'ಕರ್ನಲ್ ಗೆ ಯಾರೂ ಬರೆಯುವುದಿಲ್ಲ' ; ಕೆ ಪಿ ಲಕ್ಷ್ಮಣ್ ಮತ್ತು ಸಮುದಾಯದ ಕ್ರಾಂತಿ - ಪ್ರೀತಿಯ ಕತೆ !

Update: 2024-11-03 18:05 GMT

"ಪಿಂಚಣಿಗೆ ಹೋರಾಡಿ ಹೋರಾಡಿ ಸುಸ್ತಾದ ಮಾಜಿ ಸೈನಿಕ ರಾಮ್ ಕಿಶನ್ ಗ್ರೇವಲ್ 2016 ನವೆಂಬರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡರು".

ಇದು 2014ರ ನಂತರದ ಭಾರತದ ಸೈನಿಕರ ಪರಿಸ್ಥಿತಿ! ದಿಲ್ಲಿಯ ಜಂತರ್ ಮಂತರ್ ನಲ್ಲಿ ಪಿಂಚಣಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸೈನಿಕರು, "ಯುದ್ಧ ನಡೆಯುವಾಗ ನಾವು ದೇಶಭಕ್ತರು. ಪಿಂಚಣಿಗಾಗಿ ಹೋರಾಟ ಮಾಡಿದ ದೇಶದ್ರೋಹಿಗಳು", ಹೀಗೆ ಹೇಳುತ್ತಿದ್ದನ್ನು ಬಹುಶಃ ಜನ ಮರೆತಿರಬಹುದು.

ಅದನ್ನು ಮತ್ತೆ ನೆನಪಿಸುವ 'ಕರ್ನಲ್ ಗೆ ಯಾರೂ ಬರೆಯುವುದಿಲ್ಲ' ನಾಟಕವನ್ನು ನಿರ್ದೇಶಕ ಕೆ ಪಿ ಲಕ್ಷ್ಮಣ್ ರಂಗಕ್ಕಿಳಿಸಿದ್ದಾರೆ. ತುರ್ತುಪರಿಸ್ಥಿತಿ ದಿನಗಳಲ್ಲಿ ಆರಂಭವಾದ ಬಂಡಾಯ ಸಾಂಸ್ಕೃತಿಕ ಸಂಘಟನೆ "ಸಮುದಾಯ" ಬೆಂಗಳೂರು ಘಟಕವು ಈ ನಾಟಕವನ್ನು ಪ್ರಸ್ತುತಪಡಿಸಿದೆ.

ಘೋಷಿತ/ಅಘೋಷಿತ ಸರ್ವಾಧಿಕಾರಿಗಳ ಆಡಳಿತದಲ್ಲಿ ಸೈನಿಕರ ಪರಿಸ್ಥಿತಿ ಹೇಗಿರುತ್ತದೆ ಎಂದು ಹೇಳುವ "ಕರ್ನಲ್ ಗೆ ಯಾರೂ ಬರೆಯುವುದಿಲ್ಲ" ನಾಟಕವು ರಂಗಶಂಕರ ಥಿಯೇಟರ್ ಫೆಸ್ಟಿವಲ್ ನಲ್ಲಿ ಮೊದಲ ಪ್ರದರ್ಶನ ನಡೆಯಿತು. ಬೆಂಗಳೂರಿನ ರಂಗಶಂಕರಕ್ಕೆ 20 ವರ್ಷ ಪೂರೈಸಿದ ಹಿನ್ನಲೆಯಲ್ಲಿ 'ರಂಗಶಂಕರ ಥಿಯೇಟರ್ ಫೆಸ್ಟಿವಲ್' ನಡೆಯುತ್ತಿದೆ.

