ಮಹಾರಾಷ್ಟ್ರ: ಸಾಮಾಜಿಕ ಬಹಿಷ್ಕಾರಗಳಿಗೆ ನಿಷೇಧ

Update: 2016-05-14 18:25 GMT

ಮುಂಬೈ, ಮೇ 14: ಗ್ರಾಮ ಮಂಡಳಿಗಳು ಸಂಪ್ರದಾಯಗಳ ಉಲ್ಲಂಘನೆಗಾಗಿ ವ್ಯಕ್ತಿಗಳು ಮತ್ತು ಕುಟುಂಬಗಳನ್ನು ಸಮಾಜದಿಂದ ದೂರವಿಡುವ ‘ಸಾಮಾಜಿಕ ಬಹಿಷ್ಕಾರ’ವನ್ನು ಹೇರುವ ಅನಿಷ್ಟ ಪದ್ಧತಿಯನ್ನು ಮಹಾರಾಷ್ಟ್ರ ಸರಕಾರವು ನಿಷೇಧಿಸಿದ್ದು, ಇದರೊಂದಿಗೆ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂತರ್ಜಾತಿ ವಿವಾಹ ಅಥವಾ ಅಶ್ಲೀಲ ಉಡುಪು ಇತ್ಯಾದಿ ನೆಪಗಳನ್ನೊಡ್ಡಿ ದಂಡನಾ ರೂಪದಲ್ಲಿ ಜಾರಿಗೊಳಿಸುವ ಇಂತಹ ತೀರ್ಪುಗಳಿಂದ ತೊಂದರೆಗೊಳಗಾಗುವವರು ಹೆಚ್ಚಾಗಿ ಮಹಿಳೆಯರು ಮತ್ತು ಕೆಳಜಾತಿಗಳ ದಲಿತರೇ ಆಗಿರುತ್ತಾರೆ.

ಸಾಮಾಜಿಕ ಬಹಿಷ್ಕಾರಗಳನ್ನು ಆದೇಶಿಸುವ ಗ್ರಾಮ ಪಂಚಾಯತ್‌ಗಳು ಅಥವಾ ಮಂಡಳಿಗಳ ದಶಕಗಳಷ್ಟು ಹಳೆಯದಾದ ಪದ್ಧತಿಗೆ ಅಂತ್ಯ ಹಾಡಲು ಕಾನೂನೊಂದನ್ನು ಮಹಾರಾಷ್ಟ್ರವು ಕಳೆದ ತಿಂಗಳು ಅಂಗೀಕರಿಸಿದೆ. ಸಂಪ್ರದಾಯ,ಜಾತಿ ಮತ್ತು ಸಮುದಾಯದ ಹೆಸರಿನಲ್ಲಿ ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯು ಅಗತ್ಯವಾಗಿತ್ತು ಎಂದು ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.

ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಜನತೆಯ ಕಲ್ಯಾಣದ ಹಿತಾಸಕ್ತಿಯಲ್ಲಿ ಸಾಮಾಜಿಕ ಸುಧಾರಣೆ ಕ್ರಮವಾಗಿ ಸಾಮಾಜಿಕ ಬಹಿಷ್ಕಾರಗಳನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದರು.

ಗ್ರಾಮ ಮಂಡಳಿಗಳ ಆದೇಶಗಳಿಂದಾಗಿ ವ್ಯಕ್ತಿಗಳು ಮತ್ತು ಕುಟುಂಬಗಳು ಸಮಾಜದಿಂದ ಬಹಿಷ್ಕರಿಸಲ್ಪಟ್ಟು ಅವರು ದೇವಸ್ಥಾನಗಳನ್ನು ಪ್ರವೇಶಿಸುವಂತಿಲ್ಲ, ಗ್ರಾಮದ ಬಾವಿಗಳಿಂದ ನೀರೆತ್ತುವಂತಿಲ್ಲ, ಮಾರುಕಟ್ಟೆಯಿಂದ ಏನನ್ನೂ ಖರೀದಿಸುವಂತಿಲ್ಲ, ಯಾವುದೇ ಸಮಾರಂಭದಲ್ಲಿಯೂ ಭಾಗವಹಿಸುವಂತಿಲ್ಲ. ಪಂಚಾಯತ್‌ಗಳು ಮಹಿಳೆಯರಿಗೆ ಮಾಟಗಾತಿಯರೆಂದು ಪಟ್ಟ ಕಟ್ಟಿ ಶಿಕ್ಷೆಯ ರೂಪದಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಅಥವಾ ಹತ್ಯೆಗೆ ಆದೇಶಿಸಿದ ನಿದರ್ಶನಗಳೂ ಇವೆ.

ಮಹಾರಾಷ್ಟ್ರದ ನೂತನ ಕಾಯ್ದೆಯಂತೆ ಸಾಮಾಜಿಕ ಬಹಿಷ್ಕಾರವು ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಮಹಾರಾಷ್ಟ್ರದ ಮಾದರಿಯನ್ನು ಅನುಸರಿಸುವಂತೆ ಹಲವಾರು ಮಾನವ ಹಕ್ಕು ಕಾರ್ಯಕರ್ತರು ಇತರ ರಾಜ್ಯಗಳಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News