ಸರಕಾರಿ ನಿಲಯಗಳಲ್ಲಿ 49 ಅಂಗವಿಕಲ ಮಕ್ಕಳಿಗೆ ಒಂದೇ ಟೂತ್‌ಬ್ರಷ್!

Update: 2016-05-17 13:51 GMT

ಹೊಸದಿಲ್ಲಿ,ಮೇ17:ದೈಹಿಕವಿಕಲರಂತಹ,ಹುಟ್ಟುವಾಗಲೇ ಅದೃಷ್ಟಹೀನರಾಗಿರುವವರಿಗೆ ಘನತೆಯ ಬದುಕು ಸಿಗುವಂತೆ ನೋಡಿಕೊಳ್ಳುವುದೂ ಈ ದೇಶದಲ್ಲಿ ಸಮಸ್ಯೆಯೇ. ಸರಕಾರವು ಇದಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಿದೆಯಾದರೂ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಸೌಲಭ್ಯಗಳು ಈ ಅದೃಷ್ಟಹೀನರಿಗೆ ತಲುಪುತ್ತಿಲ್ಲ. ದುರಂತವೆಂದರೆ ಇದನ್ನು ಬದಲಿಸುವ ಅಧಿಕಾರವುಳ್ಳವರ ಗಮನ ಸೆಳೆಯುವ ಕನಿಷ್ಠ ತಾಕತ್ತೂ ಈ ಬಲಿಪಶುಗಳಿಗಿರುವುದಿಲ್ಲ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎಲ್ ದತ್ತು ಅವರು ಎರಡು ವರ್ಷಗಳ ಹಿಂದೆ ತಾನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿದ್ದಾಗ ಕಣ್ಣಾರೆ ಕಂಡಿದ್ದ ದಯನೀಯ ದೃಶ್ಯವೊಂದನ್ನು ಬಹಿರಂಗವಾಗಿ ವರ್ಣಿಸುವ ಮೂಲಕ ಈ ಸಮಸ್ಯೆ ಮತ್ತೊಮ್ಮೆ ಸುದ್ದಿಯಾಗಿದೆ.

ಸರಕಾರಿ ಅನುದಾನಿತ ಅಂಗವಿಕಲರ ನಿಲಯವೊಂದಕ್ಕೆ ಭೇಟಿ ನೀಡಿದ್ದ ನ್ಯಾ.ದತ್ತು ಅಲ್ಲಿಯ ಎಲ್ಲ 49 ಮಕ್ಕಳು ಒಂದೇ ಟೂತ್‌ಬ್ರಷ್ ಬಳಸುವುದನ್ನು ಕಣ್ಣಾರೆ ಕಂಡಿದ್ದರು. ಈ ಎಲ್ಲ ಮಕ್ಕಳಿಗೂ ಸೇರಿ ಒಂದೇ ಟೂತ್‌ಪೇಸ್ಟ್ ಟ್ಯೂಬ್‌ನ್ನು ಇಡಲಾಗಿತ್ತು.

 ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತರಾಗಿರುವ ಅಂಗವಿಕಲ ಮಕ್ಕಳಿಗೆ ಆಶ್ರಯ ಕಲ್ಪಿಸುವ ಹೆಚ್ಚಿನ ಸರಕಾರಿ ಅನುದಾನಿತ ಅಥವಾ ಸರಕಾರವೇ ನಡೆಸುವ ಕೇಂದ್ರಗಳಲ್ಲಿ ಇಂತಹುದೇ ಸ್ಥಿತಿಯಿರುವುದರಿಂದ 49 ಮಕ್ಕಳು ಒಂದೇ ಟೂತ್‌ಬ್ರಷ್ ಬಳಸಿದ್ದನ್ನು ತಾನು ಕಂಡಿದ್ದೆ ಎಂದು ಹೇಳುವುದಕ್ಕೆ ಯಾವುದೇ ಮಹತ್ವವಿಲ್ಲ ಎಂದು ನ್ಯಾ.ದತ್ತು ಅವರನ್ನು ಉಲ್ಲೇಖಿಸಿ ಮಾಧ್ಯಮವು ವರದಿ ಮಾಡಿದೆ.

ವೃದ್ಧರು ಮತ್ತು ಅಂಗವಿಕಲರ ವಸತಿ ನಿಲಯಗಳಿಗೆ ಸರಕಾರವು ಸಾಕಷ್ಟು ಆರ್ಥಿಕ ನೆರವು ಒದಗಿಸುತ್ತಿದೆ, ಆದರೆ ಈ ಹಣವನ್ನೂ ಕಬಳಿಸಲಾಗುತ್ತಿದೆ ಎನ್ನುವುದು ಸಮಸ್ಯೆಯ ವಿಷಯವಾಗಿದೆ ಎಂದು ನ್ಯಾ.ದತ್ತು ಹೇಳಿದ್ದಾರೆ.

ಎನ್‌ಎಚ್‌ಆರ್‌ಸಿಯ ಅಧ್ಯಕ್ಷರಾದಾಗಿನಿಂದ ನ್ಯಾ.ದತ್ತು ಇಂತಹ ಅವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News