ರಾಜ್ಯ ಸ್ಥಾನಮಾನ ಕರಡು ಮಸೂದೆ ಬಿಡುಗಡೆಗೊಳಿಸಿದ ಕೇಜ್ರಿವಾಲ್

Update: 2016-05-18 18:23 GMT

ಹೊಸದಿಲ್ಲಿ,ಮೇ 18: ದಿಲ್ಲಿಗೆ ಪೂರ್ಣ ರಾಜ್ಯ ಸ್ಥಾನಮಾನ ಕುರಿತು ಕರಡು ಮಸೂದೆಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಬಿಡುಗಡೆಗೊಳಿಸಿದರು. ಇದು ಕೇಂದ್ರದೊಂದಿಗೆ ಇನ್ನೊಂದು ಸಂಘರ್ಷವನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ. ಪೊಲೀಸ್, ಭೂಮಿ ಮತ್ತು ಆಡಳಿತಶಾಹಿಯನ್ನು ರಾಜ್ಯ ಸರಕಾರದ ಅಧೀನಕ್ಕೆ ತರಲು ಬಯಸಿರುವ ಈ ಮಸೂದೆಯ ಬಗ್ಗೆ ಸಾರ್ವಜನಿಕರು ಜೂನ್ 30ರೊಳಗೆ ತಮ್ಮ ಸಲಹೆಗಳನ್ನು ಸಲ್ಲಿಸಬಹುದಾಗಿದೆ.
 
ಈ ವಿಷಯದಲ್ಲಿ ಸರ್ವಪಕ್ಷ ಸಭೆಯೊಂದನ್ನು ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದ ಕೇಜ್ರಿವಾಲ್, ಭಿನ್ನಾಭಿಪ್ರಾಯಗಳನ್ನು ಮರೆತು ಸಹಕರಿಸುವಂತೆ ಎದುರಾಳಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ್ನು ಆಗ್ರಹಿಸಿದರು. ದಿಲ್ಲಿಗೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಒದಗಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿಯ ಹಿಂದಿನ ಚುನಾವಣಾ ಪ್ರಣಾಳಿಕೆಗಳನ್ನು ಅವರು ಉಲ್ಲೇಖಿಸಿದರು. ‘‘ಈ ವಿಷಯದಲ್ಲಿ ಬಿಜೆಪಿ ಸಾಕಷ್ಟು ಹೋರಾಟ ಮಾಡಿದೆ. ಅದು ನಿರಂತರವಾಗಿ ಇದನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಈ ಕರಡು ಮಸೂದೆಯ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸುವ ಮೂಲಕ ನಾವು ಅವರ ನಿರ್ಣಯವನ್ನು ಮುಂದುವರಿಸುತ್ತಿದ್ದೇವೆಯಷ್ಟೇ’’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರವು ಕರಡು ಮಸೂದೆಯನ್ನು ತಿರಸ್ಕರಿಸಿದರೆ ಆಪ್‌ನ ಮುಂದಿನ ಕಾರ್ಯಯೋಜನೆಯೇನು ಎಂಬ ಪ್ರಶ್ನೆಗೆ ಉತ್ತರಿಸುತ್ತ ಅವರು ಹೇಳಿದರು. ಕರಡು ಮಸೂದೆಗೆ ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ,ಗೃಹಸಚಿವ ರಾಜನಾಥ ಸಿಂಗ್,ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರಗಳನ್ನು ಬರೆಯುವ ಜೊತೆಗೆ ಅವರನ್ನು ಖುದ್ದಾಗಿ ಭೇಟಿಯಾಗುವುದಾಗಿ ಅವರು ತಿಳಿಸಿದರು. ಜೂ.30ರ ನಂತರ ಕರಡು ಮಸೂದೆಯ ಅಂತಿಮ ಆವೃತ್ತಿಯನ್ನು ಸಿದ್ಧಗೊಳಿಸಲಾಗುವುದು ಮತ್ತು ಈ ಸಂಬಂಧ ದಿಲ್ಲಿ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗುವುದು ಎಂದರು. ಈ ನಿರ್ಣಯವನ್ನು ನಾವು ಕೇಂದ್ರಕ್ಕೆ ಕಳುಹಿಸುತ್ತೇವೆ ಮತ್ತು ಅದು ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News