20 ನೇ ಶತಮಾನದ ಮಹತ್ವದ ಸಾಹಿತಿಯಾಗಿರುವ, ಸ್ಪೇನ್ ಮೂಲದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ "ನೋ ಒನ್ ರೈಟ್ಸ್ ಟು ದಿ ಕರ್ನಲ್" ಕಾದಂಬರಿಯ ಕನ್ನಡ ಅನುವಾದವೇ 'ಕರ್ನಲ್ ಗೆ ಯಾರೂ ಬರೆಯುವುದಿಲ್ಲ'! (ಅನುವಾದ : ಶ್ರೀನಿವಾದ ವೈದ್ಯ) 1982 ರಲ್ಲಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ ಅವರು ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಈ ನೆಲದ ಶೋಷಿತರ ಕತೆಗಳನ್ನು ರಂಗರೂಪಕ್ಕಿಳಿಸಿದ್ದ ನಿರ್ದೇಶಕ ಕೆ ಪಿ ಲಕ್ಷ್ಮಣ್ ದಕ್ಲ ಕಥಾ ದೇವಿಕಾವ್ಯ, ಪಂಚಮ‌ಪದಗಳು, ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕಗಳ ಮೂಲಕ ಜನಮನ್ನಣೆ ಗಳಿಸಿದ್ದರು. ದಕ್ಲ ಕಥಾ ದೇವಿ ನಾಟಕದಲ್ಲಿ ಮ್ಯಾಜಿಕಲ್ ರಿಯಾಲಿಸಂ ಮೂಲಕ ದಲಿತರ ಕತೆ ಹೇಳಿದರೆ, ಪಂಚಮ ಪದಗಳು ಹಾಡಿನ ಮೂಲಕವೂ, ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕದಲ್ಲಿ ವರ್ತಮಾನ ಸಂವಾದದ ಮೂಲಕ ಶೋಷಿತರ ಕತೆ ಹೇಳಿದರು. 'ಕರ್ನಲ್ ಗೆ ಯಾರೂ ಬರೆಯುವುದಿಲ್ಲ' ನಾಟಕ ಮ್ಯಾಜಿಕಲ್ ರಿಯಲಿಸಂ ಅಲ್ಲ, ಹಾಗಂತ ವರ್ತಮಾನವನ್ನೂ ನೇರವಾಗಿ ಪ್ರಸ್ತಾಪಿಸುವುದಿಲ್ಲ.

2015 ರಿಂದ ಭಾರತದಲ್ಲಿ ನಡೆದ ಮಾಜಿ ಸೈನಿಕರ ಹೋರಾಟಗಳು, ಉಪವಾಸ ಸತ್ಯಾಗ್ರಹಗಳು, ದೇಶಭಕ್ತರ ಎದುರು ಸೈನಿಕರೇ ದೇಶದ್ರೋಹಿಗಳಾಗಿದ್ದು, ಪಿಂಚಣಿಗಾಗಿ ಹೋರಾಡಿದ ಸೈನಿಕರ ಬಂಧನ.... ಇಂತಹ ಸುದ್ದಿಗಳನ್ನೊಮ್ಮೆ ನೆನಪಿಸಿಕೊಂಡು ನಾಟಕ ನೋಡಿದರೆ, 'ಕರ್ನಲ್ ಗೆ ಯಾರೂ ಬರೆಯುವುದಿಲ್ಲ' ನಾಟಕ ನಮ್ಮದೇ ನೆಲದ ಕತೆ ಎಂದು ಅನ್ನಿಸಿಕೊಳ್ಳುತ್ತದೆ.

ಯುದ್ದದಲ್ಲಿ ಪಾಲ್ಗೊಂಡಿದ್ದ ಕರ್ನಲ್ ನ ನಿವೃತ್ತ ಜೀವನವನ್ನಾಧರಿಸಿದ ಕತೆ ಇದು‌. ಹದಿನೈದು ವರ್ಷದ ಹಿಂದೆ ನೀಡಿದ್ದ ಪಿಂಚಣಿ ಭರವಸೆಯ ಈಡೇರಿಕೆಗಾಗಿ ಕರ್ನಲ್ ಕಾಯುತ್ತಿದ್ದಾನೆ. ಕರ್ನಲ್ ನ ಮಗ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಕರ್ನಲ್ ವಾಸಿಸುತ್ತಿದ್ದ ಊರಿನಲ್ಲಿ ಸಂಗೀತಗಾರನ ಸಾವಾಗಿತ್ತು. ದೇಶದ ತುರ್ತು ಪರಿಸ್ಥಿತಿಯ ಬಗ್ಗೆ ಹಾಡುವುದು, ಕವಿತೆ ಬರೆಯುವುದು, ಲೇಖನ ಬರೆಯುವುದು ನಿಷೇದಿಸಲಾಗಿತ್ತು. ಪತ್ರಿಕೆಗಳಲ್ಲಿ ಸರ್ಕಾರದ ವಿರುದ್ದದ ಸುದ್ದಿ ಬರೆಯುವುದೂ ಅಪರಾಧ ಆಗಿತ್ತು. ಹಾಗಾಗಿ ಪತ್ರಿಕೆಗಳನ್ನು ಕ್ರಾಂತಿಕಾರಿಗಳು ರಹಸ್ಯವಾಗಿ ಪ್ರಸಾರ ಮಾಡುತ್ತಿದ್ದರು.

