ಅಳಿವಿನಂಚಿನಲ್ಲಿ ಕೊಪ್ಪಳ ಜೈನ ಬಸದಿಗಳು

Update: 2016-04-19 18:33 GMT

ಕೊಪ್ಪಳ, ಎ.19: ಬಸದಿಗಳು ಅಂದ್ರೆ ಜೈನ ಧರ್ಮೀಯರ ಶ್ರದ್ಧಾ, ಭಕ್ತಿಯ ಕೇಂದ್ರಗಳು. ಒಂದು ಕಾಲದಲ್ಲಿ ಕೊಪ್ಪಳದಲ್ಲಿ ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 707 ಬಸದಿಗಳಿದ್ದು, ಸಲ್ಲೇಖನ ವ್ರತ ಮಾಡಲು ನಾನಾ ಮೂಲೆಗಳಿಂದ ಜೈನ ಧರ್ಮೀಯರು ಇಲ್ಲಿಗೆ ಬರುತ್ತಿದ್ದರು. ಇಂತಹ ಜೈನ ಕಾಶಿ ಕೊಪ್ಪಳದಲ್ಲೀಗ ಜೈನ ಬಸದಿಗಳು ಅಳಿವಿನ ಅಂಚಿನಲ್ಲಿವೆ. ಕೊಪ್ಪಳ ನಗರವೊಂದರಲ್ಲೇ ಇದ್ದ 707 ಬಸದಿಗಳ ಪೈಕಿ ಉಳಿದಿರುವುದು ಈಗ ಕೇವಲ ಒಂದೇ ಒಂದು.

ಜೈನ ಧರ್ಮೀಯರಿಗೆ ಶ್ರವಣಬೆಳಗೊಳ ಎಷ್ಟೊಂದು ಪವಿತ್ರ ಕ್ಷೇತ್ರವೋ ಅಷ್ಟೆ ಪವಿತ್ರ ಕ್ಷೇತ್ರ ಕೊಪ್ಪಳವೂ ಕೂಡ. ಒಂದು ಕಾಲದಲ್ಲಿ ಕೊಪ್ಪಳದಲ್ಲಿ ಜೈನ ಧರ್ಮ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ಕುರಿತಂತೆ ಕವಿ ರನ್ನ ಮತ್ತು ಚಾವುಂಡರಾಯನ ಕೃತಿಗಳಲ್ಲಿ ಕೊಪ್ಪಳದ ಪಾವಿತ್ರತೆ ಕುರಿತು ಉಲ್ಲೇಖವಿದೆ. ಕೊಪ್ಪಳ ನಗರವೊಂದರಲ್ಲಿಯೇ 707 ಜೈನ ಬಸದಿಗಳು ಇದ್ದವು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಕೂಡಾ ಬೆಟ್ಟಗುಡ್ಡಗಳಲ್ಲಿ, ಕೊಪ್ಪಳದ ಪರಿಸರದಲ್ಲಿ ಜೈನ ತೀರ್ಥಂಕರರ ಮೂರ್ತಿಗಳು, ಕುರುಹುಗಳು ಕಂಡುಬರುತ್ತಿವೆ. ಈ ಹಿಂದೆ ಜೈನ ಮುನಿಗಳು, ಜೈನ ಧರ್ಮದ ಅನುಯಾಯಿಗಳು ಕೊಪ್ಪಳಕ್ಕೆ ಬಂದು ಪವಿತ್ರ ಸಲ್ಲೇಖನ ವ್ರತ ಕೈಗೊಳ್ಳುತ್ತಿದ್ದರು. ಈ ಮೂಲಕ ಅವರು ಇಚ್ಛಾ ಮರಣ ಹೊಂದುತ್ತಿದ್ದರಂತೆ. ಹೀಗಾಗಿ, ಕೊಪ್ಪಳವನ್ನು ಹಿಂದಿನಿಂದಲೂ ಜೈನ ಕಾಶಿ ಎಂದು ಕರೆಯಲಾಗುತ್ತಿದೆ.
ಕೊಪ್ಪಳದಲ್ಲಿ ದೊರಕಿರುವ 390 ಶಾಸನಗಳ ಪೈಕಿ ಬಹುಪಾಲು ಜೈನ ಧರ್ಮಕ್ಕೆ ಸಂಬಂಧಿಸಿದವು. ಹಿಂದಿನ ಕಾಲದಲ್ಲಿ ಕೊಪ್ಪಳ ನಗರವೊಂದರಲ್ಲೇ ಇದ್ದ 707 ಜೈನ ಬಸದಿಗಳ ಪೈಕಿ ಈಗ ಉಳಿದುಕೊಂಡಿರುವುದು ಕೇವಲ ಒಂದೇ ಒಂದು ಬಸದಿ ಮಾತ್ರ. ಇರುವ ಇನ್ನೊಂದಿಷ್ಟು ಕುರುಹುಗಳು ಸೂಕ್ತ ರಕ್ಷಣೆ ಇಲ್ಲದೆ ಅಳಿವಿನ ಅಂಚಿನಲ್ಲಿವೆ. ಈ ಹಿನ್ನೆಲೆ ಜೈನ ಕಾಶಿ ಕೊಪ್ಪಳದಲ್ಲಿ ಈಗ ಉಳಿದಿರುವ ಇತಿಹಾಸದ ಕುರುಹುಗಳನ್ನು ರಕ್ಷಣೆ ಮಾಡಬೇಕಿದೆ. ಒಂದು ಕಾಲದಲ್ಲಿ ಜೈನರಿಗೆ ಪವಿತ್ರ ಕ್ಷೇತ್ರವಾಗಿದ್ದ ಕೊಪ್ಪಳದಲ್ಲಿನ ಈ ಜೈನ ಕುರುಹುಗಳು ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿವೆ. ಇಂದು ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದ ಮಂದಸ್ಮಿತನ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದ್ರೆ, ಅದರ ಜೊತೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಜೈನ ಕುರುಹುಗಳನ್ನು ಸಂರಕ್ಷಣೆ ಮಾಡುವ ಮೂಲಕ ಆಚರಣೆಗೆ ಒಂದು ಅರ್ಥ ಕಲ್ಪಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News