ಬದಲಾಗಬೇಕಾದ ಬದುಕುವ ದಾರಿ
ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗವಿದೆ. ಎಲ್ಲರೂ ದುರ್ಯೋಧನ, ದುಃಶಾಸನ, ಕರ್ಣ, ಶಕುನಿಯರನ್ನು ಹಳಿಯುತ್ತಾರೆ; ಧೃತರಾಷ್ಟ್ರನ ಕುರುಡು ಪುತ್ರ ವಾತ್ಸಲ್ಯವನ್ನು ಟೀಕಿಸುತ್ತಾರೆ. ಆದರೆ ಕಣ್ಣಿದ್ದೂ ಕುರುಡರಂತಿದ್ದ ಶಕ್ತ ಹಿರಿಯರಾದ ಭೀಷ್ಮ, ದ್ರೋಣ, ಕೃಪರನ್ನು ದೂರಲು ಸಂಕೋಚಪಡುತ್ತಾರೆ. ಅವರೇನಾದರೂ ನಿಂತು ತಮ್ಮ ಪ್ರತಿರೋಧವನ್ನಾಡಿದ್ದರೆ, ಮಹಾಭಾರತದ ಮಾತ್ರವಲ್ಲ, ದ್ವಾಪರ ಯುಗದ ದಿಕ್ಕೇ ಬದಲಾಗುತ್ತಿತ್ತೇನೋ? ಆದರೆ ಒಬ್ಬೊಬ್ಬರೂ ಒಂದೊಂದು ನೆಪವೊಡ್ಡಿ-ಅನ್ನದ ಹಂಗು ಇತ್ಯಾದಿ- ವಿವಾದದಿಂದ ದೂರವುಳಿದರು. ಎಲ್ಲವೂ ಸುಖಾಂತ್ಯವಾದಾಗ ಶರಶಯ್ಯೆಯ ಭೀಷ್ಮರನ್ನು ಹೊರತುಪಡಿಸಿ ಯಾರೂ ಬದುಕುಳಿಯಲಿಲ್ಲ. ಸ್ಮಶಾನ ಕುರುಕ್ಷೇತ್ರದ ಆಧಾರಸ್ತಂಭಗಳಾಗಿ ನೆನಪಿನಲ್ಲುಳಿದರಷ್ಟೇ.
ನನ್ನ ಅನೇಕ ಆಪ್ತರು ಈ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ ಮತ್ತು ತಾವು ತಲೆಕೆಡಿಸಿಕೊಳ್ಳುವಂಥಾದ್ದು ಏನೂ ಇಲ್ಲ ಎಂಬ ಹಾಗೆ ಸುಮ್ಮನಿದ್ದು ತಮ್ಮ ಪಾಡಿಗೆ ಸಂಗೀತ, ಸಾಹಿತ್ಯ, ಕ್ರೀಡೆ ಹೀಗೆ ತೊಡಗಿಕೊಂಡಿದ್ದಾರೆ. ಅವರಲ್ಲನೇಕರು ಒಳ್ಳೆಯ ಸಾಧಕರೂ ಹೌದು. ನಾನೂ ಸಾಹಿತ್ಯ, ಸಂಗೀತ, ಕ್ರೀಡೆ ಹೀಗೆ ಎಲ್ಲದರಲ್ಲೂ ತೊಡಗಿಕೊಳ್ಳುತ್ತೇನೆ. ಆದರೆ ನನ್ನನ್ನು ಕಾಡುವ ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ಕೊಡವಿಕೊಳ್ಳಲು ನನಗೆ ಸಾಧ್ಯವಾಗುವುದಿಲ್ಲ. ನಾನು ಪ್ರತಿಕ್ರಿಯಿಸಲೇಬೇಕಾದ ಸಂಗತಿಗಳಿಗೆ ನನ್ನನ್ನು ಒಡ್ಡಿಕೊಳ್ಳದಿದ್ದರೆ ನನ್ನ ಬದುಕು ಅರ್ಥಪೂರ್ಣವಾಗುವುದಿಲ್ಲ ಎಂಬ ನಂಬಿಕೆ ನನ್ನದು. ಆದ್ದರಿಂದಲೇ ಮತಾಂಧತೆಗೆ, ದಬ್ಬಾಳಿಕೆಗೆ, ಕುಟಿಲತೆಗೆ ಪ್ರತಿಕ್ರಿಯಿಸುತ್ತ ನಾನು ಸದಾ ಎಚ್ಚರ ಇದ್ದೇನೆಂದು ತೋರಿಸಿಕೊಳ್ಳಬಯಸುತ್ತೇನೆ. ನಾನು ಪ್ರತಿಕ್ರಿಯಿಸಿ ದಾಕ್ಷಣ ಈ ಎಲ್ಲ ಕೇಡುಗಳು, ಪಿಡುಗುಗಳು ನಿವಾರಣೆಯಾಗುತ್ತದೆಂದಾಗಲಿ ನಾನು ಸಮಾಜದ ನೇತಾರನಾಗುತ್ತೇನೆಂದಾಗಲಿ ನನಗೆ ಭ್ರಮೆಯಿಲ್ಲ. ಎಲ್ಲರಿಗೂ ಗೊತ್ತಿರಬಹುದಾದ ಒಂದು ಕಥೆ ಹೀಗಿದೆ: ಮರವೊಂದು ಹೊತ್ತಿ ಉರಿಯುತ್ತಿದ್ದಾಗ, ಮರದ ನೆರಳಲ್ಲಿದ್ದ ಜನರು ದೂರ ಸರಿದರು. ಚಳಿಯಾದವರು ಮೈ ಬೆಚ್ಚಗೆ ಮಾಡಿಕೊಂಡರು. ಇನ್ನು ಕೆಲವರು ಒದ್ದೆಬಟ್ಟೆಯನ್ನು ಒಣಗಿಸಿಕೊಂಡರು. ಮರದಲ್ಲಿ ಗೂಡುಕಟ್ಟಿಕೊಂಡು ವಾಸಿಸುತ್ತಿದ್ದ ಎಲ್ಲ ಹಕ್ಕಿಗಳೂ ತಮ್ಮ ಪರಿವಾರ ಸಹಿತ ಅಲ್ಲಿಂದ ಹಾರಿಹೋದವು. ಆ ಪೈಕಿ ಒಂದು ಪುಟ್ಟ ಗುಬ್ಬಚ್ಚಿ ನೀರಿನ ಬಳಿ ಹೋಗಿ ಒಂದು ಗುಟುಕು ನೀರನ್ನು ಕೊಕ್ಕಿನಲ್ಲಿ ತುಂಬಿಕೊಂಡು ಬಂದು ಆ ಮರಕ್ಕೆ ಸುರಿಯಿತು. ಮತ್ತೆ ನೀರ ಬಳಿ ಹೋಗಿ ಇನ್ನೊಂದು ಗುಟುಕು ನೀರು ತಂದು ಸುರಿಯಿತು. ಹೀಗೆ ಅನೇಕ ಬಾರಿ ಇದು ಪುನರಾವರ್ತನೆಯಾದಾಗ ಒಬ್ಬ ಬುದ್ಧಿವಂತ ಅದನ್ನು ಕೇಳಿದ: ನೀನು ಹೀಗೆ ಒಂದೊಂದು ಗುಟುಕು ನೀರು ಸುರಿದರೆ ಈ ಬೆಂಕಿ ನಂದುತ್ತಾ? ಅದಕ್ಕೆ ಆ ಗುಬ್ಬಚ್ಚಿ ಹೇಳಿತು: ಪ್ರಾಯಃ ನಂದಲಿಕ್ಕಿಲ್ಲ; ಆದರೆ ಮುಂದೊಂದು ದಿನ ಈ ಮರದ, ನನ್ನ ನಿಮ್ಮ ಬದುಕಿನ ಇತಿಹಾಸ ನಿರ್ಮಾಣವಾದಾಗ ಈ ಮರದ ಬೆಂಕಿಯನ್ನು ಆರಿಸಲು ನಾನು ಪ್ರಯತ್ನಿಸಿದ್ದೇನೆಂದು ಮತ್ತು ನಿಮ್ಮಂಥವರು ನೋಡುತ್ತಲೇ ಇದ್ದು ಮೂಕಸಾಕ್ಷಿಗಳಾದಿರೆಂದು ದಾಖಲಾದೀತು ಅಲ್ವೇ? ಸಮಾಜ ಕೆಡುವುದು ಕೆಟ್ಟವರಿಂದ ಅನ್ನುವುದಕ್ಕಿಂತಲೂ ಈ ಕೇಡುಗಳನ್ನು ನೋಡಿ ಏನೂ ಮಾಡದ, ಏನೂ ಆಡದ, (ಖಾಸಗಿಯಾಗಿ ಮುಸುಕಿನೊಳಗೇ ಕೈಕೈಹಿಸುಕಿಕೊಳ್ಳುವ!) ಬುದ್ಧಿವಂತರಿಂದ. ಬೇರೆಬೇರೆ ಕಾರಣಗಳಿಗಾಗಿ ಈ ಮಂದಿ ಸುಮ್ಮನಿರುವುದನ್ನು ಸಾಧಿಸಿಕೊಂಡಿದ್ದಾರೆ. ಕೆಲವರಿಗೆ ಸರಕಾರಿ ಕೆಲಸದ ನೆಪ; ಇನ್ನು ಕೆಲವರಿಗೆ (ಖಾಸಗಿ ಸಂಸ್ಥೆಗಳ ಅಧಿಕಾರಿ/ನೌಕರರಿಗೆ) ಉದ್ಯೋಗದ ನೀತಿಸಂಹಿತೆ; ಇನ್ನೂ ಹಲವರಿಗೆ ಬಿಡುವಿಲ್ಲದಿರುವುದು; ಮತ್ತೆ ಕೆಲವರಿಗೆ ಹೇಳಿ/ಮಾಡಿ ಏನು ಪ್ರಯೋಜನ ಎಂಬ ಕೃತಕ ಹತಾಶೆ. ಆದರೆ ಪರಿಸ್ಥಿತಿ ಒಳ್ಳೆಯದಾದಾಗ ಹಠಾತ್ತನೆ ಗೋಚರಿಸಿ ತಾವು ಈ ಬಗ್ಗೆ ಎಷ್ಟೊಂದು ಚಿಂತಿತರಾಗಿದ್ದೇವೆಂದು ಭಾಷಣ ಬಿಗಿಯುವವರು, ಲೇಖನ ಬರೆಯುವವರು ಇವರೇ.
ಭಾರತದಲ್ಲಿ ಸ್ವಾತಂತ್ರ್ಯದ ನಂತರ ಪ್ರಜಾಸತ್ತೆಗೆ ಬಂದ ದೊಡ್ಡ ಆತಂಕವೆಂದರೆ 1975ರ ತುರ್ತುಪರಿಸ್ಥಿತಿ. ಈ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿ ದಸ್ತಗಿರಿಯಾಗಿ ಪೊಲೀಸ್ ಲಾಠಿಯೇಟಿಗೆ ತುತ್ತಾದವರು, ಜೈಲು ಪಾಲಾದವರು ಬೇಕಷ್ಟು ಇದ್ದಾರೆ. ಆದರೆ ಇದ್ಯಾವುದಕ್ಕೂ ತುತ್ತಾಗದೇ ಖೋಖೋ ಆಟದಲ್ಲಿ ತಪ್ಪಿಸಿಕೊಳ್ಳುವವರಂತೆ ಅತ್ತ ಇತ್ತ ಓಡಾಡಿ ಇಲ್ಲಸಲ್ಲದ ನೆಪ ಹೇಳಿ ಕೊನೆಗೆ ಸಿನೆಮಾ ಅಂತಿಮ ರೀಲಿಗೆ ಬಂದಾಗ ಗ್ರೂಪ್ ಫೋಟೊವಿಗೆ ಮುಖವೊಡ್ಡಿದ ಮಹಾಮಹಿಮರು ಅನೇಕರಿದ್ದಾರೆ! ದಸ್ತಗಿರಿಯಾಗಲು, ಜೈಲು ಸೇರಲು ಸೂಟುಕೇಸು ಹಿಡಿದು ನಿಂತವರನ್ನು ಪೊಲೀಸರು ಗುರುತಿಸಲೇ ಇಲ್ಲ. ಹಾಗೆ ಸಿದ್ಧರಿಲ್ಲದಿದ್ದವರನ್ನೇ ಹಿಡಿದರು. (26 ದಿನ ಜೈಲಿನಲ್ಲಿದ್ದ ಪ್ರೊ. ಚಂಪಾ ಅವರ ಒಂದು ಕೃತಿಯಲ್ಲಿ ಈ ಬಗ್ಗೆ ಸಾಕಷ್ಟು ಬೆಳಕಿಂಡಿಗಳಿವೆ.) 1975ರ ತುರ್ತುಸ್ಥಿತಿಯಿದ್ದಾಗ ಮೈಸೂರಿನಲ್ಲಿ (ಮಹಾರಾಜಾ ಕಾಲೇಜು ಸಭಾಭವನದಲ್ಲೆಂದು ನೆನಪು) ಪ್ರತಿಭಟನಾ ಸಭೆಯೊಂದು ನಡೆಯಿತು. ಈಗ ನಮ್ಮಾಡನಿಲ್ಲದ ಕನ್ನಡದ ಹಿರಿಯ ಸಾಹಿತಿಯೊಬ್ಬರು ಮುಖ್ಯ ಭಾಷಣ ಮಾಡುವವರಿದ್ದರು. ಕಿಕ್ಕಿರಿದ ಜನಸಂದಣಿ; ಪೊಲೀಸರು ತುಂಬಿದ್ದರು. ಮೊದಲಿಗೆ ಕೆಲವು ಅಮುಖ್ಯರು ತುರ್ತುಸ್ಥಿತಿಯನ್ನು ಧಿಕ್ಕರಿಸಿ ಮಾತನಾಡಿದರು. ಸಮಾರಂಭದ ಬಳಿಕ ಅವರ ಗತಿಯೇನಾಯಿತೋ ಗೊತ್ತಾಗಲಿಲ್ಲ. ಆದರೆ ಅನಂತರ ಮಾತನಾಡಿದ ಈ ಗಣ್ಯ ಸಾಹಿತಿ ಎಲ್ಲೂ ತುರ್ತುಸ್ಥಿತಿಯನ್ನು ಟೀಕಿಸದೆ, ಚಕ್ಕುಲಿಯ ಹೊರ ವೃತ್ತವನ್ನು ತಿಂದು ಹಸಿವೆ ತೀರಿಸಿಕೊಂಡವರಂತೆ ಸುತ್ತುಬಳಸಿ ಮಾತನಾಡಿ ಈ ದೇಶದ ದಲಿತರ, ಬಡವರ, ಇನ್ನಿತರ ಶೋಷಿತರ ಕಲ್ಯಾಣವಾಗದೆ ದೇಶೋದ್ಧಾರದ ಮಾತು ಅರ್ಥಹೀನವೆಂದರು. ಅವರು ಮಾತನಾಡಿದ್ದಷ್ಟೂ ಅರ್ಥಪೂರ್ಣವೇ ಆಗಿದ್ದರೂ ಆ ಸಮಾರಂಭದ ಸಂದರ್ಭಕ್ಕೆ ಹೊಂದುವುದಾಗಿರಲಿಲ್ಲ. ಅವರ ಆಪ್ತರು ಮತ್ತು ಅವರನ್ನು ಗೊತ್ತಿದ್ದವರ ಹೊರತಾಗಿ ನೆರೆದ ಇತರ ಜನ ನಿರಾಶೆಗೊಂಡರು.
ತುರ್ತುಸ್ಥಿತಿಯ ಕುರಿತ ಕೃತಿಗಳಲ್ಲಿ ಮೆರೆದ ಸಂದೇಹದಲ್ಲಿ ಅನೇಕರು ಇಂತಹ ಒರೆಗಳೇ ಆಗಿದ್ದಾರೆ. ಇದನ್ನು ನೋಡಿದಾಗ ಭಾರತಮಾತೆ ಸದಾ ಕಾಯಿಲೆ ಹಿಡಿದವಳಂತೆ ಇದ್ದಾಳೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.
ಈಚೆಗೆ ವೇಲು ಮುರುಗನ್ ಎಂಬ ತಮಿಳು ಸಾಹಿತಿಯೊಬ್ಬರು ಬೌದ್ಧಿಕ-ದೈಹಿಕ ದೌರ್ಜನ್ಯಕ್ಕೊಳಗಾಗಿ ತಾವು ಬರೆಯುವುದನ್ನೇ ನಿಲ್ಲಿಸುವುದಾಗಿ ಘೋಷಿಸಿದರು. ಹೀಗೆ ಘೋಷಿಸಿಕೊಳ್ಳದೆಯೂ ಬರೆಯಲು ಸಾಧ್ಯವಾಗದ, ಬರೆದರೆ ತೊಂದರೆಯಾಗಬಹುದಾದ ಪರಿಸ್ಥಿತಿಯೊಂದು ಬರಬಹುದು ಎಂಬ ಆತಂಕವೂ ನನಗಿದೆ. ಅಂತಹ ಒತ್ತಡವು ಬರೆಯಲು ಪ್ರೇರೇಪಿಸುತ್ತದೆಂದು ತಿಳಿಯುವುದು ತಪ್ಪು. ಬರೆದಾದ ಮೇಲೆ ಆಗಬಹುದಾದ ಪರಿಣಾಮಗಳು ಭಯಾನಕವೆಂದು ತಿಳಿದರೆ ಆ ಸ್ಥಿತಿಯೇ ಲೇಖಕನನ್ನು ಚಿಂತೆಗೊಳಪಡಿಸುತ್ತದೆ; ಆಗ ಚಿಂತನೆ ನಶಿಸುತ್ತದೆ. ವಿಶ್ವದ ಇತಿಹಾಸದಲ್ಲಿ ಸಾಕ್ರೆೆಟಿಸ್‌ನಂತಹ ಚಿಂತಕರು, ಗೆಲಿಲಿಯೋ, ಬ್ರುನೋ, ಲವಾಷಿಯೆಯಂತಹ ವಿಜ್ಞಾನಿಗಳು, ನೈಜೀರಿಯಾದ ಮಹಲಂಗೋ, ಕೆನ್ ಸಾರೊವಿವಾರಂತಹ ಬರಹಗಾರರು ಚೆಗುವೆರಾರಂತಹ ಹೋರಾಟಗಾರರು ಹೀಗೆ ಪ್ರಗತಿಪರರನೇಕರು ಜೈಲುಶಿಕ್ಷೆ ಮಾತ್ರವಲ್ಲ, ಮರಣದಂಡನೆಗೂ ತುತ್ತಾದದ್ದುಂಟು. ಗಾಂಧಿ, ನೆಲ್ಸನ್ ಮಂಡೇಲರಂಥವರು ಜೈಲು ಶಿಕ್ಷೆ ಅನುಭವಿಸಿಯೂ ಬದುಕುಳಿದರು.
