ಹೃದಯಾಘಾತದಿಂದ ಯೋಧನ ಸಾವು: ದಂಗೆ ವರದಿ ನಿರಾಕರಿಸಿದ ಸೇನೆ

Update: 2016-05-15 18:24 GMT

ಹೊಸದಿಲ್ಲಿ,ಮೇ 15: ಈಶಾನ್ಯ ಪ್ರದೇಶದ ಗಡಿ ಪ್ರದೇಶದಲ್ಲಿಯ ಘಟಕವೊಂದರ ಯೋಧನೋರ್ವ 10 ಕಿ.ಮೀ.ನಡಿಗೆಯ ಸಂದರ್ಭ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಈ ಘಟನೆಯಿಂದಾಗಿ ಆಕ್ರೋಶಗೊಂಡ ಇತರ ಯೋಧರು ಅಧಿಕಾರಿಗಳೊಂದಿಗೆ ಘರ್ಷಣೆಗಿಳಿದಿದ್ದರು. ಸೇನೆಯು ಇದನ್ನು ದೃಢಪಡಿಸಿದೆ.
ಈಶಾನ್ಯ ಘಟಕವೊಂದರಲ್ಲಿ ಪದಾತಿ ದಳದಲ್ಲಿ ದೈನಂದಿನ ತರಬೇತಿ ಸಂದರ್ಭ ಯೋಧನೋರ್ವ ಮೃತಪಟ್ಟಿದ್ದಾನೆ. ಇದು ದಂಗೆ ಪ್ರಕರಣವಲ್ಲ. ನಡಿಗೆಗೆ ಮುನ್ನ ಯೋಧ ಎದೆನೋವು ಎಂದು ದೂರಿಕೊಂಡಿದ್ದ. ವೈದ್ಯಾಧಿಕಾರಿಗಳು ಪರೀಕ್ಷಿಸಿ ಆತ ನಡಿಗೆಗೆ ಅರ್ಹನಾಗಿದ್ದಾನೆ ಎಂದು ವರದಿ ನೀಡಿದ್ದರು. ಬಳಿಕ ನಡಿಗೆಯ ಮಧ್ಯೆ ಯೋಧ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸೇನೆಯು ತಿಳಿಸಿದೆ.
ಆ ಪ್ರದೇಶದಲ್ಲಿ ‘ದಂಗೆಯಂತಹ ’ಸನ್ನಿವೇಶ ನಿರ್ಮಾಣವಾಗಿದೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಸೇನೆಯ ಈ ಹೇಳಿಕೆ ಹೊರಬಿದ್ದಿದೆ. ಓರ್ವ ಕ್ಯಾಪ್ಟನ್ ಮತ್ತು ಯೋಧನ ನಡುವೆ ಸಂಘರ್ಷದ ಬಳಿಕ ದಂಡನೆಯಾಗಿ 10 ಕಿ.ಮೀ.ದೂರದ ನಡಿಗೆಗೆೆ ಆದೇಶಿಸಲಾಗಿತ್ತು ಎಂದು ಈ ವರದಿಗಳು ಹೇಳಿದ್ದವು.
ಘರ್ಷಣೆಯಲ್ಲಿ ಕ್ಯಾಪ್ಟನ್ ಮತ್ತು ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಯಾಪ್ಟನ್ ಸ್ಥಿತಿ ಚಿಂತಾಜನಕವಾಗಿದೆಯೆನ್ನಲಾಗಿದೆ.
ಇತರ ಯಾವುದೇ ವ್ಯಕ್ತಿಗೆ ಗಂಭೀರ ಗಾಯಗಳಾಗಿರುವುದನ್ನು ದಿಲ್ಲಿಯಲ್ಲಿನ ಸೇನೆಯ ಕೇಂದ್ರ ಕಚೇರಿಯು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News