ಮಹಿಳೆಯರ ದುಃಖ, ದುಮ್ಮಾನಗಳೆ ಸಾಹಿತ್ಯಕ್ಕೆ ಸ್ಫೂರ್ತಿ: ವೈದೇಹಿ

Update: 2016-04-18 18:11 GMT

ಬೆಂಗಳೂರು, ಎ.18: ಬಾಲ್ಯದಲ್ಲಿ ಕಂಡುಂಡ ವಿಧವೆ ಮಹಿಳೆಯರ ಹಾಗೂ ಹಲವು ಸಮಸ್ಯೆಗಳಿಂದ ಅರೆ ಹುಚ್ಚಿಯರಾಗಿದ್ದ ಮಹಿಳೆಯರ ದುಃಖ, ದುಮ್ಮಾನಗಳೆ ನನ್ನ ಸಾಹಿತ್ಯಕ್ಕೆ ಸ್ಫೂರ್ತಿ ಯಾಯಿತು ಎಂದು ಹಿರಿಯ ಸಾಹಿತಿ ವೈದೇಹಿ ತಿಳಿಸಿದ್ದಾರೆ.
 ಸೋಮವಾರ ವಿಜಯಾ ಕಾಲೇಜು ವತಿಯಿಂದ ನಗರದ ಪ್ರೊ.ಬಿ.ವಿ.ನಾರಾಯಣ ರಾವ್ ಸಭಾಂಗಣದಲ್ಲಿ ಆಯೋಜಿ ಸಿದ್ದ ‘ವೈದೇಹಿ ಕೃತಿಗಳು: ಚಿಂತನ ಮಂಥನ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಂವಾದ ಕಾರ್ಯ ಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನಮ್ಮದು ಕೂಡು ಕುಟುಂಬ. ಹಬ್ಬದ ದಿನಗಳಲ್ಲಿ ಹತ್ತಾರು ಮಂದಿ ಬಂಧುಗಳು ಸೇರುತ್ತಿದ್ದೆವು. ಆ ಸಂದರ್ಭಗಳಲ್ಲಿ ಬಂಧು ಗಳ ನಡುವೆ ಹಲವು ವಿಚಾರಗಳ ಸಂಬಂ ಧ ನಡೆಯುತ್ತಿದ್ದ ವಾಗ್ವಾದ, ಮುನಿಸು, ಜಗಳಗಳು ನನ್ನನ್ನು ಚಿಂತನೆಗೆ ಈಡು ಮಾಡಿ, ನೋವು ತರಿಸುತ್ತಿತ್ತು. ಈ ಅನುಭವಗಳನ್ನೇ ಬರವಣಿ ಗೆಗೆ ಇಳಿಸಿ ನನ್ನ ನೋವನ್ನು ಮರೆಯುತ್ತಿದ್ದೆ ಎಂದರು.
ಕತೆ, ಕಾದಂಬರಿಗಳನ್ನು ಬರೆಯುತ್ತಲೆ ಅವು ಹೊಸ, ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತವೆಯೆ ಹೊರತು ಅದನ್ನು ನಾವು ನಿರ್ಧರಿಸುವುದಿಲ್ಲ. ಬರೆಯುವ ಹಾದಿಯಲ್ಲಿಯೆ ಕತೆಗೆ, ಕಾದಂಬರಿಗೆ ಬೇಕಾದ ವಸ್ತು, ವಿಷಯಗಳು ಸಿಗುತ್ತವೆ. ಇದರ ಜೊತೆಗೆ ಬೇರೆ ಲೇಖಕರು ಬರೆದಿರುವ ಸಾಹಿತ್ಯದ ಓದು ಸಹ ಬರವಣಿಗೆಗೆ ಸ್ಫೂರ್ತಿ ನೀಡಲಿದೆ ಎಂದು ವೈದೇಹಿ ಅಭಿಪ್ರಾಯಿಸಿದರು.
ಯಾವ ಮಹಿಳೆಯರೂ ಪುರುಷರಿಗೆ ಅಧೀನರಾಗುವುದಕ್ಕೆ ಬಯಸುವುದಿಲ್ಲ. ಆದರೆ, ಕುಟುಂಬ ಭದ್ರತೆಯ ದೃಷ್ಟಿಯಿಂದ ಹಾಗೆ ನಟಿಸುತ್ತಾರಷ್ಟೆ. ಪುರುಷರು ಮಹಿಳೆಯನ್ನು ಎಷ್ಟೆ ಬಂಧನ ದಲ್ಲಿಟ್ಟರೂ ಅದನ್ನು ಮೀರಿ ತನಗೆ ಅನಿಸಿದ್ದನ್ನು ಮಾಡಿಯೆ ತೀರುತ್ತಾಳೆ. ನಟನೆ, ವಾಸ್ತವ, ಕನಸುಗಳನ್ನು ಕಾಣುತ್ತಲೆ ಇಡೀ ಕುಟುಂಬವನ್ನು ಯಶಸ್ವಿಯಾಗಿ ನಡೆಸುತ್ತಾಳೆ ಎಂದರು.
