ದಿಲ್ಲಿ , ಗುರ್ಗಾಂವ್ , ನೋಯ್ಡಾಗಳಲ್ಲಿ ಮುಸ್ಲಿಮರಿಗೆ ಬಾಡಿಗೆ ಮನೆ ಇಲ್ಲ !

Update: 2016-05-18 09:47 GMT

ಹೊಸದಿಲ್ಲಿ, ಮೇ 18 : ಮುಸ್ಲಿಮರಿಗೆ ಬಾಡಿಗೆ ಮನೆ ಕೊಡಲು ಹಲವರು ಹಿಂದೇಟು ಹಾಕುತ್ತಿರುವುದು ಇತ್ತೀಚಿಗಿನ ವರ್ಷಗಳಲ್ಲಿ ಹೊಸ ಸಂಗತಿಯೇನಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಮುಸ್ಲಿಮ್ ಯುವಕನೊಬ್ಬ ಕೂಡ ತಾನು ಪುಣೆಯಲ್ಲಿ ಮನೆ ಬಾಡಿಗೆಗೆ ಪಡೆಯಲು ಹಿಂದು ಹೆಸರನ್ನು ಬಳಸಬೇಕಾಯಿತೆಂದು ಬಹಿರಂಗ ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ವಾರ ಬಿಡುಗಡೆಯಾದ ಹೆಲ್ಸಿಂಕಿಯಲ್ಲಿರುವ ವಿಶ್ವ ಸಂಸ್ಥೆ ವಿಶ್ವವಿದ್ಯಾಲಯವಾದ ವರ್ಲ್ಡ್ ಇನ್ಸ್ಟಿಟ್ಯೂಟ್ ಫಾರ್ ಡೆವಲೆಪ್ಮೆಂಟಲ್ ಇಕನಾಮಿಕ್ ರಿಸರ್ಚ್ ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ ದೆಹಲಿ, ಗುರ್ಗಾಂವ್‌ಹಾಗೂ ನೊಯ್ಡೆದಲ್ಲಿ ಮುಸ್ಲಿಮರಿಗೆ ಬಾಡಿಗೆ ಮನೆ ಪಡೆಯುವುದು ತೀರಾ ತ್ರಾಸದಾಯಕ ವಿಷಯವಾಗಿದೆ.
‘‘ಒಬ್ಬ ಮುಸ್ಲಿಮ್ ಅರ್ಜಿದಾರ ಕನಿಷ್ಠ 45 ಕಡೆಗಳಲ್ಲಿಬಾಡಿಗೆ ಮನೆಗಾಗಿ ವಿಚಾರಿಸಿದಲ್ಲಿ 10 ಮನೆ ಮಾಲಿಕರು ಸಂಪರ್ಕಿಸಿದರೆ, ಮೇಲ್ವರ್ಗದ ಹಿಂದೂ ಅರ್ಜಿದಾರನೊಬ್ಬ 28 ಕಡೆಗಳಲ್ಲಿ ಬಾಡಿಗೆ ಮನೆಗೆ ವಿಚಾರಿಸಿದಲ್ಲಿ ಅಷ್ಟೇ ಸಂಖ್ಯೆಯ ಮನೆ ಮಾಲಿಕರು ಸಕಾರಾತ್ಮಕ ಪ್ರತಿಕ್ರಿಯೆ ತೋರಬಹುದು,’’ಎಂದು ಅಧ್ಯಯನ ತಿಳಿಸಿದೆ.ಇದರರ್ಥ ಹಿಂದೂಗಳಿಗೆ ಹೋಲಿಸಿದಾಗ ಮುಸ್ಲಿಮರು ಬಾಡಿಗೆ ಮನೆಗಾಗಿ ಶೇ.60ರಷ್ಟು ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ.
ಅದೇ ಸಮಯ ಪರಿಶಿಷ್ಟ ಜಾತಿ ಅಥವಾ ಹಿಂದುಳಿದ ವರ್ಗಗಳ ಅರ್ಜಿದಾರರಿಗೆ ಬಾಡಿಗೆ ಮನೆ ಹುಡುಕುವ ಸಂದರ್ಭ ಇಂತಹ ಸಮಸ್ಯೆ ಎದುರಾಗುವುದಿಲ್ಲ, ಎಂದು ಅಧ್ಯಯನ ತಿಳಿಸಿದೆ.
ಇತರ ಸಮುದಾಯದವರ ಮನವಿಗೆ ಹೋಲಿಸಿದರೆ ಮುಸ್ಲಿಂ ಅರ್ಜಿದಾರನೊಬ್ಬನ ಮನವಿಗೆ ಸ್ಪಂದಿಸಲು ಮನೆ ಮಾಲಿಕರು 6.5 ಗಂಟೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆಂದೂ ಅಧ್ಯಯನಕಾರರು ಹೇಳಿದ್ದಾರೆ.
ಒಂದು ಬೆಡ್‌ರೂಮ್ ಮನೆಯನ್ನು ಮುಸ್ಲಿಮರಿಗೆ ಬಾಡಿಗೆಗೆ ನೀಡಲು ಹೆಚ್ಚಿನ ಮನೆ ಮಾಲಿಕರು ಹಿಂಜರಿಯುತ್ತಿದ್ದಾರೆಂದೂ ಈ ಅಧ್ಯಯನ ವರದಿ ಹೇಳಿದೆ.
ಈ ಅಧ್ಯಯನಕ್ಕಾಗಿ ಸಮೀಕ್ಷೆಯನ್ನು 2015ರ ಬೇಸಿಗೆಯಲ್ಲಿ ಕೈಗೊಳ್ಳಲಾಗಿತ್ತು. ಸೌಗತೊ ದತ್ತ ಹಾಗೂ ವಿಕ್ರಮ್ ಪಥಾನಿಯಾ ಅವರಿಂದ ಜಂಟಿಯಾಗಿ ನಡೆಸಲಾದ ಈ ಅಧ್ಯಯನದ ಹೆಸರು ‘ಫಾರ್ ಹೂಮ್ ಡಸ್ ದಿ ಫೋನ್ ರಿಂಗ್ ? ಡಿಸ್ಕ್ರಿಮಿನೇಶನ್ ಇನ್ ದಿ ರೆಂಟಲ್ ಹೌಸಿಂಗ್ ಮಾರ್ಕೆಟ್ ಇನ್ ಡೆಲ್ಲಿ,ಇಂಡಿಯಾ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News