ಯಾವುದೇ ಚಿಂತನೆ, ಬರಹ ಅಥವಾ ಇನ್ನಿತರ ಪ್ರತಿಭೆ, ಪಾಂಡಿತ್ಯ ಅರ್ಥವತ್ತಾಗಬೇಕಾದರೆ ಅದು ಬದುಕಿಗೆ ಪೋಷಕವಾಗಬೇಕು. ತನ್ನ ಕಾಲದಲ್ಲೇ ಸಮಾಜಕ್ಕೆ ದಾರಿದೀಪವಾಗಬೇಕು. ಯಾರಿಗೆ ಏನಾದರೂ ಆಗಲಿ, ತನ್ನ ಸುಖಕ್ಕಾಗಿ ತಾನು ಹೀಗಿರುತ್ತೇನೆ, ಹೀಗೆ ಬರೆಯುತ್ತೇನೆ, ಹೀಗೆ ಬಾಳುತ್ತೇನೆ ಎನ್ನುವವರು ವರ್ತಮಾನ ಇಲ್ಲವೇ ಭವಿಷ್ಯದ ಸಮಾಜವನ್ನು ಕಲ್ಪಿಸಿಕೊಳ್ಳುವುದಿಲ್ಲ. ಬದಲಾಗಿ ತನ್ನ ಪ್ರಸ್ತುತ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಿದ್ದೇನೆಂದು ಮತ್ತು ತಾನು ಅಜಾತಶತ್ರುವಾಗಿದ್ದೇನೆಂಬ ಭ್ರಮೆಯಲ್ಲಿರುತ್ತಾರೆ ಹಾಗೂ ಈ ಪಲಾಯನವಾದದಿಂದ ತಾನು ಸದಾ ಸುರಕ್ಷಿತವಾಗಿ ಉಳಿಯುತ್ತಿದ್ದೇನೆಂದು ತಿಳಿಯುತ್ತಾರೆ. ಎಲ್ಲ ಕಡೆ ಸಲ್ಲುವ ಉತ್ಸಾಹ ಮತ್ತು ಯೋಜನೆಯಿಂದಾಗಿ ಕೊನೆಗೆ ಎಲ್ಲೂ ಸಲ್ಲದವರಾಗುತ್ತಾರೆ. ಹಾಗೆಂದು ಎಲ್ಲರೂ ದಿನನಿತ್ಯ ಸಶಸ್ತ್ರ ಹೋರಾಟಗಾರರಾಗಿ ಇಲ್ಲವೇ ಪೂರ್ಣಾವಧಿ ಕ್ರಾಂತಿಕಾರರಾಗಿ ಬಿಂಬಿಸಿಕೊಳ್ಳಬೇಕೆಂದು ಅರ್ಥವಲ್ಲ. ಚಿಂತಕ, ಬರಹಗಾರ ತನ್ನ ಎಲ್ಲ ಕೊರತೆ, ದ್ವಂದ್ವ, ವಿರೋಧಾಭಾಸ, ಅಸ್ಪಷ್ಟತೆ, ಅಸಂಗತತೆಯೊಂದಿಗೂ ಹಿರಿಯ ವ್ಯಕ್ತಿತ್ವವಾಗಿ, ಮಾರ್ಗದರ್ಶಕನಾಗಬಲ್ಲ. ಗೋಪಾಲಕೃಷ್ಣ ಅಡಿಗರಿಗೆ ರಾಜಕೀಯ ದ್ವಂದ್ವವಿತ್ತು. ನಮ್ಮ ಅನೇಕ ಲೇಖಕರು ಮತ್ತಿತರ ಕಲಾವಿದರು ಪ್ರತಿಭಟನೆಗಾಗಿ ಪ್ರಶಸ್ತಿಯನ್ನು ಹಿಂದಿರುಗಿಸಿದಾಗಲೂ ಪ್ರಶಸ್ತಿಯ ಮೊತ್ತವನ್ನು ಹಿಂದಿರುಗಿಸಲಿಲ್ಲವೆಂಬ ಆರೋಪವಿದೆ. ಶಿವರಾಮ ಕಾರಂತರೂ ಈ ಬಗೆಯ ದ್ವಂದ್ವ, ವಿರೋಧಾಭಾಸ ಮುಂತಾದ ಕೊರತೆಗಳಿಂದ ಮುಕ್ತವಾಗಿರಲಿಲ್ಲ. ಆದರೂ ಇವರೆಲ್ಲ ತನ್ನ ಕಾಲ-ದೇಶದ ಆಗುಹೋಗುಗಳಿಗೆ ಸಾಕ್ಷಿಪ್ರಜ್ಞೆಯಂತಿದ್ದರು. ಇದಕ್ಕೆ ಪ್ರತಿಯಾಗಿ ನಾವಿಂದು ನೋಡುತ್ತಿರುವ ಅನೇಕ ಪ್ರಖ್ಯಾತರು ಪ್ರಜ್ಞಾಹೀನರಂತಿದ್ದಾರೆ. ಇದರಿಂದಾಗಿ ಅವರು ತಮ್ಮ ಮಾತ್ರವಲ್ಲ, ತಾವು ಪ್ರತಿನಿಧಿಸುತ್ತಿರುವ ಅಥವಾ ಪ್ರತಿನಿಧಿಸುತ್ತೇವೆಂದು ಕೊಚ್ಚಿಕೊಳ್ಳುವ ಕ್ಷೇತ್ರದ ಗೌರವವನ್ನೂ ಹರಾಜು ಮಾಡುತ್ತಾರೆ. ಇದೇ ಕಾರಣವಾಗಿ ಜನಸಾಮಾನ್ಯರೂ ಕಲೆಯನ್ನು ಕಪ್ಪುಕಲೆಯಾಗಿ ಉದಾಹರಿಸುವ ನೆಲೆಗೆ ಸಮಾಜ ಬಂದಿದೆ.
(ಕೆಲವೇ ದಿನಗಳ ಹಿಂದೆ ಮಂಡ್ಯದಲ್ಲಿ ಒಂದು ಅಂತಧರ್ಮೀಯ ವಿವಾಹವಾಯಿತು. ಈ ಸಂದರ್ಭದಲ್ಲಿ ಅಭಿವ್ಯಕ್ತಿಯಾದ, ಪ್ರಕಟವಾದ ಬೌದ್ಧಿಕ ಅಭಿಪ್ರಾಯಗಳು ಕೆಲವೇ. ಉಳಿದವರು ಕ್ಲೀಷೆಯ ಜಾಣಕಿವುಡು-ಕುರುಡನ್ನು ಪ್ರದರ್ಶಿಸಿದ್ದು ನಮ್ಮ ಬೌದ್ಧಿಕ ಜಗತ್ತಿನ ದಿವಾಳಿತನದ ದ್ಯೋತಕ. ವಧು ಹಿಂದೂ. ವರ ಮುಸ್ಲಿಮ್. ಈ ವಿವಾಹವನ್ನು ಲವ್ ಜಿಹಾದ್ ಎಂದು ಬಣ್ಣಿಸಿ ಹಲವು ‘ಹಿಂದೂಪರ’ ವೆಂದು ಹೇಳಲಾದ ಸಂಘಟನೆಗಳು ಪ್ರತಿಭಟನೆ ಮಾಡಿದವು. ಅವು ಈ ದೇಶದಲ್ಲಿ ನಡೆದ ಸಾವಿರಾರು ಅಂತರ್ಜಾತೀಯ ವಿವಾಹಗಳನ್ನು ಬೆಂಬಲಿಸಿಕೊಂಡು, ಇಲ್ಲವೇ ಸಹಿಸಿಕೊಂಡು ಬಂದ ಈ ಸಮಾಜವನ್ನು ಗೌರವಿಸುತ್ತಿಲ್ಲ. ಅಂತಹ ಒಂದು ಅಂಕಿ-ಅಂಶಗಳನ್ನು ಪ್ರಕಟಿಸುವ ಸೌಜನ್ಯವನ್ನು ನಮ್ಮ ಮಾಧ್ಯಮಗಳೂ ಮಾಡುತ್ತಿಲ್ಲ. ಪ್ರಕಟವಾಗದ ಸತ್ಯವೆಂಬ ಶಾಶ್ವತ ಹರಿವಿನ ಹೊಳೆ ಈ ಉಗ್ರಮಳೆಯ ಕೆಂಪುನೀರಿನಡಿ ಮುಚ್ಚಿಹೋಗುತ್ತದೆ. ಈ ಬಿರುಸು ತಣ್ಣಗಾದಾಗ ಮತ್ತೆ ಸತ್ಯದ ಪಾರದರ್ಶಕ ಪ್ರವಾಹವಿರುತ್ತದೆ; ಅದೊಂದೇ ಸುಖದ ಸಂಗತಿ. ಆದರೆ ಆ ಹೊತ್ತಿಗೆ ಸಾಕಷ್ಟು ಹಾನಿಯಾಗಿರುತ್ತದೆ.)
