ದಯಾಮರಣದ ಕುರಿತು ನಿಮ್ಮ ಅಭಿಪ್ರಾಯ ಏನೆಂದು ಕೇಳುತ್ತಿದೆ ಸರಕಾರ

Update: 2016-05-16 03:29 GMT

ಮುಂಬೈ, ಮೇ 16: ವರ್ಷಗಳ ಕಾಲದ ಚರ್ಚೆ ಹಾಗೂ ಕಾನೂನಾತ್ಮಕ ಸಮರದ ಬಳಿಕ ಇದೀಗ ಕೇಂದ್ರ ಸರ್ಕಾರ, ದಯಾಮರಣಕ್ಕೆ ಅನುಮತಿ ನೀಡುವ ಕರಡು ಮಸೂದೆ ಸಿದ್ಧಪಡಿಸಿದೆ.

ಈ ಮಸೂದೆ ಅನ್ವಯ ತೀವ್ರ ಅಸ್ವಸ್ಥರಾಗಿರುವ ರೋಗಿಗಳು ವೈದ್ಯಕೀಯ ಚಿಕಿತ್ಸೆ ಸ್ಥಗಿತಗೊಳಿಸುವಂತೆ ಅಥವಾ ಹೆಚ್ಚುವರಿ ಚಿಕಿತ್ಸೆ ನೀಡದಂತೆ ವೈದ್ಯರಿಗೆ ಸೂಚಿಸುವ ಹಕ್ಕನ್ನು ಹೊಂದಿರುತ್ತಾರೆ. ಜತೆಗೆ "ಪ್ರಕೃತಿ ತನ್ನ ಸಹಜ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡಲು" ಅವಕಾಶ ಇರುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವಾರ ಕರಡು ಮಸೂದೆಯನ್ನು ವೆಬ್‌ತಾಣದಲ್ಲಿ ಅಪ್‌ಲೋಡ್ ಮಾಡಿದ್ದು, "ತೀವ್ರ ಅಸ್ವಸ್ಥ ರೋಗಿಗಳ (ರೋಗಿಗಳ ಸಂರಕ್ಷಣೆ ಮತ್ತು ವೈದ್ಯರ) ಮಸೂದೆ" ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಇ-ಮೇಲ್ ಮೂಲಕ 2016ರ ಜೂನ್ 19ರೊಳಗೆ ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಲಾಗಿದೆ.

ಯಾವುದೇ ಚಿಕಿತ್ಸೆಯನ್ನು ಸ್ಥಗಿತಗೊಳಿಸುವಂತೆ ಕೋರುವ ರೋಗಿ ಹಾಗೂ ಚಿಕಿತ್ಸೆ ನಿಲ್ಲಿಸುವ ವೈದ್ಯರಿಗೆ ಸಂರಕ್ಷಣೆ ನೀಡುವುದು ಇದರ ಮುಖ್ಯ ಉದ್ದೇಶ. ಆದರೆ ನೋವು ನಿವಾರಕ ಚಿಕಿತ್ಸೆಯನ್ನು ಮಾತ್ರ ಮುಂದುವರಿಸಲು ಅವಕಾಶ ಇರುತ್ತದೆ.

ಆದರೆ ತಜ್ಞರ ಪ್ರಕಾರ ಮಸೂದೆ ನಿರಾಶಾದಾಯಕವಾಗಿದೆ. ಏಕೆಂದರೆ ಬದುಕುವ ಇಚ್ಛೆ ಎಂಬ ಪರಿಕಲ್ಪನೆ ಬಗ್ಗೆ ಇದರಲ್ಲಿ ಸ್ಪಷ್ಟತೆ ಇಲ್ಲ. ಮಸೂದೆ ಅನ್ವಯ ಬದುಕುವ ಇಚ್ಛೆ ಎಂದರೆ, "ಬದುಕುವ ಆಸೆ ಅಥವಾ ಆಕಾಂಕ್ಷೆಯನ್ನು ದಾಖಲೆಗಳ ಮೂಲಕ ವ್ಯಕ್ತಪಡಿಸುವುದು ಅಥವಾ ಜೀವವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ವಿಶೇಷ ಚಿಕಿತ್ಸೆಯನ್ನು ನೀಡದಂತೆ ಕೋರುವುದು" ಆದರೆ ಮಸೂದೆಯ 11ನೆ ಪ್ಯಾರಾ ಪ್ರಕಾರ, ವೈದ್ಯಕೀಯ ಚಿಕಿತ್ಸೆ ಸ್ಥಗಿತಗೊಳಿಸುವಂತೆ ಪವರ್ ಆಫ್ ಅಟಾರ್ನಿ ನೀಡಲು ಅವಕಾಶ ಇರುವುದಿಲ್ಲ.

ಅಂತೆಯೇ ದಯಾಮರಣಕ್ಕೆ ಮನವಿ ಸಲ್ಲಿಸಲು ಅನುಸರಿಸಬೇಕಾದ ವಿಧಿವಿಧಾನಗಳನ್ನೂ ಮಸೂದೆಯಲ್ಲಿ ವಿವರಿಸಲಾಗಿದೆ. ವೈದ್ಯಕೀಯ ತಂಡದ ಪರಿಹಾರ ಪಡೆಯುವ ಹಕ್ಕಿನಿಂದ ಹಿಡಿದು, ಅನುಮತಿಗಾಗಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವವರೆಗಿನ ಪ್ರಕ್ರಿಯೆಯನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News