ಸಿಗ್ನಲ್ ಪ್ರದೇಶಗಳಲ್ಲಿ ಬಾಲ ಕಾರ್ಮಿಕರು, ಅಂಬೇಡ್ಕರ್ ಸ್ಮಾರಕ ಇನ್ನಷ್ಟು ವಿಳಂಬ

Update: 2016-05-09 18:28 GMT

ರೈಲುಗಳಲ್ಲಿ ಭಜನೆ ವಿರುದ್ಧ ಕ್ರಮಕ್ಕೆ ಸಿದ್ಧತೆ
ಮುಂಬಯಿ ಲೋಕಲ್ ರೈಲುಗಳಲ್ಲಿ ಭಜನಾ ಮಂಡಳಿಗಳು ಬೆಳಗ್ಗೆ ಮತ್ತು ಸಂಜೆಗೆ ಸಕ್ರಿಯರಾಗಿರುವುದು ಪ್ರಯಾಣಿಕರಿಗೆಲ್ಲ ಗೊತ್ತು. ಲೋಕಲ್ ರೈಲುಗಳ ಭಜನಾ ತಂಡಗಳಿಗೆ ತಮ್ಮದೇ ಆದ ವಿಶೇಷತೆ ಇದೆ. ದಸರಾ - ದೀಪಾವಳಿ ಸಂದರ್ಭಗಳಲ್ಲಿ ತಾವು ಭಜನೆ ಹಾಡುವ ಬೋಗಿಯನ್ನು ಶೃಂಗರಿಸುತ್ತಾರೆ. ರೈಲೊಳಗೆ ವಾರ್ಷಿಕೋತ್ಸವ ಆಚರಿಸುತ್ತಾರೆ. ಸಾಧಾರಣವಾಗಿ ಮರಾಠಿ ಮತ್ತು ಗುಜರಾತಿ ಭಜನೆಗಳಿಗೆ ಹೆಚ್ಚಿನ ಆದ್ಯತೆ. ತಾಳ ಮತ್ತಿತರ ಭಜನಾ ಪರಿಕರಗಳನ್ನೂ ಅವರು ತರುತ್ತಾರೆ. ಜೋರಾಗಿ ಸದ್ದು ಮಾಡುತ್ತಾ, ತಾಳ ಬಡಿಯುತ್ತಾ ಭಜನೆ ಹಾಡುತ್ತಾ ತಮ್ಮ ಒಂದೆರಡು ಗಂಟೆಗಳ ಪ್ರಯಾಣದ ಅವಧಿಯನ್ನು ಕಳೆಯುತ್ತಾರೆ. ಇದು ಕೆಲವೊಮ್ಮೆ ಸಹಪ್ರಯಾಣಿಕರಿಗೆ ಕಿರಿಕಿರಿಯೂ ಆಗುವುದಿದೆ. ಆಗಾಗ ರೈಲ್ವೆ ಈ ಭಜನೆಯನ್ನು ನಿಲ್ಲಿಸಲು ನಿರ್ಧರಿಸಿದರೆ ಭಜನಾ ತಂಡಗಳ ತೀವ್ರ ವಿರೋಧದಿಂದ ರೈಲ್ವೆ ಹಿಂದೆ ಸರಿಯುತ್ತಾ ಬಂದಿದೆ.
ಇದೀಗ ಪ್ರಯಾಣಿಕರ ಸುರಕ್ಷೆಯನ್ನು ಗಮನದಲ್ಲಿರಿಸಿ ಮತ್ತೆ ಲೋಕಲ್ ರೈಲುಗಳಲ್ಲಿ ಭಜನಾ ಮಂಡಳಿಗಳಿಗೆ ಲಗಾಮು ಹಾಕುವ ತಯಾರಿ ನಡೆಯುತ್ತಿದೆ. ಪ್ರಯಾಣಿಕರ ಸುರಕ್ಷೆಗಾಗಿ ಮುಂಬೈ ರೈಲ್ವೆ ಪೊಲೀಸ್ ವತಿಯಿಂದ ಇತ್ತೀಚೆಗೆ ಇಂಟರ್‌ನೆಟ್‌ನ ಆಧಾರಿತ ಅಪ್ಲಿಕೇಶನ್ ಲಾಂಚ್ ಮಾಡಲಾಗಿದೆ. ಅನಂತರ ರೈಲುಪ್ರಯಾಣಿಕರ ವತಿಯಿಂದ ಅನೇಕ ಪ್ರಕಾರದ ದೂರುಗಳು ಇಲ್ಲಿ ದಾಖಲಾಗುತ್ತಿದೆ. ಪ್ರಯಾಣಿಕರಲ್ಲಿ ಕೆಲವರು ಗುಟ್ಕಾ ತಿಂದು ಉಗುಳುವುದು, ಸೀಟನ್ನು ಕೊಳಕು ಮಾಡುವುದು, ಫ್ಯಾನ್ ತಿರುಗುತ್ತಿಲ್ಲ.... ಇತ್ಯಾದಿ ದೂರುಗಳು, ಭಜನಾ ಮಂಡಳಿಗಳ ದಾದಾಗಿರಿಯಂತಹ ದೂರುಗಳೂ ಇಲ್ಲಿ ಬರುತ್ತಿವೆ. ಇದನ್ನು ಗಮನಿಸಿ ಜಿಆರ್‌ಪಿ, ರೈಲ್ವೆ ಸುರಕ್ಷಾ ಪಡೆಯ (ಆರ್.ಪಿ.ಎಫ್) ಜೊತೆಗೂಡಿ ಭಜನಾ ಮಂಡಳಿಗಳ ಹೆಸರಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ ಕೂಡಾ ತಯಾರಾಗುತ್ತಿದೆ.
ಕೆಲವರ್ಷಗಳ ಹಿಂದೆ ಈಗಿನ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ ನಿರೂಪಮ್ ಅಂದು ಶಿವಸೇನೆಯಲ್ಲಿದ್ದಾಗ ಭಜನಾ ಮಂಡಳಿಗಳ ವಿರುದ್ಧ ಕ್ರಮಕ್ಕೆ ಪೊಲೀಸರು ಇಳಿದಾಗ ದೊಡ್ಡ ಆಂದೋಲನವನ್ನೇ ಹಮ್ಮಿಕೊಂಡು ಭಜನೆಯನ್ನು ಮುಂದುವರಿಸಿದ್ದರು.
***
ಸಿಗ್ನಲ್ ಪ್ರದೇಶಗಳಲ್ಲಿ ಅತೀ ಹೆಚ್ಚು ಬಾಲ ಕಾರ್ಮಿಕರು
ಬಾಲ ಶ್ರಮಿಕರು ಅತಿಹೆಚ್ಚು ಎಲ್ಲಿ ಕಾಣಸಿಗುತ್ತಾರೆ? ಸರಕಾರ ಈ ಬಗ್ಗೆ ಅನೇಕ ರೀತಿಯಲ್ಲಿ ಅಭಿಯಾನ ನಡೆಸುತ್ತಲೇ ಇದೆ.

ಮುಂಬೈಯಲ್ಲಿ ಶಾಲೆಯನ್ನು ತ್ಯಜಿಸಿದ ಮಕ್ಕಳ ಶಿಕ್ಷಣಕ್ಕಾಗಿ ಕೆಲಸ ಮಾಡುವ ಸಂಸ್ಥೆ ಪ್ರಥಮ್‌ನಿಂದ ದೊರೆತ ಅಂಕಿ ಅಂಶದ ಅನುಸಾರ, ಮುಂಬೈಯಲ್ಲಿ ಎಲ್ಲಕ್ಕಿಂತ ಅಧಿಕ ಬಾಲಕಾರ್ಮಿಕರು ಸಿಗ್ನಲ್‌ಗಳಲ್ಲಿ ಕಂಡು ಬರುತ್ತಾರಂತೆ. ಈ ಸಂಸ್ಥೆಯು ರೈಲ್ವೆ ಸ್ಟೇಷನ್ ಸಿಗ್ನಲ್ ಮತ್ತು ಟೂರಿಸ್ಟ್ ಸ್ಥಳಗಳಲ್ಲಿ ತಿರುಗುತ್ತಿರುವ ಮಕ್ಕಳ ಒಂದು ಸರ್ವೇ ನಡೆಸಿದೆ. ಅಲ್ಲಿ ಈ ಮಾತು ಬೆಳಕಿಗೆ ಬಂದಿದೆ. ಸಂಸ್ಥೆಯ ಸ್ಥಾಪಕ ಫರೀದಾ ಲಾಂಬೆ ಅವರು ತಿಳಿಸಿದಂತೆ ಸಿಗ್ನಲ್‌ಗಳಲ್ಲಿ ನೂರಾರು ಜನ ಹಾದು ಹೋಗುವುದರಿಂದ ಈ ಪರಿಸರ ಮಕ್ಕಳ ಮಾರಾಟಕ್ಕೂ ಅನುಕೂಲವಾಗಿದೆ. ಅವರಿಗೆ ಬೇಕಾದ ಗ್ರಾಹಕರು ಸಿಗುತ್ತಾರೆ. ಭಿಕ್ಷೆ ಬೇಡುವ ಮಕ್ಕಳಿಗೂ ಯಾರಾದರೂ ಸಿಗುತ್ತಾರೆ ಎನ್ನುತ್ತಾರೆ. ಈ ಮಕ್ಕಳಲ್ಲಿ 6ರಿಂದ 14ವರ್ಷದ ನಡುವಿನವರು ಹೆಚ್ಚಿದ್ದಾರೆ. ಸಂಸ್ಥೆಯು ರೈಲ್ವೆ ಫ್ಲ್ಯಾಟ್‌ಫಾರ್ಮ್, ಪ್ರವಾಸಿ ತಾಣ, ಸಿಗ್ನಲ್‌ಗಳಲ್ಲಿ ಒಟ್ಟು 651 ಮಕ್ಕಳ ಸರ್ವೇ ನಡೆಸಿತ್ತು. ಇವರಲ್ಲಿ 342 ಹುಡುಗರು, 309 ಹುಡುಗಿಯರು ಕಂಡು ಬಂದರು. ಶೇ. 47 ಮಕ್ಕಳು ಸಿಗ್ನಲ್ ಬಳಿ, ಶೇ. 29 ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮತ್ತು ಶೇ. 24 ಪರ್ಯಟನ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಕಂಡುಬಂದರು.
ಪ್ರತೀ ಮಕ್ಕಳಿಗೂ ಶಿಕ್ಷಣ ಒದಗಿಸುವುದಕ್ಕೆ ಕೇಂದ್ರ ಸರಕಾರ 2009ರಲ್ಲಿ ಶಿಕ್ಷಣ ಅಧಿಕಾರ ಅಧಿನಿಯಮ ಕಾನೂನು ಮಾಡಿದೆ. ಆದರೆ ಅದೀಗಲೂ ಕಾರ್ಯಗತವಾದಂತೆ ಕಾಣುತ್ತಿಲ್ಲ.
* * *
ವಿಮಾನ ನಿಲ್ದಾಣಗಳಲ್ಲಿ ಎಂ.ಆರ್.ಪಿ. ದರಕ್ಕಿಂತ
ಹೆಚ್ಚಿಗೆ ವಸೂಲಿ : 16 ಕೇಸು ದಾಖಲು
ಮುಂಬೈ ವಿಮಾನ ನಿಲ್ದಾಣದಲ್ಲಿ ಎಂ.ಆರ್.ಪಿ. ದರಕ್ಕಿಂತ ಹೆಚ್ಚು ದರವನ್ನು ವಸೂಲಿ ಮಾಡಿದ 16 ಕೇಸುಗಳನ್ನು ದಾಖಲಿಸಲಾಗಿದೆ. ವಿಮಾನ ನಿಲ್ದಾಣ ಆಗಿದ್ದರೂ ನೀರಿನ ಬಾಟಲಿಗೆ 50 ರೂಪಾಯಿ ವಸೂಲಿ ಮಾಡುವುದಕ್ಕೆ ಅರ್ಥ ಏನು? ಅತ್ತ ವಿಮಾನ ಕಂಪೆನಿಗಳು ಪ್ರಯಾಣಿಕರು ತರುವ ಲಗೇಜ್‌ನ ಭಾರದಲ್ಲೂ ಇಳಿಕೆ ಮಾಡಿದೆ. ಇನ್ನೊಂದೆಡೆ ನಿಲ್ದಾಣದೊಳಗಿನ ತೂಕದ ಯಂತ್ರದ ವಂಚನೆಯ ವಿರುದ್ಧವೂ ದೂರುಗಳಿವೆ. ಪ್ರಯಾಣಿಕರ ಲಗ್ಗೇಜ್ ಭಾರಕ್ಕಿಂತ ಹೆಚ್ಚು ತೋರಿಸುತ್ತಿದೆಯಂತೆ ಹಾಗೂ ಅಂತಹ ಪ್ರಯಾಣಿಕರಿಂದ ಹೆಚ್ಚಿನ ವಸೂಲಿ ಮಾಡಲಾಗುತ್ತಿದೆ. ಇಂತಹ ದೂರುಗಳ ಮಾಹಿತಿ ಲೀಗಲ್ ಮೆಟ್ರೋಲಾಜಿಯ ಕಂಟ್ರೋಲರ್ ಮತ್ತು ಪೊಲೀಸ್‌ನ ವಿಶೇಷ ಇನ್ಸ್ ಪೆಕ್ಟರ್ ಜನರಲ್ (ಐಜಿ) ಅಮಿತಾಬ್ ಗುಪ್ತಾ ನೀಡಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ವಿಶೇಷ ಅಭಿಯಾನ ನಡೆಸಿದ್ದು ಈ ದೂರುಗಳು ನಿಜ ಎಂದು ತಿಳಿದುಕೊಂಡಿದ್ದಾರೆ. ಹಾಗೂ ಅನೇಕ ಸ್ಟಾಲ್ ಮತ್ತು ಶಾಪ್‌ಗಳ ತನಿಖೆಯ ನಂತರ ಒಟ್ಟು 16 ಕೇಸುಗಳನ್ನು ಈಗಾಗಲೇ ದಾಖಲಿಸಲಾಗಿವೆ. ಮುಂಬೈ ವಿಮಾನ ನಿಲ್ದಾಣದಲ್ಲಿ 3 ಕೇಸ್ ದಾಖಲಾಗಿವೆ. ಅದೇ ರೀತಿ ತೂಕದ ಯಂತ್ರ ಹಾಳಾದ 4 ಕೇಸ್‌ಗಳು ದಾಖಲಾಗಿವೆ. ಹಲವು ವಿಮಾನ ಕಂಪೆನಿಗಳಿಗೂ ತೂಕ ಮಾಡುವ ಮೆಶಿನ್ ಹಾಳಾಗಿರುವ ಬಗ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
* * *
ಅಂಬೇಡ್ಕರ್ ಸ್ಮಾರಕ : ಇನ್ನಷ್ಟು ವಿಳಂಬ
ದಾದರ್‌ನ ಇಂದು ಮಿಲ್‌ನಲ್ಲಿ ನಿರ್ಮಾಣವಾಗಲಿರುವ ಭಾರತರತ್ನ ಬಾಬಾ ಸಾಹೇಬ ಅಂಬೇಡ್ಕರ್‌ರ ಸ್ಮಾರಕದ ನಿರ್ಮಾಣದಲ್ಲಿ ಇನ್ನಷ್ಟು ತಡವಾಗುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ದಲಿತ ನೇತಾರರಲ್ಲಿ ಸ್ಮಾರಕದ ಡಿಸೈನ್‌ನ್ನು ಮುಂದಿಟ್ಟು ಈ ತನಕವೂ ಏಕಮತದ ಅಭಿಪ್ರಾಯ ಮೂಡದೆ ಇರುವುದಾಗಿದೆ. ದಲಿತ ನಾಯಕರು ಸ್ಮಾರಕದ ಡಿಸೈನ್ ವಿಷಯದಲ್ಲಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಒಂದು ವೇಳೆ ಸರಕಾರ ಈ ಸಲಹೆಗಳನ್ನು ಒಪ್ಪಿದರೆ ಸ್ಮಾರಕದ ಡಿಸೈನ್ ಹೊಸ ರೀತಿಯಲ್ಲಿ ರಚಿಸಬೇಕಾಗುವುದು. ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಮಂತ್ರಿ ರಾಜ್‌ಕುಮಾರ್ ಬರೋಲೆ ಈ ಮಾತನ್ನು ಪುಷ್ಟೀಕರಿಸಿದ್ದಾರೆ. ಇತ್ತೀಚೆಗೆ ಪೀಪಲ್ಸ್ ರಿಪಬ್ಲಿಕನ್ ಪಾರ್ಟಿಯ ನೇತಾ ಮತ್ತು ವಿಧಾನ ಪರಿಷತ್ ಸದಸ್ಯ ಜೋಗೇಂದ್ರ ಕಾವಡೆ, ಆರ್.ಪಿ.ಐ, ಎ ಯ ಅವಿನಾಶ್ ಮಹಾತೆಕರ್ ಜೊತೆಗೆ ಅನ್ಯ ನೇತಾರರೂ ಮಂತ್ರಿಯವರ ಜೊತೆ ಬೈಠಕ್‌ನಲ್ಲಿ ಪಾಲ್ಗೊಂಡಿದ್ದರು. ಈ ನೇತಾರರು ಸ್ಮಾರಕದ ರೂಪದಲ್ಲಿ ನಿರ್ಮಿಸಲಾಗುವ ಬೌದ್ಧ ಸ್ತೂಪದ ಪ್ರಾರೂಪವನ್ನು ಮುಂದಿಟ್ಟು ಆಕ್ಷೇಪಣೆ ದಾಖಲಿಸಿದ್ದರು. ಯಾಕೆಂದರೆ ಪ್ರಾಸ್ತಾವಿತ ಡಿಸೈನ್ ಸ್ತೂಪದ ರೀತಿಯಲ್ಲೇ ಇಲ್ಲವಂತೆ. ಸ್ಮಾರಕ ಸ್ಥಳದಲ್ಲಿ ಪ್ರಾಸ್ತಾವಿತ ಭೂಗತ ಕಾರ್ ಪಾರ್ಕಿಂಗ್‌ಗೂ ವಿರೋಧ ವ್ಯಕ್ತಪಡಿಸಲಾಗಿದೆ.
* * *
ರಜೆ ಬೇಕಿದ್ದರೆ ವಿವಾಹದ ಕಾರ್ಡ್ ಅರ್ಜಿಯಲ್ಲಿರಿಸಿ

ಮುಂಬೈ ಪೊಲೀಸರಿಗೆ ಈ ಸೀಜನ್‌ನಲ್ಲಿ ರಜೆ ದೊರೆಯುವುದು ಕಷ್ಟವಾಗುತ್ತಿದೆ. ಕೆಲವರಿಗೆ ಊರಿಗೆ ಹೋಗುವುದಕ್ಕೋ, ಇನ್ನು ಕೆಲವರಿಗೆ ಕುಟುಂಬದ ಕಾರ್ಯಕ್ರಮಗಳಿಗೋ ರಜೆ ಬೇಕಾಗುತ್ತದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಇದಕ್ಕೆ ತಡೆ ಹೇರಿದ್ದಾರೆ. ಅನೇಕ ಪೊಲೀಸರು ತಮಗೆ ರಜೆ ಬೇಕೆಂದು ಅರ್ಜಿ ಹಾಕಿದ್ದಾರೆ. ಆದರೆ ಅಧಿಕಾರಿಗಳು ರಜೆ ನೀಡುತ್ತಿಲ್ಲ. ಯಾರೆಲ್ಲ ಮದುವೆ ಕಾರ್ಯಕ್ರಮಕ್ಕೆ ಹೋಗುವುದಿದೆ ಅಂದಿದ್ದಾರೋ ಅವರಿಗೆಲ್ಲ ವಿವಾಹದ ಕಾರ್ಡ್‌ಗಳನ್ನು ಪತ್ರದ ಜೊತೆ ಇರಿಸುವಂತೆ ಸೂಚಿಸಲಾಗಿದೆ. ರಜೆ ಅಪೇಕ್ಷೆಯ ಎಲ್ಲ ಪೊಲೀಸರು ಈ ನಿಯಮ ಪಾಲಿಸಬೇಕಂತೆ. ಈ ದಿನಗಳಲ್ಲಿ ದಕ್ಷಿಣ ಮುಂಬೈಯ ಹೆಚ್ಚುವರಿ ಕಮಿಶನರ್ ಆಫೀಸ್‌ಗೆ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್ಟೇಬಲ್‌ಗಳು ರಜೆ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಇದು ಈ ವಿಭಾಗಕ್ಕೆ ಚಿಂತೆಯ ವಿಷಯವಾಗಿದೆ. ಎಲ್ಲರಿಗೂ ಒಂದು ವೇಳೆ ರಜೆ ನೀಡಿದ್ದೇ ಆದರೆ ನಗರದ ಸುರಕ್ಷಾ ಬಂದೋಬಸ್ತ್ ವ್ಯವಸ್ಥೆಯಲ್ಲಿ ಭಾರೀ ಸಮಸ್ಯೆ ಎದುರಾಗಲಿದೆಯಂತೆ. ಸಾಕ್ಷಿ ಆಧಾರ ಇರಿಸದ ರಜಾ ಅರ್ಜಿಗಳನ್ನು ವಾಪಸ್ ಮಾಡಲಾಗಿದೆ.
