ಮುಳುಗಡೆ ರಾಜಕೀಯ

Update: 2016-05-18 18:30 GMT

ದಿನನಿತ್ಯದ ಪತ್ರಿಕೆಗಳಲ್ಲಿ ಮತ್ತು ವಿದ್ಯುನ್ಮಾನ ಕಾಲದ ಅಣುಕ್ಷಣದ ಮಾಧ್ಯಮಗಳಲ್ಲಿ ಮಾಹಿತಿಗಿಂತ ಹತ್ತುಪಟ್ಟು ಮನರಂಜನೆ ಸಿಗುತ್ತದೆ. ಅದರಲ್ಲೂ ಮುಖ್ಯ ಸುದ್ದಿಗಳು ರಾಜಕೀಯ, ಸಿನೆಮಾ ಮತ್ತು ಕ್ರೀಡೆಗಳೇ ಆಗಿರುವುದರಿಂದ ನಾಮ ನೋಡುವ ಅಂಶಗಳ ಜೊತೆಗೇ ನಾವು ನೋಡಲಾಗದ ಅಂಶಗಳು ಪ್ರಕಟವಾಗುತ್ತವೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವವರು ಯಾರು? ಸಂಖ್ಯಾಬಲ ಮತ್ತು ಗುಣಬಲ ಇವುಗಳಲ್ಲಿ ಯಾವುದು ಆಯಾಯ ಕಾಲಕ್ಕೆ ಹೆಚ್ಚು ವೌಲ್ಯವನ್ನು ಹೊಂದಿರುತ್ತದೋ ಅದು ಅಂತಿಮ ತೀರ್ಪನ್ನು ನೀಡುತ್ತದೆ. ಇನ್ನೊಂದು ವೌಲ್ಯ ಮಾಪನ ಬರುವವರೆಗೆ ಕಾಲಯಾನದಲ್ಲಿ ಅದು ನಿಂತಿರುತ್ತದೆ. ಆದರೂ ಗುಣಬಲವೇ ಹೆಚ್ಚೆಂದು ನಿರ್ಧರಿಸುವ ಹೊಣೆಯನ್ನು ಸಮಾಜದ ಕೆಲವರಾದರೂ ಹೊತ್ತಿರುತ್ತಾರೆ. ಅವರ ಜವಾಬ್ದಾರಿಯೆಂದರೆ ಯಾವುದೇ ಕ್ಷಣದಲ್ಲೂ ಸರಿಯಾದದ್ದನ್ನೇ ಹೇಳುವುದು ಮತ್ತು ಸಮರ್ಥಿಸುವುದು. ಈ ಸರಿಯಾದದ್ದು ಯಾವುದು? ಮತ್ತೆ ಮೇಲೆ ಹೇಳಿದ ಸಮಸ್ಯೆಯೇ ತಲೆದೋರುತ್ತದೆ. ಆಗ ತಾನು ಹೇಳಿದ್ದು, ಸಮರ್ಥಿಸಿದ್ದು ಸರಿಯೆಂದು ನಂಬಿದವನು ಬಲಿಯಾಗಲೂ ಸಿದ್ಧನಾಗಿರಬೇಕಾಗಿರುತ್ತದೆ. ಯೇಸುವಾಗಲೀ ಸಾಕ್ರೆಟಿಸ್ ಆಗಲೀ ಅವರವರ ಕಾಲದಲ್ಲಿ ಬಲಿಯಾದವರು. ಒಬ್ಬ ಪ್ರವಾದಿಯಾದ; ಇನ್ನೊಬ್ಬ ಸಾರ್ವಕಾಲಿಕ ಶ್ರೇಷ್ಠ ತತ್ವಜ್ಞಾನಿಯೆನಿಸಿಕೊಂಡ. ಇಂತಹವರು ಬೇರೆ ಬೇರೆ ಕಾಲದಲ್ಲಿ ಬಂದುಹೋಗಿದ್ದಾರೆ; ಹೋಗಿದ್ದಾರೆ ಎನ್ನುವುದು ಸರಿಯಾಗದು- ಏಕೆಂದರೆ ಅವರು ಮರೆಯಾಗದೆ ಜನಮಾನಸದಲ್ಲಿ ಉಳಿದಿದ್ದಾರೆ. ಪ್ರತ್ಯಕ್ಷಕ್ಕೆ ವ್ಯಕ್ತಿ ಪ್ರಮಾಣನಾದರೆ ಪರೋಕ್ಷಕ್ಕೆ ಸಮಾಜವು ಪ್ರಮಾಣವಾಗುತ್ತದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಚಿಕ್ಕಚಿಕ್ಕ ಸುದ್ದಿಗಳು ಮನರಂಜನೆಯನ್ನು ನೀಡುವುದರ ಜೊತೆಗೇ ಮಹತ್ವದ ಸಂಕೇತಗಳನ್ನು ಹೊಂದಿರುತ್ತವೆಯೆಂದು ಅಂದುಕೊಂಡಿದ್ದೇನೆ. ಇವು ಒಂದು ಕಾಲಮಿನ ಸುದ್ದಿಯಾಗಿರಬಹುದು, ಒಂದು ನಿಮಿಷದ ವಾರ್ತೆಯಾಗಿರಬಹುದು, ಆದರೆ ಅವು ಇಟ್ಟು-ಬಿಟ್ಟುಹೋಗುವ ಪರಿಣಾಮಗಳು ದೊಡ್ಡವೇ ಆಗಿರುತ್ತವೆ. ಇಂತಹ ಪ್ರಸಂಗಗಳನ್ನು ಇಲ್ಲಿ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿದೆ:

ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳು ಪಕ್ಷಗಳ ಬಲಾಬಲವನ್ನು ನಿರ್ಧರಿಸುವುದರ ಜೊತೆಗೇ ಪುಕ್ಕಟೆ ಮನರಂಜನೆಗೂ ಸಾಕ್ಷಿಯಾಗಿದೆ. ಹಣ, ಹೆಂಡ ಮತ್ತು ಆಮಿಷಗಳು ಎಲ್ಲ ಪಕ್ಷಗಳ ತಿಜೋರಿಗಳಲ್ಲೂ ಸಾಕಷ್ಟಿವೆಯಾದ್ದರಿಂದ ಮತದಾರನ ಆಯ್ಕೆಯ ಹಿಂದೆ ಇವುಗಳಲ್ಲಿ ಯಾವುದರ ವೌಲ್ಯ ಹೆಚ್ಚು ಎಂಬುದು ಇರುತ್ತದೆ. ಬಹುಜನ ಹಿತಾಯ ಬಹುಜನ ಸುಖಾಯವು ಪ್ರಜಾತಂತ್ರದ ಗುರಿಯಾದ್ದರಿಂದ ಹೆಚ್ಚು ಜನರು ಯಾವುದನ್ನು ಹಿತವೆಂದೂ ಸುಖವೆಂದೂ ತಿಳಿಯುತ್ತಾರೋ ಅದು ಗೆಲ್ಲುತ್ತದೆ. ನೇರ ಸ್ಪರ್ಧೆಯಿರುವಲ್ಲಿ ಇದನ್ನು ಅಳೆಯಬಹುದು; ಆದರೆ ಬಹುಕೋನ ಸ್ಪರ್ಧೆಯಿರುವಲ್ಲಿ ಬಹುಜನರು ಎಂದರೆ ಈ ಗುಂಪುಗಳಲ್ಲಿ ದೊಡ್ಡ ಗುಂಪು ಎಂಬ ಅರ್ಥ ಪಡೆಯುತ್ತಾರೆ. ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಈ ದೇಶದ ಪ್ರಧಾನಿ ಮೋದಿ ನೇರವಾಗಿ ಕಾಂಗ್ರೆಸಿನ ನಾಯಕಿ ಸೋನಿಯಾ ಗಾಂಧಿಯನ್ನು ಕುಟುಕಿದರು. ‘‘ಆಕೆ ಇಟಲಿಯಲ್ಲಿ ಹುಟ್ಟಿದವರು, ಅವರಿಗೆ ಈ ದೇಶದಲ್ಲಿ ಎಷ್ಟು ಪ್ರೀತಿ, ಅಭಿಮಾನ, ಭಕ್ತಿ ಇದ್ದೀತು’’ ಎಂದು ಅತ್ಯಂತ ಒರಟಾಗಿಯೇ (ಪ್ರಧಾನಿ ಮೋದಿ ಯಾವಾಗಲೂ ಒರಟಾಗಿಯೇ ಮಾತನಾಡುತ್ತಾರಾದ್ದರಿಂದ ಇದರಲ್ಲೇನೂ ವಿಶೇಷವಿಲ್ಲವೆನ್ನಿಸಬಹುದು!) ಟೀಕಿಸಿದರು. ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ತಾನು ಭಾರತದ ಪ್ರಜೆ; ನಲ್ವತ್ತೆಂಟು ವರ್ಷಗಳಿಂದ ಇಲ್ಲಿದ್ದೇನೆ; ತನ್ನ ಸೋದರಿಯರು ಮತ್ತು ವೃದ್ಧೆ ತಾಯಿ ಮಾತ್ರ ಇಟಲಿಯಲ್ಲಿದ್ದಾರೆ; ಅವರ ಹೊರತಾಗಿ ತನಗೆ ಇಟಲಿ ಏನೂ ಅಲ್ಲ; ತನಗೆ ಭಾರತದಲ್ಲಿ ದೇಶಭಕ್ತಿಯ ಪಾಠ ಯಾರೂ ಹೇಳಬೇಕಾಗಿಲ್ಲ ಎಂಬಿತ್ಯಾದಿ ಮಾತುಗಳನ್ನು ಭಾವುಕರಾಗಿಯೇ ಹೇಳಿದರು. ಇದನ್ನೊಂದು ಚುನಾವಣಾ ವಾಗ್ಯುದ್ಧವೆಂದು ತಿಳಿದು ಮರೆಯಬಹುದು. ಪೂರ್ಣ ಬಹುಮತವನ್ನು ಹೊಂದಿದ ಪಕ್ಷದ ಪರವಾಗಿರುವವರು ವಿರೋಧಪಕ್ಷವೆಂಬ ಅರ್ಹತೆಯನ್ನೂ ಪಡೆಯಲು ಶಕ್ತವಾದ ಒಂದು ಪಕ್ಷದ ವಿರುದ್ಧ ಹೀಗೆ ವ್ಯಕ್ತಿಗತ ಟೀಕೆಯನ್ನು ಮಾಡುವುದು ಸರಿಯೇ ಎಂದು ವಿಚಾರಿಸಬೇಕು. ಇಂತಹ ಮಾತುಗಳು ಮೋದಿಯವರಿಗೆ ಹೊಂದಬಹುದಾದರೂ ಪ್ರಧಾನಿಯ ಪೀಠಕ್ಕೆ ಹೊಂದದು. ಸ್ವಾತಂತ್ರ್ಯ ಸಿಕ್ಕ ನಂತರದ ವರ್ಷಗಳಲ್ಲಿ ದೇಶದ ಪ್ರಧಾನಿ ರಾಜ್ಯ ರಾಜಧಾನಿಯ ಹೊರತಾಗಿ ಬೇರೆಲ್ಲೂ ಚುನಾವಣಾ ಭಾಷಣ ಮಾಡುತ್ತಿರಲಿಲ್ಲವಂತೆ. ಪ್ರಾಯಃ ಇಂದಿರಾ ಗಾಂಧಿ ಈ ಸಂಪ್ರದಾಯವನ್ನು ಮುರಿದರೆಂದು ಕಾಣುತ್ತದೆ. ನಂತರದ ವರ್ಷಗಳಲ್ಲಿ ಅದರಲ್ಲೂ ದೇವೇಗೌಡರು ಪ್ರಧಾನಿಯಾದ ನಂತರ ಗ್ರಾಮಪಂಚಾಯತ್ ಚುನಾವಣೆಯವರೆಗೂ ಪ್ರಧಾನಿ ಹುದ್ದೆ ಇಳಿದು ಬಂದದ್ದು ಕಂಡುಬರುತ್ತದೆ. ಹೀಗೆ ವೌಲ್ಯಗಳ ಅಧಃಪತನ ಒಟ್ಟಾರೆ ಸಮಾಜದ, ಸಂಸ್ಕೃತಿಯ ಶೈಥಿಲ್ಯದ ಸಂಕೇತವೂ ಹೌದು. ಜೊತೆಗೆ ಮಾತೂ ಸಡಿಲವಾದಾಗ ಪರಿಸ್ಥಿತಿ ಹೇಗಿರಬೇಕು? ಅದು ತಳಮಟ್ಟಕ್ಕೆ ಇಳಿಯುತ್ತದೆ: ವಿದೇಶೀಯರು ಭೌತವಾದಿಗಳು; ಭಾರತೀಯರು ಸಂಸ್ಕಾರಿಗಳು; ಅಧ್ಯಾತ್ಮಿಗಳು ಎಂದೆಲ್ಲ ಹೇಳುವ ನಾವು ಜಾತಿಯ, ಧರ್ಮದ, ಪಕ್ಷದ ಹೆಸರಿನಲ್ಲಿ ನಡೆಯುವ ಈ ಅಪಮಾನಕಾರೀ ಪ್ರವೃತ್ತಿಗಳ ಹೆಚ್ಚಿನ ವಿವರಗಳಿಗೆ ವರ್ತಮಾನದ ಭಾರತವನ್ನು ನೋಡಬೇಕು. ಮೋದಿ ಸೋನಿಯಾರನ್ನು ಟೀಕಿಸಲಿ; ಆದರೆ ಭಾರತೀಯತೆಯೆಂಬ ಅಂಶವನ್ನು ವೈಭವೀಕರಿಸುವಾಗ, ಮಹಿಳೆಯರನ್ನು ಗೌರವಿಸುವುದು, ‘ವಸುದೈವ ಕುಟುಂಬಕಂ’ ಎಂದು ಎಲ್ಲರನ್ನೂ ಪ್ರೀತಿಸುವುದು ಇವೆಲ್ಲ ಭಾರತೀಯತೆಯ ಲಕ್ಷಣವೆಂದು ಹೇಳುವಾಗ ವಿರೋಧಾಭಾಸ ಕೂಡದು. ಭಾರತೀಯ ಸಂಪ್ರದಾಯದಲ್ಲಿ ಒಬ್ಬಾಕೆ ಮದುವೆಯಾಗಿ ಗಂಡನ ಮನೆ ಸೇರಿದಾಗ ಆಕೆ ತವರು ಮನೆಯ ಸಂಬಂಧವನ್ನು ಕಳೆದುಕೊಂಡು ಹೊಸಕುಟುಂಬವನ್ನು ಸೇರುತ್ತಾಳೆ. ನಂತರ ಆಕೆಗೆ ಗಂಡನ ಮನೆಯೇ ಮನೆ; ಗಂಡನ ಕುಟುಂಬವೇ ಕುಟುಂಬ. ಈ ತತ್ವವನ್ನೇ ಸೋನಿಯಾ ಹೇಳಿದ್ದು. ಆಕೆಗೀಗ ಭಾರತವೇ ಸರ್ವಸ್ವ. ರಾಜೀವ್ ಗಾಂಧಿ ಸತ್ತಾಕ್ಷಣ ಆಕೆ ಇಟಲಿಗೆ ಮರಳಬೇಕೆಂದು ಹೇಳುವುದು ನಿಷ್ಕರುಣ ಧೋರಣೆ ಮಾತ್ರವಲ್ಲ ಭಾರತೀಯತೆಗೆ ಮಾಡುವ ಪ್ರಜ್ಞಾಪೂರ್ವಕ ಅಪಮಾನ. ಆಕೆ ದೇಶದ ಹಣ ಲೂಟಿ ಮಾಡಿದ್ದರೆ, ಭ್ರಷ್ಟಳಾಗಿದ್ದರೆ, ಕಾನೂನುಕ್ರಮ ಕೈಗೊಳ್ಳಬೇಕೇ ಹೊರತು ಆಕೆಯ ವಿದೇಶೀ ಮೂಲವನ್ನು ಬಂಡವಾಳವಾಗಿಸಿ ಟೀಕಿಸುವುದು ದುಶ್ಶಾಸನನೂ ನಾಚುವ (ಅ)ನೀತಿಯಾಗುತ್ತದೆ. ಈ ಅಂಶವನ್ನು ಪ್ರಧಾನಿ ಮೋದಿಗೆ ಯಾರಾದರೂ ಹೇಳುವುದು ಸಾಧ್ಯವಿದ್ದರೆ ಮತ್ತು ಅವರು ಅದನ್ನು ಅರ್ಥಮಾಡಿಕೊಂಡರೆ ದೇಶದ ಘನತೆ ಇನ್ನಷ್ಟು ಹೆಚ್ಚಬಹುದು. ಭಾರತೀಯ ಮೂಲದ ಹುಸೈನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನಾದಾಗ, ಭಾರತೀಯ ಜಿಂದಾಲ್ ಅಮೆರಿಕದಲ್ಲಿ ರಾಜ್ಯಪಾಲರಾದಾಗ, ಭಾರತೀಯನೊಬ್ಬ ಅಮೆರಿಕದಲ್ಲಿ ನ್ಯಾಯಾಧೀಶರಾದಾಗ, ಮತ್ತು ಈಗಷ್ಟೇ ಭಾರತೀಯ ಮೂಲದ ಪ್ರಮೀಳಾ ಜಯಪಾಲ್ ಅಮೆರಿಕದಲ್ಲಿ ಸೆನೆಟರ್ ಆಗಿ ಆಯ್ಕೆಯಾದಾಗ ಇವರೆಲ್ಲ ನಮ್ಮವರೆಂದು ಸಂಭ್ರಮಿಸುವ ನಾವು ಆಯಾಯ ದೇಶದ ವಸುದೆೈವ ಕುಟುಂಬಕಂ ತತ್ವ ನಮ್ಮ ವಸುದೆೈವ ಕುಟುಂಬಕಂ ತತ್ವದಿಂದ ಶ್ರೇಷ್ಠವಾಗಿದೆಯೆಂದು ಒಪ್ಪಿಕೊಳ್ಳಬೇಕಾಗುತ್ತದೆ. ನಾಳೆ ಅಮೆರಿಕದ ಮತ್ತು ಇತರ ಸಂಬಂಧಿತ ದೇಶಗಳ ನಾಯಕರು ಮತ್ತು ಅವರ ಬೆಂಬಲಿಗರು ಈ ಭಾರತೀಯ ಮೂಲದವರು ನಮ್ಮವರಲ್ಲ, ಇವರನ್ನೆಲ್ಲ ಹೊರಗಟ್ಟಿ ಎಂದು ಹೇಳಿದರೆ ಹೇಗಾಗಬಹುದು? ಮೊನ್ನೆ ಒಬ್ಬ ರಾಜಕಾರಣಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ‘‘ನೀವು ಭಾರತವನ್ನು ಪ್ರೀತಿಸುವುದೇ ಆದರೆ ಒಮ್ಮೆ ಗಂಗೆಯಲ್ಲಿ ಮುಳುಗಿ ಬನ್ನಿ’’ ಎಂದು ಸವಾಲು ಹಾಕಿದರೆಂದು ಸುದ್ದಿ ಪ್ರಕಟವಾಯಿತು. ಇದು ತಪ್ಪೆಂದು ನಾವೆಲ್ಲ ತಿಳಿಯುವ ಮೊದಲೇ ಕಾಂಗ್ರೆಸಿಗರೊಬ್ಬರು ಮೋದಿಗೆ ‘‘ನೀವು ಉಜ್ಜಯಿನಿಯ ಶಿಪ್ರಾ ಕುಂಭಮೇಳದಲ್ಲಿ ಮುಳುಗು ಹಾಕದೆ ತಪ್ಪು ಮಾಡಿದಿರಿ’’ ಎಂದು ಹೇಳಿದರು. ಮೋದಿ ಮತ್ತು ಶ್ರೀಲಂಕಾದ ಅಧ್ಯಕ್ಷ ಸಿರಿಸೇನರು ಕುಂಬಮೇಳಕ್ಕೆ ಹೋಗಿದ್ದರು. ಅಲ್ಲಿ ಭಾಷಣ ಮಾಡಿದರು. ಆದರೆ ಮುಳುಗು ಹಾಕಲಿಲ್ಲ. ಮುಳುಗಿದ್ದರಿಂದ ದೇಶಭಕ್ತಿ ಸಾಬೀತಾಗುವುದಿದ್ದರೆ, ಅದೂ ‘ಭಾರತ್ ಮಾತಾ ಕೀ ಜೈ’ಯಂತೆ ಎಲ್ಲ ಬಗೆಯ ಕ್ಷುದ್ರತೆಯ ನಾಶಕ್ಕೆ ಪರುಷಮಣಿಯಾಗುತ್ತಿತ್ತು. ಆದರೆ ಅದು ಅವರವರ ವೈಯಕ್ತಿಕ ನಂಬಿಕೆಯನ್ನಾಧರಿಸಿದೆಯೇ ಹೊರತು ಅದಕ್ಕಿಂತ ಹೆಚ್ಚಿನ ಮಹತ್ವವೇನೂ ಇಲ್ಲ. ಕ್ಷೇತ್ರಗಳಿಗೆ ಹೋದಾಕ್ಷಣ ನೀರಿನಲ್ಲಿ ಮುಳುಗಬೇಕಾಗಿಲ್ಲ. ‘‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ’ ಎಂದುಕೊಂಡು ಆಯಾಯ ನದಿ ನೀರನ್ನು ಮತ್ತು ಮನೆಯ ಸ್ನಾನದ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಕಾಲವಿತ್ತು. ಆದರೆ ಈ ನದಿಗಳು ಬಹುತೇಕ ಬರಿದಾಗಿವೆ ಇಲ್ಲವೇ ಮಲಿನವಾಗಿವೆ. ಪರಿಸರವಾದಿಗಳು ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯವೇ ಆತಂಕಪಡುವಷ್ಟು ಪರಿಸ್ಥಿತಿ ಉಲ್ಬಣಗೊಂಡಿದೆ; ನಿರ್ದಯವಾಗಿದೆ. ಸಾವಿರಾರು ಕೋಟಿ ರೂಪಾಯಿಗಳ ವಿನಿಯೋಗದ ಹೊರತಾಗಿಯೂ ಪರಿಹಾರ ಸಿಕ್ಕಿಲ್ಲ. (ಶಾಶ್ವತ ಪರಿಹಾರವೆಂಬುದು ಒಂದು ಮರೀಚಿಕೆ!) ಇಂದು ಮಳೆಗಾಲದಲ್ಲಿ ಹರಿಯುವ ಕೆಂಪುನೀರು ಮಾತ್ರ ನದಿಗಳ ಲಕ್ಷಣವಾಗುತ್ತಿದೆ; ಬೇಸಿಗೆಯಲ್ಲಿ ಬರಪೀಡಿತ ರೈತನಂತೆ ಬತ್ತಿ ನಿಂತ ನದಿಗಳಲ್ಲಿ ಮುಳುಗುವುದಕ್ಕೂ ನೀರಿಲ್ಲದಿರುವಾಗ ಮುಳುಗುವುದಾದರೂ ಎಲ್ಲಿ? ಪಾಪಿ ಹೋದಲ್ಲಿ ಮೊಳಕಾಲುದ್ದ ನೀರು ಎಂಬಂತೆ ಇಡೀ ದೇಶದ ಪಾಪಕ್ಕೆ ಈ ನದಿಗಳು ಸಾಕ್ಷಿಯಾಗುತ್ತಿವೆ. (ಲಾಭವಿದ್ದರೆ, ಜನಪ್ರಿಯತೆ ಹೆಚ್ಚುವಂತಿದ್ದರೆ ನೀರಿನಲ್ಲಿ ಅಂತಲ್ಲ, ಎಲ್ಲಿ ಬೇಕಾದರೂ ಮುಳುಗುವುದು ಮತ್ತು ಮೇಲೆ ಬರುವುದು ರಾಜಕಾರಣದಲ್ಲಿ ಸಾಮಾನ್ಯ! ಕೆಸರೆರಚುವವರಿಗೆ ನೀರು ಬೇಕಾಗಿಲ್ಲ; ಅವರು ಎಲ್ಲೂ ಮುಳುಗಿಯಾರು!) ಪರಿಸ್ಥಿತಿ ಹೀಗಿರುವಾಗ ಈ ಮುಳುಗು ರಾಜಕಾರಣ ದೇಶವನ್ನು ಅಸಂಗತಕ್ಕೆ ಮಾತ್ರವಲ್ಲ, ಅಸಂಬದ್ಧತೆಗೆ ಒಯ್ಯುತ್ತಿದೆಯೆಂದನ್ನಿಸುತ್ತಿದೆ.
