ಸೇನಾಧಿಕಾರಿಗಳನ್ನು ಹೆಸರಿಸದಂತೆ ಪೊಲೀಸರು ಒತ್ತಡ ಹೇರಿದ್ದರು: ಸಂತ್ರಸ್ತ ಬಾಲಕಿ

Update: 2016-05-16 18:43 GMT

ಶ್ರೀನಗರ,ಮೇ 16: ಘಟನೆ ನಡೆದ ದಿನದಂದು ಸೇನಾಧಿಕಾರಿಯೋರ್ವ ತನ್ನ ಕೈಹಿಡಿದೆಳೆದಿದ್ದ ಮತ್ತು ಸೇನೆಯ ಹೆಸರನ್ನೆತ್ತದಂತೆ ಸ್ಥಳೀಯ ಪೊಲೀಸರು ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಕಳೆದ ತಿಂಗಳು ಹಂದ್ವಾರಾ ಪಟ್ಟಣದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಅಪ್ರಾಪ್ತ ವಯಸ್ಕ ಬಾಲಕಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸುವುದರೊಂದಿಗೆ ಇಡೀ ಪ್ರಕರಣವೀಗ ಹೊಸ ತಿರುವನ್ನು ಪಡೆದುಕೊಂಡಿದೆ. ಠಾಣೆಯಲ್ಲಿ ಪೊಲೀಸರು ತನಗೆ ಕಿರುಕುಳ ನೀಡಿದ್ದರು ಮತ್ತು ಅವಾಚ್ಯವಾಗಿ ನಿಂದಿಸಿದ್ದರು. ಓರ್ವ ಪೊಲೀಸ್ ಅಧಿಕಾರಿಯಂತೂ ತನ್ನ ಮುಖದ ಮೇಲೆ ಉಗುಳಿದ್ದ ಮತ್ತು ತುಂಬ ಕೀಳಾಗಿ ಬೈದಿದ್ದ ಎಂದು ಬಾಲಕಿ ತಿಳಿಸಿದಳು. ತಾನು ಠಾಣೆಯಲ್ಲಿದ್ದಾಗ ಹೆಚ್ಚಿನ ಸಮಯ ಯಾವುದೇ ಮಹಿಳಾ ಪೊಲೀಸ್ ಅಧಿಕಾರಿಗಳು ಅಲ್ಲಿರಲಿಲ್ಲ. ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದ ಕೆಲವು ಅಧಿಕಾರಿಗಳು ಮಾಧ್ಯಮಗಳಿಗೆ ಸತ್ಯ ಹೇಳದಂತೆ ಮತ್ತು ದೂರಿನಲ್ಲಿ ಅದನ್ನು ಕಾಣಿಸದಂತೆ ತಾಕೀತು ಮಾಡಿದ್ದರು. ತಮ್ಮ ಆದೇಶವನ್ನು ಮೀರಿದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ತನಗೆ ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ತ ಬಾಲಕಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದಳು. ಖಾಲಿ ಕಾಗದಗಳಲ್ಲಿ ಮತ್ತು ಏನನ್ನೋ ಬರೆದಿದ್ದ ಕಾಗದಗಳಲ್ಲಿ ತನ್ನ ಸಹಿಗಳನ್ನು ತೆಗೆದುಕೊಳ್ಳಲಾಗಿತ್ತು ಎಂದೂ ಬಾಲಕಿ ಆಪಾದಿಸಿದ್ದಾಳೆ. ಎ.12ರಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ಬಳಿಕ ಕುಪ್ವಾರಾ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆಗಳಲ್ಲಿ ಕನಿಷ್ಠ ಐವರು ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News