ಬದುಕೆಂದರೆ ನನ್ನೊಬ್ಬನದೇ ಅಲ್ಲ; ನನ್ನ ಹೆಂಡತಿ ಮಕ್ಕಳದ್ದು ಮಾತ್ರವಲ್ಲ; ಪತ್ರಿಕೆಯಲ್ಲೋ ಇನ್ಯಾವುದೇ ಮಾಧ್ಯಮದಲ್ಲಿ (ಅ)ನಿಯತಕಾಲಿಕವಾಗಿ ಪ್ರಕಟವಾಗುವ ಹೆಸರಲ್ಲ. ಇತಿಹಾಸವನ್ನು ಬೇಕಾದಂತೆ ತಿರುಚುವುದಾದರೆ ಅಲ್ಲಿ ನನ್ನೊಬ್ಬನದೇ ಹೆಸರು ಬರುವಂತೆ ಮಾಡಬಹುದು. ಆದರೆ ಮರಳಿನಲ್ಲಿ ಸರೆದಂತೆ ಅದು ಇನ್ನೊಂದು ತೆರೆ ಬಂದಾಗ ಅಳಿಸಿಹೋಗುತ್ತದೆಂಬ ಅರಿವು ಇದ್ದರೆ ನಮಗಾಗಿ ಬದುಕುವುದು ಬದುಕೇ ಅಲ್ಲ, ಇನ್ನೊಬ್ಬರಿಗಾಗಿ ಬದುಕುವುದೇ ನಿಜವಾದ ಬದುಕು ಎಂಬ ಆದರ್ಶವನ್ನು ಹೇಳಬಹುದು. ಅನೇಕರು ಬದುಕಿದ್ದಾರೆ. ಆದರೆ-ಸತ್ತಂತಿದ್ದಾರೆ. ಅಂಥವರನ್ನು ಉದ್ದೇಶಿಸಿಯೇ ಕುವೆಂಪು ‘ಸತ್ತಂತಿಹರನು ಬಡಿದೆಚ್ಚರಿಸು’ ಎಂದರು. ‘ಆಗು ನೀ ಅನಿಕೇತನ’ ಎಂದ ಉದ್ದೇಶವೂ ಇದೇ ಆಗಿದೆ. ಹೋಗಲಿ, ನಮ್ಮ ಕುಟುಂಬ-ಮಕ್ಕಳಿಗಾಗಿಯಾದರೂ ನಾವು ಎಚ್ಚರಿರಬೇಕು. ನಮ್ಮ ಸುತ್ತಲಿನ ಪ್ರಪಂಚವು ಅರಗಿನ ಮನೆಯಂತೆ. ಯಾವ ಕ್ಷಣಕ್ಕೂ ಕಿಡಿಹತ್ತಿಕೊಳ್ಳಬಹುದು. ಆಗ ಎಚ್ಚರಿರಲು ಒಬ್ಬ ಭೀಮನಿರಬೇಕಲ್ಲ? ಈ ಎಚ್ಚರವಿದ್ದದ್ದರಿಂದಲೇ ಅಲ್ಲವೇ ಪಾಂಡವರು ಬದುಕುಳಿದದ್ದು? ಮಹಾಭಾರತದ ಗತಿ ಬದಲಾದದ್ದು?