ರಾಜನ್ ಪೂರ್ಣ ಭಾರತೀಯರಲ್ಲ, ಅವರನ್ನು ತಕ್ಷಣ ವಜಾ ಮಾಡಿ: ಮೋದಿಗೆ ಸ್ವಾಮಿ ಆಗ್ರಹ

Update: 2016-05-17 18:27 GMT

ಹೊಸದಿಲ್ಲಿ, ಮೇ 17: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ವಿರುದ್ಧ ಕೆಂಡಾಮಂಡಲರಾಗಿರುವ ಬಿಜೆಪಿ ಸಂಸದ ಸುಬ್ರಮಣಿಯನ್‌ಸ್ವಾಮಿ, ತಕ್ಷಣ ಅವರನ್ನು ದೇಶದ ಅತ್ಯುನ್ನತ ಬ್ಯಾಂಕಿಂಗ್ ಹುದ್ದೆಯಿಂದ ವಜಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಐಎಂಎಫ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ರಾಜನ್ ಅವರು ಮಾನಸಿಕವಾಗಿ ಸಂಪೂರ್ಣ ಭಾರತೀಯರಾಗಿ ಉಳಿದಿಲ್ಲ. ಅವರು ಉದ್ದೇಶಪೂರ್ವಕವಾಗಿ ದೇಶದ ಆರ್ಥಿಕತೆಯನ್ನು ಅಲ್ಲೋಕ ಕಲ್ಲೋಲ ಮಾಡುತ್ತಿದ್ದಾರೆ ಎಂದು ಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.

ಕಳೆದ ವಾರ ಕೊನೆಗೊಂಡ ಸಂಸತ್ ಅಧಿವೇಶನದಲ್ಲಿ ರಾಜನ್ ವಿರುದ್ಧ ಟೀಕೆ ಮಾಡಿರುವ ಸ್ವಾಮಿ ಅದರ ಮುಂದುವರಿದಿರುವ ಭಾಗವಾಗಿ ಸೋಮವಾರ ಪ್ರಧಾನಿಗೆ ಪತ್ರ ಬರೆದು, ತಕ್ಷಣ ರಾಜನ್ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದ್ದಾರೆ.

ಭಾರತದ ಆರ್ಥಿಕತೆಯನ್ನು ಉದ್ದೇಶಪೂರ್ವಕವಾಗಿ ಬುಡಮೇಲು ಮಾಡುವ ದುಸ್ಸಾಹಸಕ್ಕೆ ರಾಜನ್ ಕೈ ಹಾಕಿರುವುದರಿಂದ ನನಗೆ ಆಘಾತವಾಗಿದೆ. ಈ ಕಾರಣದಿಂದ ಅವರನ್ನು ವಜಾ ಮಾಡುವಂತೆ ಶಿಫಾರಸು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಸಮರ್ಥನೆಯಾಗಿ, ಹಣದುಬ್ಬರ ಇಳಿಸುವ ಸಲುವಾಗಿ ಬಡ್ಡಿದರ ಹೆಚ್ಚಿಸುವ ರಾಜನ್ ಪರಿಕಲ್ಪನೆ ವಿನಾಶಕಾರಿ ಎಂದು ವಿವರಿಸಿದ್ದಾರೆ.

ರಾಜನ್ ಅವರ ಮೂರು ವರ್ಷಗಳ ಅಧಿಕಾರಾವಧಿ ಸೆಪ್ಟಂಬರ್ ಆರಂಭಕ್ಕೆ ಕೊನೆಯಾಗಲಿದ್ದು, ಅವರ ಅಧಿಕಾರಾವಧಿಯನ್ನು ವಿಸ್ತರಿಸದಿದ್ದರೆ, 1992ರ ಬಳಿಕ ಐದು ವರ್ಷಗಳ ಗವರ್ನರ್ ಅವಧಿ ಪೂರೈಸದ ಮೊದಲ ಗವರ್ನರ್ ಆಗಲಿದ್ದಾರೆ. ಅವರಿಗಿಂತ ಮೊದಲು ಈ ಉನ್ನತ ಹುದ್ದೆಯಲ್ಲಿದ್ದ ಡಿ.ಸುಬ್ಬರಾವ್ (2008-2013), ವೈ.ವಿ.ರೆಡ್ಡಿ (2003-2008), ಬಿಮಲ್ ಜಲನ್ (1997-2003) ಹಾಗೂ ಸಿ.ರಂಗರಾಜನ್ (1992-1997) ಅವರು ಐದು ವರ್ಷಗಳ ಅವಧಿ ಪೂರ್ಣಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News