ಇಷ್ಟೇ ಅಲ್ಲ; ಪ್ರಧಾನಿ ಮೋದಿ ಕುಂಭಮೇಳದ ತಮ್ಮ ಭಾಷಣದಲ್ಲಿ ‘‘ನಾವು ಇತರರಿಗಿಂತ ಶ್ರೇಷ್ಠರು ಎಂಬ ವ್ಯಸನವನ್ನು ದೂರವಿಟ್ಟಾಗ ಮಾತ್ರ ಒಳಿತಾದೀತು’’ ಎಂಬ ಸದ್ಭಾವನಾ ನುಡಿಗಳನ್ನಾಡಿದರು. ಆದರೆ ಈ ಮಾತಿನ ಅನುಷ್ಠಾನಕ್ಕೆ ದಾರಿ ತೋರಿಸದಿದ್ದರೆ ಮತ್ತು ಈ ಮಾತಿಗೆ ಅಪವಾದವಾಗುವಂತಹ ನಡೆನುಡಿಗಳೇ ಆಡಳಿತವೆನ್ನಿಸಿಕೊಳ್ಳುತ್ತಿರುವಾಗ ದೇಶದ ಚಕ್ರ ಮುಂದಕ್ಕೆ ಚಲಿಸೀತು ಹೇಗೆ?

ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ಸರಕಾರಿ ಆಡಳಿತದ ಆಕಾಶವಾಣಿಯ ಮೂಲಕ, ಮತ್ತು ಚುನಾವಣಾ ಭಾಷಣಗಳ ಮೂಲಕ ತನ್ನ ಮನಸ್ಸನ್ನು ಎಷ್ಟೇ ಹಂಚಿಕೊಂಡರೂ, ಪತ್ರಿಕಾ ಗೋಷ್ಠಿಯನ್ನೇ ನಡೆಸದೆ, ಮಾಧ್ಯಮವನ್ನೇ ಎದುರಿಸದೆ, ಇರುವುದು ಪ್ರಜಾತಂತ್ರಕ್ಕೆಸಗುವ ಘೋರ ಅನ್ಯಾಯ. ಮಾಧ್ಯಮಗಳೂ ಅಷ್ಟೇ: ಮನರಂಜನೆಯನ್ನು ಸಾಕುಮಾಡಿ ಇಂತಹ ಗಂಭೀರ ವಿಚಾರಗಳತ್ತ ಗಮನ ಹರಿಸದಿದ್ದರೆ ನಿಧಾನಕ್ಕೆ ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳಬೇಕಾದೀತು. ಇಂತಹ ಸಂದರ್ಭದಲ್ಲಿ ದೇಶವನ್ನು ಭ್ರಷ್ಟಮುಕ್ತ ಭಾರತವಾಗಿ ಮಾಡುವ ನಾಯಕತ್ವ ಬೇಕು. ನಾಟಕೀಯವಾಗಿ ನಡೆಸುವ ನಯವಂಚಕತನವನ್ನು ಹೊಡೆದೋಡಿಸಬೇಕು. ಈಗಿರುವ ರಾಜಕೀಯ ಸ್ಥಿತಿಯಲ್ಲಿ ಇದು ಕಷ್ಟವಾಗಬಹುದು; ಆದರೆ ಅಸಾಧ್ಯವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News