ಸಮಾಜದಲ್ಲಿ ಪುರುಷ ಮಹಿಳೆಗಿಂತ ಮೇಲೂ ಅಲ್ಲ ಕೀಳೂ ಅಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪುರುಷ ತನ್ನ ಕುಟುಂಬವನ್ನು ಪ್ರೀತಿ, ವಿಶ್ವಾಸದಿಂದ ನಡೆಸಿಕೊಳ್ಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯನ್ನು ಸಮಾನವಾಗಿ ಕಾಣುವ ಪುರುಷರ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಮಾನಪಟ್ಟರು.
ವಿಮರ್ಶಕ ಜಿ.ಬಿ.ಹರೀಶ್ ಮಾತನಾಡಿ, ನಾವು ಪುರುಷ ಹಿರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅಡಿಗ, ಶಿವರಾಮಕಾರಂತ, ದ.ರಾ.ಬೇಂದ್ರೆರವರ ಹೆಸರುಗಳನ್ನು ಪಟ ಪಟನೆ ಹೇಳುತ್ತೇವೆ. ಆದರೆ, ಮಹಿಳಾ ಹಿರಿಯ ಸಾಹಿತಿಗಳಾದ ಅನುಪಮಾ ನಿರಂಜನ, ನಂಜನಗೂಡು ತಿರುಮಲಾಂಬಾ, ತ್ರಿವೇಣಿ ಹೆಸರುಗಳು ಎಲ್ಲಿಯೂ ಕೇಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ವಿಮರ್ಶಕಿ ಎಲ್.ಸಿ.ಸುಮಿತ್ರಾ, ಲೇಖಕಿ ಎಲ್.ಜಿ.ಮೀರಾ, ಡಾ.ಕಮಲಾ ಹೆಮ್ಮಿಗೆ, ಲೇಖಕ ಡಾ.ಶಿವಾನಂದ ಕೆಳಗಿನಮನೆ, ಡಾ.ಗೀತಾ ಉಪಸ್ಥಿತರಿದ್ದರು.

ಅಂಬೇಡ್ಕರ್ ತಾಯ್ತನ ದೊಡ್ಡದು
ಮಹಿಳೆಯರಲ್ಲಿ ಮಾತ್ರ ತಾಯ್ತನ ಇರುವುದಿಲ್ಲ. ಪುರುಷರಲ್ಲಿಯೂ ಇರುತ್ತದೆ. ಡಾ.ಬಿ.ಆರ್.ಅಂಬೇಡ್ಕರ್‌ಗೆ ತಾಯ್ತನದ ಗುಣ ಇದ್ದಿದ್ದಕ್ಕೆ ಸಂವಿಧಾನದಲ್ಲಿ ಪುರುಷರಷ್ಟೆ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಲು ಸಾಧ್ಯವಾಯಿತು. ಹೀಗಾಗಿ ಪ್ರತಿಯೊಬ್ಬರು ಅಂಬೇಡ್ಕರ್‌ರವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವ ಮೂಲಕ ತಾಯ್ತನವನ್ನು ಪಡೆದುಕೊಳ್ಳಲಿ.
 -ವೈದೇಹಿ, ಹಿರಿಯ ಸಾಹಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News