ಕಸಾಪದೆದುರಿನ ಸವಾಲುಗಳು
ಕನ್ನಡ ಸಾಹಿತ್ಯ ಪರಿಷತ್ತು ನೂರೊಂದು ವರ್ಷ ಪೂರೈಸಿದೆ (ಸ್ಥಾಪನೆ: ಮೇ 5, 1915). ಇದೊಂದು ದೊಡ್ಡ ಸಾಧನೆ. ಆದರೆ ಇದೇ ಒಂದು ಸಾಧನೆಯೆಂಬಂತೆ ಬಿಂಬಿತವಾಗಿ ಉಳಿದ ಅಗತ್ಯಗಳು ಗೌಣವಾದರೆ ಅದು ದುರಂತ. ಏಕೆಂದರೆ ಕನ್ನಡ ಸಾಹಿತ್ಯದ ಸಾಂಸ್ಥಿಕ ಪ್ರತಿನಿಧಿಯೆಂಬಂತೆ ಬೆಳೆದು ಬಂದ ಪರಿಷತ್ತಿನೆದುರು ಎಂದೂ ಇಲ್ಲದ ಸವಾಲುಗಳಿವೆ. ಈ ಸವಾಲುಗಳನ್ನು ಗುರುತಿಸಿ ಕನ್ನಡ ಭಾಷೆ-ಸಾಹಿತ್ಯ ನೆಲೆಗೊಳ್ಳುವಂತಾದರೆ ನೂರೊಂದು ವರ್ಷಗಳ ಬಾಳ್ವೆಯು ಸಾರ್ಥಕ.
ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗ ಇಂದಿನ ಕರ್ನಾಟಕ ಹುಟ್ಟಿರಲಿಲ್ಲ. ಆದರೂ ಅದು ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನಿಂದ ಜನ್ಮ ತಾಳಿದ್ದು ಒಂದು ಐತಿಹಾಸಿಕ ಆಕಸ್ಮಿಕ. ಹಳೆಯ ಮೈಸೂರು ರಾಜ್ಯದ ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗೌರವಾಧ್ಯಕ್ಷರಾಗಿ, ಅವರ ತಮ್ಮ ಆಗಿನ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಅಧ್ಯಕ್ಷರಾಗಿ ಉದಯವಾದ ಸಂಸ್ಥೆಯ ಒಟ್ಟು ಉದ್ದೇಶವು ಸಾಹಿತ್ಯಕ್ಕೆ ಪೂರಕವಾದ ಭಾಷೆ ಮತ್ತು ಕೃತಿಗಳನ್ನು ಬರೆಯಿಸುವುದು, ಪ್ರಕಟಿಸುವುದು, ಪ್ರೋತ್ಸಾಹ ಮತ್ತು ಪ್ರಚಾರ ಮಾಡುವುದು, ಚರ್ಚಿಸುವುದು, ಹೀಗೆ ಕನ್ನಡವನ್ನು ಅದರ ಎಲ್ಲ ಸಾಧ್ಯತೆಗಳೊಂದಿಗೆ ಬೆಳೆಸುವುದಾಗಿತ್ತು. ಇದರಲ್ಲಿ ಗ್ರಂಥಭಂಡಾರಗಳ, ವಾಚನಾಲಯಗಳ ಸ್ಥಾಪನೆ, ಸಾಹಿತಿಗಳನ್ನು ಗೌರವಿಸುವುದು, ಮುಂತಾದವೂ ಸೇರಿದ್ದವು. ಈ ಬಹುಮುಖೀ ಮಜಲುಗಳ ಕರ್ನಾಟಕ ಸಾಹಿತ್ಯ ಪರಿಷತ್ತು ತನ್ನ ಬೆಳ್ಳಿಹಬ್ಬದ ಹೊತ್ತಿಗೆ (1939) ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಹೊಂದಿತು. ಚೆಲುವ ಕನ್ನಡ ನಾಡು ಉದಯವಾಗುವ ಮೊದಲೇ ಕನ್ನಡ ಸಾಹಿತ್ಯ ಪರಿಷತ್ತು ಈ ಆಶಯವನ್ನು ಮೈಗೂಡಿಸಿಕೊಂಡಿತ್ತು. ಸೀಮಿತ ಸದಸ್ಯಬಲವನ್ನು ಹೊಂದಿದ್ದರೂ ಬಿಎಂಶ್ರೀ, ಡಿವಿಜಿ, ಮಾಸ್ತಿಯವರಂತಹ ಅತಿರಥ ಮಹಾರಥ ಸಾಹಿತಿಗಳನ್ನು,ವಿಶ್ವೇಶ್ವರಯ್ಯ, ಸರ್ ಮಿರ್ಝಾ ಇಸ್ಮಾಯೀಲ್ ಮುಂತಾದ ಸಾಂಸ್ಕೃತಿಕ ಸಿರಿವಂತರನ್ನು ಹೊಂದಿತ್ತು. ಈಗಿನಂತೆ ಪ್ರತೀ ವರ್ಷವಲ್ಲದಿದ್ದರೂ ಕನ್ನಡ ನೆಲದ ಮತ್ತು ನೆರೆಯ ಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಹಿರಿಯ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರೆಂಬ ಸ್ಥಾನವನ್ನು ನೀಡಿ ಗೌರವಿಸುವ ಪದ್ಧತಿಯನ್ನು ಆರಂಭಿಸಿತು. 20ನೆ ಶತಮಾನದ ಮೊದಲ ಅರ್ಧ ಓದುವಿಕೆಯ ಮತ್ತು ಸಾಹಿತ್ಯಾಭಿಮಾನದ ಸುವರ್ಣಯುಗ. ಮನೆಮನೆಗಳಲ್ಲೂ ಕನ್ನಡ ಕೃತಿಗಳನ್ನು ಓದುವ ಹವ್ಯಾಸವಿತ್ತು. ನನಗೆ ನೆನಪಿರುವಂತೆ ನಮ್ಮ ಹಳ್ಳಿಯ ಮನೆಗಳಲ್ಲಿ ಮಹಿಳೆಯರು ಅಪರಾಹ್ನ ನಿದ್ರಿಸುತ್ತಿರಲಿಲ್ಲ; ಬದಲಿಗೆ ಕೈಯಲ್ಲೊಂದು ಪುಸ್ತಕ ಹಿಡಿದು ಓದಿಕೊಂಡು ಕೂರುತ್ತಿದ್ದರು. ಸಂಪರ್ಕಸಾಧನಗಳಿಲ್ಲದ ಆ ಕಾಲದಲ್ಲಿ ಬಹಳಷ್ಟು ಸಾಹಿತಿಗಳ ಪರಿಚಯ ಪುಸ್ತಕಗಳ ಮೂಲಕವೇ ಆಗುತ್ತಿತ್ತು. ಆಗಿನ ಸಾಹಿತ್ಯ ಸಮ್ಮೇಳನಗಳು ಈಗಿನ ವೈಭವವನ್ನು ಹೊಂದಿರಲಿಲ್ಲ. ಇಂದು ಕಾಣುತ್ತಿರುವ ಎಲ್ಲರಿಗೂ ಭಾಷಣಗಳ ತುಡಿತ, ಆಗ ರಾಜಕಾರಣಿಗಳಲ್ಲಾಗಲಿ ಸಂಘಟಕರಲ್ಲಾಗಲಿ ಇರದೆ ಹಿರಿಯ ಸಾಹಿತಿ ಗಳ, ಉದ್ದಾಮ ವಿದ್ವಾಂಸರ ಮಾತುಗಳನ್ನು ಕೇಳಬೇಕೆಂಬ ಹಪಹಪಿಕೆ ಹೆಚ್ಚಿತ್ತು. ಸಾಹಿತ್ಯ ಸರಸ್ವತಿ ಸರಳವಾಗಿದ್ದಳು. ಲಕ್ಷ್ಮೀ ದೂರವೇ ಇದ್ದಳು. (ಇಂದಿನಂತೆ ಟಿವಿ ಮತ್ತಿತರ ಸುಲಭ ಸಾಧ್ಯ ಮನರಂಜನೆಗಳು ಆಗ ಇರಲಿಲ್ಲವೆಂಬುದೂ ಪ್ರಸ್ತುತ!)
