ಮಿಲ್ಲಿ ಗಜೆಟ್ ಪತ್ರಕರ್ತನ ಬಂಧನ

Update: 2016-05-14 18:17 GMT

ಹೊಸದಿಲ್ಲಿ, ಮೇ 14: ನಕಲಿ ಆರ್‌ಟಿಐ ಮಾಹಿತಿಯೊಂದರಲ್ಲಿ ಆಯುಷ್ ಸಚಿವಾಲಯವು ಮುಸ್ಲಿಮರಿಗೆ ನೌಕರಿಯನ್ನು ನಿರಾಕರಿಸುತ್ತಿದೆಯೆಂದು ವರದಿ ಮಾಡಿದ್ದ, ‘ಮಿಲ್ಲಿ ಗಜೆಟ್’ನ ಪತ್ರಕರ್ತ ಪುಷ್ಪ ಶರ್ಮ ಎಂಬವರನ್ನು ದಿಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆಯುಷ್ ಸಚಿವಾಲಯ ಮುಸ್ಲಿಮರಿಗೆ ಉದ್ಯೋಗ ನೀಡುವುದಿಲ್ಲವೆಂಬ ನಕಲಿ ಆರ್‌ಟಿಐ ಉತ್ತರ ಸೃಷ್ಟಿಸಿದ ಆರೋಪ ಆತನ ಮೇಲಿದೆ.

ಅಂತಾರಾಷ್ಟ್ರೀಯ ಯೋಗ ದಿನಕ್ಕಾಗಿ ಯೋಗ ಗುರುಗಳನ್ನು ಆಯ್ಕೆ ಮಾಡುವಲ್ಲಿ ಕೇಂದ್ರ ಸರಕಾರ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ. ಈ ಕುರಿತು ತನ್ನಲ್ಲಿರುವ ಆರ್‌ಟಿಐ ಮಾಹಿತಿ ಅಧಿಕೃತವಾಗಿದೆಯೆಂದು ಪುಷ್ಪ ಶರ್ಮ ಹೇಳಿದ್ದಾರೆ. ಆದರೆ, ಆ ಆರ್‌ಟಿಐ ಮಾಹಿತಿ ನಕಲಿಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಸಚಿವಾಲಯ ದಿಲ್ಲಿ ಪೊಲೀಸರಿಗೆ ಅಧಿಕೃತ ದೂರು ನೀಡಿತ್ತು.
ಆಯುಷ್ ಸಚಿವಾಲಯದಲ್ಲಿ ಮುಸ್ಲಿಮರ ನೇಮಕಾತಿ ಮಾಡದಿರುವುದು ಕೇಂದ್ರ ಸರಕಾರದ ನೀತಿಯಾಗಿದೆಯೆಂಬ ಕಲ್ಪಿತ, ಕಿಡಿಗೇಡಿತನದ ಆರ್‌ಟಿಐ ಉತ್ತರವನ್ನು ಸಚಿವಾಲಯ ತಳ್ಳಿಹಾಕಿದೆ.
ಸಮಾಜದ ವಿವಿಧ ವರ್ಗಗಳ ನಡುವೆ ದ್ವೇಷ, ಆಸೌಹಾರ್ದ ಹಾಗೂ ಅಪನಂಬಿಕೆಗಳನ್ನು ಕೆಟ್ಟ ಉದ್ದೇಶದಿಂದ ಉಂಟು ಮಾಡುವ ಗುರಿ ಹೊಂದಿರುವ ಇಂತಹ ವರದಿಗಾರಿಕೆಯನ್ನು ಸಚಿವಾಲಯ ಖಂಡಿಸುತ್ತದೆಂದು ಆಯುಷ್ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News