ತನಿಖೆ ಮಾಡಿದ ಹಿರಿಯ ಐಎಎಸ್ ಅಧಿಕಾರಿಗೆ ಶೋಕಾಸ್ ನೋಟಿಸ್

Update: 2016-05-18 17:54 GMT

ಹೊಸದಿಲ್ಲಿ, ಮೇ 18: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡದ ಸದಸ್ಯ ಹಾಗೂ ಹಿರಿಯ ಐಎಎಸ್ ಅಧಿಕಾರಿ ಸತೀಶ್ ವರ್ಮ ಅವರಿಗೆ ದುರ್ನಡತೆ ಹಾಗೂ ಅನಧಿಕೃತ ಗೈರುಹಾಜರಿ ಕಾರಣ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

1986ನೆ ಬ್ಯಾಚ್‌ನ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ವರ್ಮ, ಇದೀಗ ಈಶಾನ್ಯ ವಿದ್ಯುತ್ ನಿಗಮ (ಎನ್‌ಇಇಪಿಸಿಒ)ದಲ್ಲಿ ಮುಖ್ಯ ವಿಚಕ್ಷಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿದ್ಯುತ್ ಸಚಿವಾಲಯದ ಅಧೀನದಲ್ಲಿ ಬರುವ ನೀಪ್ಕೊ ಇದೀಗ ವರ್ಮ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಗೃಹ ಸಚಿವಾಲಯ ಹಾಗೂ ಐಪಿಎಸ್ ಅಧಿಕಾರಿಗಳ ಕೇಡರ್ ನಿಯಂತ್ರಣ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ.
ವರ್ಮ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಅನುಮತಿ ಪಡೆಯದೇ ಬೇರೆಡೆಗೆ ಪ್ರಯಾಣ ಬೆಳೆಸಿದ್ದರು. ಇದು ಅಖಿಲ ಭಾರತೀಯ ಸೇವೆಗಳ ಸೇವಾ ನಡತೆಯ ಉಲ್ಲಂಘನೆಯಾಗಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ವರ್ಮಾ ನಿರಾಕರಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ ವರ್ಮ ಅವರಿಗೆ ಚಾರ್ಜ್ ಮೆಮೊ ನೀಡಲಾಗಿದೆ. ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಗುಜರಾತ್ ಹೈಕೋರ್ಟ್ ನೇಮಕ ಮಾಡಿದ್ದ ಮೂರು ಮಂದಿಯ ವಿಶೇಷ ತನಿಖಾ ತಂಡದ ಸದಸ್ಯರಾಗಿ ವರ್ಮ ಕಾರ್ಯ ನಿರ್ವಹಿಸಿದ್ದರು. ತಂಡದ ಇತರ ಇಬ್ಬರು ಸದಸ್ಯರಿಗಿಂತ ಭಿನ್ನ ನಿಲುವು ತಳೆದು, ಈ ಹತ್ಯೆ ನಿಯೋಜಿತ ಕೃತ್ಯ ಹಾಗೂ ಇಶ್ರತ್ ಅವರು ನಿಷೇಧಿತ ಲಷ್ಕರ್ ಇ ತೊಯ್ಬೆ ಸಂಘಟನೆಯ ಕಾರ್ಯಕರ್ತೆ ಎನ್ನುವ ಬಗ್ಗೆ ಅನುಮಾನ ಇದೆ ಎಂದು ಹೈಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News