುಎಸ್ ತಂತ್ರಜ್ಞಾನ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲು ಅವರು ಭಾರತಕ್ಕೆ ಪರೋಕ್ಷ ಒತ್ತಡಗಳನ್ನು ಹೇರುತ್ತಾ ಬಂದಿದ್ದರು. ರಶ್ಯ, ಇರಾನ್ ಜೊತೆಗೆ ತೈಲ ಸಂಬಂಧಿ ಒಪ್ಪಂದಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಮೆರಿಕದ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯನ್ನು ತೆರೆದಿಡುವ ಬಗ್ಗೆಯೂ ‘ದೊಡ್ಡಣ್ಣ’ನಂತೆ ವರ್ತಿಸಿದ್ದರು. ಟ್ರಂಪ್‌ನ ಸ್ನೇಹ ಭಾರತಕ್ಕೆ ನಿರೀಕ್ಷಿಸಿದ ಫಲವನ್ನು ನೀಡಿಲ್ಲ ಎನ್ನುವುದು ಮೋದಿ ಸರಕಾರಕ್ಕೂ ಅರ್ಥವಾದಂತಿದೆ. ಆದುದರಿಂದಲೇ ಟ್ರಂಪ್ ಗೆಲುವು ಮೋದಿ ಪಾಳಯದಲ್ಲಿ ಈ ಬಾರಿ ವಿಶೇಷ ಸಂಭ್ರಮವನ್ನೇನು ಸೃಷ್ಟಿಸಿಲ್ಲ. ಹಾಗೆ ನೋಡಿದರೆ ಟ್ರಂಪ್‌ಗೆ ಎದುರಾಳಿಯಾಗಿದ್ದವರು ಭಾರತೀಯ ಮೂಲದ ಕಮಲಾ ಹ್ಯಾರಿಸ್. ಅವರು ಗೆದ್ದಿದ್ದರೆ, ಅದು ಪರೋಕ್ಷವಾಗಿ ಭಾರತಕ್ಕೆ ಪೂರಕವಾಗಿರುತ್ತಿತ್ತು. ಆದರೆ ಅಮೆರಿಕದ ಬಿಳಿಯ ಜನರು ಕಮಲಾ ಅವರನ್ನು ಸೋಲಿಸುವ ಮೂಲಕ ಕಂದು ವರ್ಣೀಯರನ್ನೂ ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ಬಿಳಿ ಜನಾಂಗೀಯವಾದಕ್ಕೆ ಈ ಮೂಲಕ ಬಲ ಬಂದಿದೆ ಎನ್ನುವ ವಾದವೂ ಇದೆ.
ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳೂ ಈ ಬಾರಿಯ ಚುನವಾವಣೆಯಲ್ಲಿ ಪರಿಣಾಮವನ್ನು ಬೀರಿವೆೆ ಬೈಡನ್‌ನ ಇಸ್ರೇಲ್ ಪರವಾದ ನಿರ್ಲಜ್ಜ ನೀತಿಗೆ ದಕ್ಕಿದ ಸೋಲು ಇದು ಎಂದೂ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತದೆ. ಅಮೆರಿಕದ ಸರ್ವ ಹಿತಾಸಕ್ತಿಗಳನ್ನು ಬಲಿಕೊಟ್ಟು ಇಸ್ರೇಲ್‌ನ ಯುದ್ಧದಾಹಿ ನಡೆಯ ಜೊತೆಗೆ ಹೆಜ್ಜೆ ಹಾಕಿರುವುದು ಡೆಮಾಕ್ರಟಿಕ್ ಪಕ್ಷದ ಜನರನ್ನು ತೀವ್ರ ಕಳವಳಕ್ಕೀಡು ಮಾಡಿತ್ತು. ಇದು ಅಮೆರಿಕದ ಹಿತಾಸಕ್ತಿಯನ್ನು ಬಲಿಕೊಡಬಹುದು ಎನ್ನುವ ಆತಂಕ ಅಲ್ಲಿನ ಬಹುತೇಕ ಜನರನ್ನು ಕಾಡಿತ್ತು. ಬೈಡನ್‌ಗೆ ಹೋಲಿಸಿದರೆ, ಅಮೆರಿಕದ ಬಂಡವಾಳ ಶಾಹಿ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರಗಳನ್ನು ತಳೆಯುತ್ತಾ ಬಂದಿರುವ ಟ್ರಂಪ್ ಎಷ್ಟೋ ವಾಸಿ ಎಂದು ಅವರಿಗೆ ಅನ್ನಿಸಿದರೆ ಅಚ್ಚರಿಯಿಲ್ಲ. ಮಧ್ಯಪ್ರಾಚ್ಯದ ಯುದ್ಧ ದಿನೇ ದಿನೇ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಬರುತ್ತಿತ್ತು. ಯಾವತ್ತು ಬೇಕಾದರೂ ಅದು ಮೂರನೇ ಮಹಾಯುದ್ಧಕ್ಕೆ ಜಗತ್ತನ್ನು ತಳ್ಳಬಹುದು ಎನ್ನುವ ಆತಂಕ ಬಹುತೇಕ ಜನರದ್ದಾಗಿತ್ತು. ಅಮೆರಿಕದ ಉದ್ಯಮ ಪತಿಗಳಿಗೆ ತಮ್ಮ ಹಿತಾಸಕ್ತಿಗೆ ಪೂರಕವಾದ ನೀತಿಗಳ ಅಗತ್ಯವಿದೆಯೇ ಹೊರತು, ಅನಗತ್ಯ ಯುದ್ಧಗಳಿಂದ ಎದುರಾಗುವ ಆರ್ಥಿಕ ಬಿಕ್ಕಟ್ಟು ಬೇಡವಾಗಿತ್ತು. ಈ ಹಿಂದೆ, ಅಮೆರಿಕಕ್ಕೆ ಪೂರಕವಾಗಿ ಮಧ್ಯಪ್ರಾಚ್ಯವನ್ನು ಟ್ರಂಪ್ ನಿಭಾಯಿಸಿದ ರೀತಿ ಅಲ್ಲಿನ ಕಾರ್ಪೊರೇಟ್ ಶಕ್ತಿಗಳಿಗೆ ಇಷ್ಟವಾಗಿತ್ತು. ಆದರೆ ಬೈಡನ್‌ನ ನಿಲುವು ಇಡೀ ಜಗತ್ತನ್ನು ನಿಧಾನಕ್ಕೆ ಅಮೆರಿಕದ ವಿರುದ್ಧ ನಿಲ್ಲುವಂತೆ ಮಾಡುವ ಸಾಧ್ಯತೆಗಳಿದ್ದವು. ಇರಾನ್-ಇಸ್ರೇಲ್ ನಡುವಿನ ಯುದ್ಧ ಸ್ಫೋಟಗೊಂಡದ್ದೇ ಆದರೆ, ಅದು ಅಮೆರಿಕದ ಮೇಲೆಯೂ ಪರಿಣಾಮ ಬೀರಲಿತ್ತು. ಕಳೆದ ಜುಲೈ ತಿಂಗಳಲ್ಲಿ ಟ್ರಂಪ್ ಬಹಿರಂಗವಾಗಿಯೇ ‘‘ಯುದ್ಧ ನಿಲ್ಲಬೇಕು’’ ಎಂದು ಕರೆ ನೀಡಿದ್ದರು. ಆದರೆ ಯುದ್ಧಕ್ಕೆ ಸಂಬಂಧಿಸಿ ಬೈಡನ್ ನಿಲುವು ಭಿನ್ನವಾಗಿತ್ತು.