ಇಪ್ಪತ್ತನೆ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯವನ್ನು ನವ್ಯ, ನವ್ಯೋತ್ತರ, ಬಂಡಾಯ, ದಲಿತ ಹೀಗೆ ಅನೇಕ ಇಸಂಗಳು ಆವರಿಸಿದವು ಮಾತ್ರವಲ್ಲ ಸಾಹಿತ್ಯದ ಜನಪರತೆಗೆ ಧಕ್ಕೆಯುಂಟುಮಾಡಬಲ್ಲ ಆತ್ಮರತಿ, ಪರಸ್ಪರ ಅನುಕೂಲತಂತ್ರ, ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದುಕೊಡಬಲ್ಲ ಪದನಿಮಿತ್ತ ಮತ್ತು ಪದವಿನಿಮಿತ್ತ ಪಂಡಿತ ಪರಂಪರೆ ಇವೆಲ್ಲ ಅತಿಯಾಗಿ ಬೆಳೆದವು. ಸಹಜವಾಗಿ ಆಪ್ತವಾಗಿರಬೇಕಾದ ಸಾಹಿತ್ಯ ಹೆಚ್ಚುಹೆಚ್ಚು ಬುದ್ಧಿಗಮ್ಯವಾಗಿ ವಿಚಾರಪರವಾಗಿ ಸಾಹಿತ್ಯಕ್ಕೆ ಅಗತ್ಯವಾದ ಭಾವ, ಮಾರ್ದವತೆಯನ್ನು ಕಳೆದುಕೊಳ್ಳಲಾರಂಭಿಸಿತು. ಪರಿಣಾಮವಾಗಿ ಒಂದು ಕೃತಿಯನ್ನು ಇದು ಯಾಕೆ ಚೆನ್ನಾಗಿದೆ ಎಂಬಂತೆ ವಿವರಿಸುವ, ಮತ್ತು ಕಾರಣ ಕೇಳುವ ನೋಟಿಸಿಗೆ ಉತ್ತರಿಸುವ ಧಾಟಿಯ ವಿಮರ್ಶೆಗಳು ಬರಲಾರಂಭಿಸಿದವು. ನಗರೀಕರಣ, ನಾಗರಿಕತೆ ಬೆಳೆದು ಪ್ರಕೃತಿ ದೂರವಾದ ಹೊತ್ತಿನಲ್ಲಿ ಸಂಸ್ಕೃತಿಯ ಸಂಕೇತವೆಂಬಂತೆ ಹಕ್ಕಿ, ಕಾಡು, ಬೆಟ್ಟ, ನದಿ ಹೀಗೆ ಕೆಲವು ಪರಾನುಭವಗಳನ್ನು ಸ್ವಂತವೆಂಬಂತೆ ವರ್ಣಿಸುವುದು ಹೆಚ್ಚಾಯಿತು. ಸಾಹಿತ್ಯವು ಗುಪ್ತಗಾಮಿನಿಯಂತೆ ಹರಿದು ಸಂಗಮಿಸುವುದರ ಬದಲಾಗಿ ರಾಜಧಾನಿಪರವಾಗಲಾರಂಭಿಸಿತು. ಹಳ್ಳಿಗಳು ಸಾಹಿತ್ಯದ ಪಾಲಿಗೆ ಬರಪೀಡಿತ ಪ್ರದೇಶಗಳಂತಾಗಿ ನಗರಕ್ಕೆ ಗುಳೇ ಹೋದರೆ ಮಾತ್ರ ಕೀರ್ತಿ ಲಭ್ಯವೆಂಬಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಈ ಜಾರುವಿಕೆಯನ್ನು, ವೇದಿಕೆಯ ಮೋಹವನ್ನು ತಡೆಯುವಲ್ಲಿ ಸಫಲವಾಗಲಿಲ್ಲ. ಪರಿಣಾಮವಾಗಿ ಒಂದೆಡೆ ಒಳ್ಳೆಯ ಆರ್ಷೇಯ ಕೃತಿಗಳು ಪ್ರಕಟವಾದರೂ ಪರಿಷತ್ತಿನ ಹೊಣೆಗೆ ಸ್ಪರ್ಧೆ ಆರಂಭ ವಾಯಿತು. ಸಾಹಿತ್ಯ-ಭಾಷೆಯ ಬದಲಿಗೆ ಸಂಘಟನೆಯೇ ಮುಖ್ಯವಾಯಿತು. ಸಾಹಿತಿಗಳೂ ಅಷ್ಟೇ: ಗೌರವ ಪಡೆಯಬೇಕಾದವರು ಹುಜೂರ್ ಎಂದು ದೀನರಾ ಗುವ ಸ್ಥಿತಿಯೂ ಉಂಟಾಯಿತು. ವಿಕೇಂದ್ರೀಕಣವು ಪ್ರಜಾತಂತ್ರದ ಕೃತಾರ್ಥ ಗುರಿ. ಗ್ರಾಮಸ್ವರಾಜ್ಯದಿಂದ ರಾಮರಾಜ್ಯವೆಂದು ಗಾಂಧಿ ಹೇಳುತ್ತಿದ್ದರಲ್ಲ! ಆದರೆ ಇಂದು ಮನೆಮನೆಯಲ್ಲಿ ರಾಜಕೀಯ; ಬಂಧುಗಳು ತಮ್ಮ ತಮ್ಮ ರಾಜಕೀಯಪಕ್ಷಗಳ ವಕ್ತಾರರಂತೆ ವ್ಯವಹರಿಸುವುದರಿಂದ ಸಾಮಾಜಿಕ ಶಾಂತಿ ಕದಡಿದೆ. ಇದೇ ರೀತಿಯಲ್ಲಿ ಸಾಹಿತ್ಯ ಪರಿಷತ್ತು ಕೂಡಾ ವಿಕೇಂದ್ರೀಕರಣಗೊಂಡು ಜಿಲ್ಲಾ-, ತಾಲೂಕು-, ಹೀಗೆ ವಿವಿಧ ಮಟ್ಟದಲ್ಲಿ ಪ್ರತಿಷ್ಠಿತವಾಗಿದೆ. ಉಳಿದಂತೆ ಹೋಬಳಿ, ಗ್ರಾಮ ಹೀಗೆ ಪರಿಷತ್ತಿನ ತೀರ ಚಿಕ್ಕ ಅಂಗಸಂಸ್ಥೆಗಳನ್ನು ಸ್ಥಾಪಿಸುವುದು ಪರಿಷತ್ತಿನ ಮತ್ತು ಅದರ ಕಾರ್ಯಭಾರದ ಮಹತ್ವವನ್ನು ಕಡಿಮೆಗೊಳಿಸುತ್ತಿದೆ. ಈಗೆಲ್ಲ ಹೋಬಳಿ ಪದಾಧಿಕಾರಿಯಾಗುವುದೂ ಒಂದು ಪ್ರತಿಷ್ಠೆಯಾಗುತ್ತಿದೆ. ಸಮ್ಮೇಳನಗಳು ಸ್ಥಾಪಿತ ಹಿತಾಸಕ್ತಿಯ ಈಡೇರಿಕೆಗೆ ವೇದಿಕೆಗಳಾಗಲಾರಂಭಿಸಿವೆ. ಹೀಗಾದರೆ ಸಾಹಿತ್ಯ ಅಂತರ್ಜಲದಂತೆ ಹರಿಯುವ ಬದಲಿಗೆ ಘನ ಘೋರ ಕರ್ಕಶತೆಯೊಂದಿಗೆ ಮೆರೆಯುತ್ತದೆ.