ಅಷ್ಟೇ ಅಲ್ಲ, ಸಂಗೀತಗಾರನ ಶವ ಯಾತ್ರೆಗೂ ಪೊಲೀಸರ ಅನುಮತಿ ಬೇಕಾಗಿತ್ತು. ಸರ್ಕಾರ ಹೇರಿರುವ ತುರ್ತುಪರಿಸ್ಥಿತಿ ವಿರುದ್ದ ಹೋರಾಡುವ ಕ್ರಾಂತಿಕಾರಿಗಳ ಜೊತೆ ಸೇರಿದ್ದ ಕರ್ನಲ್, ಒಂದೆಡೆ ಕ್ರಾಂತಿಯ ಭಾಗವಾಗುತ್ತಾನೆ. ಇನ್ನೊಂದೆಡೆ ಪಿಂಚಣಿಗಾಗಿ ಹೋರಾಡುತ್ತಾನೆ. ತಾನು ಗನ್ ಹಿಡಿದು ಯಾವ ಸರ್ಕಾರಕ್ಕಾಗಿ ಕೆಲಸ ಮಾಡಿದ್ದೇನೋ ಅದೇ ಸರ್ಕಾರದ ಅದೇ ಗನ್ ಗಳು ತನ್ನನ್ನೂ ಗುರಿಯಾಗಿಸುತ್ತದೆ ಎಂದು ಕರ್ನಲ್ ಗೆ ಮನವರಿಕೆ ಆಗುತ್ತದೆ.

20 ನೇ ಶತಮಾನದಲ್ಲಿ ನಡೆದ ಯುದ್ದ ಮತ್ತು ತುರ್ತುಪರಿಸ್ಥಿತಿ ದಿನಗಳ ಸುತ್ತ ಈ ಕತೆ ಸುತ್ತುತ್ತದೆ. ತುರ್ತು ಪರಿಸ್ಥಿತಿ ಎಂದರೇನು? ಹಸಿವು ಮತ್ತು ಸ್ವಾಭಿಮಾನಗಳು ಪರಸ್ಪರ ಜೊತೆಯಾಗಿ ಪ್ರಭುತ್ವದ ಮತ್ತು ಪಟ್ಟಭದ್ರ ಸಮಾಜದ ವಿರುದ್ದ ಹೋರಾಡುವ ಪರಿಸ್ಥಿತಿಯೇ ತುರ್ತುಪರಿಸ್ಥಿತಿ. ಇಂತಹ ತುರ್ತು ಪರಿಸ್ಥಿತಿ ಎನ್ನುವುದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ಶತಮಾನಗಳಲ್ಲೂ ಜಾರಿಯಲ್ಲಿ ಇರುತ್ತದೆ.

'ಭಾರತದ ಎಲ್ಲಾ ಕಾಲಮಾನಗಳ ದಲಿತ ತಲೆಮಾರುಗಳು ಸಾಮಾಜಿಕ ತುರ್ತು ಪರಿಸ್ಥಿತಿಯನ್ನು ಎದುರಿಸಿದೆ'. ಕೆ ಪಿ ಲಕ್ಷ್ಮಣ್ ಅವರ ದಕ್ಲ ಕಥಾ ದೇವಿಕಾವ್ಯ ಮತ್ತು ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕಗಳು ಪ್ರತ್ಯೇಕ ಕಾಲಮಾನದ ಸಾಮಾಜಿಕ‌ ತುರ್ತುಪರಿಸ್ಥಿತಿಯ ಕತೆಯನ್ನೇ ಹೇಳುತ್ತದೆ. ರಾಜಕೀಯವಾಗಿ ಘೋಷಿತ ತುರ್ತುಪರಿಸ್ಥಿತಿಗಿಂತ ಸಾಮಾಜಿಕ ಅಘೋಷಿತ ತುರ್ತುಪರಿಸ್ಥಿತಿ ಹೆಚ್ಚು ಕ್ರೂರವೂ, ಭಯಾನಕವೂ ಆಗಿದೆ ಎಂಬುದನ್ನು ಕೆ ಪಿ ಲಕ್ಷ್ಮಣ್ ಅವರು ಕತೆ, ಸಂಭಾಷಣೆ, ದೃಶ್ಯದ ಮೂಲಕ ಮನಮುಟ್ಟುವಂತೆ ಹೇಳಿದ್ದರು. ಈಗ ರಾಜಕೀಯ ತುರ್ತುಪರಿಸ್ಥಿತಿಯನ್ನು ಹೇಳಲು ಕೆ ಪಿ ಲಕ್ಷ್ಮಣ್ ಮತ್ತು ಸಮುದಾಯ 'ಕರ್ನಲ್' ಕತೆಯನ್ನು ಆಯ್ದುಕೊಂಡಿದ್ದಾರೆ.

