ಬುಲ್ಡೋಜರ್ ಅನ್ಯಾಯ ವ್ಯವಸ್ಥೆ: ಸಂವಿಧಾನಕ್ಕೆ ಸವಾಲು

Update: 2024-11-11 05:28 GMT

ಬುಲ್ಡೋಜರ್ | ಸುಪ್ರೀಂಕೋರ್ಟ್ (PTI) 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರವೇ ಅಧಿಕೃತವಾಗಿ ನ್ಯಾಯಾಧೀಶನ ಸ್ಥಾನದಲ್ಲಿ ನಿಂತು ಆರೋಪಿಯ ವಿರುದ್ಧ ತೀರ್ಪು ಘೋಷಿಸಿ, ಶಿಕ್ಷೆ ವಿಧಿಸುವ ‘ಬುಲ್ಡೋಜರ್ ನ್ಯಾಯ’ದ ವಿರುದ್ಧ ಸುಪ್ರೀಂಕೋರ್ಟ್ ತನ್ನ ಬುಲ್ಡೋಜರ್‌ನ್ನು ಹರಿಸಿದೆ. ಸಂವಿಧಾನ ಬದ್ಧವಾಗಿರುವ ಕಾನೂನು ವ್ಯವಸ್ಥೆಯಿರುವ ನಾಗರಿಕ ಸಮಾದಲ್ಲಿ ಬುಲ್ಡೋಜರ್ ನ್ಯಾಯಕ್ಕೆ ಅವಕಾಶವಿಲ್ಲ ಎಂದಿರುವ ಸುಪ್ರೀಂಕೋರ್ಟ್ ಇದರ ವಿರುದ್ಧ ಅಧಿಕೃತ ಕಾರ್ಯಸೂಚಿಯೊಂದನ್ನು ಹೊರಡಿಸಿದೆ. ಇಂತಹ ನ್ಯಾಯವು ನ್ಯಾಯವ್ಯವಸ್ಥೆಯಲ್ಲಿ ಹಸ್ತಕ್ಷೇಪ ಎಂದಿರುವ ಸುಪ್ರೀಂಕೋರ್ಟ್, ಸರಕಾರದ ಯಾವುದೇ ವಿಭಾಗ ಅಥವಾ ಅಧಿಕಾರಿಗಳಿಗೆ ಇಂತಹದೊಂದು ಅಧಿಕಾರವನ್ನು ನೀಡಲಾದಲ್ಲಿ ಅದನ್ನು ಪ್ರತೀಕಾರದ ಬಾಹ್ಯಕ್ರಮವಾಗಿ ದುರುಪಯೋಗ ಪಡಿಸಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯ ಸುರಕ್ಷಾ ಕ್ರಮಗಳನ್ನು ಸೂಚಿಸಲಾಗಿದ್ದು, ಧ್ವಂಸ ಕಾರ್ಯಾಚರಣೆ ಪ್ರಕ್ರಿಯೆಯನ್ನು ಸೂಕ್ತ ಸಮೀಕ್ಷೆಗಳು, ಲಿಖಿತ ನೋಟಿಸ್‌ಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕವೇ ಕೈಗೊಳ್ಳಬೇಕು. ಈ ಮಾರ್ಗ ಸೂಚಿಯನ್ನು ಉಲ್ಲಂಘಿಸುವ ಅಧಿಕಾರಿಗಳು ಶಿಸ್ತುಕ್ರಮ ಹಾಗೂ ಅಪರಾಧ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ. ‘ಸರಕಾರದ ಈ ಕ್ರಮಕ್ಕೆ ನ್ಯಾಯಾಲಯ ಅನುಮತಿಸಿದರೆ, ಸಂವಿಧಾನದ 300 ಎ ಅಡಿಯಲ್ಲಿ ನೀಡಿರುವ ಆಸ್ತಿ ಹಕ್ಕನ್ನು ಮಾನ್ಯ ಮಾಡುವ ಸಂವಿಧಾನಾತ್ಮಕ ಕ್ರಮವು ಮೃತಪತ್ರವಾಗಿ ಬಿಡಲಿದೆ’ ಎಂದು ಅದು ಕಳವಳ ವ್ಯಕ್ತಪಡಿಸಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ನಡೆಸುವ ತೆರವು ಕಾರ್ಯಾಚರಣೆಯೂ ಸೇರಿದಂತೆ ಯಾವುದೇ ಆಸ್ತಿಗಳ ಧ್ವಂಸಕ್ಕೆ ಮುನ್ನ ಆರು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ಕೋರ್ಟ್ ಕಡ್ಡಾಯ ಪಡಿಸಿದ್ದು, ಹಾಲಿ ಭೂದಾಖಲೆಗಳು ಹಾಗೂ ನಕ್ಷೆಯ ಪರಿಶೀಲನೆ, ಒತ್ತುವರಿ ಪತ್ತೆಗೆ ಸೂಕ್ತ ಸಮೀಕ್ಷೆ, ಅತಿಕ್ರಮಣ ಆರೋಪ ಎದುರಿಸುತ್ತಿರುವವರಿಗೆ ನೋಟಿಸ್ ನೀಡುವುದು, ಆದೇಶ ಕೋರುವ ವೇಳೆ ಆಕ್ಷೇಪಣೆಗಳನ್ನು ಪರಿಗಣಿಸುವುದು ಮತ್ತು ಹೆಚ್ಚುವರಿ ಭೂಮಿಯನ್ನು ಅಗತ್ಯ ವಿದ್ದಲ್ಲಿ ಕಾನೂನು ಬದ್ಧವಾಗಿ ಸ್ವಾಧೀನ ಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದೆ.

ಬುಲ್ಡೋಜರ್ ಧ್ವಂಸ ಕಾರ್ಯಗಳು ಭಾರತಕ್ಕೆ ಹೊಸತೇನೂ ಅಲ್ಲ. ಈ ಹಿಂದೆ ಅಕ್ರಮ ಕಟ್ಟಡಗಳನ್ನು, ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ ಸಂಕೀರ್ಣಗಳನ್ನು ಧ್ವಂಸಗೊಳಿಸಲು ಇದನ್ನು ಸರಕಾರ ಬಳಸುತ್ತಲೇ ಬಂದಿದೆ. ಇಂದು ನಿಜಕ್ಕೂ ಅಕ್ರಮ ಕಟ್ಟಡಗಳ ಬಗ್ಗೆ ಸರಕಾರಕ್ಕೆ ಕಾಳಜಿಯಿದ್ದದ್ದೇ ಆದರೆ ಮುಂಬೈಯಂತಹ ಶಹರಗಳಲ್ಲಿ ಧ್ವಂಸಗೊಳಿಸಲು ಸಾವಿರಾರು ಕಟ್ಟಡಗಳಿವೆ. ಅವಧಿ ಮುಗಿದ ಕಟ್ಟಡಗಳು, ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳು, ರಸ್ತೆಯನ್ನೇ ಆಕ್ರಮಿಸಿ ಕಟ್ಟಿದ ನಿರ್ಮಾಣಗಳು, ಕೆರೆಗಳನ್ನು ನುಂಗಿ ಅದರ ಮೇಲೆ ನಿಂತ ಬೃಹತ್ ಕಟ್ಟಡಗಳೂ ಸಾವಿರಾರು ಇವೆ. ಆದರೆ ಸರಕಾರ ಇವುಗಳ ಬಗ್ಗೆ ಕಣ್ಣಿದ್ದ್ದೂ ಕುರುಡಾಗಿದೆ. ಒಂದೆಡೆ ಇಂತಹ ಅಕ್ರಮ ಕಟ್ಟಡಗಳನ್ನು ಸಾಕುತ್ತಲೇ, ಬಡವರ ಅಧಿಕೃತ ನಿವಾಸಗಳ ಮೇಲೆ ಬುಲ್ಡೋಜರ್‌ಗಳನ್ನು ಹರಿಯ ಬಿಡಲು ಸರಕಾರ ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ದಿನಗಳಿಂದ ಈ ಬುಲ್ಡೋಜರ್ ಧ್ವಂಸ ಕಾರ್ಯಾಚರಣೆ ಬಿಜೆಪಿ ಸರಕಾರದ ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ. ಇವರ ಉದ್ದೇಶ ಅಕ್ರಮ ನಿವಾಸಗಳನ್ನು ಧ್ವಂಸಗೊಳಿಸುವುದಾಗಿರದೇ, ಚುನಾವಣೆಯಲ್ಲಿ ತಮಗೆ ಮತ ನೀಡದ ಮತದಾರರ ಪ್ರದೇಶಗಳನ್ನು ಗುರುತಿಸಿ ಅವರ ಮೇಲೆ ಸೇಡು ತೀರಿಸುವುದಕ್ಕಾಗಿ ಬುಲ್ಡೋಜರ್‌ನ್ನು ಬಳಸುತ್ತರೆ. ಬುಲ್ಡೋಜರ್‌ನ್ನು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಮಾತ್ರ ಬಳಸಲಾಗುತ್ತಿದೆ ಎನ್ನುವ ಅಂಶವೇ ಬುಲ್ಡೋಜರ್ ಮೂಲಕ ನೀಡುತ್ತಿರುವುದು ನ್ಯಾಯವಲ್ಲ, ಅನ್ಯಾಯ ಎನ್ನುವುದನ್ನು ಕಂಡುಕೊಳ್ಳಬಹುದು.

ಸರಕಾರದ ವಿರುದ್ಧ ನಡೆಯುವ ಎಲ್ಲ ಸಂವಿಧಾನಬದ್ಧವಾದ ಪ್ರತಿಭಟನೆಗಳನ್ನು ದಮನಿಸಲು ಬುಲ್ಡೋಜರ್ ಮೂಲಕ ಮುಂದಾಗಿದೆ. ಸರಕಾರದ ಯಾವುದೇ ಜನವಿರೋಧಿ ನೀತಿಯನ್ನು ವಿರೋಧಿಸಿ ಬೀದಿಗಿಳಿದರೆ, ಅದರ ನೇತೃತ್ವವಹಿಸಿದ ಮುಖಂಡರ ಮನೆಗಳನ್ನು ಅಕ್ರಮ ಎಂದು ಘೋಷಿಸಿ ಧ್ವಂಸಗೊಳಿಸಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಸರಕಾರ ಈ ಮೂಲಕ ಜನತೆಗೆ ನೀಡಲು ಹೊರಟಿದೆ. ಹೆಸರಿಗೆ ಅಲ್ಪಸಂಖ್ಯಾತರ ವಿರುದ್ಧ ಇದನ್ನು ಬಳಸುತ್ತಿದ್ದೇವೆ ಎನ್ನುತ್ತಿದ್ದರೂ, ಅಲ್ಪಸಂಖ್ಯಾತರನ್ನು ಮುಂದಿಟ್ಟುಕೊಂಡೇ ನಿಧಾನಕ್ಕೆ ಇದನ್ನು ಇಡೀ ದೇಶದ ಮೇಲೆ ಅನ್ವಯಗೊಳಿಸಲು ಆರೆಸ್ಸೆಸ್ ನಿಯಂತ್ರಿತ ಬಿಜೆಪಿ ಸರಕಾರ ಹೊರಟಿದೆ. ನ್ಯಾಯಾಧೀಶನ ಪಾತ್ರವನ್ನು ಬುಲ್ಡೋಜರ್‌ನ ಚಾಲಕನ ಕೈಗೆ ಕೊಡಲು ಮುಂದಾಗಿದೆ. ಇದೇ ಸಂದರ್ಭದಲ್ಲಿ, ಅಲ್ಪಸಂಖ್ಯಾತರ ದಮನಕ್ಕೂ ಇದನ್ನು ನೇರವಾಗಿ ಬಳಸುತ್ತಿದೆ. ಸರಕಾರದ ವಿರುದ್ಧ ಧ್ವನಿಯೆತ್ತಿದರೆ, ಹಾಗೆ ಧ್ವನಿಯೆತ್ತಿದವರ ವಿರುದ್ಧ ಪ್ರಕರಣ ದಾಖಲಿಸಿ, ಅವರ ನಿವಾಸಗಳನ್ನು ಅಕ್ರಮವೆಂದು ಘೋಷಿಸಲಾಗುತ್ತದೆ. ಯಾವ ಸ್ಪಷ್ಟೀಕರಣವನ್ನೂ ನೀಡದೆ ಅವರ ನಿವಾಸಗಳನ್ನು ಧ್ವಂಸಗೊಳಿಸಲಾಗುತ್ತದೆ. ಸಂತ್ರಸ್ತರು ಬಳಿಕ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ತನ್ನ ಮನೆ ಅಕ್ರಮವಾಗಿ ನಿರ್ಮಾಣವಾಗಿಲ್ಲ ಎನ್ನುವುದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಲು ಹೋರಾಟ ನಡೆಸಬೇಕಾಗುತ್ತದೆ. ಇದು ಯಾವುದೇ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಎಸಗಿದ ತಪ್ಪಿಗೆ ಇಡೀ ಕುಟುಂಬ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಒಬ್ಬ ಆರೋಪಿಯನ್ನು ಸರಕಾರ ಅಥವಾ ಪೊಲೀಸರು ಗುರುತಿಸಿದಾಕ್ಷಣ ಆತ ದೋಷಿಯಾಗುವುದಿಲ್ಲ. ಆತ ನಿಜಕ್ಕೂ ಅಪರಾಧ ಎಸಗಿದ್ದಾನೆಯೋ ಇಲ್ಲವೋ ಎನ್ನುವುದನ್ನು ಕೋರ್ಟ್ ತೀರ್ಮಾನಿಸಬೇಕು. ನ್ಯಾಯಾಲಯದ ಪಾತ್ರವನ್ನು ಸರಕಾರವೇ ನಿರ್ವಹಿಸುವುದು ಎಷ್ಟು ಸರಿ ಎನ್ನುವುದು ಇಲ್ಲಿ ಮೊದಲ ಪ್ರಶ್ನೆ. ಎರಡನೆಯದು, ಒಂದು ವೇಳೆ ಅಕ್ರಮ ಕಟ್ಟಡಗಳಿದ್ದರೂ ಅವುಗಳನ್ನು ಧ್ವಂಸಗೊಳಿಸುವುದಕ್ಕೆ ಕೆಲವು ಪ್ರಕ್ರಿಯೆಗಳಿವೆ. ಅವೆಲ್ಲವನ್ನು ಉಲ್ಲಂಘಿಸಿ ನೇರವಾಗಿ ಬುಲ್ಡೋಜರ್ ನುಗ್ಗಿಸುವುದು ನ್ಯಾಯ ವ್ಯವಸ್ಥೆಯನ್ನೇ ಧ್ವಂಸಗೊಳಿಸಿದಂತೆ. ಈ ನಿಟ್ಟಿನಲ್ಲಿ ಬುಲ್ಡೋಜರ್‌ನ್ಯಾಯದ ಹೆಸರಿನಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ತಡೆಯುವ ಮೂಲಕ ಸುಪ್ರೀಂಕೋರ್ಟ್ ತನಗೆ ತಾನೇ ನ್ಯಾಯವನ್ನು ನೀಡಿದಂತಾಗಿದೆ.

