ಅಮಲು ಬರಿಸುವ ಔಷಧಗಳನ್ನು ವೈದ್ಯರ ಸೂಚನೆ ಇಲ್ಲದೆ ಮಾರಿದರೆ ಕ್ರಿಮಿನಲ್ ಮೊಕದ್ದಮೆ: ಖಾದರ್

Update: 2016-05-14 18:19 GMT

ಬೆಂಗಳೂರು, ಮೇ 14: ವೈದ್ಯರ ಸೂಚನೆಯಿಲ್ಲದೆ ಅಮಲು ಬರಿಸುವ ಔಷಧಗಳನ್ನು ಮಾರಾಟ ಮಾಡುವ ಔಷಧ ಅಂಗಡಿಗಳ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ಔಷಧ ನಿಯಂತ್ರಣ ಇಲಾಖೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಇಲಾಖೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರ ಚೀಟಿಯಿಲ್ಲದೆ ಔಷಧಗಳನ್ನು ಮಾರಾಟ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಈ ಪರಿಣಾಮವಾಗಿ ಮಕ್ಕಳು ಮತ್ತು ಯುವಕರಿಗೆ ಯಾವುದೇ ಅಡೆತಡೆಯಿಲ್ಲದೆ ಅಮಲು ಭರಿತ ಔಷಧಗಳು ಕೈಗೆಟುಕುತ್ತಿವೆ. ಹೀಗಾಗಿ ಯುವಕರು ಮಾದಕ ವಸ್ತುಗಳ ದಾಸರಾಗುವುದಲ್ಲದೆ ಅಪರಾಧಿ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇಶ ಮುಂದೊಂದು ದಿನ ದೊಡ್ಡ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಜೀವರಕ್ಷಣೆ ಮಾಡುವ ಸದುದ್ದೇಶದಿಂದ ಔಷಧ ಮಾರಾಟ ಮಳಿಗೆಗಳು ಜನ್ಮ ತಾಳಿದ್ದವು. ಆದರೆ ಈ ಮಳಿಗೆಗಳು ಜೀವ ತೆಗೆಯುವ ಮಟ್ಟಕ್ಕೆ ಇಳಿದಿರುವುದು ಆತಂಕದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಕ್ರಮವಾಗಿ ಮಾದಕ ಔಷಧಗಳನ್ನು ಮಾರಾಟ ಮಾಡುವವರು ಮತ್ತು ಖರೀದಿಸುವವರನ್ನು ಪತ್ತೆ ಮಾಡಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೋಲಿಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ವೈದ್ಯರು ಬರೆದುಕೊಡುವ ಚೀಟಿಯ ಆಧಾರದಲ್ಲಿ ಔಷಧ ಮಾರಾಟಗಾರರು ರೋಗಿಗಳಿಗೆ ಔಷಧವನ್ನು ವಿತರಿಸಬೇಕು. ಆದರೆ ಯಾವುದೇ ಕಾರಣಕ್ಕೂ ಔಷಧದ ಚೀಟಿ ಇಲ್ಲದೆ ಔಷಧಗಳನ್ನು ಮಾರಾಟ ಮಾಡಬಾರದು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಔಷಧ ನಿಯಂತ್ರಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಿದರು. ಇಲಾಖೆಯ ಸುವರ್ಣ ಸಂಭ್ರಮದ ಸಂಸ್ಮರಣ ಸಂಚಿಕೆಯನ್ನು ಸಚಿವ ಯು.ಟಿ.ಖಾದರ್ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಅಪರ ಔಷಧ ನಿಯಂತ್ರಕ ಬಿ.ಟಿ. ಖಾನಾಪುರೆ, ಸ್ಥಾನಿಕ ಸಂಘಟನಾ ಸಮಿತಿ ಅಧ್ಯಕ್ಷ ಎಚ್.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಗೋಣಿ ಫಕೀರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News