ಪುಸಕ್ತಗಳ ಓದುವಿಕೆಗೆ ಪರಿಷತ್ತು ಸಹಕಾರಿಯಾಗಬೇಕಾಗಿದೆ. ಇಂದಿಗೂ ಕನ್ನಡ ಸಾಹಿತ್ಯ ಪರಿಷತ್ತು ಯಾಂತ್ರಿಕ ವಾಗಿಯಾದರೂ ಸರಿಯೆ, ಒಳ್ಳೆಯ ಅನೇಕ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಆದರೆ ಅಷ್ಟೇ ಅಥವಾ ಅದಕ್ಕೂ ಮಿಕ್ಕಿ ಕಳಪೆ ಕೃತಿಗಳೂ ಪ್ರಕಟವಾಗುತ್ತಿವೆ. ಪಿಎಚ್‌ಡಿ ಮಹಾ ಪ್ರಬಂಧ ಗಳೆಂಬ ಒಂದೇ ಕಾರಣಕ್ಕೆ ಪ್ರಕಟವಾಗಿರುವ ಕೆಟ್ಟ ಪುಸ್ತಕಗಳೂ ಇವೆ. ಜೊತೆಗೆ ಕನ್ನಡ ಪುಸ್ತಕಗಳು ಪರಿಷತ್ತಿನ ಮೂಲಕ ಮಾತ್ರವಲ್ಲ, ವಿಶ್ವವಿದ್ಯಾನಿಲಯಗಳ, ಪುಸ್ತಕ ಪ್ರಾಧಿಕಾರಗಳ, ಮತ್ತಿತರ ಸರಕಾರಿ ಕೃಪಾಪೋಷಿತ ವ್ಯವಸ್ಥೆಗಳ ಮೂಲಕವೂ ಪ್ರಕಟವಾಗುತ್ತಿವೆ. ಆದರೆ ಸಮಸ್ಯೆ ಇರುವುದು ಈ ಪ್ರಕಟಣೆಯಲ್ಲಲ್ಲ. ಎಷ್ಟಾದರೂ ಕನ್ನಡ ಕೃತಿಗಳು; ಯಾರಾದರೂ ಓದಲಿ ಎಂದರೆ ಇತ್ತೀಚೆಗಿನ ವರ್ಷಗಳಲ್ಲಿ ಆಧುನಿಕತೆಯ ಪ್ರಭಾವದಿಂದಾಗಿ ಪುಸ್ತಕಗಳ ಪ್ರಕಟಣೆ ಸುಲಭವಾದರೂ ಓದುವವರ ಸಂಖ್ಯೆ ಕಡಿಮೆ ಯಾಗಿದೆ. ಈ ಅಭಿಪ್ರಾಯವನ್ನು ಒಪ್ಪದ ಒಂದು ವರ್ಗವು ಎಂದೂ ಇಲ್ಲದಷ್ಟು ಓದುಗರು ಇಂದು ಇದ್ದಾರೆ, ಅದಲ್ಲದಿದ್ದರೆ ಇಷ್ಟೊಂದು ಪತ್ರಿಕೆಗಳು, ಇಷ್ಟೊಂದು ನಿಯತಕಾಲಿಕಗಳು, ಮತ್ತು ಇಷ್ಟೊಂದು ಪುಸ್ತಕಗಳು ಪ್ರಕಟವಾಗಲು ಸಾಧ್ಯವಿಲ್ಲ ಎಂದು ವಾದಿಸುತ್ತದೆ. ಯಾರು ಸರಿ ಎಂಬುದು ಮುಖ್ಯವಲ್ಲ; ಯಾವುದು ಸರಿಯೆಂಬುದು ಮುಖ್ಯ. ಯಾರು ಬೇಕಾದರೂ ಬರೆಯಬಹುದಾಗಿದೆ. ಜ್ಞಾನದ ಸ್ಥಾನವನ್ನು ಮಾಹಿತಿ ಪಡೆದುಕೊಂಡಿದೆ ಎಂಬುದನ್ನು ನೆನಪಿಡಬೇಕಾಗಿದೆ; ಗಮನಿಸಬೇಕಾಗಿದೆ. ಅಂತರ್ಜಾಲದ ಮೂಲಕವಾಗಿ ಏನನ್ನಾದರೂ ಬರೆಯಬಹುದಾಗಿದೆ. ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪ್ರಚಾರ, ಪ್ರತಿಷ್ಠೆ, ಪ್ರಸಿದ್ಧಿ ಹೆಚ್ಚಾಗುತ್ತದೆಯೆಂಬ ಭ್ರಮೆಯಿದೆ. ಮಾಧ್ಯಮಗಳು ಕನಿಷ್ಠ ಪ್ರಕಟಣೆಯ/ಬಿಡುಗಡೆಯ ಆ ದಿನಕ್ಕಾದರೂ ಲೇಖಕನನ್ನು ಸುಲ್ತಾನನ್ನಾಗಿಸುತ್ತವೆ. ಎಷ್ಟು ಪ್ರತಿಗಳು ಯಾರನ್ನು ತಲುಪಿದವೆಂದು ಯಾರೂ ಕೇಳುವುದಿಲ್ಲ. ಮಾಧ್ಯಮಗಳಲ್ಲಿ ಸಂಬಂಧಿಸಿದವರು ಹೊಗಳಿಕೆಯ ವಿಮರ್ಶೆ ಬರೆಯುತ್ತಾರೆ. ಬರಹಗಾರನ ಆತ್ಮಕ್ಕೆ ಶಾಂತಿ ಲಭಿಸುತ್ತದೆ.
