ಹೇಳಿದ್ದು ಬ್ಯಾಂಕ್ ಗೆ , ಆದರೆ ಸಾಗಿಸಿದ್ದು ಬೇರೆ ಉದ್ದೇಶಕ್ಕೆ !

Update: 2016-05-14 08:16 GMT

ಕೊಯಂಬತ್ತೂರು, ಮೇ 14: ಮೂರು ಕಂಟೇನರ್ ಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು  570 ಕೋಟಿ ರೂ. ಹಣವನ್ನು ತಮಿಳುನಾಡಿನ ಚುನಾವಣಾ ಅಧಿಕಾರಿಗಳು ಶನಿವಾರ ಬೆಳಗ್ಗಿನ ಜಾವ ತಿರುಪುರ್ ಜಿಲ್ಲೆಯ ಪೆರುಮನ್ನಲ್ಲೂರು-ಕುನ್ನತ್ತೂರು ಬೈಪಾಸ್ ಸಮೀಪ ವಶಪಡಿಸಿಕೊಂಡಿದ್ದಾರೆ.

ಈ ಕಂಟೇನರ್ ಗಳು ಹಾಗೂ ಮೂರು ಬೆಂಗಾವಲು ಕಾರುಗಳನ್ನು ಅಧಿಕಾರಿಗಳು ನಿಲ್ಲಲು ಸಂಜ್ಞೆ ಮಾಡಿದಾಗ ನಿಲ್ಲಿಸದೇ ಪರಾರಿಯಾಗಲೆತ್ನಿಸಿದಾಗ ಅವರನ್ನು ಬೆಂಬತ್ತಿ ಹಿಡಿಯಬೇಕಾಗಿ ಬಂತು.

ಈ ಕಂಟೇನರ್ ಗಳಿಗೆ ಬೆಂಗಾವಲಾಗಿ ಸಾಗುತ್ತಿದ್ದ ಮೂರು ಕಾರುಗಳಲ್ಲಿದ್ದವರು ಸಮವಸ್ತ್ರದಲ್ಲಿಲ್ಲದಿದ್ದರೂ ತಾವು ಆಂಧ್ರಪ್ರದೇಶದ ಪೊಲೀಸರೆಂದೂ, ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೊಯಂಬತ್ತೂರು ಶಾಖೆಯಿಂದ ವಿಶಾಖಪಟ್ಣಂ ಶಾಖೆಗೆ ವರ್ಗಾಯಿಸಲು ಕೊಂಡೊಯ್ಯುತ್ತಿರುವುದಾಗಿ ಹೇಳಿ ಅಧಿಕಾರಿಗಳನ್ನು ಯಾಮಾರಿಸಲು ಯತ್ನಿಸಿದರಾದರೂ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರ ಬಳಿ ಯಾವ ದಾಖಲೆಗಳೂ ಇರಲಿಲ್ಲ.

ಚುನಾವಣಾ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪ್ಯಾರಾಮಿಲಿಟರಿ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಂಟೇನರ್ ಗಳನ್ನು ಪರೀಕ್ಷಿಸಲಾಗಿ ಅದರೊಳಗಿದ್ದ ಹಲವು ಪೆಟ್ಟಿಗೆಗಳಲ್ಲಿ ಹಣವಿರುವುದು ಪತ್ತೆಯಾಗಿತ್ತು.
ಈ ಘಟನೆಯ ಬಗ್ಗೆ ಎಸ್ ಬಿ ಐನ ಕೊಯಂಬತ್ತೂರು ಹಾಗೂ ವಿಶಾಖಪಟ್ಣಂ ಶಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News