ಕಣ್ಮರೆಯಾಗುತ್ತಿರುವ ಪಕ್ಷಿಸಂಕುಲ

Update: 2024-11-04 06:32 GMT

ಹೊಸಕೋಟೆ: ಸುಮಾರು ಮೂವತ್ತು ವರ್ಷಗಳ ಹಿಂದೆ ಎಲ್ಲಿ ಬೇಕೆಂದರಲ್ಲಿ ಮನೆ ಗೋಡೆಯ ಸಂದುಗಳಲ್ಲಿ, ಹಂಚಿನ ಕೆಳಗೆ, ತಗಡುಗಳಡಿಯಲ್ಲಿ, ಹೊಲಗದ್ದೆಗಳಲ್ಲಿ ಮನೆ ಮಾಡಿಕೊಂಡಿರುತ್ತಿದ್ದ ಚಿಂವ್ ಚಿಂವ್ ಗುಬ್ಬಿಗಳು, ಮರದ ಮೇಲೆ ಅಡ್ಡಡ್ಡ ಕಟ್ಟಿಗೆಯ ತುಂಡುಗಳನ್ನಿಟ್ಟು ಮೊಟ್ಟೆಗಳನ್ನಿಟ್ಟು ಮರಿಗಳೊಂದಿಗೆ ಕಾ ಕಾ ಎಂದು ಹಾರಾಡಿಕೊಂಡಿದ್ದ ಕಾಗೆಗಳು, ಕೆರೆ, ಹಳ್ಳ, ನದಿ ಪಾತ್ರದಲ್ಲಿ ನೀರತ್ತ ಬಾಗಿದ ಮರಗಳಿಗೆ ಗೂಡುಗಳನ್ನು ಜೋತು ಬಿಟ್ಟು, ಸಂಸಾರ ನಡೆಸುತ್ತಿದ್ದ ಗಿಜುಗಗಳು, ಪೊಟರೆಗಳಲ್ಲಿ, ಎತ್ತರದ ಕೊಂಬೆಗಳ ಮೇಲೆ ಜೀವಿಸುತ್ತಿದ್ದ ಗಿಳಿಗಳು, ಪಾರಿವಾಳಗಳು, ಬೆಳ್ಳಕ್ಕಿಗಳು, ಮರಕುಟಿಗ, ಸಾಂಬಾರ ಕಾಗೆ, ಕೋಗಿಲೆಗಳು, ಗೊರವಂಕ, ಬೆಳವ, ಸೂಜಿಬಾಲದ ಹಕ್ಕಿ, ಕಂದುಗತ್ತಿನ ಸೂಜಿಬಾಲದ ಹಕ್ಕಿ ನವಿಲು, ಗೂಬೆ ನಾನಾ ಬಗೆಯ ಪಕ್ಷಿಗಳು ಇಂದು ಹಳ್ಳಿಗಳಿಂದ ಪಟ್ಟಣ ಪ್ರದೇಶಗಳಿಂದ ಕಣ್ಮರೆಯಾಗುತ್ತಿರುವುದು ಅಷ್ಟೇ ಅಲ್ಲ, ಅವುಗಳ ಸಂತತಿ ಉಳಿಯುತ್ತದೆಯೋ ಇಲ್ಲವೋ? ಎಂಬ ಆತಂಕದಲ್ಲಿ ಪಕ್ಷಿ ಪ್ರಿಯರಿದ್ದಾರೆ.

ಹಳ್ಳಿಯ ಜನರಂತೂ ಹೊಲ, ಗದ್ದೆಗಳಲ್ಲಿ ಪೈರನ್ನು ರಕ್ಷಿಸಲು ಹೆಣಗಾಡುತ್ತಿದ್ದರು. ಇಂದು ಆ ತಾಪತ್ರಯವೇ ಕಾಣುತ್ತಿಲ್ಲ. ಪಕ್ಷಿಗಳು ಜಗತ್ತಿನಾದ್ಯಂತ ಕಾಲ ಕ್ರಮೇಣವಾಗಿ ಮರೆಯಾಗುತ್ತಿವೆ. ಒಟ್ಟಿನಲ್ಲಿ ಜನರ ಬದಲಾದ ಜೀವನಶೈಲಿಯೇ ಪಕ್ಷಿಗಳು ಮರೆಯಾಗಲು ಮುಖ್ಯ ಕಾರಣ.

