ಗುಜರಾತ್ ನಲ್ಲಿ ನಕಲಿ ಟೋಲ್ ಪ್ಲಾಝಾ ಬಳಿಕ ಈಗ ನಕಲಿ ನ್ಯಾಯಾಲಯ!

Update: 2024-10-22 08:43 GMT

ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ (Photo credit: bhaskar.com)

ಗುಜರಾತ್: ಗಾಂಧಿನಗರದಲ್ಲಿ ನಕಲಿ ಕೋರ್ಟ್ ಸ್ಥಾಪಿಸಿ, ನ್ಯಾಯಾಧೀಶನಂತೆ ನಟಿಸಿ ಹಲವು ನಕಲಿ ಆದೇಶಗಳನ್ನು ಹೊರಡಿಸಿದ್ದ ನಕಲಿ ನ್ಯಾಯಾಧೀಶನನ್ನು ಪೊಲೀಸರು ಬಂಧಿಸಿದ್ದಾರೆ.

ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಎಂಬಾತ ಬಂಧಿತ ಆರೋಪಿ. ಈತ ನಕಲಿ ನ್ಯಾಯಾಲಯ ಸೃಷ್ಟಿಸಿ, 2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಕಕ್ಷಿದಾರನ ಪರವಾಗಿ ಆದೇಶವನ್ನು ನೀಡಿದ್ದಾನೆ. ಈ ನಕಲಿ ನ್ಯಾಯಾಲಯ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ಬಿಟ್ರಲ್ ಟ್ರಿಬ್ಯೂನಲ್ ನ್ಯಾಯಾಲಯದ ನ್ಯಾಯಾಧೀಶನಂತೆ ನಟಿಸುವ ಮೂಲಕ ಜನರನ್ನು ವಂಚಿಸಿದ ಆರೋಪದ ಮೇಲೆ ಅಹ್ಮದಾಬಾದ್ ನಗರ ಪೊಲೀಸರು ಸ್ಯಾಮ್ಯುಯೆಲ್ ನನ್ನು ಬಂಧಿಸಿದ್ದಾರೆ.

ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ದೂರಿನಂತೆ ಕಾರಂಜ್ ಪೊಲೀಸ್ ಠಾಣೆಯಲ್ಲಿ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170 ಮತ್ತು 419ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಟಿ ಸಿವಿಲ್ ಕೋರ್ಟ್ ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ಬಾಕಿ ಇರುವ ಪ್ರಕರಣದಲ್ಲಿ ಕ್ರಿಶ್ಚಿಯನ್ ಜನರನ್ನು ಬಲೆಗೆ ಬೀಳಿಸುತ್ತಿದ್ದ. ಪ್ರಕರಣವನ್ನು ನಿಭಾಯಿಸಲು ಕ್ಲೈಂಟ್ಗಳಿಂದ ನಿರ್ದಿಷ್ಟ ಮೊತ್ತವನ್ನು ಪಡೆಯುತ್ತಿದ್ದ. ಸ್ಯಾಮ್ಯುಯೆಲ್ ಮೊದಲು ನ್ಯಾಯಾಲಯದಿಂದ ನೇಮಕಗೊಂಡ ಅಧಿಕೃತ ಮಧ್ಯಸ್ಥಗಾರನಾಗಿ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ.

ನ್ಯಾಯಾಲಯದಂತೆ ವಿನ್ಯಾಸಗೊಳಿಸಲಾದ ಗಾಂಧಿನಗರ ಮೂಲದ ತನ್ನ ಕಚೇರಿಗೆ ತನ್ನ ಕಕ್ಷಿದಾರರನ್ನು ಕರೆಸಿ ತನ್ನ ಕಕ್ಷಿದಾರರಿಗೆ ಅನುಕೂಲವಾಗುವ ರೀತಿ ಆದೇಶವನ್ನು ನೀಡಿದ್ದಾನೆ. ಆತನ ಸಹಚರರು ನ್ಯಾಯಾಲಯದ ಸಿಬ್ಬಂದಿ ಅಥವಾ ವಕೀಲರಂತೆ ಕಲಾಪದಲ್ಲಿ ಭಾಗವಹಿಸುತ್ತಿದ್ದರು.

