ಸದ್ದು! ಕೋರ್ಟ್ ನಡೀತಿದೆ...!
ನ್ಯಾಯಾಧೀಶರ ಸಂಖ್ಯೆ ಕಡಿಮೆ; ಪ್ರಕರಣಗಳ ಸಂಖ್ಯೆ ಹೆಚ್ಚು. ಇದು ಮಾಮೂಲು ದೂರು. ಆದರೆ ಪ್ರಕರಣಗಳನ್ನು ಮೊದಲೇ ಅಧ್ಯಯನ ಮಾಡಿ ಬಂದರೆ ಪ್ರಕರಣಗಳು ಈಗಿನಷ್ಟು ಲಂಬಿತವಾಗದು. ಒಬ್ಬ ಒಳ್ಳೆಯ ನ್ಯಾಯಾಧೀಶರು ಹೇಳುತ್ತಿದ್ದರು: ಕಡತವನ್ನು ಒಮ್ಮೆ ಓದಿದರೆ ಸಾಕು, ಪ್ರಕರಣದ ಸತ್ಯ-ಸತ್ವ ಗೊತ್ತಾಗುತ್ತದೆ; ಪಕ್ಷಗಾರರನ್ನೇ ನೇರ ಮಾತನಾಡಿಸಿದರೆ ಒಂದು ದಿನದಲ್ಲಿ ಇತ್ಯರ್ಥಮಾಡಬಹುದು!
ನ್ಯಾಯದಾನದಲ್ಲಿ ವಿಳಂಬವೆಂಬುದು ನಿತ್ಯ ಮಾತನಾಡುವ ಸದ್ದಾಗಿದೆ. ಎಲ್ಲರೂ ಈ ಬಗ್ಗೆ ಮಾತನಾಡುತ್ತಾರೆ. ನ್ಯಾಯಾಲಯಗಳನ್ನು, ನ್ಯಾಯಾಧೀಶರನ್ನು, ವಕೀಲರನ್ನು ಟೀಕಿಸುವುದು ವಾಡಿಕೆಯಾಗಿದೆ ಮತ್ತು ಅದೊಂದು ವಾಕ್‌ಸ್ವಾತಂತ್ರ್ಯದ ಫ್ಯಾಶನ್ ಕೂಡಾ ಆಗಿದೆ. ಟೀಕಿಸುವುದಷ್ಟೇ ನಮ್ಮ ಹಕ್ಕು; ಉಳಿದದ್ದು ಸಂಬಂಧಿಸಿದವರ ಹಣೆಬರೆಹ ಎಂಬಂತೆ ಮಾಧ್ಯಮಗಳಲ್ಲಿ ಪ್ರತಿಬಿಂಬಿತವಾಗುತ್ತಿದೆ. ಕಳೆದ ವಾರ ದಿಲ್ಲಿಯಲ್ಲಿ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಧೀಶರುಗಳ ಹಾಗೂ ಇತರ ಉನ್ನತ ಮಟ್ಟದ ಪದಾಧಿಕಾರಿಗಳ ಸಮ್ಮೇಳನವು ದೇಶದ ಪ್ರಧಾನಿಗಳ ಸಮ್ಮುಖದಲ್ಲಿ ನಡೆಯಿತು. ಸಹಜವಾಗಿಯೇ ನ್ಯಾಯದಾನದಲ್ಲಿ ವಿಳಂಬ, ಶೀಘ್ರ ವಿಲೇವಾರಿ ಮುಂತಾದವುಗಳ ಕುರಿತು ಚರ್ಚೆಯಾಯಿತು. ನ್ಯಾಯಾಂಗ, ನ್ಯಾಯಾಲಯಗಳ ಮೇಲೆ ಟೀಕೆಯೂ ಆಯಿತು. ಈ ಸಂದರ್ಭದಲ್ಲಿ ವಿವಾದಗಳ ಶೀಘ್ರ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಇರುವ ತೊಡಕುಗಳನ್ನು ಹೇಳುವಾಗ ಭಾರತದ ಮುಖ್ಯ ನ್ಯಾಯಾಧೀಶರು ಭಾವುಕರಾದರೆಂದೂ ಪ್ರಧಾನಿ ತಕ್ಷಣ ಕೇಂದ್ರದ ನೆರವನ್ನು ನೀಡುವ ವಾಗ್ದಾನ ಮಾಡಿದರೆಂದೂ ವರದಿಯಾಯಿತು. ಅಂತರ್ಜಾಲದಲ್ಲಿ ಇದೊಂದು ಪದ್ಯ ಹರಿದಾಡುತ್ತಿದೆ:
ಯಾಕೆ ಹೆಚ್ಚು ನ್ಯಾಯಾಧೀಶರು?