ಯಾವುದೇ ಒಂದು ಜನವಸತಿ ಪ್ರದೇಶದ ಮೇಲೆ ಕಾರ್ಪೊರೇಟ್‌ಗಳ ಕಣ್ಣು ಬಿದ್ದರೆ ಆ ನಿವಾಸಿಗಳನ್ನು ಎಬ್ಬಿಸಲು ಸುಲಭದ ಉಪಾಯವೆಂದರೆ, ಮೊದಲು ಅಲ್ಲಿ ದುಷ್ಕರ್ಮಿಗಳ ಮೂಲಕ ಉದ್ವಿಗ್ನವಾತಾವರಣವನ್ನು ಸೃಷ್ಟಿಸುವುದು. ಜನರನ್ನು ಪ್ರಚೋದಿಸಿ ಬೀದಿಗಿಳಿಯುವಂತೆ ಮಾಡುವುದು. ಹಾಗೆ ಬೀದಿಗಿಳಿದವರನ್ನು ಅಪರಾಧಿಗಳು ಎಂದು ಘೋಷಿಸಿ ಯಾವುದೇ ವಿಚಾರಣೆಯಿಲ್ಲದೆ ಅಲ್ಲಿರುವ ನಿವಾಸಗಳನ್ನು ಧ್ವಂಸಗೊಳಿಸುವುದು. ಸಂತ್ರಸ್ತರು ಬೀದಿಗೆ ಬಿದ್ದಾಕ್ಷಣ ಆ ಸ್ಥಳವನ್ನು ಸ್ಥಳೀಯ ಸಂಸ್ಥೆ ಕೈವಶ ಮಾಡಿಕೊಂಡು ಅದನ್ನು ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸುವುದು. ಸಾರ್ವಜನಿಕರ ಆಸ್ತಿಗಳನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲು ಬುಲ್ಡೋಜರ್ ಅನ್ಯಾಯವನ್ನು ಒಂದು ತಂತ್ರವಾಗಿ ಬಳಸಿಕೊಂಡು ಬರಲಾಗಿದೆ. ಹಾಗೆ ನೋಡಿದರೆ ಈ ಬುಲ್ಡೋಜರ್ ಬೇರೆ ಬೇರೆ ರೂಪದಲ್ಲಿ ನ್ಯಾಯ ವ್ಯವಸ್ಥೆಯನ್ನು ಧ್ವಂಸಗೊಳಿಸುತ್ತಲೇ ಇದೆ. ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದಾರೆ ಎಂದು ನಕಲಿ ಗೋರಕ್ಷಕರು ದಾಳಿ ನಡೆಸುವುದು, ಗೋವುಗಳನ್ನು ವಶಪಡಿಸಿಕೊಳ್ಳುವುದು ಕಾನೂನು ಮತ್ತು ನ್ಯಾಯವ್ಯವಸ್ಥೆಯ ಮೇಲೆ ನಡೆಯುತ್ತಿರುವ ಹಸ್ತಕ್ಷೇಪವೇ ಅಲ್ಲವೆ? ಬುಲ್ಡೋಜರ್ ನ್ಯಾಯದಲ್ಲಿ ಸ್ಥಳೀಯ ಸಂಸ್ಥೆ, ಸರಕಾರ ಪರ್ಯಾಯ ನ್ಯಾಯ ವ್ಯವಸ್ಥೆಯ ಪಾತ್ರವನ್ನು ವಹಿಸಿದ್ದರೆ, ನಕಲಿ ಗೋರಕ್ಷಕರು ಪರ್ಯಾಯ ಪೊಲೀಸರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎರಡಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಪರ್ಯಾಯ ಪೊಲೀಸರಾಗಿ, ಪರ್ಯಾಯ ನ್ಯಾಯಾಲಯವಾಗಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ವ್ಯವಸ್ಥೆಯನ್ನು ತಡೆಯುವುದು ಇಂದಿನ ಅಗತ್ಯವಾಗಿದೆ. ಇಂತಹ ಅಕ್ರಮ ವ್ಯವಸ್ಥೆ ಸಂವಿಧಾನಕ್ಕೂ, ನ್ಯಾಯವ್ಯವಸ್ಥೆಗೂ ಸವಾಲನ್ನು ಒಡ್ಡುತ್ತಿರುವುದನ್ನು ಸುಪ್ರೀಂಕೋರ್ಟ್ ಗಮನಿಸಬೇಕು.ಇವುಗಳು ಸಂಘಪರಿವಾರ ಈ ದೇಶವನ್ನು ಪರ್ಯಾಯವಾಗಿ ಆಳುವುದಕ್ಕೆ ನಡೆಸುತ್ತಿರುವ ಸಂಚುಗಳ ಭಾಗವಾಗಿವೆ. ಇವುಗಳನ್ನು ವಿಫಲಗೊಳಿಸಿ, ಸಂವಿಧಾನವನ್ನು, ಪ್ರಜಾಸತ್ತೆಯನ್ನು ಎತ್ತಿ ಹಿಡಿಯುವುದು ಸುಪ್ರೀಂಕೋರ್ಟ್ ಹೊಣೆಗಾರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News