ತಮಾಷೆಗೆ ಹೇಳುವುದಿದೆ: ಇಂದಿನ ತಲೆಮಾರಿನ ಪೈಕಿ ಅನೇಕರು ಓದುವ ಒಂದೇ ಒಂದು ಪುಸ್ತಕವೆಂದರೆ ಫೇಸ್‌ಬುಕ್! ತಮಾಷೆಯಾದರೂ ಇದು ಸ್ವಲ್ಪ ಸತ್ಯ ವನ್ನು ಹೇಳುತ್ತಿದೆ. ಏಕೆಂದರೆ ಬಹಳಷ್ಟು ಮಂದಿಗೆ ನಮ್ಮ ಪರಂಪರೆಯ ಸಾಹಿತ್ಯದ ಪರಿ ಚಯವೇ ಇಲ್ಲದಂತಿದೆ ಮತ್ತು ಪರಿಚಯದ ಅಗತ್ಯವೇ ಇಲ್ಲದಂತಹ ವರ್ತನೆಯಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಓದುವಿಕೆಯನ್ನು ಹೇಗೆ ಉತ್ತೇಜಿಸಬಹುದು? ಜಳ್ಳು ಗೋಷ್ಠಿಗಳ ಮುಖಾಂತರವಲ್ಲ. ಪ್ರಾಮಾಣಿಕವಾದ ಅಧ್ಯಯನಶೀಲ ಉಪನ್ಯಾಸಗಳಿಂದ. ಕೃತಿಯ ಕುರಿತು ಉಪನ್ಯಾಸ ಮಾಡಲು ಬಂದವರು ಅದನ್ನು ಓದಿಕೊಳ್ಳದೇ ಬರಿಯ ಮುನ್ನುಡಿ, ಹಿನ್ನುಡಿ ಮತ್ತು ಅದರ ಕುರಿತು ಬಂದ ಕೆಲವು ಪರಿಚಯ ಲೇಖನಗಳನ್ನಷ್ಟೇ ಓದಿಕೊಂಡು (ಕೆಲವು ಬಾರಿ ಓದದೆಯೂ) ಕೃತಿಯ ಕುರಿತು ಏನನ್ನೂ ಹೇಳದೆ ತನ್ನನ್ನು ಮತ್ತು ತನ್ನ ಪರಿಚಯದ ಇತರ ಲೇಖಕರನ್ನು ಹೊಗಳುತ್ತ ವ್ಯರ್ಥಕಾಲಕ್ಷೇಪವನ್ನು ಮಾಡು ವುದು ಹೆಚ್ಚಾಗಿದೆ. ಜೊತೆಗೆ ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಧನ್ಯವಾದ ಮುಂತಾದ ಅನಗತ್ಯ ಕಾರ್ಯಸೂಚಿಗಳು ಬಹಳಷ್ಟು ಸಮಯವನ್ನು ಕೊಲ್ಲುತ್ತವೆ. ಸಮ್ಮೇಳನಗಳಲ್ಲಿ ಸಾಹಿತ್ಯದ ಬದಲಿಗೆ ಸಾಹಿತಿಗಳು ಮತ್ತು ಇನ್ನೂ ಮುಖ್ಯವಾಗಿ ಸಂಘಟಕರು ಮೆರವಣಿಗೆಗೊಳ್ಳುತ್ತಾರೆ! ಪರಿಣಾಮವಾಗಿ ಒಮ್ಮೆ ಬಂದ ಸಾಹಿತ್ಯಾಭಿಮಾನಿ ಬಿಸಿಹಾಲು ಸವಿದ ತೆನಾಲಿರಾಮನ ಬೆಕ್ಕಿನಂತೆ ಇನ್ನೊಮ್ಮೆ ಬಾರದೆ ಉಳಿದು ಹೇಗಾದರೂ ವ್ಯವಸ್ಥೆಯ ಭಾಗವಾಗುವ ಉದ್ದೇಶ ಹೊಂದಿದವನು ಮಾತ್ರ ಭಾಗವಹಿಸುತ್ತಾನೆ.
