ಜಾರ್ಖಂಡ್: ಮೂವರು ಮಾಜಿ ಶಾಸಕರ ಸಹಿತ ಹಲವು ಬಿಜೆಪಿ ನಾಯಕರು ಜೆಎಂಎಂ ಸೇರ್ಪಡೆ
ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಹಲವು ನಾಯಕರು ಹಾಗೂ ಮೂವರು ಮಾಜಿ ಶಾಸಕರು ಆಡಳಿತಾರೂಢ ಝಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಸೋಮವಾರ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಸೇರ್ಪಡೆಯಾದ ಮಾಜಿ ಶಾಸಕರ ಪೈಕಿ ಲೋಯಿಸ್ ಮರಂಡಿ, ಕುನಾಲ್ ಸಾರಂಗಿ ಹಾಗೂ ಲಕ್ಷ್ಮಣ್ ತುಡು ಸೇರಿದ್ದಾರೆ. ಮೂರು ಬಾರಿಯ ಶಾಸಕ ಕೇದಾರ್ ಹಝ್ರಾ ಹಾಗೂ AJSU ಪಕ್ಷದ ನಾಯಕ ಉಮಾಕಾಂತ್ ರಜಾಕ್ ಅವರು ಜೆಎಂಎಂ ಪಕ್ಷ ಸೇರ್ಪಡೆಯಾದ ಒಂದೆರಡು ದಿನಗಳಲ್ಲೇ ಈ ಬೆಳವಣಿಗೆ ನಡೆದಿದೆ.
“ನಾವಿಂದು ಜಾರ್ಖಂಡ್ ಮುಕ್ತಿ ಮೋರ್ಚಾ ಸೇರ್ಪಡೆಯಾದೆವು” ಎಂದು ಬಿಜೆಪಿಯ ಮಾಜಿ ವಕ್ತಾರ ಹಾಗೂ ಬಹರಗೋರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಾರಂಗಿ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಶಾಸಕಿ ಲೋಯಿಸ್ ಮರಂಡಿ ಅವರು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಡುಮ್ಕಾ ವಿಧಾನಸಭಾ ಕ್ಷೇತ್ರದಲ್ಲಿ 5,262 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಅವರು ಜಾರ್ಖಂಡ್ ಮುಕ್ತಿ ಮೋರ್ಚಾವನ್ನು ಸೇರ್ಪಡೆಯಾಗುತ್ತಿದ್ದಂತೆಯೆ, ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.