ಅತಿಯಾದ ನಾಗರೀಕರಣ, ಮನೆ, ಕಟ್ಟಡಗಳ ವಾಸ್ತುಶಿಲ್ಪದಲ್ಲಾದ ಬದಲಾವಣೆ, ಕೀಟನಾಶಕಗಳ ಬಳಕೆ, ಹಾಗೂ ಗೂಡುಕಟ್ಟುವ ತಾಣಗಳು ನಾಶವಾಗಿರುವುದು. ಆಹಾರ ಮೂಲದಲ್ಲಾದ ಕೊರತೆ, ಸ್ಥಳೀಯ ಸಸ್ಯಗಳ ನಾಶ ಇವೆಲ್ಲವೂ ಪಕ್ಷಿಗಳು ಮರೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ ಪಕ್ಷಿ ಪ್ರೇಮಿ ಮಂಜುನಾಥ್.

ಹಿಂದೆ ಎಲ್ಲೆಲ್ಲೂ ಹೆಂಚಿನ ಮನೆಗಳಿದ್ದವು. ಅಂತಹ ಮನೆಯೊಳಗೆ ಗುಬ್ಬಚ್ಚಿ ಮತ್ತು ಗಿಣಿಗಳಿಗೆ ಬರಲು ಸಾಕಷ್ಟು ಅವಕಾಶ ಗಳಿದ್ದವು. ಹೆಂಚಿನ ಮನೆಯ ಸಂದುಗೊಂದುಗಳಲ್ಲಿ ಅವು ಗೂಡು ಕಟ್ಟುತ್ತಿದ್ದವು. ಜಗಲಿಯ ಗೋಡೆಗಳಿಗೆ ಬಾಗಿಸಿ ಕಟ್ಟಿದ ದೇವರ ಪೋಟೊಗಳಿಗೆ ಹಿಂದೆ ಗೂಡುಕಟ್ಟಿ ಸಂಸಾರ ನಡೆಸುತ್ತಿದ್ದವು. ಗೂಡು ಕಟ್ಟಲು ಬೇಕಾದ ಒಣಗಿದ ಹುಲ್ಲು, ಹತ್ತಿನಾರುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಮನೆಯ ಪರಿಸರದಲ್ಲಿಯೇ ಓಡಾಡುತ್ತಿದ್ದವು . ಆದರೆ ಈಗಿನ ಮನೆಗಳೆಲ್ಲ ಭದ್ರವಾದ ಸಿಮೆಂಟ್ ಕೋಟೆ. ಮನೆಯೊಳಗೆ ಗಿಣಿ ಹಾಗೂ ಗುಬ್ಬಚ್ಚಿಗಳು ಬರಲು ಅವಕಾಶಗಳೇ ಇಲ್ಲ .

ರೈತರು ಹೊಲಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಆಹಾರ ಧಾನ್ಯಗಳು ಕೆಡದಿರಲಿ ಅಂತ ರಾಸಾಯನಿಕಗಳನ್ನು ಸೇರಿಸುತ್ತಿದ್ದಾರೆ. ಇದರ ಪರಿಣಾಮ ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅವುಗಳ ಮೊಟ್ಟೆಯ ಕವಚ ತೆಳುವಾಗಿ ಬೇಗ ಒಡೆಯಬಹುದು. ಅಲ್ಲದೆ ಹಾರ್ಮೋನುಗಳ ವ್ಯತ್ಯಾಸದಿಂದ ಪಕ್ಷಿಗಳ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆ ಆಗಿರಬಹುದು ಎನ್ನುತ್ತಾರೆ ತಜ್ಞರು.

ಪಕ್ಷಿಗಳು ನಿಶ್ಯಬ್ಧ ವಾತಾವರಣದಲ್ಲಿರಲು ಇಚ್ಛಿಸುತ್ತದೆ. ಅವು ಅತಿಯಾದ ಕರ್ಕಶ ಶಬ್ದವನ್ನು ಸಹಿಸಲಾರವು. ಅವುಗಳ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಶಬ್ಧ ಗ್ರಹಣ ಸಾಮರ್ಥ್ಯ ಇರುತ್ತದೆ . ಅದನ್ನು ಮೀರಿದ ಶಬ್ಧ ಅವುಗಳನ್ನು ಕಾಲು ಕೀಳುವಂತೆ ಮಾಡುತ್ತವೆ ಇಂದಿನ ಪುಟಾಣಿಗಳು ಚಿತ್ರಗಳಲ್ಲಿ ಮಾತ್ರ ಪಕ್ಷಿಗಳನ್ನು ನೋಡಿ ಖುಷಿಪಡುವ ಸ್ಥಿತಿ ಬಂದಿದೆ ಎಂಬುದು ಪಕ್ಷಿಪ್ರೇಮಿಗಳ ಮಾತು.

ಗ್ಲಾಸ್ ಪ್ರತಿಬಿಂಬದಿಂದ ಪಕ್ಷಿಗಳಿಗೆ ಹಾನಿ: ಬಹುಮಹಡಿ ಕಟ್ಟಡಗಳ ಹೊರ ವಿನ್ಯಾಸ ಆಕರ್ಷಕಗೊಳಿಸಲು ಗ್ಲಾಸ್ ಅಳವಡಿಸಲಾಗುತ್ತಿದೆ. ಆ ಗ್ಲಾಸ್‌ನಲ್ಲಿ ಕಟ್ಟಡಗಳ ಎದುರಿನ ಮರ ಗಿಡಗಳು ಅಥವಾ ಖಾಲಿ ಸ್ಥಳಗಳು ಪ್ರತಿಫಲನವಾಗಿ ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ಪಕ್ಷಿಗಳಿಗೆ ಗೊಂದಲ ಮೂಡಿಸುತ್ತಿವೆ. ಬಿಸಿಲಿನ ಜಳಕ್ಕೆ ಮೊದಲೇ ನಿತ್ರಾಣವಾಗಿರುವ ಪಕ್ಷಿಗಳು ಅಲ್ಲಿ ಮರವಿದೆ ಅಥವಾ ಖಾಲಿ ಜಾಗವಿದೆ ಎಂದು ವೇಗವಾಗಿ ಬಂದು ಢಿಕ್ಕಿ ಹೊಡೆದು ಗಾಯಗೊಳ್ಳುತ್ತವೆ. ಹೀಗೆ ಗಾಯಗೊಂಡು ಪ್ರಾಣ ಬಿಡುವ ಪಕ್ಷಿಗಳಲ್ಲಿ ಹದ್ದುಗಳ ಸಂಖ್ಯೆ ಹೆಚ್ಚು ಎನ್ನುತ್ತಾರೆ ಪಕ್ಷಿಪ್ರೇಮಿ ಮಂಜುನಾಥ್.

ಅರಣ್ಯ ಇಲಾಖೆಯು ಪಕ್ಷಿಗಳಿಗೆ ಆಹಾರ ಒದಗಿಸುವ ಗಿಡಗಳನ್ನು ನೆಡುತ್ತಿಲ್ಲ. ಬದಲಾಗಿ ಆಹಾರ ನೀಡದ ಗಿಡಗಳನ್ನು ನೆಡಲಾಗುತ್ತಿದೆ. ಅದಕ್ಕಿಂತ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ಪಕ್ಷಿ ಸಂಕುಲಗಳಿಗೆ ಆಹಾರ ಸಿಗುತ್ತದೆೆ.

-ರಾಮಪ್ಪ, ಹಿರಿಯ ನಾಗರಿಕ ಹೊಸಕೋಟೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News