* * *
ಕರ್ನಾಟಕದ ಮಾವಿಗೂ ಬೇಡಿಕೆ
ಹಣ್ಣುಗಳ ರಾಜ ಕೊಂಕಣದ ಆಪುಸ್ ಮಾವಿನ ಹಣ್ಣುಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇವೆ. ಕಳೆದ ಬಾರಿ ಮಾರುಕಟ್ಟೆಯಲ್ಲಿ ಉತ್ತರ ಕರ್ನಾಟಕದ ಮಾವಿನ ಹಣ್ಣುಗಳು ಬಂದಾಗ ಕೆಲವು ಅಂಗಡಿ ವ್ಯಾಪಾರಿಗಳು ಅವುಗಳನ್ನೇ ಕೊಂಕಣದ ಮಾವಿನ ಹಣ್ಣುಗಳೆಂದು ಮಾರಿದ್ದು ಅನಂತರ ವಿವಾದ ಹುಟ್ಟಿಕೊಂಡದ್ದು ಎಲ್ಲಾ ನಡೆದಿತ್ತು.
 ಆದರೆ ಈ ಬಾರಿ ಕರ್ನಾಟಕದ ಮಾವಿನ ಹಣ್ಣುಗಳಿಗೂ ಬೇಡಿಕೆ ಬಂದಿದೆ. ಎ.ಪಿ.ಎಂ.ಸಿ. ವಾಶಿ ಮಾರುಕಟ್ಟೆಯ ವ್ಯಾಪಾರಿಗಳ ಅನುಸಾರ ಕೊಂಕಣದ ಆಪುಸ್ ಮಾವಿನ ಹಣ್ಣುಗಳ ಉತ್ಪಾದನೆ ಈ ಬಾರಿ ಕಡಿಮೆ ಆಗಿರುವುದರಿಂದ ಕರ್ನಾಟಕದ ಮಾವಿನ ಹಣ್ಣುಗಳಿಗೆ ಬೇಡಿಕೆ ಬಂದಿದೆ.
 ಮಹಾರಾಷ್ಟ್ರದಲ್ಲಿ ಒಂದು ಲಕ್ಷ ಕೋಟಿ ಬಾಕ್ಸ್ ಮಾವಿನ ಹಣ್ಣುಗಳು ಉತ್ಪಾದನೆಯಾಗುತ್ತವೆ. ಆದರೆ ಈ ವರ್ಷ ಉತ್ಪಾದನೆಯಲ್ಲಿ ಶೇ. 50 ಕಡಿಮೆಯಾಗಿದೆ. ಒಂದು ಬಾಕ್ಸ್‌ನಲ್ಲಿ ಸಾಧಾರಣವಾಗಿ 4 ರಿಂದ 9 ಡಜನ್‌ಗಳಷ್ಟು ಮಾವಿನ ಹಣ್ಣುಗಳು ಇರುತ್ತವೆ. ಕೊಂಕಣದ ಆಪುಸ್‌ನ ಬೆಲೆ ಕಿಲೋಗೆ ಕನಿಷ್ಠ 100 ರಿಂದ 200 ರೂಪಾಯಿ ದರವಿದ್ದರೆ ಕರ್ನಾಟಕದ ಆಪುಸ್ ಮಾವಿನಹಣ್ಣಿನ ಬೆಲೆ 50 ರಿಂದ 90 ರೂಪಾಯಿ ಇರುತ್ತದೆ ಎನ್ನುತ್ತಾರೆ ಎ.ಪಿ.ಎಂ.ಸಿ.ಯ ಮಾಜಿ ನಿರ್ದೇಶಕ ಸಂಜಯ್ ಪನ್ಸಾರೆ. ಹೀಗಾಗಿ ಈ ಬಾರಿ ಎಪಿಎಂಸಿಯಲ್ಲಿ ಹೆಚ್ಚಿನ ಆಪುಸ್ ಮಾವಿನ ಹಣ್ಣುಗಳು ಕರ್ನಾಟಕದ್ದೇ ಇವೆ. ಕಡಿಮೆ ಬೆಲೆ ಇರುವ ಕಾರಣ ಜನರು ಇದನ್ನೇ ಖರೀದಿಸಲು ಇಷ್ಟ ಪಡುತ್ತಿದ್ದಾರೆ. ಇವುಗಳಲ್ಲಿ ಹುಬ್ಬಳ್ಳಿ - ಧಾರವಾಡಗಳ ಮಾವಿನ ಹಣ್ಣುಗಳು ಇರುತ್ತವೆ. ಕೊಂಕಣದ ಮತ್ತು ಕರ್ನಾಟಕದ ಮಾವಿನ ಹಣ್ಣುಗಳ ವ್ಯತ್ಯಾಸ ಎಂದರೆ ಇವುಗಳ ಸ್ವಾದ ಮತ್ತು ಪರಿಮಳ.