ಮಸೀದಿ ನಿರ್ನಾಮವಾಗಿದೆ
ನರಹತ್ಯೆಯ ಕುರಿತು ತೀರ್ಪುಗಳು ಬಂದಿವೆ
ಮತ್ತೆ ಯಾಕೆ ನ್ಯಾಯಾಧೀಶರು ಹೆಚ್ಚು ನ್ಯಾಯಾಧೀಶರನ್ನು ಅಪೇಕ್ಷಿಸುತ್ತಿದ್ದಾರೆ
ಸಿರಿವಂತರು ಲೂಟಿಮಾಡಿದ ಹಣದೊಂದಿಗೆ ದೇಶದಿಂದ ಪಲಾಯನ ಮಾಡುತ್ತಿದ್ದಾರೆ
ಮಂತ್ರಿಗಳು ಸಿರಿವಂತರ ಸಾಲಗಳನ್ನು ಮನ್ನಾ ಮಾಡುತ್ತಿದ್ದಾರೆ
ಮಹಿಳೆಯರು ಆಳಪಾತಾಳದಲ್ಲಿ ನೀರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ
ರೈತರು ಮರಗಳಿಗೆ ತಮ್ಮನ್ನು ತಾವು ನೇಣುಹಾಕಿಕೊಂಡಿದ್ದಾರೆ
ಮತ್ತೆ ಯಾಕೆ ನ್ಯಾಯಮೂರ್ತಿಗಳು ಹೆಚ್ಚು ನ್ಯಾಯಾಧೀಶರನ್ನು ಅಪೇಕ್ಷಿಸುತ್ತಿದ್ದಾರೆ
ನಿಜಕ್ಕೂ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿಲ್ಲ
(ಮೂಲ ಹಿಂದಿ: ಅಸದ್ ಝೈದಿ)
ದೇಶದಲ್ಲಿ ಕಳೆದ ಕೆಲವು ದಶಕಗಳಿಂದ ವಿಫಲವಾದ ಆಡಳಿತ, ಲೋಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ನ್ಯಾಯದ ದುರ್ಬಳಕೆ ಇವುಗಳ ಕುರಿತ ವ್ಯಂಗ್ಯ, ವಿಷಾದ, ರೊಚ್ಚು, ನಿರಾಶೆ ಸೇರಿದ ಈ ಸಾಲುಗಳು ನ್ಯಾಯದಾನದ ವಿಳಂಬದ ಟೀಕೆಯ ಹೊತ್ತಿನಲ್ಲಿ ನ್ಯಾಯದ ಒಟ್ಟಾರೆ ನಿಷ್ಫಲತೆಯನ್ನು ಸಾರುತ್ತಿದೆ. ಆದರೂ ಭಾವವನ್ನು ಮೀರಿ ವಿಚಾರಿಸುವುದು ಅಗತ್ಯವಾಗಿದೆ. ನ್ಯಾಯದಾನದ ವಿಳಂಬ ಮಾತ್ರವಲ್ಲ, ನ್ಯಾಯದಾನದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯ ಬಾರದಲ್ಲಿ ಇರುವ ಸಮಸ್ಯೆಯ ಮೂಲ, ಕಾರಣ ಮತ್ತು ಪರಿಹಾರದ ಬಗ್ಗೆ ಯಾರೂ ಯೋಚಿಸಿದಂತಿಲ್ಲ. ಈ ಕುರಿತು ಗಮನ ಹರಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸೀತು. ನ್ಯಾಯದಾನವೆಂದರೆ ಸಿವಿಲ್ ಮತ್ತು ಕ್ರಿಮಿನಲ್ (ಮತ್ತು ಸಂಸ್ಕೃತಿ ವಿಕಾಸದಲ್ಲಿ ಇತರ ಅನೇಕ ಕ್ಷೇತ್ರಗಳ) ಪ್ರಕರಣಗಳನ್ನು ವಿಚಾರಿಸಿ ನ್ಯಾಯಾಲಯಗಳಲ್ಲಿ ಕಾನೂನಿನನ್ವಯ ನೀಡುವ ತೀರ್ಪು ಎಂಬ ಭಾವನೆಯೇ ಅನೇಕರಲ್ಲಿದೆ. ಕಾನೂನು ವ್ಯವಸ್ಥೆಯ ಭಾಗ. ಇತರ ಎಲ್ಲ ಅಂಗಗಳಂತೆ ತನ್ನ ಬಸಿರೊಳಗೆ ಅನೇಕ ವೈರುಧ್ಯಗಳನ್ನು ಲೋಪದೋಷಗಳನ್ನು, ಕೊರತೆಗಳನ್ನು ತುಂಬಿಕೊಂಡೇ ಸೃಷ್ಟಿಯಾದದ್ದು. ಎಷ್ಟಾದರೂ ಮನುಷ್ಯನೇ ತಾನೆ ಈ ಕಾನೂನಿನ ಬ್ರಹ್ಮ! ಇದರಿಂದಾಗಿ ಅನೇಕ ವರ್ಷಗಳ ನಂತರ ಒಂದು ಪ್ರಕರಣದಲ್ಲಿ ಗೆದ್ದವನು ತನ್ನ ಗೆಲುವನ್ನು ಸಂತೋಷಿಸುವ ಸ್ಥಿತಿಯಲ್ಲೂ ಇರುವುದಿಲ್ಲ. ಗೆದ್ದವರ ಸ್ಥಿತಿ ಸುಮಾರಾಗಿ ಮಹಾಭಾರತದ ಅಂತ್ಯಕ್ಕೆ ಪಾಂಡವರ ಸ್ಥಿತಿಯಂತಿರುತ್ತದೆ. ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಇನ್ನು ಸುಖ ಪಡುವುದಕ್ಕಾದರೂ ಏನಿದೆ? ಬದುಕೇ ಸಾಕು; ಸಾವು ತಮಗೂ ಬರಬಾರದೇ ಎಂಬ ಹತಾಶ ಸ್ಥಿತಿ ಅದು. ಇಚ್ಛಾಮರಣಿಯೆಂಬ ಭೀಷ್ಮ, ಚಿರಂಜೀವತ್ವದ ಅಶ್ವತ್ಥಾಮ ಇವರೆಲ್ಲರೂ ಈ ಗೆಲುವಿನ ಶೋಕವನ್ನು ಅನುಭವಿಸಿದ್ದಾರೆ. ಈಡಿಪಸ್ ತನ್ನರಿವಿನ ನೋವಿನಲ್ಲೇ ಅಂತ್ಯ ಕಾಣುತ್ತಾನೆ. ಸೀತೆ ಒಮ್ಮೆ ಭೂಮಿ ಬಾಯಿ ಬಿಟ್ಟು ತನ್ನನ್ನು ನುಂಗಬಾರದೇ ಎಂಬ ಬಯಕೆಯ ತಾಯಿಯಾಗುತ್ತಾಳೆ. ಗೆದ್ದವನು ಸೋತ; ಸೋತವನು ಸತ್ತ ಎಂಬ ನುಡಿ ಬಳಕೆಗೆ ಬಂದದ್ದೇ ಹೀಗೆ ಮತ್ತು ಈ ಕಾರಣಕ್ಕೆ. ಕಲವು ಕಡೆ ನಿನ್ನ ಮೇಲೆ ಸಿವಿಲ್ ವ್ಯಾಜ್ಯ ಬಿದ್ದು ಹೋಗ! ಎಂದು ಶಾಪ ಹಾಕುವ ಕ್ರಮವಿದೆಯೆಂದು ಕೇಳಿದ್ದೇನೆ. ಆದರೂ ಪುರಾಣಗಳು ನೀಡುವ ಈ ಬೀಭತ್ಸ ಚಿತ್ರಗಳು ಮನುಷ್ಯರಲ್ಲಿ ಯಾವ ಬದಲಾವಣೆಯನ್ನೂ ಮಾಡಿದಂತಿಲ್ಲ. ಏಕೆಂದರೆ ಮನುಷ್ಯ ಮೂಲಭೂತವಾಗಿ ಕ್ರೌರ್ಯದ, ಕಲಹದ ರಕ್ತವನ್ನು ಹೊತ್ತೇ ಬಂದವನು. ನೋವನ್ನು ನೀಡಲು ಮತ್ತು ಪಡೆಯಲು ಉತ್ಸಾಹಿತನಾಗಿದ್ದಾನೆ. ಇದಕ್ಕಾಗಿ ಬದುಕಿನಲ್ಲಿ ಸಂಪಾದಿಸಿದ ಎಲ್ಲವನ್ನೂ ವ್ಯಯಿಸಲು ಸಿದ್ಧನಾಗಿದ್ದಾನೆ. ಎಲ್ಲ ವಿವಾದಗಳೂ ಒಂದು ಹಂತದಲ್ಲಿ ಸ್ಪರ್ಧೆಯಾಗಿ ಪರಿಣಮಿಸುತ್ತದೆ. ಆಗ ಮೂಲ ಉದ್ದೇಶವು ಮರೆತುಹೋಗಿ ಹೇಗಾದರೂ ಗೆಲ್ಲುವುದೇ ಪ್ರಮುಖವಾಗುತ್ತದೆ. ಇದಕ್ಕಾಗಿ ಕಾನೂನಿನ ಎಲ್ಲ ಕೊರತೆಗಳನ್ನು, ಲೋಪ ದೋಷಗಳನ್ನು ವ್ಯವಸ್ಥಿತವಾಗಿ ಬಳಸಲಾಗುತ್ತದೆ. ಈ ವ್ಯಾಯಾಮದಲ್ಲಿ ವಕೀಲರು ಆಯುಧಗಳಾಗುತ್ತಾರೆ. ಆಯುಧಗಳು ಎಷ್ಟು ಹರಿತವಾಗಿದ್ದರೆ ಅಷ್ಟೂ ಸುಲಭ ಪ್ರಕರಣದ ಗೆಲುವು. ನ್ಯಾಯಾಧೀಶರುಗಳು ಪರಿಣತರಾಗಿರಬೇಕಾಗಿಲ್ಲವೆಂದು ನಮ್ಮ ನ್ಯಾಯಶಾಸ್ತ್ರ (Jurisprudence) ಹೇಳುತ್ತದೆ. ಇದಕ್ಕಾಗಿಯೇ ಮೇಲ್ಮನವಿಯ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಕೊನೆಗೊಂದು ಹಂತದಲ್ಲಿ ನ್ಯಾಯ ಸಿಕ್ಕಿತೋ ಬಿಟ್ಟಿತೋ ಅಂತೂ ಪ್ರಕರಣವು ಮುಗಿಯುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಎಳೆಎಳೆೆಯಾಗಿ ಬಿಡಿಸಲ್ಪಡುವ ಪ್ರಕರಣವು ನೀರುಳ್ಳಿಯಂತೆ ಕೊನೆಗೆ ಏನೂ ಇಲ್ಲವಾಗಿಯೇ ಶೂನ್ಯ ಸಂಪಾದನೆಯಲ್ಲಿ ಬಿಚ್ಚಿಕೊಳ್ಳುತ್ತದೆ. ಈ ಪ್ರಕರಣಗಳಿಲ್ಲದಿದ್ದರೆ, ನ್ಯಾಯಾಂಗದ ಅಸ್ತಿತ್ವಕ್ಕೆ ಅರ್ಥವೇ ಇರುವುದಿಲ್ಲ. ನ್ಯಾಯಾಧೀಶರುಗಳಿಗೆ, ಅಲ್ಲಿನ ನೌಕರರಿಗೆ, ವಕೀಲರುಗಳಿಗೆ ಮತ್ತು ನ್ಯಾಯಾಂಗದ ವ್ಯವಸ್ಥೆಯನ್ನು ನಂಬಿಕೊಂಡು ಬಂದಿರುವ ಸಾಕಷ್ಟು ಸಂಖ್ಯೆಯ ಮಂದಿಗೆ ಬದುಕೇ ಇರುವುದಿಲ್ಲ. ಆದ್ದರಿಂದ ಪ್ರಕರಣಗಳು ಬೇಕು. ಪ್ರಕರಣಗಳ ಸೃಷ್ಟಿಗೆ ಬೇಕಾದ ಕ್ರೌರ್ಯದ, ಕಲಹದ, ಹಿಂಸೆಯ, ಪ್ರತಿಷ್ಠೆಯ, ಸೇಡಿನ, ರೊಚ್ಚಿನ, ಸಂಚಿನ, ಲಾಲಸೆಯ ಮನೋಭಾವವು ಮನುಷ್ಯನಲ್ಲಿರಬೇಕು. ಮತ್ತು ಈ ಮನೋಭಾವದ ಬೆಂಕಿಯನ್ನು ಉರಿಸಲು ಮತ್ತು ಆರದಂತೆ ನೋಡಿಕೊಳ್ಳಲು ಬೇಕಾದ ಪೊಲೀಸು ಮತ್ತಿತರ ಆಡಳಿತ ವ್ಯವಸ್ಥೆಯಿರಬೇಕು. ಈ ವಿಚಾರ ಸ್ಪಷ್ಟವಾಗಬೇಕಾದರೆ ನಮ್ಮ ನಡುವೆ ಬೆಳೆದು ದೊಡ್ಡ ಸಂಗತಿಗಳಾದ ಸಣ್ಣ ಸಂಗತಿಗಳನ್ನು ಗಮನಿಸಬಹುದು. ಬಸ್‌ನಲ್ಲಿ ಸೀಟು ಪಡೆಯುವಲ್ಲಿ, ರಸ್ತೆಯಲ್ಲಿ ಸೈಡ್ ನೀಡಲು ವಾಹನಗಳು ತೊಡಕಾಗುವಲ್ಲಿ, ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯುವಲ್ಲಿ ಆಗುವ ಸಣ್ಣಪುಟ್ಟ ಜಗಳಗಳು ಅಲ್ಲಲ್ಲೇ ಇತ್ಯರ್ಥವಾಗಬೇಕಾದವು. ಇವೆಲ್ಲ ಪೊಲೀಸ್ ಠಾಣೆಯ ಅಥವಾ ಇತರ ಅಧಿಕಾರಸ್ಥರ ಮೆಟ್ಟಲೇರುತ್ತವೆ. ಅಲ್ಲಿ ಇದನ್ನು ಬಿಗಡಾಯಿಸುವ ರೀತಿಯ ವಾತಾವರಣವೇ ಹೆಚ್ಚು. ಅಧಿಕಾರಸ್ಥರು ಹೆಚ್ಚಾಗಿ ಇಬ್ಬರನ್ನು ಕರೆದು ಸೌಹಾರ್ದಯುತವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸುವುದಿಲ್ಲ ಬದಲಾಗಿ ತಮ್ಮ ಆಣತಿಯಂತೆ ಅವರನ್ನು