ತನ್ನ ಅಧಿಕಾರದ ಅವಧಿಯಲ್ಲಿ ಫೆಲೆಸ್ತೀನ್ ವಿವಾದವನ್ನು ಮುನ್ನ್ನೆಲೆಗೆ ಬರದಂತೆ ನೋಡಿಕೊಂಡು, ಇಸ್ರೇಲ್‌ನ್ನು ಅರಬ್ ಜಗತ್ತಿನ ಜೊತೆಗೆ ಜೋಡಿಸಲು ಸಾಕಷ್ಟು ತಂತ್ರಗಳನ್ನು ಹೆಣೆದವರು ಟ್ರಂಪ್. ಅಮೆರಿಕಕ್ಕೆ ಬೇಕಾಗಿದ್ದು ಕೂಡ ಇದೇ ಆಗಿತ್ತು. ಅಮೆರಿಕದ ನೇತೃತ್ವದಲ್ಲಿ ಇಸ್ರೇಲ್ ಮತ್ತು ಅರಬ್ ಒಕ್ಕೂಟಗಳ ನಡುವೆ ನಡೆದ ಒಪ್ಪಂದಗಳು ಪಶ್ಚಿಮ ಏಶ್ಯದ ಮೇಲೆ ನಿಯಂತ್ರಣ ಸಾಧಿಸಲು ಬಹುದೊಡ್ಡ ರಾಜತಂತ್ರ ನಡೆಯಾಗಿತ್ತು. ಇರಾನ್-ರಶ್ಯ-ಚೀನಾ ಇವುಗಳ ನಡುವಿನ ಮೈತ್ರಿಗೆ ಪ್ರತಿಯಾಗಿ ಅವರು ಇಸ್ರೇಲ್‌ನ್ನು ಅರಬ್ ರಾಷ್ಟ್ರಗಳಿಗೆ ಹತ್ತಿರವಾಗಿಸುವ ಅವರ ಪ್ರಯತ್ನ ಭವಿಷ್ಯದಲ್ಲಿ ಎಷ್ಟರಮಟ್ಟಿಗೆ ಸಾಧ್ಯವಾಗಲಿದೆ ಎನ್ನುವುದನ್ನು ಕಾದು ನೋಡಬೇಕು. ಇರಾನ್‌ನ ಪರಮಾಣು ಒಪ್ಪಂದ ಟ್ರಂಪ್ ಅವಧಿಯಲ್ಲಿ ಮತ್ತೊಮ್ಮೆ ಜೀವ ಪಡೆದರೂ ಅಚ್ಚರಿಯೇನೂ ಇಲ್ಲ. ಎರಡನೆಯ ಬಾರಿಗೆ ಟ್ರಂಪ್ ಆಗಮನದಿಂದ ಭಾರತ ಸಂಭ್ರಮಿಸುವಂತಹದೇನೂ ಇಲ್ಲ. ಯಾಕೆಂದರೆ ತೈಲ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಭಾರತವೂ ರಶ್ಯದೊಂದಿಗೆ ಹೊಂದಿರುವ ಸಂಬಂಧ ಮತ್ತೊಮ್ಮೆ ಅಮೆರಿಕದ ಜೊತೆಗೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳೂ ಇವೆ. ಟ್ರಂಪ್ ಪಕ್ಕಾ ವ್ಯಾಪಾರಿ. ಆತ ಅಮೆರಿಕದ ಹಿತಾಸಕ್ತಿಯನ್ನು ಬಿಟ್ಟುಕೊಟ್ಟು ಯಾವ ಯುದ್ಧಕ್ಕೂ ಅವಕಾಶವನ್ನು ನೀಡಲಾರರು. ಆದುದರಿಂದ, ಟ್ರಂಪ್‌ನ ಆಯ್ಕೆಯ ಜೊತೆಗೆ ಇಸ್ರೇಲ್‌ನ ಯುದ್ಧದ ಆವೇಗಕ್ಕೂ ತಡೆ ಬೀಳಬಹುದಾದ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಚೀನಾ ಮತ್ತು ಪಾಕಿಸ್ತಾನದ ಜೊತೆಗಿನ ಭಾರತದ ತಿಕ್ಕಾಟದ ಲಾಭವನ್ನು ಎಷ್ಟರಮಟ್ಟಿಗೆ ತಾನು ಕೊಯ್ದುಕೊಳ್ಳಬಹುದು ಎನ್ನುವ ಹೊಸ ಲೆಕ್ಕಾಚಾರದಲ್ಲಿ ಟ್ರಂಪ್ ತೊಡಗಬಹುದು. ಉಕ್ರೇನ್ ಕೂಡ ಟ್ರಂಪ್ ಅವಧಿಯಲ್ಲಿ ವಿಶೇಷ ಸಹಾಯವನ್ನು ಅಮೆರಿಕದಿಂದ ನಿರೀಕ್ಷಿಸುವುದು ಕಷ್ಟವಾದೀತು. ಅಮೆರಿಕದ ಕಾರ್ಪೊರೇಟ್ ಶಕ್ತಿಗಳು ಈ ಚುನಾವಣೆಯನ್ನು ಮತ್ತೊಮ್ಮೆ ಗೆದ್ದುಕೊಂಡಿದ್ದಾರೆ. ಜಾಗತಿಕ ಹಿತಾಸಕ್ತಿಯನ್ನು ಈ ಫಲಿತಾಂಶದಲ್ಲಿ ಯಾವ ರೀತಿಯಲ್ಲೂ ನಿರೀಕ್ಷಿಸುವಂತೆಯೇ ಇಲ್ಲ.