 * * *
ಪಿಸ್ತೂಲ್‌ಗಿಂತಲೂ ಹೆಚ್ಚು ಬ್ಲೇಡ್ ಮೇಲೆ ಭರವಸೆ!

ಅಂಡರ್ ವರ್ಲ್ಡ್ ಕಂಪೆನಿಯ ಸದಸ್ಯರಿಗೆ ಈ ದಿನಗಳಲ್ಲಿ ಹೊಸ ಆಟೋಮ್ಯಾಟಿಕ್ ಶಸ್ತ್ರಗಳ ಮೇಲೆ ಭರವಸೆ ಇಲ್ಲವಂತೆ. ಈ ಮಾತು ಇತ್ತೀಚೆಗೆ ಮುಂಬೈಯ ಹಫ್ತಾ ನಿಗ್ರಹ ಘಟಕದ ಅಧಿಕಾರಿಗಳು ಬಂಧಿಸಿದ ಗ್ಯಾಂಗ್‌ಸ್ಟರ್‌ಗಳ ತನಿಖೆಯಿಂದ ತಿಳಿದು ಬಂದಿದೆ. ಯಾಕೆಂದರೆ ಪೊಲೀಸರಿಗೆ ಈ ಗ್ಯಾಂಗ್‌ಸ್ಟರ್‌ಗಳ ಬಳಿ ಸರ್ಜಿಕಲ್ ಬ್ಲೇಡ್ ದೊರಕಿತ್ತು. ಇವರೆಲ್ಲ ಒಬ್ಬ ಬಿಲ್ಡರ್‌ನ ಹತ್ಯೆಯ ಷಡ್ಯಂತ್ರ ರಚಿಸುತ್ತಿದ್ದಾಗ ಬಂಧಿಸಲ್ಪಟ್ಟರು. ಆಟೋಮ್ಯಾಟಿಕ್ ಪಿಸ್ತೂಲ್ ಅಗತ್ಯದ ಸಂದರ್ಭದಲ್ಲಿ ಲಾಕ್ ಆಗಬಹುದಂತೆ. ಹೀಗಾಗಿ ಸರ್ಜಿಕಲ್ ಬ್ಲೇಡ್‌ನ ಉಪಯೋಗಕ್ಕೆ ತೀರ್ಮಾನಿಸಿದ್ದೆವು ಎಂದು ಗ್ಯಾಂಗ್‌ಸ್ಟರ್‌ಗಳು ತಿಳಿಸಿದ್ದಾರೆ. ಪೊಲೀಸ್ ಉಪಾಯುಕ್ತ ಧನಂಜಯ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಹಫ್ತಾ ನಿಗ್ರಹ ಘಟಕದ ವರಿಷ್ಠ ಪೊಲೀಸ್ ನಿರೀಕ್ಷಕ ವಿನಾಯಕ್ ವಲ್ಸ್ ತಂಡವು ಜೋಗೇಶ್ವರಿಯ ಒಂದು ಹೊಟೇಲ್‌ನಲ್ಲಿ ಪ್ರಮುಖ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಿದ್ದರು. ಇವರ ಬಳಿ ಪಿಸ್ತೂಲ್ ಜೊತೆ ಸರ್ಜಿಕಲ್ ಬ್ಲೇಡ್ ಕೂಡಾ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News