ಇದರ ಬದಲಿಗೆ ಮನಮುಟ್ಟುವ ರೀತಿಯ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳ ಬೇಕಾಗಿದೆ. ಎಲ್ಲ ಸಮ್ಮೇಳನಗಳಲ್ಲೂ ಸಾಹಿತ್ಯದ ಮುಖ್ಯರೂ ಉತ್ತಮರೂ ಇರಬೇಕಾಗಿದೆ. ಸತ್ವಯುತ ವ್ಯಕ್ತಿಗಳನ್ನು ನಿರ್ಮಮವಾಗಿ ಗೌರವಿಸಿ ಅವರನ್ನು ಹೆಚ್ಚುಹೆಚ್ಚು ಬಳಸಿಕೊಳ್ಳಬೇಕಾಗಿದೆ. ಆದ್ದರಿಂದ ಇವರಿಗೆ ಕಳೆದ ಬಾರಿ ಅವಕಾಶ ಕೊಟ್ಟಿದ್ದೇವೆ; ಈ ಬಾರಿ ಬೇಡ; ಎಂದೋ ಇವರಿಗೆ ಅವಕಾಶ ಸಿಕ್ಕಿಲ್ಲ; ಈ ಬಾರಿ ಅವಕಾಶ ಕೊಡೋಣ ಎಂದು ಸಾಹಿತಿಯಲ್ಲದ ವ್ಯಕ್ತಿಯೊಬ್ಬ ಅಧಿಕಾರದ ಬಲದಿಂದ ಹೇಳಿದರೆ ಅದು ಆ ಸಾಹಿತಿಗೂ ಸಾಹಿತ್ಯಕ್ಕೂ ಮಾಡುವ ಅಪಮಾನವಲ್ಲದೆ ಬೇರೇನೂಅಲ್ಲ. ಎಲ್ಲರಿಗೂ ಅವಕಾಶ ನೀಡುವುದಕ್ಕೆ ಪರಿಷತ್ತೇನೂ ರಾಜಕೀಯ ಸಂಸ್ಥೆಯಲ್ಲ. ಪುಸ್ತಕಗಳನ್ನು ವಿದ್ವಾಂಸರಿಂದ ಓದಿಸಬೇಕು; ಮಾತನಾಡಿಸಬೇಕು. ವ್ಯಕ್ತಿಪೂಜೆಯ ಬದಲಿಗೆ ಕೃತಿಪೂಜೆ ನಡೆಯಬೇಕು. ಇವೆಲ್ಲ ಒಮ್ಮೆಲೇ ನಿಲ್ಲುತ್ತಾವೆಂದಾಗಲಿ ಸಿದ್ಧಿಸುತ್ತಾವೆಂದಾಗಲಿ ಅರ್ಥವಲ್ಲ. ಆದರೆ ಇಂದಿನ ಗೊಂದಲಮಯ ಸಾಂಸ್ಕೃತಿಕ ಕಾಲಮಾನದಲ್ಲಿ ಎಲ್ಲವನ್ನೂ ಎಲ್ಲರನ್ನೂ ಸರಿ ದಾರಿಗೆ ತರುವುದು ಅಸಾಧ್ಯ. ಆದರೆ ಈಗಿನ ಸ್ಥಿತಿ ಇದಕ್ಕಿಂತ ಶೋಚನೀಯವಾಗದಂತೆ ತಡೆಯುವುದೂ ಒಂದು ಮಹತ್ಸಾಧನೆಯೇ ಸರಿ. ಆ ದಿಶೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೆಜ್ಜೆಯಿಡಬೇಕಾಗಿದೆ.