ಸುಮ್ಮನಾಗಿಸುತ್ತಾರೆ. ಆದ್ದರಿಂದ ಪ್ರಕರಣ ಇತ್ಯರ್ಥವಾಯಿತೆಂದು ತಿಳಿಯುವ ಹೊತ್ತಿಗೆ ಶಾಶ್ವತವಾದ ಕಲೆಯೊಂದು ಉಭಯ ಮನಸ್ಸುಗಳಲ್ಲೂ ಉಳಿದಿರುತ್ತದೆ. ಪತಿಯ ಮೇಲೆ ಪತ್ನಿ ದೂರಿತ್ತರೆ ಅದನ್ನು ಸಾಂತ್ವನಯುತವಾಗಿ ಬಗೆಹರಿಸದೆ ಪತಿಗೆ ಆಕೆಯೆದುರೇ ಒದ್ದು ಹೆದರಿಸಿದರೆ ಅದರ ದುಷ್ಪರಿಣಾಮ ಠಾಣೆಯ ಹೊರಗೆ, ದೂರದಲ್ಲಿರುವ ಆ ಮನೆಯೊಳಗೆ ಪ್ರತಿಧ್ವನಿಸುತ್ತದೆ. ಇಂತಹದೇ ಪ್ರಕರಣವೆಂದು ಕರಾರುವಾಕ್ಕಾಗಿ ಹೇಳಲಾಗದು. ಆದರೆ ಅಧಿಕಾರದ ಮೂಲಕ ವಿವಾದಗಳನ್ನು ಬಗೆಹರಿಸುವುದು ಸಾಧ್ಯವಿಲ್ಲವೆಂದು ಮತ್ತು ಮನುಷ್ಯತ್ವದ ಮೂಲಕವೇ ಅಂತಹ ವಿವಾದಗಳ ಬೀಗನ್ನು ತೆರೆಯಬಹುದೆಂದು ಗೊತ್ತಿದ್ದರೆ ಯಾವುದೇ ಅಧಿಕಾರದ ಸೂಚನೆಯನ್ನು ನೀಡದೆಯೂ ಅವನ್ನು ಪರಿಹರಿಸಬಹುದು. ನ್ಯಾಯಾಲಯಗಳ ಹೊರಗೆ ಪ್ರಕರಣಗಳನ್ನು ಬಗೆಹರಿಸುವ ಹೊಸ ಪದ್ದತಿ ಜಾರಿಗೆ ಬಂದಿದೆ. ಇಲ್ಲೂ ಅನೇಕ ಬಾರಿ ಅಂಕಿ-ಅಂಶಗಳೇ ಮುಖ್ಯವಾಗಿ ಪಕ್ಷಗಾರರ ಸುಖ, ಆಶಯ ಹಿಂದುಳಿಯುತ್ತದೆ. ಪೊಲೀಸರಂತೂ ವಿವಾದಗಳನ್ನು ಇತ್ಯರ್ಥಮಾಡಲು ಬಲವಂತದ ಪ್ರಯೋಗಗಳನ್ನು (arm-twisting methods) ಮಾಡುತ್ತಾರೆ. ಗೊತ್ತಿದ್ದೊ ಗೊತ್ತಿಲ್ಲದೆಯೋ ನ್ಯಾಯಾಧೀಶರುಗಳೂ ಈ ಬಲವಂತವನ್ನು ಅಂಗೀಕರಿಸುತ್ತಾರೆ. ಪರಿಣಾಮವಾಗಿ ನೊಂದವನ ನೋವನ್ನು ಪರಿಹರಿಸುವ ಬದಲು ಅದನ್ನು ವೌನವಾಗಿಸುವುದೇ ನ್ಯಾಯವೆಂದಾಗಿದೆ. ಇನ್ನೊಂದೆಡೆ ಸಿವಿಲ್ ವ್ಯಾಜ್ಯಗಳಲ್ಲಿ ಅಸಹಾಯಕನನ್ನು ಗೋಡೆಯಂಚಿಗೆ ತಳ್ಳಿ ಆತನಿಗೆ ಇತ್ಯರ್ಥದ ಹೊರತು ಆಯ್ಕೆಯೇ ಇಲ್ಲವೆಂಬ ಸ್ಥಿತಿಯನ್ನು