ಸಮುದಾಯದ ಕಲಾವಿದರನ್ನು ನಿರ್ದೇಶಕ ಕೆ ಪಿ ಲಕ್ಷ್ಮಣ್ ಅವರು ನುರಿತ ಕಲಾವಿದರನ್ನಾಗಿ ಮಾರ್ಪಡಿಸಿದ್ದಾರೆ. ಕರ್ನಲ್ ನ ಅಸ್ತಮಾ‌ ಪೀಡಿತ ಪತ್ನಿ (ನಟಿ - ಚಂದನ) ಕೆಮ್ಮಿದರೆ ಪ್ರೇಕ್ಷಕರಿಗೆ ಸಹಜವಾಗಿ ಕೆಮ್ಮು ಪ್ರಾರಂಭವಾಗುತ್ತದೆ. ಇದನ್ನು "ಸೈಕೋಜೆನಿಕ್ ಕಫ್" (Psychogenic Cough) ಎನ್ನುತ್ತಾರೆ. ಆದರೆ ಇದಕ್ಕೆ ಶಾರೀರಿಕ ಕಾರಣವಿಲ್ಲ. ಇದು ಕೇವಲ ಮನಸ್ಸಿನ ಪ್ರತಿಕ್ರಿಯೆ. ಸಹಜ ಅಭಿನಯಕ್ಕೊಂದು ಉದಾಹರಣೆ ಇದು. ಸಬಾಸ (ನಟ - ಪ್ರಣವ್) ನಕ್ಕರೆ ಇಡೀ ಸಭಾಂಗಣದಲ್ಲಿ ಮುಗುಳ್ನಗು ಮೂಡುತ್ತದೆ. ಕಲಾವಿದೆಯೊಬ್ಬರು ಲೈವ್ ಆಗಿ ನುಡಿಸುವ ಉಕುಲೆಲೆ ಗಿಟಾರ್ ನ ಸಣ್ಣ ಧ್ವನಿ, ಗುಂಪು ಹಾಡು, ಮ್ಯೂಸಿಕ್, ಡ್ಯಾನ್ಸ್, ಹಡಗು ಪ್ರಯಾಣಿಕರ ವಿಶಿಷ್ಟ ಭಾಷೆಯ ಸಹಜತೆಗೆ ತಲೆದೂಗಲೇಬೇಕು.

ಒಟ್ಟಾರೆ, ಸ್ಪೇನ್ ಮೂಲದ ಸಾಹಿತಿ ಬರೆದ ಕಾದಂಬರಿ ನಮ್ಮ ನೆಲದ ಸೈನಿಕರ ಕತೆಯಂತಿದೆ. ತೀರಾ ಬಡವನಾದ ಕರ್ನಲ್ ಮತ್ತವನ ಅಸ್ತಮಾ ಪೀಡಿತೆ ಪತ್ನಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾರೆ. 'ನಾಳೆಗೆ ಏನು ತಿನ್ನೋಣಾ?' ಎಂಬ ಪತ್ನಿಯ ಹಸಿವಿನ ಪ್ರಶ್ನೆ ಕರ್ನಲ್ ನ ಹೃದಯದಲ್ಲಿ ಕ್ರಾಂತಿ ಮತ್ತು ಪ್ರೀತಿಯನ್ನು ಹುಟ್ಟಿಸುತ್ತೆ. ಹಾಗಾಗಿ, ಕರ್ನಲ್ ಗೆ ಯಾರೂ ಬರೆಯುವುದಿಲ್ಲ ಎಂಬ ನಾಟಕವು ತುರ್ತುಪರಿಸ್ಥಿತಿ ದಿನಗಳ 'ಕ್ರಾಂತಿ ಮತ್ತು ಪ್ರೀತಿ'ಯ ಕತೆಯೂ ಹೌದು.

Writer - ವಾರ್ತಾಭಾರತಿ

contributor

Editor - Ismail

contributor

Byline - - ನವೀನ್ ಸೂರಿಂಜೆ

contributor

Similar News