ಉ.ಪ್ರ ಉಪಚುನಾವಣೆಯಲ್ಲಿ ಎರಡೂ ಸ್ಥಾನ ಸಮಾಜವಾದಿ ಪಕ್ಷದ ಬಗಲಿಗೆ

Update: 2016-05-19 12:33 GMT

 ಹೊಸದಿಲ್ಲಿ,ಮೇ 19: ಉತ್ತರ ಪ್ರದೇಶದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಚುನಾವಣೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳನ್ನೂ ಸಮಾಜವಾದಿ ಪಕ್ಷ ಬಾಚಿಕೊಂಡಿದೆ. ಮೊರದಾಬಾದ್‌ನ ಬಿಲಾರಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಹಮ್ಮದ್ ಫಹೀಂ ಬಿಜೆಪಿಯ ಸುರೇಶ್ ಸೈನಿಯವರನ್ನು 7093 ಮತಗಳಿಂದ ಸೋಲಿಸಿದ್ದಾರೆ. ಮುಹಮ್ಮದ್ ಫಹೀಂರಿಗೆ 90464 ಮತಗಳು ಬಿದ್ದರೆ ಸೈನಿಗೆ 83371 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್‌ನ ಶಿಶುಪಾಲ ಸಿಂಗ್‌ರಿಗೆ ಕೇವಲ 3670 ವೋಟು ದೊರಕಿದೆ. ಬಿಲಾರಿಯಲ್ಲಿ ಒಟ್ಟು ಹನ್ನೊಂದು ಮಂದಿ ಸ್ಪರ್ಧಾಕಣದಲ್ಲಿದ್ದರು.

ವಾರಣಾಸಿಯ ಜಂಗೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಬಿಜೆಪಿಯನ್ನು ಗುಡಿಸಿ ಹಾಕಿದೆ. ಇಲ್ಲಿ ಸಮಾಜವಾದಿ ಪಕ್ಷದ ಕಿಸ್ಮತಿ ದೇವಿ ಬಿಜೆಪಿಯ ರಮೇಶ್‌ರನ್ನು 22,092 ಮತಗಳಿಂದ ಸೋಲಿಸಿದ್ದಾರೆ. ಇಲ್ಲಿಯೂ ಒಟ್ಟು ಏಳು ಸ್ಪರ್ಧಿಗಳಿದ್ದರು. ಇಲ್ಲಿ 1246 ವೋಟುಗಳು ನೋಟಾಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.

ಗುಜರಾತ್ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು:

ಗುಜರಾತ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿದೆ. ಇಲ್ಲಿ ಗೋವಿಂದ ಭಾಯಿ ಪರ್ಮಾರ್ ಕಾಂಗ್ರೆಸ್‌ನ ಭಗವಾನ್ ಭಾಯಿ ಬರಾಡರನ್ನು 2441 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 63899 ವೋಟು ಸಿಕ್ಕಿದ್ದರೆ ಕಾಂಗ್ರೆಸ್ ಅಭ್ಯರ್ಥಿಗೆ 61458 ವೋಟುಗಳು ದೊರಕಿವೆ.

ಝಾರ್ಖಂಡ್‌ನಲ್ಲಿ ಕಾಂಗ್ರೆಸ್-ಬಿಜೆಪಿಗೆ ಗೆಲುವು:

ಝಾರ್ಕಂಡ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಸಮಾನವಾಗಿ ಗೆದ್ದಿವೆ. ಝಾರ್ಕಂಡ್‌ನ ಗೋಡ್ಡಾದಲ್ಲಿಬಿಜೆಪಿಯ ಅಮಿತ್‌ಕುಮಾರ್ ಮಂಡಲ್ ಆರ್‌ಜೆಡಿಯ ಸಂಜಯ್ ಪ್ರಸಾದ್ ಯಾದವ್‌ರನ್ನು 29,540 ವೋಟುಗಳಿಂದ ಸೋಲಿಸಿದ್ದಾರೆ.

ಅಮಿತ್‌ಕುಮಾರ್‌ಮಂಡಲ್‌ಗೆ 67877 ಮತದಾನವಾಗಿದ್ದರೆ, ಸಂಜಯ್‌ಪ್ರಸಾದ್ ಯಾದವ್‌ರಿಗೆ 38,337 ಮತಗಳು ದೊರಕಿವೆ.

ಇಲ್ಲಿನ ಪನಿಕಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ದೇವೇಂದ್ರ ಕುಮಾರ್ ಸಿಂಗ್ ಝಾರ್ಕಂಡ್ ಮುಕ್ತಿಮೋರ್ಚಾದ ಕುಶವಾಹಾ ಶಶಿ ಭೂಷಣ್ ಮೆಹತಾರನ್ನು 6194 ಮತಗಳಿಂದ ಸೋಲಿಸಿದ್ದಾರೆ. ದೇವೇಂದ್ರ ಕುಮಾರ್ ಸಿಂಗ್‌ರಿಗೆ 31832 ವೋಟ್‌ಗಳು ಸಿಕ್ಕಿದರೆ ಶಶಿಭೂಷಣ್ ಮೆಹತಾರಿಗೆ 25638 ಮತಗಳು ದೊರಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News