ಎಲ್ಲರೂ ಸೇರಿ ನಿರ್ಮಾಣಮಾಡುತ್ತಾರೆ. ನ್ಯಾಯಾಲಯಗಳಿರುವುದೇ ಶ್ರೀಮಂತರನ್ನು ಸಾಕುವುದಕ್ಕೆ ಮತ್ತು ಅನುಕೂಲ ಮಾಡಿಕೊಡುವುದಕ್ಕೆ ಎಂಬಂತಾಗಿದೆ. ಪ್ರಕರಣಗಳ ಇತ್ಯರ್ಥಕ್ಕೆ ಬೇಕಾದ ಹಣವನ್ನು ಪೂರೈಸುವುದು ಎಲ್ಲರಿಗೂ ಸಾಧ್ಯವಾಗದು. ಮೇಲ್ಮನವಿಯಂತಹ ಪ್ರಸಂಗಗಳು ಬಂದರಂತೂ ಬಡವನು ಹಿಂಡಿಹೋಗುತ್ತಾನೆ. ನ್ಯಾಯಾಲಯದ ವೆಚ್ಚವೆಂದರೆ ಅಲ್ಲಿ ಪಾವತಿಸುವ ದಾಖಲಿತ ಮೊತ್ತ ಮಾತ್ರವಲ್ಲ. ವಕೀಲರ ಶುಲ್ಕ, ಪ್ರಯಾಣವೆಚ್ಚ, ಕಡತಗಳನ್ನು ಸಜ್ಜುಗೊಳಿಸಲು ಹಿಡಿಯುವ ತನು-ಮನ-ಧನ ಶ್ರಮ ಇವೆಲ್ಲವೂ ಸೇರುತ್ತವೆ. ಇಲ್ಲೆಲ್ಲ ವ್ಯವಸ್ಥೆಯು ಕಠಿಣವಾಗಿರುತ್ತದೆ. ಇವನ್ನೆಲ್ಲ ಯೋಚಿಸಿದಾಗ ಗೆಲುವಿನ ವೆಚ್ಚ ಗೆಲುವಿಗಿಂತ ದೊಡ್ಡದಾಗಿರುತ್ತದೆ. ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಸಿಗಬೇಕಾದ ನ್ಯಾಯಯುತ ಮೊತ್ತದ ತೀರ ಅಲ್ಪ ಅಂಶವನ್ನು ಸ್ವೀಕರಿಸಲೇಬೇಕಾದ ಒತ್ತಾಯಕ್ಕೆ ಮಣಿದ ಬಡವರೆಷ್ಟೋ ಇದ್ದಾರೆ. ಒಂದು ವೇಳೆ ಅಂತಹ ರಾಜಿ ತೀರ್ಮಾನವಾದ ಮೇಲೂ ಆ ಪುಟಗೋಸಿ ಮೊತ್ತವನ್ನು ಪಡೆಯಲು ಅಲೆಯಬೇಕಾದ ಪರಿಸ್ಥಿತಿ, ಕೊನೆಗೆ ಚೆಕ್ಕನ್ನು ಪಡೆಯಲು ನ್ಯಾಯಾಧೀಶರ ಪುರುಸೊತ್ತಿಗೆ ಕಾಯುವ ದಯನೀಯ ಸ್ಥಿತಿಯನ್ನು ಕಂಡಾಗ ಪ್ರತಿಯೊಬ್ಬನೂ ಒಬ್ಬೊಬ್ಬ ತಬರನೇ ಎಂಬುದು ಸಾಬೀತಾಗುತ್ತದೆ. ಈ ಕಷ್ಟ ಪ್ರಕರಣದ ಪಕ್ಷಗಾರರಿಗೆ ಮಾತ್ರವಲ್ಲ. ಯಾವನಾದರೂ ಸಾಕ್ಷಿಯಾಗಿ ಹೋದರೆ ನ್ಯಾಯಾಲಯದಲ್ಲಿ ಆತ ಕಾಯುವ, ಮತ್ತು ಅನುಭವಿಸುವ ಅವಮಾನ ಆ ದೇವರಿಗೇ ಪ್ರೀತಿ. ಸರಕಾರಿ ಅಧಿಕಾರಿಗಳು ಬಂದರೆ ಅವರಿಗೆ ಭತ್ತೆಯ ಏರ್ಪಾಡಿದೆ. ಶ್ರೀಸಾಮಾನ್ಯನು ಸಾಕ್ಷಿಯಾಗಿ ಬಂದಾಗ ಸಂಜೆಯ ವೇಳೆಗೆ ಇಂದು ಪ್ರಕರಣ ನಡೆಯುವುದಿಲ್ಲ, ಇನ್ನೊಮ್ಮೆ ಬಾ ಎಂದು ಮರಳಿಸುವ ಪ್ರಸಂಗಗಳೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಆತನಿಗೆ ಭತ್ತೆ ಹೋಗಲಿ, ಒಂದು ಹನಿ ನೀರೂ ಸಿಗುವುದಿಲ್ಲ. ಆತನ ವೆಚ್ಚ ಆತ ಸಾಕ್ಷಿಯಾದ್ದಕ್ಕೆ ಒಂದು ಶಿಕ್ಷೆಯಾಗುತ್ತದೆ; ಪಾಠವಾಗುತ್ತದೆ. (ಕಾಯದೆ ಪುಸ್ತಕಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಆದರೆ ಇವು ಅನುಷ್ಠಾನಗೊಳ್ಳುವುದೇ ಇಲ್ಲ!)
ನ್ಯಾಯಾಧೀಶರ ಸಂಖ್ಯೆ ಕಡಿಮೆ; ಪ್ರಕರಣಗಳ ಸಂಖ್ಯೆ ಹೆಚ್ಚು. ಇದು ಮಾಮೂಲು ದೂರು. ಆದರೆ ಪ್ರಕರಣಗಳನ್ನು ಮೊದಲೇ ಅಧ್ಯಯನ ಮಾಡಿ ಬಂದರೆ ಪ್ರಕರಣಗಳು ಈಗಿನಷ್ಟು ಲಂಬಿತವಾಗದು. ಒಬ್ಬ ಒಳ್ಳೆಯ ನ್ಯಾಯಾಧೀಶರು ಹೇಳುತ್ತಿದ್ದರು: ಕಡತವನ್ನು ಒಮ್ಮೆ ಓದಿದರೆ ಸಾಕು, ಪ್ರಕರಣದ ಸತ್ಯ-ಸತ್ವ ಗೊತ್ತಾಗುತ್ತದೆ; ಪಕ್ಷಗಾರರನ್ನೇ ನೇರ ಮಾತನಾಡಿಸಿದರೆ ಒಂದು ದಿನದಲ್ಲಿ ಇತ್ಯರ್ಥಮಾಡಬಹುದು! ಆದರೆ ಇಂದಿನ ಲೋಕ ಅದಾಲತ್ ವ್ಯವಸ್ಥೆಯಲ್ಲಿ ಮಂತ್ರಕ್ಕಿಂತ ಉಗುಳೇ ಹೆಚ್ಚಾಗಿ ಒಟ್ಟಾರೆ ಪರಿಣಾಮ ಹೊಸ ಪ್ರಕರಣದ ನಾಂದಿಯಾಗಿರುತ್ತದೆ. ಯಾವುದೇ ಸಮಸ್ಯೆಗೆ ನೂರೆಂಟು ಮುಖಗಳು. ಎಲ್ಲವನ್ನೂ ಒಂದೇ ಬಾರಿಗೆ ಹೇಳಲಾಗದು. ಒಂದೊಂದೂ ಮುಖವನ್ನು ಒಮ್ಮೆಮ್ಮೆ ಚರ್ಚಿಸಬಹುದು. ಉದ್ದೇಶ ಪ್ರಾಮಾಣಿಕವಾಗಿದ್ದರೆ ವಿವಾದಗಳು ಸೌಹಾರ್ದಕ್ಕೆ ಮೂಲವಲ್ಲವೇ?