ಡಾನಾ ಚಂಡಮಾರುತ: ಒಡಿಶಾದಲ್ಲಿ ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ
ಒಡಿಶಾ: ಡಾನಾ ಚಂಡಮಾರುತದ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ನೀಡಿದ್ದರಿಂದ ಒಡಿಶಾದ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಅ.24ರಂದು ಡಾನಾ ಚಂಡಮಾರುತ ಒಡಿಶಾ ಪ್ರವೇಶಿಸುವ ನಿರೀಕ್ಷೆಯಿರುವುದರಿಂದ ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ.
ಡಾನಾ ಚಂಡಮಾರುತದ ಹಿನ್ನೆಲೆಯಲ್ಲಿ ಅ.23ರಿಂದ 25ರವರೆಗೆ ಗಂಜಾಂ, ಪುರಿ, ಜಗತ್ಸಿಂಗ್ಪುರ, ಕೇಂದ್ರಪಾರಾ, ಭದ್ರಕ್, ಬಾಲಸೋರ್, ಮಯೂರ್ಭಂಜ್, ಕಿಯೋಂಜಾರ್, ಧೆಂಕನಲ್, ಜಾಜ್ಪುರ್, ಅಂಗುಲ್, ಖುರ್ದಾ, ನಯಾಗರ್ಗ್ ಮತ್ತು ಕಟಕ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಚಂಡಮಾರುತದ ಕುರಿತ ಸಭೆಯ ನಂತರ ಮಾತನಾಡಿದ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ಚಂಡ ಮಾರುತದ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ, ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಸಂಪೂರ್ಣವಾಗಿ ಸಿದ್ಧವಾಗಿದೆ. ಅಗ್ನಿಶಾಮಕ ದಳ NDRF, ODRF ತಂಡಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಮಧ್ಯ ಬಂಗಾಳ ಕೊಲ್ಲಿಯ ಮೇಲೆ ನಿಮ್ನ ಒತ್ತಡ ಸೃಷ್ಟಿಯಾಗಿರುವುದರಿಂದ ಮುಂದಿನ ವಾರ ಬಲವಾದ ಚಂಡಮಾರುತವು ರೂಪುಗೊಳ್ಳುವ ಸಾಧ್ಯತೆಯಿದ್ದು, ಅ.24ರೊಳಗೆ ಚಂಡಮಾರುತ ಒಡಿಶಾ-ಪಶ್ಚಿಮಬಂಗಾಳ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ರವಿವಾರ ತಿಳಿಸಿತ್ತು.