2019ರಲ್ಲಿ ಸ್ಯಾಮ್ಯುಯೆಲ್ ನಕಲಿ ನ್ಯಾಯಾಲಯ ಸೃಷ್ಟಿಸಿ ತನ್ನ ಕ್ಲೈಂಟ್ ಪರವಾಗಿ ಆದೇಶವನ್ನು ಹೊರಡಿಸಿದ್ದ. ಈ ಪ್ರಕರಣವು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಸರ್ಕಾರಿ ಜಮೀನಿಗೆ ಸಂಬಂಧಿಸಿತ್ತು. ಪಾಲ್ಡಿ ಪ್ರದೇಶದಲ್ಲಿನ ಈ ಜಮೀನನ್ನು ತನ್ನ ಕಕ್ಷಿದಾರನಿಗೆ ಆರೋಪಿ ನೀಡಿದ್ದ. ಸ್ಯಾಮ್ಯುಯೆಲ್ ಸರಕಾರದಿಂದ ನೇಮಿತ "ಅಧಿಕೃತ ಮಧ್ಯಸ್ಥಗಾರ" ಎಂದು ಹೇಳಿಕೊಂಡು ನ್ಯಾಯಾಲಯದ ಕಲಾಪ ಆರಂಭಿಸಿ ತನ್ನ ಕಕ್ಷಿದಾರನ ಪರವಾಗಿ ಆದೇಶವನ್ನು ಹೊರಡಿಸಿದ್ದಾನೆ.

ತನ್ನ ಆದೇಶವನ್ನು ಜಾರಿಗೆ ತರಲು ಸ್ಯಾಮ್ಯುಯೆಲ್ ಮತ್ತೋರ್ವ ವಕೀಲನ ಮೂಲಕ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ ಮತ್ತು ಆದೇಶದ ಪ್ರತಿಯನ್ನು ಈ ವೇಳೆ ಲಗತ್ತಿಸಿದ್ದಾನೆ. ಆದರೆ, ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಇದು ನಕಲಿ ಆದೇಶ ಎಂದು ಪತ್ತೆ ಹಚ್ಚಿ ಕಾರಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆ ಗುಜರಾತ್ ನ ಮಾರ್ಬಿ ಜಿಲ್ಲೆಯಲ್ಲಿರುವ ಅಸಲಿ ಟೋಲ್ ಪ್ಲಾಝಾವನ್ನು ತಪ್ಪಿಸಿ, ಅದು ವಿಧಿಸುವ ನೈಜ ರಸ್ತೆ ಸುಂಕಕಿಂತಲೂ ಕಡಿಮೆ ದರದ ಸುಂಕ ವಿಧಿಸಿ ಖಾಸಗಿ ರಸ್ತೆಯ ಮೂಲಕ ಸಂಚರಿಸಲು ನಕಲಿ ಟೋಲ್ ಪ್ಲಾಝಾ ಮೂಲಕ ಅವಕಾಶ ಮಾಡಿಕೊಡುತ್ತಿದ್ದ ಆರೋಪದಡಿ ಗುಜರಾತ್ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಕಲಿ ಟೋಲ್ ಪ್ಲಾಝಾ ಮೂಲಕ ರೂ. 75 ಕೋಟಿಗೂ ಹೆಚ್ಚು ಮೊತ್ತವನ್ನು ವಾಹನಗಳಿಂದ ವಸೂಲಿ ಮಾಡಿರುವ ಈ ಪ್ರಕರಣವು ಸರ್ಕಾರವು ಮುಜುಗರಕ್ಕೀಡು ಮಾಡಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News